ನರೇಗಾ; ಕೇಂದ್ರ ಸರ್ಕಾರದ ಮಾನ ಉಳಿಸಲು 750 ಕೋಟಿ ಮುಂಗಡ ಬಿಡುಗಡೆಗೆ ಪ್ರಸ್ತಾವ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2021-22 ಮತ್ತು 2022-23ನೇ ಸಾಲಿಗೆ ಸಂಬಂಧಿಸಿದ ಸಾಮಗ್ರಿ ಬಿಲ್‌ಗಳ ಪಾವತಿ ಮತ್ತು ರಾಜ್ಯದ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿ ಮಾಡಲು ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ಪರವಾಗಿ 750 ಕೋಟಿ ರು.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಿರುವುದು  ಇದೀಗ ಬಹಿರಂಗವಾಗಿದೆ.

 

ಕೇಂದ್ರ ಪುರಸ್ಕೃತ ಯೋಜನೆಗಳ ಪೈಕಿ ಬಹುತೇಕ ಯೋಜನೆಗಳಿಗೆ ಕೇಂದ್ರ ಸರ್ಕಾರವು ಬದ್ಧತಾ ವೆಚ್ಚಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರುಪಾಯಿ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆಯೇ ನರೇಗಾ ಯೋಜನೆಯಡಿ ಬಿಡುಗಡೆ ಮಾಡಬೇಕಾದ ಮೊತ್ತವನ್ನು ರಾಜ್ಯ ಸರ್ಕಾರವೇ ಮುಂಗಡವಾಗಿ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರದ ಮಾನವನ್ನು ಕಾಪಾಡಲು ಮುಂದಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಈ ಕುರಿತಾದ ಕೆಲ ಟಿಪ್ಪಣಿ ಹಾಳೆಗಳು (FD/389/EXP-6/2022-FINANCE DEPARTMENT) ‘ದಿ ಫೈಲ್‌’ಗೆ ಲಭ್ಯವಾಗಿವೆ.

 

‘ಸಾಮಗ್ರಿಗಳ ಬಿಲ್‌ ಪಾವತಿ ಮತ್ತು ಹಾಲಿ ಇರುವ ಕಾಮಗಾರಿಗಳ ಅನುಷ್ಠಾನಕ್ಕಾಗಿ ಹಾಗೂ ರಾಜ್ಯದಲ್ಲಿ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಪಾವತಿ ಮಾಡುವ ಬದ್ಧತೆಯಿರುವುದರಿಂದ ಮತ್ತು ಕೇಂದ್ರ ಸರ್ಕಾರದಿಂದ ಅಉದಾನ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ದೃಷ್ಟಿಯಿಂದ 2022-23ನೇ ಸಾಲಿಗೆ ರಾಜ್ಯ ಸರ್ಕಾರವು ಕೇಂದ್ರದ ಪಾಲಿನ ಅನುದಾನವನ್ನು ಮುಂಗಡವಾಗಿ 1,000 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಕೋರಬಹುದು,’ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆಗೆ ಕೋರಿರುವುದು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಈ ಯೋಜನೆಯಡಿ ರಾಜ್ಯ ಸರ್ಕಾರವು ಯಾವುದೇ ಅನುದಾನವನ್ನು ಬಾಕಿ ಉಳಿಸಿಕೊಂಡಿಲ್ಲ. ಅಲ್ಲದೇ ಕೊನೆಯ ಮುಂಗಡವನ್ನೂ ಈಗಾಗಲೇ ಮರುಪಾವತಿ ಮಾಡಿದೆ. 1,000 ಕೋಟಿ ರು.ಗಳ ಹೆಚ್ಚುವರಿ ಅನುದಾನವನ್ನು ಭಾರತ ಸರ್ಕಾರದಿಂದ ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆಯನ್ನು ಕೋರಿರುವುದು ಪ್ರಸ್ತಾವನೆಯಿಂದ ಗೊತ್ತಾಗಿದೆ.

 

‘ಈಗಾಗಲೇ ರಾಜ್ಯ ಸರ್ಕಾರವು ಮುಂಗಡವಾಗಿ ಬಿಡುಗಡೆ ಮಾಡಲಾಗಿರುವ ಕೇಂದ್ರದ ಪಾಲು 750 ಕೋಟಿ ರು.ಗಳಲ್ಲಿ 317,25,24,000 ರು.ಗಳನ್ನು ಹಾಗೂ ಮುಂಗಡವಾಗಿ ಬಿಡುಗಡೆ ಮಾಡಲಾಗಿದ್ದ ರಾಜ್ಯದ ಪಾಲು 250 ಕೋಟಿ ರು ಗಳಲ್ಲಿ 105,75,08,000 ರು.ಗಳನ್ನು ಹೊಂದಾಣಿಕೆ ಮಾಡಿಕೊಂಡು ಉಳಿಕೆ ಆಡಳಿತ ವೆಚ್ಚಕ್ಕೆ ಬಿಡುಗಡೆಯಾಗಿರುವ ಕೇಂದ್ರದ ಪಾಲಿನ 74,31,06,250 ರು.ಗಳನ್ನು ಬಿಡುಗಡೆ ಮಾಡಲೂ ಪ್ರಸ್ತಾಪಿಸಿದೆ.

 

ಕೇಂದ್ರವು (ಲೆಕ್ಕ ಶೀರ್ಷಿಕೆ 2505-60-196-6-04) 700000.00 ಲಕ್ಷ ರು. ಮತ್ತು 200000.00 ಲಕ್ಷ ರು. ಸೇರಿ ಒಟ್ಟು 900000.00 ಲಕ್ಷ ರು ಅನುದಾನವನ್ನು ನೀಡಬೇಕಿತ್ತು. ನರೇಗಾ ಯೋಜನೆಯಡಿ 2017-18 ಮತ್ತು 2021-22ರ ಅವಧಿಯಲ್ಲಿ 3,505.71 ಕೋಟಿ ರು ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ 2022ರ ಮೇ 11ರಂದು ಪತ್ರ ಬರೆದಿತ್ತು ಎಂದು ತಿಳಿದು ಬಂದಿದೆ.

 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2022-23ನೇ ಸಾಲಿಗೆ ಆಯವ್ಯಯದಲ್ಲಿ ಒಟ್ಟು 1,280 ಕೋಟಿ ರು.ಗಳಲ್ಲಿ ಕೇಂದ್ರ ಪಾಲು 960.00 ಕೋಟಿ ರು ಮತ್ತು ರಾಜ್ಯದ ಪಾಲು 320 ಕೋಟಿ ರು ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಈಗಾಗಲೇ ಆರ್ಥಿಕ ಇಲಾಖೆಯು (ಸರ್ಕಾರಿ ಆದೇಶ ಸಂಖ್ಯೆ; ಆಇ 75 ಬಿಆರ್‌ಎಸ್‌ 2022 ದಿನಾಂಕ 18-07-2022) ಹೆಚ್ಚುವರಿ ಆದೇಶದ ಮೂಲಕ 265 ಕೋಟಿ ರು.ಗಳನ್ನು ನೀಡಿತ್ತು.

 

‘ಆಡಳಿತ ಇಲಾಖೆಯು ಕೋರಿದಂತೆ 1,000 ಕೋಟಿ ರ.ಗಳ ಅನುದಾನವನ್ನು ಬಿಡುಗಡೆ ಮಾಡಲು ಕೇಂದ್ರ ಮತ್ತು ರಾಜ್ಯದ ಪಾಲು 75;25ರಂತೆ ಕೇಂದ್ರ ಪಾಲಿನ 750 ಕೋಟಿ ಹಾಗೂ ರಾಜ್ಯದ 250 ಕೋಟಿ ರು.ಗಳನ್ನು ಒದಗಿಸಬೇಕಾಗುತ್ತದೆ. ಕೇಂದ್ರದ ಪಾಲಿನ 750 ಕೋಟಿ ರು.ಗಳನ್ನು ಹೆಚ್ಚುವರಿ ಆದೇಶದ ಮೂಲಕ ಒದಗಿಸಿ ಪೂರಕ ಅಂದಾಜು -2ರಲ್ಲಿ ಸಕ್ರಮಗೊಳಿಸಬಹುದು. ರಾಜ್ಯದ ಪಾಲಿನ ಅನುದಾನವನ್ನು ಸದ್ಯ ಲಭ್ಯವಿರುವ ಅನುದಾನದಿಂದ ಬಿಡುಗಡೆ ಮಾಡಬಹುದು,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿದೆ ಎಂದು ಗೊತ್ತಾಗಿದೆ.

 

ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹೊಣೆ ಹೊತ್ತಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts