ಮದ್ಯ ಮಾರಾಟಗಾರರ ಆದಾಯ, ವಹಿವಾಟು, ಪರವಾನಿಗೆ, ಮಾಹಿತಿ ನಿರ್ವಹಣೆ ಖಾಸಗಿ ಕಂಪನಿ ತೆಕ್ಕೆಗೆ?

ಬೆಂಗಳೂರು; ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿಯ (ಕೆಎಸ್‌ಬಿಸಿಎಲ್‌) ನಿಯಂತ್ರಣದಲ್ಲಿರುವ ಚಿಲ್ಲರೆ ಮದ್ಯ ಮಾರಾಟಗಾರರ ಪರವಾನಿಗೆ, ಮಾಹಿತಿ ಮತ್ತು ಅದರ ವಿವರ, ಅಬಕಾರಿ ಇಲಾಖೆಯ ಅಬಕಾರಿ ರಿಜಸ್ಟರ್‌ ನಿರ್ವಹಣೆಯನ್ನೂ ಇದೀಗ ಖಾಸಗಿ ಕಂಪನಿ ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆನ್‌ಲೈನ್‌ ಮೂಲಕ ಒದಗಿಸಲು ಅಬಕಾರಿ ಇಲಾಖೆಯು ಸರ್ಕಾರದ ಅನುಮೋದನೆ ಕೋರಿರುವುದು ಇದೀಗ ಬಹಿರಂಗವಾಗಿದೆ.

 

ಮತದಾರರ ಸಮೀಕ್ಷೆ ನಡೆಸುವ ಸಂಬಂಧ ಅನುಮತಿ ಪಡೆದುಕೊಂಡಿದ್ದ ಖಾಸಗಿ ಸಂಸ್ಥೆಯು ದುರ್ಬಳಕೆ ಮಾಡಿಕೊಂಡಿರುವ ಬೆನ್ನಲ್ಲೇ ಚಿಲ್ಲರೆ ಮದ್ಯ ಮಾರಾಟಗಾರರ ಆದಾಯ, ಪರವಾನಿಗೆ, ಮಾಹಿತಿ, ಅಬಕಾರಿ ಇಲಾಖೆಯ ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಳವಡಿಸುವ ಷರತ್ತನ್ನೂ ವಿಧಿಸಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

 

ಹೊಸ ಮದ್ಯ ಮಾರಾಟ ಮಳಿಗೆ ಆರಂಭಿಸಲು ಅಬಕಾರಿ ನೀತಿಗೆ ತಿದ್ದುಪಡಿ ತರಲು ಹೊರಟಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳು ಮತ್ತು ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಯು ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಅಳವಡಿಸಲು ಅನುಮೋದನೆ ಕೋರಿ ಅಬಕಾರಿ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.

 

ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈವೈಟ್‌ ಲಿಮಿಟೆಡ್‌ ಅಭಿವೃದ್ಧಪಡಿಸಿರುವ ಡಿಜಿಟಲ್‌ ಎಕ್ಸೈಸ್‌ ಫ್ಲಾಟ್‌ಫಾರ್ಮ್‌ ತಂತ್ರಜ್ಞಾನವನ್ನು ಚಿಲ್ಲರೆ ಮದ್ಯ ಮಾರಾಟ ಮಳಿಗೆಯಲ್ಲಿ ಅಳವಡಿಸಿಕೊಳ್ಳುವ ಪ್ರಸ್ತಾವನೆ ಇದಾಗಿದೆ. ಸದ್ಯ ಈ ಕಡತವು ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಅನುಮೋದನೆ ಪಡೆದುಕೊಳ್ಳಲು ಸಲ್ಲಿಕೆಯಾಗಿದೆ ಎಂದು ಗೊತ್ತಾಗಿದೆ.

 

 

ವ್ಯಾಪಾರ ವಹಿವಾಟಿನ ಮಾಹಿತಿಯನ್ನೂ ಇದೇ ತಂತ್ರಾಂಶದ ಮೂಲಕ ಡಿಜಿಟಲ್‌ ರೂಪದಲ್ಲಿ ಕಾರ್ಯನಿರ್ವಹಿಸಲು ಲೈಸೆನ್ಸ್‌ದಾರರಿಗೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮದ್ಯ ದಾಸ್ತಾನು ವಹಿವಾಟಿನ ಮಾಹಿತಿ ಸಂಗ್ರಹಿಸಿ ಪಡೆಯಲು ಸುಲಭವಾಗುತ್ತದೆ ಎಂದು ಅಬಕಾರಿ ಇಲಾಖೆಯ ಆಯುಕ್ತರು 2022ರ ನವೆಂಬರ್‌ 10ರಂದು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ. ಈ ಸಂಬಂಧ ‘ದಿ ಫೈಲ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

 

 

ಬೆಂಗಳೂರು ನಗರ ಜಿಲ್ಲೆ-01ರ ವ್ಯಾಪ್ತಿಗೊಳಪಟ್ಟಿರುವ ಸಿಎಲ್‌-2 ಸನ್ನದಿನಲ್ಲಿ ಈ ತಂತ್ರಜ್ಞಾನವನ್ನು ಇದೇ ಕಂಪನಿ ಈಗಾಗಲೇ ಪ್ರಾಯೋಗಿಕವಾಗಿ ಅಳವಡಿಸಿದೆ. ಒಂದು ತಿಂಗಳಿಗೆ ಮಾತ್ರ ಸರ್ಕಾರವು ಅನುಮತಿ (ಪತ್ರ ಸಂಖ್ಯೆ; ಆಇ 30 ಇಎಫ್‌ಎಲ್‌ 20221 ದಿನಾಂಕ 03-02-2022) ನೀಡಿತ್ತು. ಫೆಡರೇಷನ್‌ ಆಫ್‌ ವೈನ್ಸ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಕೂಡ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಗೊತ್ತಾಗಿದೆ.

 

ಈಗ ಸನ್ನದು ಮಳಿಗೆಯಲ್ಲಿ ನಿರ್ವಹಿಸಲಾಗುವ ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಳವಡಿಸಲು ಕೆಲವು ಷರತ್ತಿಗೊಳಪಟ್ಟು ಇಡೀ ರಾಜ್ಯಾದ್ಯಂತ ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈ ಲಿ ಸಂಸ್ಥೆಗೆ ಮಾತ್ರ ಅನುಮೋದನೆ ನೀಡಬೇಕು ಎಂದು ಸರ್ಕಾರವನ್ನು ಕೋರಿರುವುದು ತಿಳಿದು ಬಂದಿದೆ.

 

‘ಮದ್ಯ ಮಾರಾಟ ಪರವಾನಿಗೆ, ವಹಿವಾಟು ಮತ್ತು ಇನ್‌ವಾಯ್ಸ್‌ಗಳು ಈಗಾಗಲೇ ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿಯ (ಕೆಎಸ್‌ಬಿಸಿಎಲ್‌) ನಿಯಂತ್ರಣದಲ್ಲಿವೆ. ಇದನ್ನು ಕೆಎಸ್‌ಬಿಸಿಎಲ್‌ ಸಂಸ್ಥೆಯವರೇ ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈ ಲಿ ಅವರಿಗೆ ಆನ್‌ಲೈನ್‌ ಮುಖಾಂತರ ಒದಗಿಸಬೇಕಾಗಿದೆ. ಅಲ್ಲದೆ ಮಾಹಿತಿ ಮತ್ತು ವಿವರಗಳನ್ನು ಅಬಕಾರಿ ಇಲಾಖೆಯು ಒಪ್ಪಿದಲ್ಲಿ ಮಾತ್ರವೇ ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈ ಲಿ. ಅವರಿಗೆ ಕೋರಿರುವ ಮಾಹಿತಿ ಒದಗಿಸಬಹುದಾಗಿದೆ,’ ಎಂದು ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ಹೀಗಾಗಿ ಸನ್ನದು ಮಳಿಗೆಗಳಲ್ಲಿ ನಿರ್ವಹಿಸಲಾಗುವ ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯಲ್ಲಿ ಮಾಹಿತಿ, ತಂತ್ರಜ್ಞಾನವನ್ನು ಅಳವಡಿಸುವ ಸಂಬಂಧ ಕೆಲ ಷರತ್ತುಗಳನ್ನು ವಿಧಿಸಿ ಅನುಮೋದನೆ ನೀಡಬಹುದು ಎಂದು ಸರ್ಕಾರಕ್ಕೆ ಅಬಕಾರಿ ಆಯುಕ್ತರು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

 

ಷರತ್ತುಗಳೇನು?

 

ಇಚ್ಛಿಸಿದ ಸನ್ನದುದಾರರು ಮಾಹಿತಿಯನ್ನು ಕೆಎಸ್‌ಬಿಸಿಎಲ್‌ಗೆ ಲಭ್ಯವಾಗುವಂತೆ ಕೋರಿರುವುದನ್ನು ಲಿಖಿತವಾಗಿ ಪಡೆಯಬಹುದು. ಈ ಮಾಹಿತಿಯನ್ನು ಇಚ್ಛಿಸಿದ ಸನ್ನದುದಾರರಿಗೆ ಒದಗಿಸಲು ಕೆಎಸ್‌ಬಿಸಿಎಲ್‌ ಯಾವುದೇ ಆಕ್ಷೇಪಣೆಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

 

ಕೆಎಸ್‌ಬಿಸಿಎಲ್‌ ಅವರು ಇಚ್ಛಿಸಿದ ಸನ್ನದುದಾರರು ಒದಗಿಸುವ ಮಾಹಿತಿಯನ್ನು ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈ ಲಿಗೆ ಲಭ್ಯ ಮಾಡಿಕೊಳ್ಳುವ ಬಗ್ಗೆ ಸನ್ನದುದಾರರಗಳೊಂದಿಗೆ ಕರಾರು ಒಪ್ಪಂದವನ್ನು ಸಲ್ಲಿಸಬೇಕು.

 

ಈ ಮಾಹಿತಿಗಳನ್ನು ಸನ್ನದುದಾರರಾಗಲಿ ಅಥವಾ ಪ್ಯಾಟ್ರನ್‌ ಎಫೆಕ್ಟ್‌ ಲ್ಯಾಬ್ಸ್‌ ಪ್ರೈ ಲಿ ಅವರಾಗಲೀ ಯಾವುದೇ ಸಮಯದಲ್ಲಿ ಹಾಗೂ ಯಾವುದೇ ಉಲ್ಲಂಘನೆಯಾದಲ್ಲಿ ಸಂಪೂರ್ಣ ಜವಾಬಬ್ದಾರರಾಗುವ ಬಗ್ಗೆ ಹಾಗೂ ಕೆಎಸ್‌ಬಿಸಿಎಲ್‌ ಸಂಸ್ಥೆಯಾಗಲಿ, ಅಬಕಾರಿ ಇಲಾಖೆಯಾಗಲೀ ಯಾವುದೇ ರೀತಿಯಲ್ಲಿ ಜವಾಬ್ದಾರರಾಗುವುದಿಲ್ಲ ಎಂದು ಸಂಸ್ಥೆ ಮತ್ತು ಸನ್ನದುದಾರರು ಜಂಟಿಯಾಗಿ ನೋಟರೀಕೃತ ಮುಚ್ಚಳಿಕೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts