ದಲಿತರ ಮೇಲೆ ದೌರ್ಜನ್ಯ; ಬಿಜೆಪಿ ಸರ್ಕಾರದ 3 ವರ್ಷದ ಆಡಳಿತದಲ್ಲಿ 6,243 ಪ್ರಕರಣ ದಾಖಲು

ಬೆಂಗಳೂರು; ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೌರ್ಜನ್ಯ ಮತ್ತು ಹಲ್ಲೆಗಳನ್ನು ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಮೂರೇ ಮೂರು ವರ್ಷದಲ್ಲಿ  6,243 ಪ್ರಕರಣಗಳು ದಾಖಲಾಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ.

 

 

ಈ ಕುರಿತು ವಿಧಾನಪರಿಷತ್‌ನಲ್ಲಿ ವಿಧಾನಪರಿಷತ್‌ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

2019ರಿಂದ 2022ರ ನವೆಂಬರ್‌ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 8,158 ದೌರ್ಜನ್ಯ ಮತ್ತು  4,546 ಹಲ್ಲೆ ಪ್ರಕರಣಗಳು ದಾಖಲಾಗಿವೆ. 2022ರಲ್ಲೇ 2,272 ದೌರ್ಜನ್ಯ ಮತ್ತು 1,246 ಹಲ್ಲೆ ಪ್ರಕರಣಗಳು ವರದಿಯಾಗಿವೆ.
ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ನಗರ ಮುಂದಿದ್ದು 2019ರಿಂದ 2022ರ ನವೆಂಬರ್‌ ಅಂತ್ಯದವರೆಗೆ ಒಟ್ಟು 706 ಪ್ರಕರಣಗಳು ವರದಿಯಾಗಿವೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕಳೆದ 3 ವರ್ಷದಲ್ಲಿ 342 ದೌರ್ಜನ್ಯ ಪ್ರಕರಣಗಳು ಮತ್ತು 208 ಹಲ್ಲೆ ಪ್ರಕರಣಗಳು ದಾಖಲಾಗಿವೆ.

 

ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ ತವರು ಜಿಲ್ಲೆ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉಸ್ತುವಾರಿ ಹೊತ್ತಿರುವ ತುಮಕೂರು ಜಿಲ್ಲೆಯಲ್ಲಿ 371 ದೌರ್ಜನ್ಯ, 204 ಹಲ್ಲೆ ಪ್ರಕರಣಗಳು ವರದಿಯಾಗಿವೆ.

 

ಇನ್ನುಳಿದಂತೆ ಮೈಸೂರು ನಗರದಲ್ಲಿ 87, ಮೈಸೂರು ಜಿಲ್ಲೆಯಲ್ಲಿ 197, ಮಂಗಳೂರು ನಗರ 91, ಬೆಂಗಳೂರು ನಗರ ಜಿಲ್ಲೆ 319, ಕೋಲಾರ 226, ರಾಮನಗರ 205, ಚಿಕ್ಕಬಳ್ಳಾಪುರ 312, ಮಂಡ್ಯ 285, ಹಾಸನ 414, ಬೆಳಗಾವಿ ಜಿಲ್ಲೆ 352, ವಿಜಯಪುರ 267, ದಾವಣಗೆರೆ 219, ದಕ್ಷಿಣ ಕನ್ನಡ 164, ಚಿಕ್ಕಮಗಳೂರು 338, ಉಡುಪಿ 207, ಕಲ್ಬುರ್ಗಿ 274, ರಾಯಚೂರು 318 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಆರಗ ಜ್ಞಾನೇಂದ್ರ ಅವರು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

ಅರಗ ಜ್ಞಾನೇಂದ್ರ ಅವರು ಒದಗಿಸಿರುವ ಮಾಹಿತಿ ಪ್ರತಿ

 

2019ರಲ್ಲಿ 1,915, 2020ರಲ್ಲಿ 1,840, 2021ರಲ್ಲಿ 2,131 ಮತ್ತು 2022ರಲ್ಲಿ 2,272 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದರೆ, 2019ರಲ್ಲಿ 1,031, 2020ರಲ್ಲಿ 1,063, 2021ರಲ್ಲಿ 1,206ಮತ್ತು 20022ರಲ್ಲಿ 1,246 ಹಲ್ಲೆ ಪ್ರಕರಣಗಳು ದಾಖಲಾಗಿವೆ.

 

 

ರಾಷ್ಟ್ರೀಯ ಅಪರಾಧ ಪುರಾವೆ ವಿಭಾಗವು 2019ರಲ್ಲಿ ನೀಡಿದ್ದ ಮಾಹಿತಿಯಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಶೇ.7.3 ಮತ್ತು ಶೇ.26.5ರಷ್ಟು ದೌರ್ಜನ್ಯ ಹೆಚ್ಚಾಗಿತ್ತು. ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ ಮಂಜೂರು ಮಾಡಲು 2019-20ರಿಂದ 2022-23ರವರೆಗೆ ಒಟ್ಟು 120.75 ಕೋಟಿ ರು. ಮಂಜೂರಾಗಿದೆ ಎಂಬ ಮಾಹಿತಿ ಒದಗಿಸಿದ್ದಾರೆ.

the fil favicon

SUPPORT THE FILE

Latest News

Related Posts