ನಿರಾಣಿ ಶುಗರ್ಸ್‌ ಸೇರಿ 42 ಸಕ್ಕರೆ ಕಾರ್ಖಾನೆಗಳಿಗೆ ಸಾಲ; 3,624 ಕೋಟಿ ಹೊರಬಾಕಿ

ಬೆಂಗಳೂರು; ರಾಜ್ಯ ಅಪೆಕ್ಸ್‌ ಬ್ಯಾಂಕ್‌ನಿಂದ ಕೋಟ್ಯಂತರ ರುಪಾಯಿ ಮೊತ್ತದಲ್ಲಿ ಸಾಲ ಪಡೆದಿರುವ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಒಡೆತನದ ನಿರಾಣಿ ಶುಗರ್ಸ್‌, ಕಾಂಗ್ರೆಸ್‌ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಮತ್ತಿತರ ಪ್ರಭಾವಿ ರಾಜಕೀಯ ಕುಟುಂಬಗಳಿಗೆ ಸೇರಿದ ಖಾಸಗಿ ಮತ್ತು ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಗಳು 2022ರ ಅಕ್ಟೋಬರ್‌ ಅಂತ್ಯಕ್ಕೆ ಒಟ್ಟಾರೆ 3,624.46 ಕೋಟಿ ರು. ಗಳ ಹೊರಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಸಕ್ಕರೆ ಸಾಲಗಳ ನಿಯಮಾವಳಿಗಳ ಅನ್ವಯ ಸಾಲ ಮಂಜೂರು ಮಾಡುತ್ತಿರುವ ಅಪೆಕ್ಸ್‌ ಬ್ಯಾಂಕ್‌, ರಾಜ್ಯದ 31 ಖಾಸಗಿ ಮತ್ತು 11 ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಒಟ್ಟಾರೆ 3,154.3466 ಕೋಟಿ ರು. ಸಾಲ ವಿತರಿಸಿತ್ತು. ಆದರೆ ಇದೇ ಅವಧಿಗೆ 3,624.46 ಕೋಟಿ ರು. ಹೊರಬಾಕಿ ಮೊತ್ತವಿರುವುದು ಮುನ್ನೆಲೆಗೆ ಬಂದಿದೆ.

 

ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಖಾಸಗಿ ಮತ್ತು ಸಹಕಾರ ವಲಯದ ಸಕ್ಕರೆ ಕಾರ್ಖಾನೆಗಳು ಹೊರಬಾಕಿ ಉಳಿಸಿಕೊಂಡಿರುವ ಮೊತ್ತದ ವಿವರವನ್ನು ಸದನಕ್ಕೆ ಒದಗಿಸಿದ್ದಾರೆ.

 

ರಾಜ್ಯ ಅಪೆಕ್ಸ್‌ ಬ್ಯಾಂಕ್‌ ವಿವಿಧ ರೀತಿಯ ಸಾಲಗಳನ್ನು 31 ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ 2,418.15 ಕೋಟಿ ರು., 11 ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ 736.19 ಕೋಟಿ ರು. ಸೇರಿ ಒಟ್ಟಾರೆ 3,154.34 ಕೋಟಿ ರು. ವಿತರಿಸಿದೆ ಎಂದು ಮಾಹಿತಿಯಲ್ಲಿ ಅಂಕಿ ಅಂಶಗಳನ್ನು ಒದಗಿಸಲಾಗಿದೆ.

 

ವಿತರಿಸಿರುವ ಒಟ್ಟ ಸಾಲದ ಪೈಕಿ 31 ಖಾಸಗಿ ಸಕ್ಕರೆ ಕಾರ್ಖಾನೆಗಳಿಂದ 284.95 ಕೋಟಿ ಅಸಲು, 760.74 ಕೋಟಿ ರು. ಸೇರಿ 1,045.69 ಕೋಟಿ ರು. ವಸೂಲಾಗಿದೆ. ಅದೇ ರೀತಿ 11 ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ 221.84 ಕೋಟಿ ಅಸಲು, 250.82 ಕೋಟಿ ಬಡ್ಡಿ ಸೇರಿದಂತೆ ಒಟ್ಟಾರೆ 506.79 ಕೋಟಿ ಅಸಲು ಮತ್ತು 1,011.57 ಕೋಟಿ ಬಡ್ಡಿ ಸೇರಿ ಒಟ್ಟಾರೆ 1,518.36 ಕೋಟಿ ರು. ವಸೂಲಾಗಿದೆ ಎಂಬುದು ಎಸ್‌ ಟಿ ಸೋಮಶೇಖರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ಅದೇ ರೀತಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಂದ 95,510.13 ಲಕ್ಷ ರು. ಅಸಲು ಮತ್ತು 33,222.67 ಲಕ್ಷ ಗಳ ಬಡ್ಡಿ ಸೇರಿ ಒಟ್ಟು 1,28,732.80 ಲಕ್ಷ ರು. ಮರುಪಾವತಿಸದಿರುವ ಮೊತ್ತವಾಗಿದೆ. ಅಲ್ಲದೆ ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ 45,170.76 ಲಕ್ಷ ಅಸಲು ಮತ್ತು 19,714.18 ಲಕ್ಷ ಬಡ್ಡಿ ಸೇರಿ ಒಟ್ಟು 64,884.94 ಲಕ್ಷ ರು. ಮರುಪಾವತಿಸದಿರುವ ಮೊತ್ತವಾಗಿದೆ ಎಂದು ಮಾಹಿತಿ ಒದಗಿಸಲಾಗಿದೆ.

 

ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಒದಗಿಸಿರುವ ಉತ್ತರದ ಪ್ರತಿ

 

ಹೊರಬಾಕಿ ಉಳಿಸಿಕೊಂಡಿರುವ ಸಹಕಾರಿ ಕಾರ್ಖಾನೆಗಳ ಪಟ್ಟಿ

 

ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆ 9951.69 ಲಕ್ಷ ರು., ರೈತ ಸಹಕಾರಿ ಸಕ್ಕರೆ ಕಾರ್ಖಾನೆ (ಬಾಗಲಕೋಟೆ) 10767.24 ಲಕ್ಷ ರು., ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ 3,999.74 ಲಕ್ಷ ರು., ಶ್ರೀ ಸೋಮೇಶ್ವರ (ಬೆಳಗಾವಿ) 6372.27 ಲಕ್ಷ ರು., ಶ್ರೀ ಭೀಮಾಶಂಕರ್‌ (ವಿಜಯಪುರ) 18709.53 ಲಕ್ಷ, ಶ್ರೀ ಮಲಪ್ರಭಾ 10364. 73 ಲಕ್ಷ , ಭಾಗ್ಯಲಕ್ಷ್ಮಿ (ಖಾನಾಪುರ) 1319.45 ಲಕ್ಷ ರು., ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ (ಹರಿಹರ) 3145.62 ಲಕ್ಷ ರು., ಘಟಪ್ರಭಾ 4371.54 ಲಕ್ಷ, ಬೀದರ್‌ ಎಸ್‌ಎಸ್‌ಕೆ (ಹಳ್ಳಿಖೇಡ) 9786.89 ಲಕ್ಷ ರು., ಕೃಷ್ಣ ಎಸ್‌ಎಸ್‌ಕೆ (ಅಥಣಿ) 2301.54 ಲಕ್ಷ ರು. ಹೊರಬಾಕಿ ಉಳಿಸಿಕೊಂಡಿದೆ.

