ಕಿಸಾನ್‌ ಸಮ್ಮಾನ್‌; 2,000 ಕೋಟಿ ಅನುದಾನದಲ್ಲಿ ಹಣವೇ ಬಿಡುಗಡೆಯಾಗಿಲ್ಲ,ಪ್ರಗತಿಯೂ ಇಲ್ಲ

photo credit;basavarajbommai twitter account

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಎಂದೇ ಬಿಂಬಿತವಾಗಿರುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಹಂಚಿಕೆಯಾಗಿದ್ದ 2,000 ಕೋಟಿ ರು. ಅನುದಾನದಲ್ಲಿ ಹಣ ಬಿಡುಗಡೆಯೇ ಆಗಿಲ್ಲ. ಹೀಗಾಗಿ ಈ ಯೋಜನೆಯಲ್ಲಿ ಪ್ರಗತಿಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 12ನೇ ಕಂತಿನ ನೆರವು ಬಿಡುಗಡೆ ಸಂಬಂಧ 2022ರ ಅಕ್ಟೋಬರ್‌ 17ರಂದು ಪ್ರಧಾನಿ ಮೋದಿ ನಡೆಸಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ರಾಜ್ಯದ 50.36 ಲಕ್ಷ ರೈತರಿಗೆ 1,007.26 ಕೋಟಿ ರು. ವರ್ಗಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಮ್ಮೆಯಿಂದ ಬೀಗಿದ್ದರು. ಇದಾಗಿ ಎರಡೇ ಎರಡು ತಿಂಗಳ ಅಂತರದಲ್ಲಿ ಈ ಯೋಜನೆಗೆ 2,000 ಕೋಟಿ ರು. ಅನುದಾನದಲ್ಲಿ ಹಣವೇ ಬಿಡುಗಡೆಯಾಗಿಲ್ಲ ಎಂದು ಖುದ್ದು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯೇ ಹೇಳಿದ್ದಾರೆ.

 

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವುದಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್‌ 16ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಈ ಮಾಹಿತಿಯನ್ನು ಒದಗಿಸಿದ್ದಾರೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕೃಷಿ ಇಲಾಖೆಯಲ್ಲಿನ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ 2,000.00 ಕೋಟಿ ಅನುದಾನದಲ್ಲಿ ಹಣ ಬಿಡುಗಡೆಯಾಗದಿರುವುದರಿಂದ ಪ್ರಗತಿಯಾಗಿರುವುದಿಲ್ಲ. ಹಣ ಬಿಡುಗಡೆಯಾದ ಕೂಡಲೇ ಪ್ರಗತಿ ಸಾಧಿಸಲಾಗುವುದು,’ ಎಂದು ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಮಾಹಿತಿ ಒದಗಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಅಲ್ಲದೇ ರೈತ ವಿದ್ಯಾ ನಿಧಿ ಯೋಜನೆಯಡಿ ಈಗಾಗಲೇ 430.00 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದ್ದರೂ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ವೆಚ್ಚವಾಗಿಲ್ಲ. ಹಾಗೆಯೇ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳೂ ಅಂತಿಮಗೊಂಡಿಲ್ಲ ಎಂಬುದು ನಡವಳಿಯಿಂದ ಗೊತ್ತಾಗಿದೆ.

 

ಕೆಡಿಪಿ ಸಭೆಯ ನಡವಳಿ ಪ್ರತಿ

 

ಈ ಯೋಜನೆಯಡಿ ಮಾರ್ಚ್ 2019 ರಿಂದ ಜುಲೈ 2022 ರವರೆಗೆ ರಾಜ್ಯದ 58.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಒಟ್ಟು 9,968.57 ಕೋಟಿ ಸಹಾಯ ಧನ ಪಡೆದಿವೆ. 2022–23ನೇ ಸಾಲಿನಲ್ಲಿ 1,251.98 ಕೋಟಿ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ. ರಾಜ್ಯ ಸರ್ಕಾರದಿಂದ ಪಿ.ಎಂ ಕಿಸಾನ್‌– ಕರ್ನಾಟಕ ಯೋಜನೆಯಡಿ ರೈತ ಕುಟುಂಬಗಳಿಗೆ 2019 ರಿಂದ ಇಲ್ಲಿಯವರೆಗೆ 4,821.37 ಕೋಟಿ ಆರ್ಥಿಕ ಸಹಾಯಧನವನ್ನು ನೀಡಲಾಗಿದೆ. 2022–23ನೇ ಸಾಲಿನಲ್ಲಿ ₹956.71 ಕೋಟಿ ಆರ್ಥಿಕ ನೆರವನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದನ್ನು ಸ್ಮರಿಸಬಹುದು.

 

ಹೊಸ ಬೆಳೆ ವಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ 2021-22ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಒದಗಿಸಿದ್ದ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವ ಕೃಷಿ ಇಲಾಖೆಯು 210.66 ಕೋಟಿ ರು. ಗಳನ್ನು ಸರ್ಕಾರಕ್ಕೆ ವಾಪಸ್‌ ಮಾಡಿತ್ತು. ಈ ಕುರಿತು ‘ದಿ ಫೈಲ್‌’  2022ರ ಫೆ.22ರಂದೇ ವರದಿ ಪ್ರಕಟಿಸಿತ್ತು.

 

ಪಿಎಂ ಕಿಸಾನ್‌; ಪ.ಜಾತಿ, ಪ.ಪಂಗಡ ಉಪ ಯೋಜನೆಯಲ್ಲಿ 210 ಕೋಟಿ ಬಳಸದೇ ವಾಪಸ್‌ ಮಾಡಿದ ಇಲಾಖೆ

 

‘2021-22ನೇ ಸಾಲಿನಲ್ಲಿ ಹೊಸ ಬೆಳೆ ವಿಮಾ ಯೋಜನೆ ಲೆಕ್ಕ ಶೀರ್ಷಿಕೆಯಡಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪ ಶೀರ್ಷಿಕೆಯಡಿಯಲ್ಲಿ ವೆಚ್ಚವಾಗದೇ ಉಳಿತಾಯವಾದ ಒಟ್ಟು 138 ಕೋಟಿ ಹಾಗೂ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಲೆಕ್ಕ ಶೀರ್ಷಿಕೆಯ ಎಸ್‌ಸಿಎಸ್‌ಪಿ ಮತ್ತು ಟಿ ಎಸ್‌ ಪಿ ಉಪ ಶೀರ್ಷಿಕೆಯಡಯಲ್ಲಿ ಉಳಿತಾಯವಾಗುವ ಒಟ್ಟು 72.00 ಕೋಟಿ ಸೇರಿ ಒಟ್ಟು 210.66 ಕೋಟಿ ರು.ಗಳನ್ನು ಅನುದಾನವನ್ನು ಸರ್ಕಾರಕ್ಕೆ ಆಧ್ಯರ್ಪಿಸಲಾಗಿದೆ. ಆದ್ದರಿಂದ ಈ ಲೆಕ್ಕ ಶೀರ್ಷಿಕೆಗಳಡಿ ಅನುದಾನ ಉಳಿತಾಯವಿರುವುದಿಲ್ಲ. ಪ್ರಸ್ತಾವನೆಯಲ್ಲಿ ಕೋರಿದಂತೆ ಪುನರ್‌ವಿನಿಯೋಗ ಸಾಧ್ಯವಿಲ್ಲ,’ ಎಂದು ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಇಲಾಖೆಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದರು.

 

ಅದೇ ರೀತಿ ರಾಜ್ಯ ಬಿಜೆಪಿ ಸರ್ಕಾರವು 2020-21ನೇ ಸಾಲಿನ ಪ್ರಧಾನಮಂತ್ರಿ ಕಿಸಾನ್‌ ಕರ್ನಾಟಕ ಯೋಜನೆಯಡಿ ಎರಡನೇ ಕಂತಿನ ಆರ್ಥಿಕ ಸಹಾಯ ಧನ ಬಿಡುಗಡೆ ಮಾಡುವಲ್ಲಿಯೂ ವಿಳಂಬ ಮಾಡಿತ್ತು.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುವ ಪ್ರಧಾನಮಂತ್ರಿ ಕಿಸಾನ್‌ ಯೋಜನೆಗೆ ರಾಜ್ಯ ಸರ್ಕಾರವು ಅನುದಾನವನ್ನು ಹಂಚಿಕೊಳ್ಳುತ್ತಿದೆ. ಆದರೆ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ನೀಡುವ 4,000 ರು. ಹೆಚ್ಚುವರಿ ಆರ್ಥಿಕ ಸಹಾಯಧನದ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಕೃಷಿ ಆಯುಕ್ತರು 2021ರ ಮಾರ್ಚ್‌ 16ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

4,000 ರು.ಗಳ ಹೆಚ್ಚುವರಿ ಆರ್ಥಿಕ ನೆರವನ್ನು 2 ಕಂತುಗಳಲ್ಲಿ ಪಿ ಎಂ ಕಿಸಾನ್‌ ಕರ್ನಾಟಕ ಯೋಜನೆಯಡಿ ನೀಡುತ್ತಿದೆ. ಇದಕ್ಕಾಗಿ ರಾಜ್ಯವಲಯದ ಲೆಕ್ಕ ಶೀರ್ಷಿಕೆ (2401-00-800-1-05-100) ಅಡಿ ಒಟ್ಟು 2,100 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ 2020-21ನೇ ಸಾಲಿನಲ್ಲಿ ಎರಡನೇ ಕಂತಿಗೆ 51,66,395 ರೈತರಿಗೆ 1,033.28 ಕೋಟಿ ಹಾಗೂ ಮೊದಲನೇ ಕಂತಿನ ಬಾಕಿ ಬಾಕಿ 56,665 ರೈತರಿಗೆ 11.33 ಕೋಟಿ ರು. ಸೇರಿ ಒಟ್ಟಾರೆ 2020-21ನೇ ಸಾಲಿಗೆ 1,044.61 ಕೋಟಿ ರು. ಅನುದಾನ ಒದಗಿಸಬೇಕಿತ್ತು.

 

‘2020-21ನೇ ಸಾಲಿನಲ್ಲಿ ಎರಡನೇ ಕಂತಿನ ಆರ್ಥಿಕ ಸಹಾಯಧನವನ್ನು ಪಾವತಿಸಲು ಅನುದಾನ ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ,’ ಎಂದು ಕೃಷಿ ಆಯುಕ್ತರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts