ಗ್ರಂಥಾಲಯ ಕರ;ಹಣಕಾಸು ನಿಧಿಯಿಂದಲೇ ಕಡಿತಕ್ಕೆ ಸಿಗದ ಒಪ್ಪಿಗೆ,ವಿಧೇಯಕ ಮಂಡನೆ?

photo credit;thenewindianexpress

ಬೆಂಗಳೂರು; ಗ್ರಂಥಾಲಯ ಕರವನ್ನು ವಸೂಲಿ ಮಾಡಿದ ಮೂವತ್ತು ದಿನದೊಳಗೆ ಗ್ರಂಥಾಲಯ ಪ್ರಾಧಿಕಾರಗಳಿಗೆ ಪಾವತಿಸುವಲ್ಲಿ ವಿಫಲವಾಗುವ ಸ್ಥಳೀಯ ಪ್ರಾಧಿಕಾರಗಳ ರಾಜ್ಯ ಹಣಕಾಸು ನಿಧಿ (ಎಸ್‌ಎಫ್‌ಸಿ)ಯಿಂದಲೇ ನೇರವಾಗಿ ಕಡಿತಗೊಳಿಸಲು ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕ ಭಂಡಾರಗಳಿಗೆ ಸಂಬಂಧಿಸಿದಂತೆ ಭೂಮಿ, ಕಟ್ಟಡಗಳ ಮೇಲೆ ತೆರಿಗೆ ವಿಧಿಸುವಾಗ ಗ್ರಂಥಾಲಯ ಕರಕ್ಕೆ 1 ರುಪಾಯಿಗೆ 06.00 ಪೈಸೆಯಂತೆ ಸರ್‌ಚಾರ್ಜ್‌ ಸ್ವರೂಪದಲ್ಲಿ ಸಂಗ್ರಹಿಸುತ್ತಿರುವ ಸ್ಥಳೀಯ ಸಂಸ್ಥೆಗಳು ಆ ಮೊತ್ತವನ್ನು ನಗರ ಗ್ರಂಥಾಲಯ ಪ್ರಾಧಿಕಾರಗಳಿಗೆ ನಿಯಮಿತವಾಗಿ ಪಾವತಿಸುತ್ತಿಲ್ಲ. ಹೀಗಾಗಿ ನಿಯಮ 30(4)ರ ಉಪ ಪ್ರಕರಣ (3)ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರವು ಮುಂದಾಗಿದೆಯಾದರೂ ಇದಕ್ಕೆ ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿಲ್ಲ.

 

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ತಿದ್ದುಪಡಿ ತರುವ ಕರಡು ವಿಧೇಯಕದ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಗ್ರಂಥಾಲಯ ಕರವನ್ನು ಪಾವತಿ ಮಾಡಲು ವಿಫಲವಾದಲ್ಲಿ ಸ್ಥಳೀಯ ಪ್ರಾಧಿಕಾರಗಳ ಎಸ್‌ಎಫ್‌ಸಿ ಮೊತ್ತದಿಂದ ನೇರವಾಗಿ ಕಡಿತಗೊಳಿಸಲು ಆರ್ಥಿಕ ಇಲಾಖೆಯು ಒಪ್ಪಿರುವುದಿಲ್ಲ. ಆದ್ದರಿಂದ ಆಡಳಿತ ಇಲಾಖೆಯು ಮತ್ತೊಮ್ಮೆ ಸ್ಥಳೀಯ ಪ್ರಾಧಿಕಾರಗಳು ಸೆಸ್‌ ಸಂಗ್ರಹಿಸಿ ಗ್ರಂಥಾಲಯ ಪ್ರಾಧಿಕಾರಗಳಿಗೆ ಪಾವತಿಸದೇ ಇರುವ ಮೊತ್ತದ ಬಗ್ಗೆ ಅದರಿಂದ ಆಗಿರುವ ನಷ್ಟದ ಅಂಕಿ ಅಂಶಗಳೊಂದಿಗೆ ಶಿಕ್ಷಣ ಸಚಿವರ ಮುಖಾಂತರ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಈ ಪ್ರಕ್ರಿಯೆಯನ್ನು ಮುಂದುವರೆಸುವುದು ಸೂಕ್ತ,’ ಎಂದು ಸಂಸದೀಯ ವ್ಯವಹಾರಗಳ ಮತ್ತ ಶಾಸನ ರಚನೆ ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ.

 

ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಲಾದ ತೆರಿಗೆಯಲ್ಲಿ ಶೇ.6ರಂತೆ ಆಕರಿಸುವ ಗ್ರಂಥಾಲಯ ಕರವನ್ನು ಪಾವತಿಸದೇ ವಿಳಂಬ ಮಾಡುತ್ತಿರುವ ಕುರಿತಂತೆ ಈಗಿರುವ ಪ್ರಕರಣ 30(4) ಉಪ ಪ್ರಕರಣ (3)ಕ್ಕೆ ತಿದ್ದುಪಡಿ ಮಾಡಿ ಸ್ಥಳೀಯ ಸಂಸ್ಥೆಗಳು ಸಂಗ್ರಹಣೆ ವೆಚ್ಚವಾಗಿ ಶೇ. 5ರಷ್ಟು ಮೊತ್ತವನ್ನು ಉಳಿಸಿಕೊಂಡು ಬಾಕಿ ಮೊತ್ತವನ್ನು 30 ದಿನದೊಳಗೆ ಗ್ರಂಥಾಲಯ ಪ್ರಾಧಿಕಾರಗಳಿಗೆ ಪಾವತಿಸಬೇಕು.

 

ಈ ರೀತಿ ಸ್ಥಳೀಯ ಸಂಸ್ಥೆಯವರು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸುವ ಮೊತ್ತದಲ್ಲಿ ಇಲಾಖೆಯಿಂದ ನಿಗದಿಪಡಿಸಿಕೊಳ್ಳಲಾದ ಆಯಾ ಜಿಲ್ಲಾ/ನಗರ ಗ್ರಂಥಾಲಯ ಪ್ರಾಧಿಕಾರದ ಆಯವ್ಯಯದನುಸಾರ ಬಜೆಟ್‌ನಲ್ಲಿ ಹೇಳಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹಾಗೂ ಸಾರ್ವಜನಿಕ ಸೇವೆಯನ್ನು ಉತ್ತಮ ಪಡಿಸಲು ವಿಧೇಯಕಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ರಿತೇಶ್‌ಕುಮಾರ್‌ಸಿಂಗ್‌ ಅವರು ಸಂಪುಟದ ಅನುಮೋದನೆ ಕೋರಿರುವುದು ಗೊತ್ತಾಗಿದೆ.

 

ಗ್ರಂಥಾಲಯ ಕರವನ್ನು ವಸೂಲು ಮಾಡುತ್ತಿರುವ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಆಯಾ ಪ್ರಾಧಿಕಾರಗಳಿಗೆ ಒದಗಿಸದೇ ಬಾಕಿ ಉಳಿಸಿಕೊಂಡಿವೆ. 2022ರ ಮಾರ್ಚ್‌ 31ರ ಅಂತ್ಯಕ್ಕೆ ಸ್ಥಳೀಯ ಸಂಸ್ಥೆಗಳು ಒಟ್ಟು 5183.81 ಲಕ್ಷ ರು. ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಿಂದ 58599.10 ಲಕ್ಷ ರು. ಸೇರಿದಂತೆ ಒಟ್ಟಾರೆ 63782.91 ಲಕ್ಷ ರು.ಗಳನ್ನು ಗ್ರಂಥಾಲಯ ಪ್ರಾಧಿಕಾರಕ್ಕೆ ಸಂದಾಯವಾಗಿಲ್ಲ.

 

ಗ್ರಂಥಾಲಯ ಕರವೆಂದು ವಸೂಲಿ ಮಾಡುವ ಸ್ಥಳೀಯ ಸಂಸ್ಥೆಗಳು 30 ದಿನದೊಳಗೆ ಪಾವತಿಸದೇ ಆ ಹಣವನ್ನು ತಮ್ಮಲ್ಲಿಯೇ ಇರಿಸಿಕೊಂಡು ಅನ್ಯ ಕಾರ್ಯಕ್ಕಾಗಿ ಬಳಕೆ ಮಾಡಿಕೊಂಡು ಗ್ರಂಥಾಲಯ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿವೆ. ಹೀಗಾಗಿ ಗ್ರಂಥಾಲಯದ ಓದುಗರಿಗೆ ಸಮರ್ಪಕ ಸೇವೆಯು ಸಾರ್ವಜನಿಕರಿಗೆ ಸಿಗುತ್ತಿಲ್ಲ. ಅಲ್ಲದೇ ಗ್ರಂಥಾಲಯಗಳ ಗಣಕೀಕರಣ, ಡಿಜಿಟಲೀಕರಣ, ವ್ಯವಸ್ಥಿತವಾದ ಗ್ರಂಥಾಲಯ ಕಟ್ಟಡಗಳನ್ನು ಹಾಗೂ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳು ರಚಿಸಿರುವ ಬಡಾವಣೆಗಳಲ್ಲಿ ಸಿ ಎ ನಿವೇಶನಗಳನ್ನು ಹಣ ನೀಡಿ ಖರೀದಿಸಲಾಗುತ್ತಿಲ್ಲ.

 

‘ಸ್ಥಳೀಯ ಸಂಸ್ಥೆಯವರು ಮಾಡುವ ಲೋಪದಿಂದಾಗಿ ಮಾತೃ ಇಲಾಖೆಗೆ ಆಗುವ ಅನಾನುಕೂಲ ಹಾಗೂ ತೊಂದರೆಗಳನ್ನು ಉಂಟು ಮಾಡುವಲ್ಲಿ ಕಾರಣಿಭೂತರಾಗುವ ಸ್ಥಳೀಯ ಸಂಸ್ಥೆಗಳು ಸಂಗ್ರಹಣ ವೆಚ್ಚವಾಗಿ ಶೇ. 5ರಷ್ಟು ಮೊತ್ತವನ್ನು ಉಳಿಸಿಕೊಂಡು ಬಾಕಿ ಮೊತ್ತವನ್ನು ಸಂಗ್ರಹಿಸಿದ ದಿನಾಂಕದಿಂದ ಮೂವತ್ತು ದಿನದೊಳಗೆ ಸಂದರ್ಭಾನುಸಾರ ನಗರ ಗ್ರಂಥಾಲಯ ಪ್ರಾಧಿಕಾರ ಅಥವಾ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲು ಕಾನೂನಿನಲ್ಲಿ ತಿದ್ದುಪಡಿ ಮಾಡಿ ಕ್ರಮ ಕೈಗೊಳ್ಳಬೇಕು,’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ರಾಜ್ಯ ಕೇಂದ್ರ ಗ್ರಂಥಾಲಯ ಸೇರಿದಂತೆ ರಾಜ್ಯದಲ್ಲಿ ಒಟ್ಟು 1,032 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ.

SUPPORT THE FILE

Latest News

Related Posts