 

ಖಾಸಗಿ ಕಾರ್ಖಾನೆಗಳ ಪಟ್ಟಿ

 

ಜೆಮ್‌ ಶುಗರ್ಸ್ (ಬಾಗಲಕೋಟೆ) 506.60 ಲಕ್ಷ, ನಿರಾಣಿ ಶುಗರ್ಸ್‌ 9191.64 ಲಕ್ಷ , ಬೀಳಗಿ ಶುಗರ್ಸ್‌ 12928.54 ಲಕ್ಷ ರು., ಭಾಲ್ಕೇಶ್ವರ್‌ ಶುಗರ್ಸ್‌ 19827.55 ಲಕ್ಷ , ಚಾಮುಂಡೇಶ್ವರಿ ಶುಗರ್ಸ್ (ಮಂಡ್ಯ) 13483.54 ಲಕ್ಷ, ಬಾಲಾಜಿ ಶುಗರ್ಸ್ (ವಿಜಯಪುರ) 12950.88 ಲಕ್ಷ, ಮೈಲಾರ್‌ ಶುಗರ್ಸ್‌ (ಬಳ್ಳಾರಿ) 17746.55 ಲಕ್ಷ, ಬೀದರ್‌ ಕಿಸಾನ್‌ (ಬೀದರ್‌) 13883.57 ಲಕ್ಷ,

 

ಹರ್ಷ ಶುಗರ್ಸ್ (ಬೆಳಗಾವಿ) 18243.16 ಲಕ್ಷ, ಜಮಖಂಡಿ ಶುಗರ್ಸ್‌ (ಬಾಗಲಕೋಟೆ) 8668.25 ಲಕ್ಷ, ಮನಾಲಿ ಶುಗರ್ಸ್ (ಗೋಕಾಕ್‌) 4953.32 ಲಕ್ಷ, ಸೌಭಾಗ್ಯಲಕ್ಷ್ಮಿ ಶುಗರ್ಸ್‌ (ಗೋಕಾಕ್‌) 19322.47 ಲಕ್ಷ, ಸಾವರಿನ್‌ ಇಂಡಸ್ಟ್ರೀಸ್‌ (ಜಮಖಂಡಿ) 21178.89 ಲಕ್ಷ, ಧ್ಯಾನಯೋಗಿ ಶಿವಕುಮಾರ್‌ ಸ್ವಾಮೀಜಿ ಶುಗರ್ಸ್‌ (ವಿಜಯಪುರ) 1608.48 ಲಕ್ಷ, ಶಿವಶಕ್ತಿ ಶುಗರ್ಸ್‌ (ಬೀದರ್‌) 1118.37 ಲಕ್ಷ,

 

ಶ್ರೀ ಸಾಯಿಪ್ರಿಯಾ ಶುಗರ್ಸ್‌ (ಬಾಗಲಕೋಟೆ) 8504.86 ಲಕ್ಷ, ಎಂಆರ್‌ಎನ್‌ ಕೇನ್‌ ಪವರ್‌ (ಬಾಗಲಕೋಟೆ) 3812.89 ಲಕ್ಷ, ಸಂಗಮನಾಥ ಶುಗರ್ಸ್ (ವಿಜಯಪುರ) 12943.21 ಲಕ್ಷ, ಅಥಣಿ ಶುಗರ್ಸ್‌ (ಬೆಳಗಾವಿ) 3492.32 ಲಕ್ಷ, ಇಂಡಿಯನ್‌ ಶುಗರ್ಸ್‌ 8352.96 ಲಕ್ಷ, ಮೆಲ್ಬಬ್ರೋ 3907.82 ಲಕ್ಷ, ಶಾಮನೂರು ಶುಗರ್ಸ್ (ದಾವಣಗೆರೆ) 2595.00 ಲಕ್ಷ, ಆಸ್ಕಿನ್ಸ್‌ ಬಯೋಫ್ಯೂಯಲ್‌ (ಬೆಳಗಾವಿ) 5871.37 ಲಕ್ಷ, ಕೇದಾರನಾಥ ಶುಗರ್ಸ್‌ 4431.98 ಲಕ್ಷ, ಸಾವಸನ್‌ ಡಿಸ್ಟಲರೀಸ್‌ (ಅಥಣಿ) 5031.50 ಲಕ್ಷ, ಪ್ರಭುಲಿಂಗೇಶ್ವರ್‌ 98.43 ಲಕ್ಷ, ಇಂಡಿಯನ್‌ ಕೇನ್‌ ಪವರ್‌ 3050.56 ಲಕ್ಷ, ವಿಐಎನ್‌ಪಿ ಡಿಸ್ಟಲರೀಸ್ 5583.92 ಲಕ್ಷ, ಕಾರ್ತಿಕ್‌ ಆಗ್ರೋ ಇಂಡಿಯಾ 1860.00 ಲಕ್ಷ, ಶಿರಗುಪ್ಪಿ ಶುಗರ್ಸ್‌ 2889.88 ಲಕ್ಷ ರು. ಹೊರಬಾಕಿ ಉಳಿಸಿಕೊಂಡಿದೆ.

 

ನಬಾರ್ಡ್‌ನ ಲೆಕ್ಕ ಪರಿಶೋಧನೆಯಲ್ಲಿ ಶ್ರೇಣಿ ಆಧಾರಿತವಾಗಿ ಬ್ಯಾಂಕ್‌ನ ‘ಬಿ’ ಶ್ರೇಣಿ ಪಡೆದಿರುವುದರಿಂದ ಒಟ್ಟು ಕ್ಯಾಪಿಟಲ್‌ ಫಂಡ್‌ನ ಶೇ. 40ರಷ್ಟುನ್ನು ಬ್ಯಾಂಕ್‌ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಅವಧಿ ಸಾಲ, ದುಡಿಯುವ ಬಂಡವಾಳ ಸಾಲಗಳನ್ನು ಮಾಡಬಹುದು.

 

ಅಲ್ಲದೆ ಬ್ಯಾಂಕ್‌ನಿಂದ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಳಿಗೆ ನೀಡುವ ಅವಧಿ ಸಾಲಗಳಿಗೆ ಅಧಿಕೃತ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿ ಪಡೆದು ಒಟ್ಟು ಯೋಜನಾ ವೆಚ್ಚದಲ್ಲಿ ಶೇ.30ರಷ್ಟನ್ನು ಪ್ರವರ್ತಕರ ಬಂಡವಾಳವಾಗಿ ತೊಡಗಿಸಲಾಗುತ್ತದೆ. ಉಳಿದ ಶೇ.70ರಷ್ಟನ್ನು ಹಣಕಾಸು ಸಂಸ್ಥೆಗಳಿಂದ ಅವಧಿ ಸಾಲವನ್ನು 7 ವರ್ಷದ ಅವಧಿಗೆ ಅಗತ್ಯ ಭದ್ರತೆ ಪಡೆದು ಸಾಲವನ್ನು ಮಂಜೂರು ಮಾಡಲಾಗುತ್ತಿದೆ.

 

ಬ್ಯಾಂಕ್‌ನಿಂದ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ನೀಡುವ ದುಡಯುವ ಬಂಡವಾಳ ಸಾಲಗಳಿಗೆ ಅಗತ್ಯ ಸಕ್ಕರೆ ದಾಸ್ತಾನನ್ನು ಪಡೆಯುವುದು ಮತ್ತು ನಿರ್ವಹಣಾ ಪೂರ್ವ ಸಾಲಗಳಿಗೆ ಸಂಬಂಧಿಸಿದಂತೆ ಕಾರ್ಖಾನೆಗಳು ಸಕ್ಕರೆ ಉತ್ಪಾದಿಸಿದ ನಂತರ ಅಗತ್ಯ ಸಕ್ಕರೆ ದಾಸ್ತಾನು ಪಡೆದು ಒಂದುವರ್ಷದ ಅವಧಿಗೆ ಮಂಜೂರು ಮಾಡುತ್ತಿದೆ.

SUPPORT THE FILE

Latest News

Related Posts