ಬೆಂಗಳೂರು; ಕೋಟ್ಯಂತರ ರುಪಾಯಿ ಬೆಲೆಬಾಳುವ ಜಮೀನು ಮತ್ತು ನಿವೇಶನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಶೇ.25ರ ದರಕ್ಕೆ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘ ಪರಿವಾರದ ಅಂಗ ಸಂಸ್ಥೆಗಳು ಮಂಜೂರು ಮಾಡಿಸಿಕೊಂಡಿರುವ ಬೆನ್ನಲ್ಲೆ ಇದೀಗ ವಿಶ್ವ ಹಿಂದೂ ಪರಿಷದ್ ಕೂಡ ನಿವೇಶನಕ್ಕೆ ಬಾಕಿ ಪಾವತಿಸಬೇಕಿರುವ ಮೊತ್ತಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ವಿಶ್ವ ಹಿಂದೂ ಪರಿಷದ್‌ನ ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷ ಜಿ ಆರ್ ವಾಸುದೇವ್ ಎಂಬುವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ನವೆಂಬರ್ 15ರಂದೇ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇದೇ ಪ್ರಸ್ತಾವನೆ ಪ್ರತಿ ಮೇಲೆ ಟಿಪ್ಪಣಿ ಹಾಕಿದ್ದಾರೆ.
ವ್ಯಾಯಾಮ ಶಾಲೆ, ಯೋಗ ಕೇಂದ್ರ ಹಾಗೂ ಸ್ಕಿಲ್ ಡೆವಲೆಪ್‌ಮೆಂಟ್, ಹೊಲಿಗೆ ತರಬೇತಿ ಕೇಂದ್ರ, ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರ, ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ವಸತಿ, ಊಟದ ವ್ಯವಸ್ಥೆಗೆ ವಿಶ್ವಹಿಂದೂ ಪರಿಷದ್‌ನ ವಿಭಾಗ ಕಾರ್ಯಾಲಯಕ್ಕೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಶಿವಮೊಗ್ಗ ಭದ್ರಾವತಿ ಪ್ರಾಧಿಕಾರ (ಸೂಡಾ)ದಿಂದ ಶಿವಮೊಗ್ಗ ತಾಲೂಕಿನ ಗೋಪಿಶೆಟ್ಟಿಕೊಪ್ಪ ಗ್ರಾಮದ ಸರ್ವೆ ನಂಬರ್ 168/3, 169/2 ಖಾಸಗಿ ವಿನ್ಯಾಸದ ಸಾರ್ವಜನಿಕ ಉಪಯೋಗಿ ನಿವೇಶನ-1 ಮಂಜೂರಾಗಿದೆ. ಈ ನಿವೇಶನವು 2022ರ ಜುಲೈ 1ರಂದು ವಿಶ್ವ ಹಿಂದೂ ಪರಿಷದ್ ಕರ್ನಾಟಕ ಹೆಸರಿಗೆ ನೋಂದಣಿಯಾಗಿರುವುದು ತಿಳಿದು ಬಂದಿದೆ.
ನಿವೇಶನದ ಗುತ್ತಿಗೆ ಮೊಬಲಗು ಚದರಮೀಟರ್ ಒಂದಕ್ಕೆ 7,800 ರು. ಇದೆ. ನಿವೇಶನದ ಅಳತೆ ಎ1567.95 ಚ.ಮೀ ಅನುಗುಣವಾಗಿ 17,00,000 ರು.ಗಳನ್ನು ಪ್ರಾರಂಭಿಕ ಠೇವಣಿ ರೂಪದಲ್ಲಿ ಶುಲ್ಕವನ್ನು ಪಾವತಿಸಿದೆ. ಇದೀಗ ಬಾಕಿ ಪಾವತಿಸಬೇಕಿರುವ ಮೊತ್ತಕ್ಕೆ ಸಂಪೂರ್ಣ ವಿನಾಯಿತಿಯನ್ನು ಕೋರಿದೆ.
‘ವಿಶ್ವಹಿಂದೂ ಪರಿಷದ್ ಈ ಸ್ಥಳದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ವ್ಯಾಯಾಮ ಶಾಲೆ ನಿರ್ಮಿಸಿ ವಿವಿಧ ರೀತಿಯ ಸಮಾಜೋನ್ಮುಖಿ ತರಬೇತಿ ಮತ್ತು ಶಿಕ್ಷಣ ನೀಡಲು ಉದ್ದೇಶಿಸಿದೆ. ಇದೊಂದು ಸೇವಾ ಸಂಸ್ಥೆಯಾಗಿದ್ದು ಯಾವುದೇ ಆದಾಯ ಮೂಲಗಳಿಲ್ಲ. ಹೀಗಾಗಿ ನಿವೇಶನಕ್ಕೆ ನಾವು ಇನ್ನೂ ಪಾವತಿಸಬೇಕಾದ ಮೊತ್ತ 1,05,30,010 ರು.ಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕು,’ ಎಂದು ಜಿಲ್ಲಾಧ್ಯಕ್ಷ ಜೆ ಆರ್ ವಾಸುದೇವ್ ಎಂಬುವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕೋರಿದ್ದಾರೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಸಿ ಎ ನಿವೇಶನವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶಗಳಿಲ್ಲದಿದ್ದರೂ ಸಹ ಮಂಜೂರು ಮಾಡಿದ್ದ ಸರ್ಕಾರವು ಬೊಕ್ಕಸಕ್ಕೆ ನಷ್ಟಕ್ಕೆ ಕಾರಣವಾಗಿತ್ತು.
ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಜನಸೇವಾ ವಿಶ್ವಸ್ಥ ಮಂಡಳಿಗೆ ಕಳೆದ ಎರಡು ವರ್ಷದಲ್ಲಿ 100 ಎಕರೆಗೂ ಹೆಚ್ಚು ಗೋಮಾಳ ಜಮೀನನ್ನು ಹಂಚಿಕೆ ಮಾಡಿದೆ. ಮಾರುಕಟ್ಟೆ ಬೆಲೆಗಿಂತಲೂ ಶೇ.25ರ ದರದಲ್ಲಿ ಮಂಜೂರು ಮಾಡಿ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿರುವುದನ್ನು ಸ್ಮರಿಸಬಹುದು.
ಅದೇ ರೀತಿ ಶಿವಮೊಗ್ಗ ನಗರದಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ 2 ಎಕರೆಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಕಡತ ಇನ್ನೂ ಚಲನೆಯಲ್ಲಿದೆ.