ಗುತ್ತಿಗೆದಾರರಿಗೆ 1.87 ಕೋಟಿ ಹೆಚ್ಚುವರಿ ಪಾವತಿ; ಸಿಎಜಿ ಗೌಪ್ಯ ಪತ್ರ ಬಹಿರಂಗ

ಬೆಂಗಳೂರು; ಒಳಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಗುತ್ತಿಗೆದಾರರಿಗೆ 1.87 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವ ಪ್ರಕರಣವನ್ನು ಪ್ರಧಾನ ಮಹಾಲೇಖಪಾಲರು ಹೊರಗೆಡವಿದ್ದಾರೆ.

 

ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಪ್ರಧಾನ ಮಹಾಲೇಖಪಾಲರ ಕಚೇರಿಯು 2022ರ ಡಿಸೆಂಬರ್‌ 14ರಂದು (D.O.No. AG (AU II) Reports/AMG-III/AR 2022/2022-23/144) ಗೌಪ್ಯ ಪತ್ರವನ್ನು ಬರೆದಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಕುರಿತಾದ ಮಾಹಿತಿಯನ್ನು ಗೌಪ್ಯವಾಗಿರಿಸಿಕೊಳ್ಳಬೇಕು ಅಲ್ಲದೇ 2022ರ ಜನವರಿ 11ರೊಳಗಾಗಿ ವಿವರಣೆಯನ್ನು ನೀಡಬೇಕು ಎಂದು ಪ್ರಧಾನ ಮಹಾಲೇಖಪಾಲರಾದ ವಿಮಲೇಂದ್ರ ಆನಂದ್‌ ಪಟವರ್ಧನ್‌ ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ರಜನೀಶ್‌ ಗೋಯಲ್‌ ಅವರಿಗೆ 2022 ಡಿಸೆಂಬರ್‌ 14ರಂದೇ ಪತ್ರ ಬರೆದಿದ್ದಾರೆ.

 

ಅಲ್ಲದೇ ಕರಡು ವರದಿಯನ್ನು ಇತ್ಯರ್ಥಗೊಳಿಸಲು ಅಥವಾ ಈ ವರದಿಯಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುವಂತೆ ಸೂಕ್ತ ಉತ್ತರಗಳನ್ನು ನಿಗದಿತ ಅವಧಿಯೊಳಗೆ ಪ್ರಧಾನ ಮಹಾಲೇಖಪಾಲರಿಗೆ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆಯ ವಿತ್ತೀಯ ಸುಧಾರಣೆಯ ಸರ್ಕಾರದ ಕಾರ್ಯದರ್ಶಿ ಮಂಜು ಪ್ರಸನ್ನನ್‌ ಪಿಳ್ಳೈ ಅವರು 2022ರ ಡಿಸೆಂಬರ್‌ 22ರಂದು ಪತ್ರ ಬರೆದಿದ್ದಾರೆ.

 

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧೀನದಲ್ಲಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕಚೇರಿಗಳಿಗೆ ಹೌಸ್‌ಕೀಪಿಂಗ್‌ ಕನ್ಸೂಮಬೆಲ್ಸ್‌ ಸೇವೆ ಒದಗಿಸುವ ಸಂಬಂಧ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಒಳಾಡಳಿತ ಇಲಾಖೆಯು ಕೆಟಿಪಿಪಿ ಕಾಯ್ದೆ ಅನ್ವಯ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂದು ಸಿಎಜಿ ಆಕ್ಷೇಪ ಎತ್ತಿದೆ.

 

ಟೆಂಡರ್‌ನಲ್ಲಿ ಭಾಗವಹಿಸಿದ್ದ 2 ಕಂಪನಿಗಳ ಪೈಕಿ ಲಿಬ್ರಾ ಡಿಟೆಕ್ಟಿವ್‌ ಅಂಡ್‌ ಸೆಕ್ಯುರಿಟಿ ಸರ್ವಿಸ್‌ನ ತಾಂತ್ರಿಕ ಬಿಡ್‌ನ್ನು ಇಲಾಖೆಯು ಅನುಮೋದಿಸಿತ್ತು. ಟೆಂಡರ್‌ನ್ನು 2020ರ ಸೆಪ್ಟಂಬರ್‌ನಲ್ಲಿ ಟೆಂಡರ್‌ ಕಾರ್ಯಾದೇಶ ನೀಡಿದ್ದರೇ ಅಕ್ಟೋಬರ್‌ನಲ್ಲಿ ಈ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.

