ಕೆಪಿಟಿಸಿಎಲ್‌ ಸಿಬ್ಬಂದಿ ವೇತನ ಪರಿಷ್ಕರಣೆಗೆ ಪ್ರಸ್ತಾವ; ವಿದ್ಯುತ್‌ ದರ ಏರಿಕೆಗೆ ದಾರಿ?

photo credit;karkalasunilkumar twitter account

ಬೆಂಗಳೂರು; ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ಎಸ್ಕಾಂಗಳ ಅಧಿಕಾರಿ, ಸಿಬ್ಬಂದಿಗೆ ಹೆಚ್ಚಿನ ವೇತನ ನೀಡುತ್ತಿದ್ದರೂ ಪುನಃ ವೇತನ, ಪಿಂಚಣಿ, ಕುಟುಂಬ ಪಿಂಚಣಿಯನ್ನು ಮುಂದಿನ 5 ವರ್ಷಗಳ ಅವಧಿಯವರೆಗೆ ಶೇ.22ಕ್ಕೆ ಹೆಚ್ಚಳ ಮಾಡಿ ಪರಿಷ್ಕರಿಸಲು ಇಂಧನ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ವಿದ್ಯುತ್‌ ದರವನ್ನು ಹೆಚ್ಚಳ ಮಾಡಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಮತ್ತಷ್ಟು ಹೊರೆಯನ್ನು ಹೊಸ ಪ್ರಸ್ತಾವನೆಯು ಹೊರಿಸಲಿದೆ.

 

2022ರ ಏಪ್ರಿಲ್‌ 1ರಿಂದಲೇ ಜಾರಿಗೆ ಬರುವಂತೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ವಿದ್ಯುತ್‌ ವಿತರಣೆ ಸಂಪರ್ಕ ಕಂಪನಿ (ಎಸ್ಕಾಂ)ಗಳ ಸಿಬ್ಬಂದಿಯ ವೇತನ, ಪಿಂಚಣಿದಾರರ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಬೇಕು ಎಂದು ಇಂಧನ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಆಕ್ಷೇಪ ಎತ್ತಿದೆ.

 

ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಸಿಬ್ಬಂದಿ ವೇತನ, ಪಿಂಚಣಿದಾರರ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸುವ ಸಂಬಂಧ ಆರ್ಥಿಕ ಇಲಾಖೆಯು (FD 463 Exp-1/2022, EN 526 EEB 2022) ಕೆಲ ಸ್ಪಷ್ಟನೆ ಬಯಸಿ ಇಂಧನ ಇಲಾಖೆಗೆ 2022ರ ಡಿಸೆಂಬರ್‌ 6ರಂದು ಪತ್ರ ಬರೆದಿದೆ. ಈ ಕುರಿತಾದ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೆಪಿಟಿಸಿಎಲ್‌ ಅಧಿಕಾರಿ ಸಿಬ್ಬಂದಿಗೆ ಹೆಚ್ಚಿನ ವೇತನ ನೀಡುತ್ತಿದೆ. ಈಗ ಪುನಃ ವೇತನ, ಪಿಂಚಣಿಯನ್ನು ಶೇ.22ರಷ್ಟು ಹೆಚ್ಚಳ ಮಾಡಿ ಪರಿಷ್ಕರಿಸಿದರೆ ವಿದ್ಯುತ್‌ ಗ್ರಾಹಕರಿಗೆ ಅತ್ಯಧಿಕ ಹೊರೆಯಾಗಲಿದೆ. ಎಸ್ಕಾಂಗಳು ವಿಪರೀತ ನಷ್ಟ ಅನುಭವಿಸುತ್ತಿರುವುದು ಮತ್ತು ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದರೂ ವೇತನ, ಪಿಂಚಣಿ ಪರಿಷ್ಕರಣೆಗೆ ಒಪ್ಪಿಗೆ ಏಕೆ ನೀಡಬೇಕು ಎಂದು ಇಂಧನ ಇಲಾಖೆಗೆ ಬರೆದಿರುವ ಪತ್ರದಲ್ಲಿ ಆರ್ಥಿಕ ಇಲಾಖೆಯು ಸ್ಪಷ್ಟನೆ ಬಯಸಿರುವುದು ಗೊತ್ತಾಗಿದೆ.

 

ಶೇ.22ರಷ್ಟು ಏರಿಕೆ ಮಾಡಿದಲ್ಲಿ ಉಂಟಾಗುವ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಪ್ರತಿ ವರ್ಷ ವಿದ್ಯುತ್‌ ದರವನ್ನು ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕುಟುಂಬಗಳಿಗೆ ವಿದ್ಯುತ್‌ ಸಬ್ಸಿಡಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ವಿವರವನ್ನೂ ಆರ್ಥಿಕ ಇಲಾಖೆಯು ಸ್ಪಷ್ಟನೆ ಕೇಳಿದೆ.

 

ಇನ್ನು ಕೆಪಿಟಿಸಿಎಲ್‌ನ ಜ್ಯೂನಿಯರ್‌ ಇಂಜಿನಿಯರ್‌, ಅಸಿಸ್ಟಂಟ್‌ ಎಕ್ಸಿಕ್ಯೂಟಿವ್‌ ಇಂಜಿಇಯರ್‌, ಚೀಫ್‌ ಇಂಜಿನಿಯರ್‌ಗಳಿಗೆ ಕ್ರಮವಾಗಿ ರಾಜ್ಯ ಸರ್ಕಾರದ ವೇತನ ಶ್ರೇಣಿಗಿಂತಲೂ ಶೇ. 14, ಶೇ 27 ಮತ್ತು ಶೇ 35ಕ್ಕೂ ಅಧಿಕ ವೇತನವಿದೆ. ಈಗಾಗಲೇ ಅತ್ಯಧಿಕ ವೇತನ ಶ್ರೇಣಿ ಇದ್ದರೂ ಶೇ.22ರಷ್ಟು ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿ ಗ್ರಾಹಕನ ಮೇಲೆ ಹೊರೆ ಹೊರಿಸುವುದೇಕೇ ಎಂದು ಆರ್ಥಿಕ ಇಲಾಖೆಯು ಪ್ರಶ್ನಿಸಿರುವುದು ತಿಳಿದು ಬಂದಿದೆ.

 

‘ರಾಜ್ಯ ಸರ್ಕಾರವು ನೀಡುತ್ತಿರುವ ಡಿ ಎ ಮತ್ತು ಎಚ್‌ಆರ್‌ಎಯನ್ನು ಕೆಪಿಟಿಸಿಎಲ್‌ ಏಕೆ ಅಳವಡಿಸಿಕೊಳ್ಳಬಾರದು ಎಂದು ಪ್ರಶ್ನಿಸಿರುವ ಆರ್ಥಿಕ ಇಲಾಖೆಯು ಭಾರತ ಸರ್ಕಾರದ ವೇತನ ಶ್ರೇಣಿಗಿಂತಲೂ ರಾಜ್ಯ ಸರ್ಕಾರದ ವೇತನ ಶ್ರೇಣಿಯು ಭಿನ್ನವಾಗಿದೆ. ರಾಜ್ಯ ಸರ್ಕಾರವು ಭಾರತ ಸರ್ಕಾರದ ವೇತನ ಶ್ರೇಣಿಯನ್ನು ಅಳವಡಿಸಿಕೊಂಡಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದೆ.

 

ಕಳೆದ ಅಕ್ಟೋಬರ್‌ನಲ್ಲಿ  ವಿದ್ಯುತ್‌ ದರವನ್ನು ಪರಿಷ್ಕರಿಸಲಾಗಿದೆ. ಎಸ್ಕಾಂಗಳು ಸಲ್ಲಿಸಿದ್ದ ಮನವಿಯ ಮೇರೆಗೆ ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಿಸಲಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್​ಗೆ 24 ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಸೆಸ್ಕಾಂ ಅಡಿಯಲ್ಲಿ ಬರುವ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ 35 ಪೈಸೆ ಏರಿಕೆ ಮಾಡಲಾಗಿದೆ. ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯ ವಿದ್ಯುತ್ ಗ್ರಾಹಕರು ಪ್ರತಿ ಯೂನಿಟ್​ಗೆ 35 ಪೈಸೆ ಹೆಚ್ಚುವರಿ ವಿದ್ಯುತ್ ಶುಲ್ಕ ಪಾವತಿಸಬೇಕಿದೆ.

 

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು 2019-20ರಲ್ಲಿ 2,231.63 ಕೋಟಿ ರು., 2020-21ರಲ್ಲಿ 2,211.32 ಕೋಟಿ ಮತ್ತು 2021-22ರಲ್ಲಿ (ಸೆಪ್ಟಂಬರ್‌ ಅಂತ್ಯ) 3,014.13 ಕೋಟಿ ರು.ಗಳನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ  ಖರ್ಚು ಮಾಡಿದೆ. ಅದೇ ರೀತಿ 2019-20ರಲ್ಲಿ 3,129 ಕೋಟಿ ರು., 2020-21ರಲ್ಲಿ 3,025 ಕೋಟಿ ರು., 2021-22ರಲ್ಲಿ 2,987 ಕೋಟಿ ರು. ಪ್ರಸರಣ ನಷ್ಟ ಅನುಭವಿಸಿದೆ ಎಂದು ಇಂಧನ ಸಚಿವ ವಿ ಸುನೀಲ್‌ಕುಮಾರ್‌ ಸೆಪ್ಟಂಬರ್‌ 2022ರಲ್ಲಿ ಅಧಿವೇಶನದಲ್ಲಿ ಮಾಹಿತಿ ಒದಗಿಸಿದ್ದರು.

 

ಹಾಗೆಯೇ ಬೆಸ್ಕಾಂನಲ್ಲಿ 2019-20ರಲ್ಲಿ ಶೇ.12.49, 2020-21ರಲ್ಲಿ ಶೇ 11.06, 2021-22ರಲ್ಲಿ ಶೇ. 11.23ನಷ್ಟು ನಷ್ಟ ಅನುಭವಿಸಿದೆ. ಮೆಸ್ಕಾಂನಲ್ಲಿ 2019-20ರಲ್ಲಿ ಶೇ. 10.07, 2020-21ರಲ್ಲಿ ಶೇ.9.86, 2021-22ರಲ್ಲಿ ಶೇ. 9.02, ಸೆಸ್ಕ್‌ನಲ್ಲಿ 2019-20ರಲ್ಲಿ ಶೇ. 11.12, 2020-21ರಲ್ಲಿ ಶೇ. 12.75, 2021-22ರಲ್ಲಿ ಶೇ. 10.82, ಹೆಸ್ಕಾಂನಲ್ಲಿ 2019-20ರಲ್ಲಿ ಶೇ. 14.10, 2020-21ರಲ್ಲಿ ಶೆ. 13.25, 2021-22ರಲ್ಲಿ ಶೇ. 13.24, ಜೆಸ್ಕಾಂನಲ್ಲಿ 2019-20ರಲ್ಲಿ ಶೇ.11.22, 2020-21ರಲ್ಲಿ ಶೇ. 11.72, 2021-22ರಲ್ಲಿ ಶೇ. 10.54ರಷ್ಟು ನಷ್ಟ ಅನುಭವಿಸಿದೆ.

SUPPORT THE FILE

Latest News

Related Posts