ಸುಪ್ರೀಂಕೋರ್ಟ್‌ಗೇ ಸವಾಲು; ಉಪರಾಷ್ಟ್ರಪತಿ ವಿರುದ್ಧವೇ ನ್ಯಾಯಾಂಗ ನಿಂದನೆ ದಾಖಲಿಸಲು ಕೋರಿ ಪತ್ರ

ಬೆಂಗಳೂರು; ಡಾ ಎಲ್‌ಎಮ್ ಸಿಂಗ್ವಿ ಅವರ 8ನೇ ಸ್ಮರಣಾರ್ಥ ಕುರಿತು ಡಿಸೆಂಬರ್‌ 2ರಂದು ದೆಹಲಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರು ಸರ್ವೋಚ್ಛ ನ್ಯಾಯಾಲಯದ ‘ನ್ಯಾಯಾಂಗ ಪರಿಶೀಲನೆ’ ಎಂಬ ಸಂವಿಧಾನದತ್ತ ಅಧಿಕಾರ ಮತ್ತು ಸುಪ್ರೀಂಕೋರ್ಟ್‌ಗೆ ಸವಾಲೆಸೆದು ನ್ಯಾಯಾಲಯವನ್ನು ನಿಂದಿಸಿದ್ದಾರೆ ಎಂಬ ಗಂಭೀರವಾದ ಆರೋಪಕ್ಕೆ ಗುರಿಯಾಗಿದ್ದಾರೆ.

 

ಈ ಸಂಬಂಧ ಜಗದೀಪ್‌ ಧನ್ಕರ್‌ ಅವರ ವಿರುದ್ಧವೇ ನ್ಯಾಯಾಂಗ ನಿಂದನೆ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಬೇಕು ಎಂದು ಭಾರತ ಸರ್ಕಾರದ ಅಟಾರ್ನಿ ಜನರಲ್‌ ಅವರಿಗೆ ಅನುಮತಿ ಕೋರಿ ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಭಾರತದ ಉಪ ರಾಷ್ಟಪತಿ ಜಗದೀಪ್ ಧನ್ಕರ್‌ ಅವರು ಸರ್ವೋಚ್ಛ ನ್ಯಾಯಾಲಯದ ನಿಂದನೆಯ ಕೃತ್ಯ ಎಸಗಿದ್ದಾರೆ. ಉಪ ರಾಷ್ಟ್ರಪತಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ 1971ರ ಕಲಂ 15(1)(ಬಿ)ರ ಅನ್ವಯ ನ್ಯಾಯಾಂಗ ನಿಂದನೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಬೇಕು,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್‌ ಅವರು ಭಾರತ ಸರ್ಕಾರದ ಅಟೋರ್ನಿ ಜನರಲ್‌ರವರಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಉಪನ್ಯಾಸದಲ್ಲಿ ಹೇಳಿದ್ದೇನು?

 

ಡಾ ಎಲ್‌ಎಮ್ ಸಿಂಗ್ವಿ ಸ್ಮರಣಾರ್ಥ ಮೇಲೆ ಡಿಸೆಂಬರ್ 2ರಂದು ಆಯೋಜಿಸಿದ್ದ “ಸಾರ್ವತ್ರಿಕ ವಯಸ್ಕರ ಮತದಾನ ಭಾರತದ ರಾಜಕೀಯ ಪರಿವರ್ತನೆಯನ್ನು ಸಾಮಾಜಿಕ ಪರಿವರ್ತನೆಯಾಗಿ ಮಾರ್ಪಡಿಸುವುದು” ಎಂಬ ಕುರಿತು ಉಪ ರಾಷ್ಟಪತಿ ಶ್ರೀ ಜಗದೀಪ್ ಧನ್ಕರ್‌ರವರು ಉಪನ್ಯಾಸ ನೀಡಿದ್ದರು.

 

‘2015ರ ಲೋಕಸಭೆ ಹಾಗೂ ರಾಜ್ಯಸಭೆಯ ಅಧಿವೇಶನದಲ್ಲಿ ಭಾರಿ ಬಹುಮತದಿಂದ ಅನುಮೋದಿಸಲ್ಪಟ್ಟ ಸಂವಿಧಾನದ ಒಂದು ಮಹತ್ತರವಾದ ತಿದ್ದುಪಡಿಯನ್ನು ಸರ್ವೋಚ್ಛ ನ್ಯಾಯಾಲಯವು ತನ್ನ ಸಂವಿಧಾನ ದತ್ತವಾದ ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಚಲಾಯಿಸಿ ಆ ತಿದ್ದುಪಡಿಯನ್ನು ವಜಾ ಮಾಡಿರುವುದು ಜಗತ್ತಿನ ಯಾವ ದೇಶದಲ್ಲೂ ನಡೆದಿಲ್ಲ,’ ಎಂದು ಎಂದು ಉಪ ರಾಷ್ಟಪತಿಗಳು ತಮ್ಮ ಉಪನ್ಯಾಸದಲ್ಲಿ ಹೇಳಿಕೆ ನೀಡಿದ್ದರು.