 

ಈ ಕಂಪನಿಯು ತನ್ನ ನೌಕರನಿಗೆ ತಲಾ 23,327 ರು.ಗಳನ್ನು ಮಾಸಿಕ ವೇತನವನ್ನು 2023ರ ಅಕ್ಟೋಬರ್‌ವರೆಗೂ ನೀಡಲು ಒಡಂಬಡಿಕೆಯಲ್ಲಿ ಹೇಳಲಾಗಿತ್ತು. ಈ ಸಂಬಂಧ ಆಗಸ್ಟ್‌- ಅಕ್ಟೋಬರ್‌ 2021ರ ಮಧ್ಯೆ ಲೆಕ್ಕ ಪರಿಶೋಧನೆ ಕೈಗೊಳ್ಳಲಾಗಿತ್ತು ಎಂಬುದು ಲಭ್ಯ ಇರುವ ದಾಖಲೆಯಿಂದ ತಿಳಿದು ಬಂದಿದೆ.

 

‘ಈ ವೇಳೆಯಲ್ಲಿ ಒಳಾಡಳಿತ ಇಲಾಖೆಯು ಪರಿಮಾಣ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಟೆಂಡರ್‌ ದಾಖಲಾತಿಗಳನ್ನು ನಿರ್ದಿಷ್ಟಪಡಿಸಿರಲಿಲ್ಲ. ಅಲ್ಲದೆ ಈ ಕಂಪನಿಯು ನಮೂದಿಸಿದ್ದ ದರವನ್ನು ವಿಶ್ಲೇಷಿಸಿರಲಿಲ್ಲ. ಆದರೂ ಟೆಂಡರ್‌ನ್ನು ಒಪ್ಪಿಕೊಂಡಿತ್ತು,’ ಎಂಬುದನ್ನು ಲೆಕ್ಕ ಪರಿಶೋಧನೆಯ ಕರಡು ಪ್ರತಿಯಿಂದ ತಿಳಿದು ಬಂದಿದೆ.

 

ಅಲ್ಲದೇ ಬಸವನಬಾಗೇವಾಡಿ, ಬೆಳಗಾವಿಯ ಬನ್ನಿಮಂಟಪ, ಗೋಣಿಕೊಪ್ಪ, ಹಾಸನ, ಚನ್ನರಾಯಪಟ್ಟಣ, ಸವದತ್ತಿ ಮತ್ತು ವಿಜಯಪುರದಲ್ಲಿನ ಕಚೇರಿಗಳಲ್ಲಿದ್ದ ಹೌಸ್‌ ಕೀಪಿಂಗ್‌ ಕನ್ಸೂಮಬಲ್‌ಗಳನ್ನು ಜಂಟಿ ಭೌತಿಕ ಸಮೀಕ್ಷೆಯನ್ನೂ ನಡೆಸಿರುವ ಲೆಕ್ಕಪರಿಶೋಧನಕಾರಿಗಳು ಮಾರುಕಟ್ಟೆಯಲ್ಲಿದ್ದ ಗರಿಷ್ಠ ದರಕ್ಕಿಂತಲೂ ಹೆಚ್ಚಿನ ದರವನ್ನು ಪಾವತಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.

 

ಮಾರುಕಟ್ಟೆಯಲ್ಲಿ ಕನ್ಸೂಮಬಲ್‌ಗಳಿಗೆ 2,300 ದರವಿದ್ದರೇ ಅಗ್ನಿಶಾಮಕ ಅಧಿಕಾರಿಗಳು 2,200 ರು ಹೆಚ್ಚಳ ದರದಲ್ಲಿ ಅಂದರೆ 4,500 ರು.ದರದಲ್ಲಿ ಪ್ರತಿ ತಿಂಗಳೂ ಪಾವತಿಸಿದ್ದಾರೆ. ಮಾರುಕಟ್ಟೆಗಿಂತಲೂ ಹೆಚ್ಚಿನ ದರವನ್ನು 202ರ ಅಕ್ಟೋಬರ್‌ನಿಂದ 2022ರ ಜೂನ್‌ವರೆಗೂ ಪಾವತಿಸಿರುವ ಕಾರಣ 1,87 ಕೋಟಿಯಷ್ಟು ನಷ್ಟಕ್ಕೆ ಕಾರಣವಾದಂತಾಗಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

 

ಟೆಂಡರ್‌ ಪ್ರಕ್ರಿಯೆಗಳಲ್ಲಿನ ಲೋಪಗಳ ಕುರಿತು ಸಿಎಜಿ ಕೇಳಿರುವ ವಿವರಣೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts