ಆರ್ಥಿಕ ಸ್ವಾಯತ್ತೆಗೆ ನಿರಾಕರಣೆ;ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯಲಿದೆಯೇ?

ಬೆಂಗಳೂರು; ಹುದ್ದೆ ಸೃಜನೆ, ಮೇಲ್ದರ್ಜೆಗೇರಿಸುವುದು, ಹೆಚ್ಚುವರಿ ಅನುದಾನ, ಹಣ ಬಿಡುಗಡೆ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಥಿಕ  ಸ್ವಾಯತ್ತೆಗೆ ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಚಿವಾಲಯಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿಲ್ಲ. ಇದು ಮುಂದಿನ ದಿನಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ.

 

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2021ರಲ್ಲಿ ನಡೆದಿದ್ದ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ರಾಜ್ಯಗಳ ವಿಧಾನಮಂಡಲದ ಸಚಿವಾಯಲಯಗಳಿಗೆ ಆರ್ಥಿಕ ಅಧಿಕಾರವನ್ನು ನೀಡಬೇಕು ಎಂಬ ಕೈಗೊಂಡಿದ್ದ ನಿರ್ಣಯವನ್ನಾಧರಿಸಿ ಕರ್ನಾಟಕದ ವಿಧಾನಮಂಡಲದ ಉಭಯ ಸಚಿವಾಲಯಗಳೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಕುರಿತು ‘ದಿ ಫೈಲ್‌’ಗೆ ಕೆಲ ದಾಖಲೆಗಳು (ಕಡತ ಸಂಖ್ಯೆ FD/255/FR/2022-FR-FINANCE DEPT) ಲಭ್ಯವಾಗಿವೆ.

 

ಇತರೆ ರಾಜ್ಯಗಳ ವಿಧಾನಮಂಡಲಗಳಿಗೆ ಆರ್ಥಿಕ ಸ್ವಾಯತ್ತೆಗೆ ಇದೆಯೇ ಎಂಬ ಬಗ್ಗೆ ಮಾಹಿತಿಯನ್ನು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಿತೀಶ್‌ ಕೆ ಅವರು ಕೋರಿದ್ದರೂ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯು 2022ರ ಅಕ್ಟೋಬರ್‌ 19ರವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂಬುದು ತಿಳಿದು ಬಂದಿದೆ.

 

ಗುಜರಾತ್‌ ಮತ್ತು ಮಹಾರಾಷ್ಟ್ರ ವಿಧಾನಸಭೆ ಸಚಿವಾಲಯವು ಯಾವುದೇ ಆರ್ಥಿಕ ಸ್ವಾಯತ್ತತೆ ಹೊಂದಿಲ್ಲ. ಆದರೆ ಆಯವ್ಯಯ ಪ್ರಸ್ತಾವನೆಗಳನ್ನು ಯಾವುದೇ ಕಡಿತವಿಲ್ಲದೇ ಗುಜರಾತ್‌ನ ಆರ್ಥಿಕ ಇಲಾಖೆಯಿಂದ ಮಂಜೂರು ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿಯೂ ಅಲ್ಲಿನ ವಿಧಾನಸಭೆ ಸಚಿವಾಲಯದಲ್ಲಿ ಆರ್ಥಿಕ ಸ್ವಾಯತ್ತತೆ ನೀಡುವ ಕುರಿತು ನಿರ್ಧಾರವಾಗಿಲ್ಲ. ಈ ಕುರಿತು ಏನಾದರೂ ಸ್ಪಷ್ಟೀಕರಣ ಬೇಕಾದಲ್ಲಿ ಖುದ್ದಾಗಿ ವಿಧಾನಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆಯವ್ಯಯ ಮತ್ತು ಹೆಚ್ಚುವರಿ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಹಾಗೆಯೇ ಹುದ್ದೆ ಸೃಜನೆ, ರದ್ದುಗೊಳಿಸುವುದು, ಹುದ್ದೆಗಳ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಸಲೂ ಸಹ ವಿಧಾನಮಂಡಲದ ಉಭಯ ಸಚಿವಾಲಯಗಳಿಗೆ ಪೂರ್ಣಾಧಿಕಾರ ನೀಡಲು ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸಿಲ್ಲ.

 

‘ಸಂವಿಧಾನಾತ್ಮಕ ಸಂಸ್ಥೆಗಳಾದ ಉಚ್ಛ ನ್ಯಾಯಾಲಯ, ಲೋಕಾಯುಕ್ತ, ಕೆಪಿಎಸ್‌ಸಿ, ರಾಜ್ಯಪಾಲರ ಕಚೇರಿ ಸೇರಿದಂತೆ ಮುಂತಾದ ಕಚೇರಿಗಳಲ್ಲಿ ಹುದ್ದೆ ಸೃಜನೆ ಮಾಡುವ ಹೊಣೆಗಾರಿಕೆಯು ಆರ್ಥಿಕ ಇಲಾಖೆಯಲ್ಲೇ ಇದೆ. ಹುದ್ದೆ ಸೃಜನೆಯಾದಲ್ಲಿ ವೇತನ, ಮುಂತಾದ ಬದ್ಧ ವೆಚ್ಚಗಳು ಆವರ್ತಕ ವೆಚ್ಚಗಳಾಗುವುದರಿಂದ ಯಾವುದೇ ಹುದ್ದೆ ಸೃಜನೆ ಮಾಡುವ ಮೊದಲು ಹುದ್ದೆಯ ಅವಶ್ಯಕತೆ ರಾಜ್ಯದ ಸಂಪನ್ಮೂಲ ಮುಂತಾದವುಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕಾಗಿದೆ. ಹೀಗಾಗಿ ಹುದ್ದೆ ಸೃಜನೆ ಅಧಿಕಾರವನ್ನು ವಿಧಾನಮಂಡಲದ ಸಚಿವಾಲಯಗಳಿಗೆ ಅಧಿಕಾರ ನೀಡುವುದು ಸಮಂಜಸವಲ್ಲ,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.

 

ವಿಧಾನಮಂಡಲದ ಉಭಯ ಸಚಿವಾಲಯಗಳಲ್ಲಿ ಹುದ್ದೆ ಸೃಜನೆ, ಮತ್ತು ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಸುವಾಗ ಇಲಾಖೆಯು ಮಂಜೂರಾದ ಸಂಖ್ಯಾಬಲ ಮತ್ತು ಕಾರ್ಯಭಾರ ಹುದ್ದೆಗಳನ್ನು ಮೇಲ್ದರ್ಜೆಗೇರಿಸಬೇಕಾದ ಹುದ್ದೆ, ವೇತನ ಶ್ರೇಣಿ ಮುಂತಾದ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಟಿಪ್ಪಣಿಯಲ್ಲಿ ವಿವರಿಸಿರುವ ಆರ್ಥಿಕ ಇಲಾಖೆಯು ತನ್ನ ಬಳಿಯೇ ಪ್ರತ್ಯೇಕ ಶಾಖೆ ಇರುವುದರಿಂದ ಇವುಗಳ ಮೇಲೂ ವಿಧಾನಮಂಡಲದ ಉಭಯ ಸಚಿವಾಲಯಗಳಿಗೆ ಅಧಿಕಾರ ನೀಡುವುದು ಸಮಂಜಸವಾಗಿರುವುದಿಲ್ಲ ಎಂದು ಹೇಳಿರುವುದು ಗೊತ್ತಾಗಿದೆ.

 

ಹಾಗೆಯೇ ಆಯವ್ಯಯದಲ್ಲಿ ಒದಗಿಸಿರುವ ಮೊತ್ತದ ಬಳಕೆ, ಹೆಚ್ಚುವರಿ ಅನುದಾನವನ್ನು ಕೋರಿರುವುದಕ್ಕೆ ಸಂಬಂಧಿಸಿದಂತೆ ಇದನ್ನ ಪರಿಶೀಲಿಸಬೇಕಿದೆ ಎಂದಿರುವ ಆರ್ಥಿಕ ಇಲಾಖೆಯು ಹೆಚ್ಚುವರಿ ಅನುದಾನ ಒದಗಿಸಬೇಕಾಗಿರುವುದರಿಂದ ಇದನ್ನು ಒಪ್ಪಲು ಸಾಧ್ಯವಿರುವುದಿಲ್ಲ. ಆದರೆ ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯಗಳು ಹೆಚ್ಚುವರಿ ಅನುದಾನವನ್ನು ಕೋರಿದಾಗ ವಿಳಂಬವಿಲ್ಲದೇ ಪರಿಶೀಲಿಸಿ ಅನುದಾನ ಒದಗಿಸಲು ಕ್ರಮವಹಿಸಬಹುದು ಎಂದಿದೆ.

 

ಅದೇ ರೀತಿ ‘ಆಯವ್ಯಯದಲ್ಲಿ ವಿಧಾನಸಭೆ/ವಿಧಾನಪರಿಷತ್‌ ಕೋರಿದಷ್ಟುಮೊತ್ತವನ್ನು ಒದಗಿಸಲು ಸಹಮತಿಸಬಹುದು. ಇದರಿಂದ ಅವರ ಹಂತದಲ್ಲಿಯೇ ಪುನರ್ವಿಯೋಗ ಮಾಡಬಹುದು. ಅಲ್ಲದೆ ಒಂದು ವೇಳೆ ಉಳಿತಾಯವಾದರೆ ಆರ್ಥಿಕ ಇಲಾಖೆಯು ತನ್ನ ಹಂತದಲ್ಲಿ ಆರ್‌ಇ ಸಹ ಮಾಡಬಹುದು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯವನ್ನು ನೀಡಿದೆ.

 

50.00 ಲಕ್ಷ ರು.ಗಳವರೆಗೆ ಪುನರ್ವಿಯೋಗ ಮಾಡಲು ವಿಧಾನಸಭೆ ಮತ್ತು ವಿಧಾನಪರಿಷತ್‌ ಕಾರ್ಯದರ್ಶಿಗೆ ಅಧಿಕಾರವಿದೆ. ಉಚ್ಛ ನ್ಯಾಯಾಲಯಕ್ಕೆ ಪೂರ್ಣಾಧಿಕಾರ ನೀಡಿದಂತೆ ಇವರ ಹಂತದಲ್ಲಿಯೇ ಹೊಸ ಸೇವೆ ಮಿತಿ ಮೀರದಿರುವ ಷರತ್ತಿಗೊಳಪಟ್ಟು ಪೂರ್ಣಾಧಿಕಾರ ನೀಡಬಹುದು ಎಂದೂ ಅಭಿಪ್ರಾಯ ನೀಡಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts