ಮುರುಘಾಮಠಕ್ಕೆ ಆಡಳಿತಾಧಿಕಾರಿ; ವಸ್ತ್ರದ್‌ ನೇಮಿಸಿ ತಪ್ಪುಹೆಜ್ಜೆಯನ್ನಿರಿಸಿತೇ ಸರ್ಕಾರ?

ಬೆಂಗಳೂರು; ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ 2 ಸಾವಿರ ಎಕರೆ ಭೂಮಿ ಖರಾಬು ಬದಲಾವಣೆಯಲ್ಲಿ ಅಕ್ರಮ  ನಡೆದಿದೆ ಎನ್ನಲಾದ ಪ್ರಕರಣದಲ್ಲಿ ತಪ್ಪೆಸಗಿದ್ದರು ಎಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದ ಅಂದಿನ ಮೈಸೂರು ಜಿಲ್ಲಾಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ಇದೀಗ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರವು ತಪ್ಪು ಹೆಜ್ಜೆಯನ್ನಿರಿಸಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ.

 

ಬೃಹನ್ಮಠದ ಪೀಠಾಧಿಪತಿಯಾಗಿದ್ದ ಶಿವಮೂರ್ತಿ ಅವರು ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಮಠದ ಒಟ್ಟು ಸ್ಥಿರಾಸ್ತಿ, ಮಠದ ಹಣಕಾಸು ನಿರ್ವಹಣೆ, ದುರಾಡಳಿತ, ಹಣಕಾಸು ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವರದಿ ನೀಡಿದ್ದರು. ಈ ವರದಿ ಆಧರಿಸಿ ರಾಜ್ಯ ಸರ್ಕಾರವು ಕ್ರಮಕೈಗೊಂಡಿದೆಯಾದರೂ ಭೂ ವಿವಾದದಲ್ಲಿ ಸಿಲುಕಿದ್ದ ಪಿ ಎಸ್‌ ವಸ್ತ್ರದ್‌ ಅವರನ್ನೇ ನೇಮಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

 

ರಾಜ್ಯ ಸರ್ಕಾರದಲ್ಲಿ ಕಳಂಕರಹಿತರು, ದಕ್ಷತೆ ಹೊಂದಿರುವ ಐಎಎಸ್‌ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ನಿವೃತ್ತ ಐಎಎಸ್‌ ಅಧಿಕಾರಿಗಳಲ್ಲೂ ಕಳಂಕರಹಿತ ಮತ್ತು ಯಾವುದೇ ಆರೋಪಗಳಿಲ್ಲದವರಿದ್ದಾರೆ. ಆದರೆ ಇವರಾರನ್ನೂ ಗುರುತಿಸದ ಸರ್ಕಾರವು ಭೂ ವಿವಾದದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಪಿ ಎಸ್‌ ವಸ್ತ್ರದ್‌ ಅವರನ್ನೇ ಏಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

 

ಚಾಮುಂಡಿಬೆಟ್ಟ ತಪ್ಪಲಿನ ಭೂ ವಿವಾದ ಸಂಬಂಧ ಅಂದಿನ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ವಿಚಾರಣೆ ನಡೆಸಿ ಸರಕಾರಕ್ಕೆ 2012ರಲ್ಲೇ ವರದಿ ಸಲ್ಲಿಸಿದ್ದರು. 134 ಪುಟಗಳ ವಿಸ್ತೃತ ವರದಿ ಮತ್ತು ಇದಕ್ಕೆ 578 ಪುಟಗಳ ದಾಖಲೆಗಳನ್ನೂ ಒದಗಿಸಿದ್ದರು. ಆದರೂ ಹಿಂದಿನ ಡಿಸಿ ಪಿ.ಎಸ್.ವಸ್ತ್ರದ್ ಅವರೇ ತಪ್ಪು ಎಸಗಿದ್ದಾರೆ ಎನ್ನುವ ಅಂಶ ಉಲ್ಲೇಖಿಸಿದ್ದರು. ಈ ಸಂಬಂಧ ವಿಧಾನಪರಿಷತ್‌ನ ಅಂದಿನ ಸದಸ್ಯ ಬಿಜೆಪಿಯ ಗೋ ಮಧುಸೂದನ್‌ ಅವರು ವಸ್ತ್ರದ್‌ ಅವರ ಪಾತ್ರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದರು.

 

‘ಇಡೀ ಪ್ರಕರಣದ ಹಿಂದೆ ರಾಜಕೀಯ ಶಕ್ತಿಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳ ಬಗ್ಗೆ ತನಿಖೆಯಾಗಬೇಕು. ಡಿಸಿ ಅಕ್ರಮ ಎಸಗಲು ದೊಡ್ಡ ಶಕ್ತಿಗಳು ಇರುವ ಅನುಮಾನಗಳಿವೆ. ತಮ್ಮ ಅಧಿಕಾರ ಮೀರಿ ಆದೇಶ ನೀಡಿರುವ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಕೂಡಲೇ ಅಮಾನತಿನಲ್ಲಿಟ್ಟು ಅವರ ವಿರುದ್ಧ ಸಕ್ಷಮ ಅಧಿಕಾರಿಯಿಂದ ತನಿಖೆ ನಡೆಸಬೇಕು ಇದು 10 ಸಾವಿರ ಕೋಟಿ ರೂ.ಗೂ ಮೀರಿದ ವ್ಯವಹಾರವಾಗಿರುವುದರಿಂದ ಇಡೀ ಪ್ರಕರಣದ ಕುರಿತು ಸಿಬಿಐ ಅಥವಾ ಲೋಕಾಯುಕ್ತ ತನಿಖೆಯಾಗಬೇಕು,’ ಎಂದು ಗೋ ಮಧುಸೂದನ್‌ ಅವರು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

 

ಚಾಮುಂಡಿಬೆಟ್ಟ ಪರಿಸರದ ಮೂರು ಸರ್ವೆ ನಂಬರ್‌ಗಳ ಭೂ ವಿವಾದ ಸಂಬಂಧ ನ್ಯಾಯಾಂಗ ತನಿಖೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ಇಲ್ಲವೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ, ಎರಡೇ ತಿಂಗಳಲ್ಲಿ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಮೈಸೂರಿನ ಅಂದಿನ ಉಸ್ತುವಾರಿ ಸಚಿವರಾಗಿದ್ದ ಎಸ್‌ ಎ ರಾಮದಾಸ್‌ ಕೂಡ ಹೇಳಿಕೆ ನೀಡಿದ್ದರು.

 

‘ಭೂ ವಿವಾದದಲ್ಲಿ  ಆರೋಪವನ್ನು ಎದುರಿಸಿದ್ದ  ಅಂದಿನ ಜಿಲ್ಲಾಧಿಕಾರಿ ಹಿರಿಯ ಐಎಎಸ್ ಅಧಿಕಾರಿ ವಸ್ತ್ರದ ಅವರನ್ನು ಪುನಹ ಸಾವಿರಾರು ಕೋಟಿ ಆಸ್ತಿ ಹೊಂದಿರುವ  ಮುರುಘಾ  ಮಠದ ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಲು ಆಡಳಿತಾಧಿಕಾರಿಯಾಗಿ  ನೇಮಿಸುವ ಮೂಲಕ ಸರ್ಕಾರ ಬಹಳ ದೊಡ್ಡ ತಪ್ಪು ಹೆಜ್ಜೆಯನ್ನು ಇಟ್ಟಿದೆ. ಇಂತಹ ಅಧಿಕಾರಿಯನ್ನು ಆಡಳಿತ ಅಧಿಕಾರಿ ಮಾಡಿರುವ ಸರ್ಕಾರದ ಆದೇಶವನ್ನು ಹಿಂಪಡೆದು ತಮ್ಮ ತಪ್ಪನ್ನು ಅರಿತುಕೊಂಡು ಮುರುಘ ಮಠದ ಆಡಳಿತಾಧಿಕಾರಿಯಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ  ನಿವೃತ್ತ ನ್ಯಾಯಮೂರ್ತಿ  ಅಥವಾ ಕಳಂಕಿತ ರಹಿತ ಐಎಎಸ್ ನಿವೃತ್ತಿ  ಅಧಿಕಾರಿಯನ್ನಾಗಲಿ ನೇಮಿಸಬೇಕು, ‘ ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಒತ್ತಾಯಿಸಿದ್ದಾರೆ.
the fil favicon

SUPPORT THE FILE

Latest News

Related Posts