 

‘ಭಾರತದ ಸಂವಿಧಾನದ ಅನುಚ್ಛೇದ 145(3)ರ ಅನ್ವಯ ಕಾನೂನಿನ ಒಂದು ಗಣನೀಯ ವಿಷಯದ ಬಗ್ಗೆ ವ್ಯಾಖ್ಯಾನಿಸಬಹುದೇ ವಿನಃ ಸಂವಿಧಾನದ ಒಂದು ತಿದ್ದುಪಡಿಯನ್ನೇ ತುಳಿದುಹಾಕುವಂತಿಲ್ಲ. ಜನತೆಯ ಅಭಿಲಾಷೆಯನ್ನು ಪ್ರತಿನಿಧಿಸುವ ಒಂದು ಸಾಂವಿಧಾನಿಕ ತಿದ್ದುಪಡಿಯನ್ನು ಸರ್ವೋಚ್ಛ ನ್ಯಾಯಾಲಯವು ಹೀಗೆ ತಳ್ಳಿ ಹಾಕಿದರೆ ಏನಾಗುತ್ತದೆ ಎಂದು ಹೇಳುತ್ತಲೇ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ತಮ್ಮ ಉಪನ್ಯಾಸದ ಮೂಲಕ ಪ್ರಶ್ನಿಸಿದ್ದರು,’. ಅಲ್ಲದೇ ಈ ಮೇಲಿನ ಹೇಳಿಕೆಗಳನ್ನು ತಮ್ಮ ಟ್ವಿಟ್ಟರ್ ಖಾತೆ @VPSecretariat ನಲ್ಲಿ ಸಾರ್ವಜನಿಕರಿಗೆ ದೊರೆಯುವ ರೀತಿಯಲ್ಲಿ ಪ್ರಕಟಿಸಿದ್ದರು.

 

ಸರ್ವೋಚ್ಛ ನ್ಯಾಯಾಲಯದ ‘ನ್ಯಾಯಾಂಗ ಪರಿಶೀಲನೆ’ ಎಂಬ ಸಂವಿಧಾನದತ್ತ ಅಧಿಕಾರಕ್ಕೆ ಸವಾಲೆಸೆದು ನ್ಯಾಯಾಲಯವನ್ನು ನಿಂದಿಸಿರುವುದು ಮತ್ತು ಈ ಸಂಬಂಧ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಉಪನ್ಯಾಸದ ವಿಡಿಯೋ ತುಣುಕುಗಳನ್ನು ಪುರಾವೆಯನ್ನಾಗಿ ನೀಡಿರುವುದು ಪತ್ರದಿಂದ ತಿಳಿದು ಬಂದಿದೆ.

 

ಸಂವಿಧಾನ ದತ್ತವಾದ ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನೇ ಅಳಿಸಿದ ಪಕ್ಷದಲ್ಲಿ 1970ರ ದಶಕದ ತರಹದ ತುರ್ತು ಪರಿಸ್ಥಿತಿಯನ್ನು ಮತ್ತೊಮ್ಮೆ ಎದುರಿಸಬೇಕಾಗುವುದು ಎಂಬ ಭೀತಿಯನ್ನು ಪರಿಷತ್‌ ವ್ಯಕ್ತಪಡಿಸಿದೆ. ‘ತುರ್ತು ಪರಿಸ್ಥಿತಿಯಂತಹ ದುರಂತವು ಮುಂದೆ ಎಂದೂ ನಡೆಯಬಾರದು ಎಂಬ ಉದ್ದೇಶದಿಂದ ಉಪ ರಾಷ್ಟಪತಿಯವರ ಹೇಳಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿ ಉಪ ರಾಷ್ಟಪತಿಯವರ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ದಾಖಲಿಸಲು ಅನುಮತಿ ಕೋರಿದೆ,’ ಎಂದು ಪರಿಷತ್‌ ಪತ್ರದಲ್ಲಿ ವಿವರಿಸಿದೆ.

SUPPORT THE FILE

Latest News

Related Posts