ಬೆಂಗಳೂರು; ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ರಚಿಸಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕಳೆದ ಮೂರು ವರ್ಷದಲ್ಲಿ ಕಾಮಗಾರಿಗಳ ಹೆಸರಿನಲ್ಲಿ 1,871.25 ಕೋಟಿ ರು. ಖರ್ಚು ಮಾಡಿದೆಯಾದರೂ ಮಂಡಳಿಯು ಇಂತಹ ಕಾಮಗಾರಿಗಳೂ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗಾಗಿ ತಜ್ಞರ ಸಮಿತಿ ಸೇರಿದಂತೆ ಹಲವು ಸಮಿತಿಗಳ ರಚನೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀತಿ ನಿರೂಪಣೆ, ಅಭಿವೃದ್ಧಿಗೆ ಕ್ರಮಗಳನ್ನೇ ಅಳವಡಿಸಿಕೊಂಡಿರಲಿಲ್ಲ ಎಂಬ ಸಂಗತಿಯನ್ನು ಸಿಎಜಿ ಬಹಿರಂಗಪಡಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾದ ವರ್ಷದಿಂದ 2020ರ ಮೇ ತಿಂಗಳಿನವರೆಗೂ ಸಲಹಾ ಮಂಡಳಿ, ಅನುಷ್ಠಾನ ಸಮಿತಿ, ತಜ್ಞರ ಸಮಿತಿಯನ್ನೇ ರಚಿಸಿರಲಿಲ್ಲ. ಹೀಗಾಗಿ ಮಂಡಳಿಯ ಚಟುವಟಿಕೆಗಳ ಮೇಲೆ ಮೇಲ್ವಿಚಾರಣೆಯೇ ಇಲ್ಲದಂತಾಗಿತ್ತು. ದತ್ತಾತ್ರೇಯ ಪಾಟೀಲ್ ರೇವೂರ ಅವರು ಅಧ್ಯಕ್ಷರಾದ ನಂತರವೂ ಇದೇ ಸ್ಥಿತಿ ಮುಂದುವರೆದಿದೆ ಎಂದು ಗೊತ್ತಾಗಿದೆ.
ಅಲ್ಲದೇ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ, ಕಳಪೆ ಗುಣಮಟ್ಟದ ಕಾಮಗಾರಿಗಳ ಅನುಷ್ಠಾನ, ಪೂರ್ಣಗೊಂಡ ಯೋಜನೆಗಳ ಬಳಕೆಯಾಗದಿರುವುದು, ಹೆಚ್ಚುವರಿ ವೆಚ್ಚಗಳಿಗೆ ದಾರಿಮಾಡಿಕೊಟ್ಟಿತ್ತು. ಅಲ್ಲದೇ ಫಲಿತಾಂಶ ಆಧರಿತ ಯೋಜನೆಗಳೇ ಇರದ ಕಾರಣ ಫಲಿತಾಂಶಗಳ ಅನುಪಸ್ಥಿತಿಯಲ್ಲಿ ಮಂಡಳಿಯು ಕೈಗೊಂಡ ಕಾರ್ಯಕ್ರಮಗಳ ಮೌಲ್ಯಮಾಪನ ಅಧ್ಯಯನ ಪರಿಣಾಮಗಳನ್ನು ಕೈಗೊಳ್ಳಲು ಲೆಕ್ಕಪರಿಶೋಧನೆಗೆ ಸಾಧ್ಯವಾಗಲಿಲ್ಲ ಎಂದೂ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಂಡಳಿಯ ಆದೇಶದಂತೆ ಸಲಹಾ ಮಂಡಳಿಯನ್ನು ರಚಿಸಬೇಕಿತ್ತು. ಆದರೆ ಮಂಡಳಿ ರಚನೆಯಾದ ದಿನದಿಂದಲೂ ಸಲಹಾ ಮಂಡಳಿಯನ್ನೇ ರಚಿಸಿರಲಿಲ್ಲ. ಪ್ರಾದೇಶಿಕ ಅಸಮತೋಲನ ಅಧ್ಯಯನ, ಬ್ಯಾಕ್‌ಲಾಗ್ ಪ್ರಮಾಣ, ಸಂಪನ್ಮೂಲ ನಿರ್ಧರಣೆ, ರಾಜ್ಯ ಯೋಜನೆ ಅಥವಾ ಯೋಜನೇತರ ವಲಯಗಳ ನಿಧಿ ವಿಕೇಂದ್ರೀಕರಣ ಕುರಿತು ಸಲಹೆ ನೀಡಲು ತಜ್ಞರನ್ನೊಳಗೊಂಡ ಸ್ಥಾಯಿ ಸಮಿತಿಯೂ ರಚಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಅದೇ ರೀತಿ ಮಂಡಳಿಯ ವ್ಯವಹಾರದ ವಹಿವಾಟು, ಸಭೆಗಳು, ಅನುಷ್ಠಾನ ಸಮಿತಿಗಳ ಸಭೆಗಳು, ಮಂಡಳಿ ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಮಂಡಳಿಯು ನಿಯಮಗಳನ್ನೂ ರಚಿಸಿರಲಿಲ್ಲ. ಹೀಗಾಗಿ ಮಂಡಳಿಯು ಪ್ರಸ್ತಾವಿಸಿದ ಆಯವ್ಯಯ, ಲೆಕ್ಕಪರಿಶೋಧನೆ, ಲೆಕ್ಕಪತ್ರ ನಿಯಮಾವಳಿಗಳು, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯವಹಾರ ನಿಯಮಾವಳಿಗಳ ವಹಿವಾಟು, ಲೆಕ್ಕಪತ್ರ ಕೈಪಿಡಿ ಇತ್ಯಾದಿಗಳು ಈಗಲೂ ಸರ್ಕಾರದ ಅನುಮೋದನೆಗೆ ಕಾಯುತ್ತಿವೆ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.
‘ಕೈಗಾರಿಕೆ, ಮೂಲಸೌಕರ್ಯ, ಇತರೆ ಹೂಡಿಕೆ ನೀತಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಧನ, ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಪ್ರದೇಶದ ನೀತಿಗಳನ್ನು ರಾಜ್ಯಪಾಲರಿಗೆ ಸೂಚಿಸಬೇಕು ಎಂದು ನಿರ್ದಿಷ್ಟಪಡಿಸಲಾಗಿದೆ. ಮಂಡಳಿಯು ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನೂ ಆರಂಭಿಸಲಿಲ್ಲ. ಮತ್ತು ಕೈಗಾರಿಕೆ ವಾಣಿಜ್ಯ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಗಳು ತಮ್ಮ ನೀತಿಗಳಲ್ಲಿ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಕ್ರಮಗಳನ್ನು ಅಳವಡಿಸಿಕೊಂಡಿರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಮೂಲಸೌಕರ್ಯ ನೀತಿ, ಮುನ್ನೋಟ ಯೋಜನೆ, ಪ್ರದೇಶದ ಆರ್ಥಿಕ ಸಾಮರ್ಥ್ಯದ ಮೌಲ್ಯಮಾಪನವನ್ನೂ ಮಾಡಿರಲಿಲ್ಲ. ಹೂಡಿಕೆಯ ಆದ್ಯತೆಗಳನ್ನು ಬೆಂಬಲಿಸಲು ಪ್ರದೇಶಕ್ಕಾಗಿ ರಸ್ತೆ ಅಭಿವೃದ್ಧಿ ಯೋಜನೆಯನ್ನು ಮಂಡಳಿಯು ತಯಾರಿಸಲಿಲ್ಲ. ಪ್ರದೇಶದಲ್ಲಿ ಸಂಪರ್ಕವಿಲ್ಲದ ವಾಸಸ್ಥಳಗಳ ಸಂಖ್ಯೆಯ ಬಗ್ಗೆಯೂ ಮಂಡಳಿಗೆ ಮಾಹಿತಿ ಇರಲಿಲ್ಲ.
ಅಗತ್ಯವಿರುವ ಒಟ್ಟು ಮೊತ್ತದ ಉಲ್ಲೇಖವನ್ನು ಹೊರತುಪಡಿಸಿ ಯಾವುದೇ ಪ್ರಾಥಮಿಕ ಅಂದಾಜುಗಳಿಂದ ಕಾಮಗಾರಿಗಳು ಬೆಂಬಲಿತವಾಗಿರಲಿಲ್ಲ. ಕಾಮಗಾರಿಗಳ ಪಟ್ಟಿಯು ಯಾವುದೇ ಕರಡು ಯೋಜನೆ ವರದಿಗಳನ್ನು ಒಳಗೊಂಡಿರಲಿಲ್ಲ. ಕಾಮಗಾರಿಗಳ ಪಟ್ಟಿಯು ಪೂರ್ಣಗೊಳಿಸಲು ಅಗತ್ಯವಿರುವ ಒಟ್ಟು ಹೂಡಿಕೆಯನ್ನು ಮತ್ತು ಹೂಡಿಕೆ ಅವಧಿ ರಚಿಸಿರಲಿಲ್ಲ. ಪ್ರತ್ಯೇಕ ಇಲಾಖೆಯ ಯೋಜನೆಗಳನ್ನು ಸೂಕ್ತವಾಗಿ ಪರಿಗಣಿಸಿ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಲಾಗಿದೆ ಎಂಬುದಕ್ಕೆ ದಾಖಲೆಗಳಲ್ಲಿ ಯಾವುದೇ ಪುರಾವೆಯೇ ಇರಲಿಲ್ಲ .ಪ್ರಾದೇಶಿಕ ನಿಧಿಯಡಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಆಯ್ಕೆಗೆ ಮಂಡಳಿಯು ಯಾವುದೇ ಮಾರ್ಗಸೂಚಿಗಳನ್ನು ನೀಡಿರಲಿಲ್ಲ ಎಂಬ ಸಂಗತಿಯನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2020-21ರಿಂದ ಇಲ್ಲಿಯವರೆಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ಒಟ್ಟು 20281.53 ಲಕ್ಷ ರು. ಅನುದಾನ ಹಂಚಿಕೆಯಾಗಿದೆ. 2020-21ರಲ್ಲಿ 3395.58 ಲಕ್ಷ ರು., 2021-22ರಲ್ಲಿ 2985.95 ಲಕ್ಷ, 2022-23 (ಮೈಕ್ರೋ) 3000.00 ಲಕ್ಷ ರು., 2022-23(ಮೆಗಾ) 10900.00 ಲಕ್ಷ ರು. ನೀಡಲಾಗಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಸಂಪರ್ಕ ಮತ್ತು ನೀರಾವರಿ, ಇತರೆ ಅಭಿವೃದ್ಧಿ ಯೋಜನೆಗಳಡಿಯಲ್ಲಿ 13011.53 ಲಕ್ಷ ರು. ಅನುದಾನ ಹಂಚಿಕೆಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ತಯಾರಿಸಲಾಗಿದ್ದ ಕ್ರಿಯಾ ಯೋಜನೆಗೆ ಕಳೆದ ಮೂರು ವರ್ಷಗಳಲ್ಲಿ 2018-19ರಲ್ಲಿ 1,000 ಕೋಟಿ, 2019-20ರಲ್ಲಿ 1,500 ಕೋಟಿ, 2020-21ರಲ್ಲಿ 1,131.66 ಕೋಟಿ ಸೇರಿ ಒಟ್ಟು 3,631.86 ಕೋಟಿ ರು. ಸರ್ಕಾರದಿಂದ ಅನುದಾನ ನಿಗದಿಪಡಿಸಲಾಗಿತ್ತು. ಇದಕ್ಕೆ ಮಂಡಳಿಯಿಂದ 3,600 ಕೋಟಿ ರು. ಮಂಜೂರಾಗಿತ್ತು.
ಅಲ್ಲದೇ 2020-21 ಮತ್ತು 2021-22ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಕಾಮಗಾರಿಗಳಿಗೆ 2020-21ರಲ್ಲಿ 1,131.86 ಕೋಟಿ ಮತ್ತು 2021-22ರಲ್ಲಿ 1,492.97 ಕೋಟಿ ರು. ಅನುದಾನ ನಿಗದಿಪಡಿಸಿತ್ತು. ಇದರಲ್ಲಿ 2020-21ರಲ್ಲಿ 925.81 ಕೋಟಿ ಮತ್ತು 2021-22ರಲ್ಲಿ 945.44 ಕೋಟಿ ರು ಸೇರಿ ಒಟ್ಟು 1,871.25 ಕೋಟಿ ರು. ಖರ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಗೆ ಮಾಹಿತಿ ಒದಗಿಸಿದ್ದಾರೆ.