ಲವ್‌ ಜಿಹಾದ್‌; ನಿಖರ ವ್ಯಾಖ್ಯಾನವೂ ಇಲ್ಲ, ಅಪರಾಧ ವರ್ಗೀಕರಣವಾಗಲೀ ಇಲ್ಲವೆಂದ ಸಚಿವ

photo credit-economictimes

ಬೆಂಗಳೂರು; ರಾಜ್ಯದ ಕರಾವಳಿ ಪ್ರದೇಶಗಳೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲವ್‌ ಜಿಹಾದ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿವೆ ಎಂದು ಹಿಂದೂಪರ ಸಂಘಟನೆಗಳು ಹುಯಿಲೆಬ್ಬಿಸಿದ್ದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರವು ಲವ್‌ ಜಿಹಾದ್‌ ಪದಕ್ಕೆ ನಿಖರವಾದ ವ್ಯಾಖ್ಯಾನವಾಗಲೀ, ಅಪರಾಧ ವರ್ಗೀಕರಣವಾಗಲೀ ಇಲ್ಲ ಎಂದು ಹೇಳಿಕೆ ನೀಡಿದೆ.

 

ವಿಧಾನಸಭೆಯಲ್ಲಿ ಈ ಕುರಿತು ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಲವ್ ಜಿಹಾದ್‌ ಕುರಿತು ಮಾಹಿತಿ ಒದಗಿಸಿದ್ದಾರೆ.
ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು ರೂಪಿಸುವುದು ಮತ್ತು ಪೊಲೀಸ್ ದಳ ರಚಿಸುವ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಕುರಿತು ಪರಿಶೀಲಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿಂದು ಜನಜಾಗೃತಿ ಸಮಿತಿಗೆ ಭರವಸೆ ನೀಡಿದ್ದರ ಬೆನ್ನಲ್ಲೇ ವಿಧಾನಸಭೆಗೆ ನೀಡಿರುವ ಲಿಖಿತ ಉತ್ತರವು ಮುನ್ನೆಲೆಗೆ ಬಂದಿದೆ.

 

ನಿಖರವಾದ ವ್ಯಾಖ್ಯಾನ ಮತ್ತು ಅಪರಾಧ ವರ್ಗೀಕರಣವಾಗಲೀ ಮಾಡಿಲ್ಲ ಎಂದು ಹೇಳಿರುವ ಸಚಿವ ಆರಗ ಜ್ಞಾನೇಂದ್ರ ಅವರು ಮದುವೆ ಆಮಿಷವೊಡ್ಡಿ ಮತಾಂತರಗೊಳಿಸಲು ಒತ್ತಾಯಿಸುವ ಸಂಬಂಧ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2022ರಡಿ ಪ್ರಕರಣಗಳು ದಾಖಲಾಗಿವೆ ಎಂದು ಉತ್ತರ ನೀಡಿದ್ದಾರೆ.

 

ಆದರೆ ಮತಾಂತರದಡಿಯಲ್ಲಿಯೂ ಬೆಂಗಳೂರು ನಗರ, ಮಂಡ್ಯ, ಚಿತ್ರದುರ್ಗ ಜಿಲ್ಲೆಯಲ್ಲಷ್ಟೇ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ ಎಂಬುದು ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

‘ಬೆಂಗಳೂರು ನಗರ ಯಶವಂತಪುರ (ಮೊಕದ್ದಮೆ ಸಂಖ್ಯೆ 329/2022 ಕಲಂ 5) ಮಂಡ್ಯ (ನಾಗಮಂಗಲ ಟೌನ್‌ ಪೊಲೀಸ್‌ ಠಾಣೆ ಮೊಕದ್ದಮೆ ಸಂಖ್ಯೆ 121/2022), ಚಿತ್ರದುರ್ಗ (ಕೋಟೆ ಪೊಲೀಸ್‌ ಠಾಣೆ ಮೊಕದ್ದಮೆ ಸಂಖ್ಯೆ 137/2022) ಮೊಕದ್ದಮೆ ದಾಖಲಾಗಿವೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2022ರಡಿ ತಪ್ಪಿಸ್ಥತರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಬೆಂಗಳೂರು ನಗರ, ಮಂಡ್ಯ ಮತ್ತು ಚಿತ್ರದುರ್ಗದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ,’ ಎಂದು ಉತ್ತರಿಸಿದ್ದಾರೆ.

 

ಹಿಂದೂ ಸಂಘಟನೆಗಳು ಲವ್ ಜಿಹಾದ್ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಿ ಹೋರಾಟಕ್ಕಿಳಿದಿದ್ದರು. ಹಿಂದೂ ಯುವತಿಯರು ಮುಸ್ಲಿಂ ಯುವಕರ ಮೋಸಕ್ಕೆ ಬಲಿಯಾಗಬೇಡಿ ಎಂದು ಜಾಗೃತಿ ತಿಳಿಸುವ, ದೆಹಲಿಯಲ್ಲಿ ಶ್ರದ್ಧಾಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಅಫ್ತಾಬ್ ನ ಫೋಟೋ ಹಾಕಿ ಅಲ್ಲಲ್ಲಿ ಪೋಸ್ಟರ್ ಅಂಟಿಸಿದ್ದರು.

 

ಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನಿಗೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿ ರಾಜ್ಯಾದ್ಯಂತ ಅಭಿಯಾನ ನಡೆಸಿದ್ದರು. ಪುತ್ತೂರು ನಗರದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಯಾಗಬೇಕು ಎಂದು ಹಿಂದೂಪರ ಸಂಘಟನೆಗಳ ಪೋಸ್ಟರ್‌ಗಳು ರಾರಾಜಿಸಿದ್ದವು.

 

ಮಂಗಳೂರಿನ ಹುಡುಗಿ ಆಶಾ ತನ್ನ ಹೆಸರನ್ನು ಆಯೇಶಾ ಎಂದು ಬದಲಾಯಿಸಿಕೊಂಡು ಭಯೋತ್ಪಾದಕಳಾದಳು. ದೇಶದಲ್ಲಿ ಲವ್ ಜಿಹಾದ್ ನ ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಯುವತಿಯರು ಇದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಉಳಿಸಲು, ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವಂತೆ ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನು ತರಬೇಕು ಎಂದು ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದ್ದರು.

 

ಜಯಮಹಲ್ ನ ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ಹಿಂದುಪರ ಸಂಘಟನೆಗಳ ನಿಯೋಗವು ಲವ್ ಜಿಹಾದ್ ಕುರಿತು ದೂರು ಸಲ್ಲಿಸಿ, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

SUPPORT THE FILE

Latest News

Related Posts