ವೈಯಕ್ತಿಕ ಗೃಹ ಶೌಚಾಲಯ, ಸ್ನಾನಗೃಹ; ಪರಿಶಿಷ್ಟರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ಪ್ರಸ್ತಾವನೆ ತಿರಸ್ಕಾರ

ಬೆಂಗಳೂರು; ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 3,000 ರು. ಪ್ರೋತ್ಸಾಹ ಧನ ನೀಡಲು ಆರ್ಥಿಕ ಇಲಾಖೆಯು ತಿರಸ್ಕರಿಸಿರುವುದು ಇದೀಗ ಬಹಿರಂಗವಾಗಿದೆ.

 

ಭಾರತೀಯ ಜನತಾ ಪಕ್ಷವು ಬಳ್ಳಾರಿಯಲ್ಲಿ ಕಳೆದೆರಡು ದಿನಗಳ ಹಿಂದೆಯಷ್ಟೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾವೇಶ ನಡೆಸಿದ್ದರ ಬೆನ್ನಲ್ಲೇ ಹೆಚ್ಚುವರಿ ಪ್ರೋತ್ಸಾಹ ಧನವನ್ನು ನೀಡುವ ಪ್ರಸ್ತಾವನೆಯನ್ನು ತಳ್ಳಿ ಹಾಕಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಕೋಟ್ಯಂತರ ರುಪಾಯಿ ಅನುದಾನ ನೀಡಿ ಪರಿಶಿಷ್ಟರ ಕಲ್ಯಾಣ ಸಾಧಿಸಲಾಗಿದೆ ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾಹೀರಾತು ನೀಡಿ ಬೆನ್ನು ತಟ್ಟಿಕೊಂಡಿದ್ದ ಬೆನ್ನಲ್ಲೇ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡಿದರೆ ಉಳಿದ ಜಾತಿ, ಸಮುದಾಯದವರು ಹೆಚ್ಚಿನ ಪ್ರೋತ್ಸಾಹ ಧನ ಕೇಳುವ ಸಾಧ್ಯತೆ ಇದೆ ಎಂಬ ಕಾರಣವನ್ನು ಮುಂದಿರಿಸಿರುವ ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಮುನ್ನೆಲೆಗೆ ಬಂದಿದೆ.

 

‘ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 3,000 ರು ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ಆಡಳಿತ ಇಲಾಖೆಯು ಕೋರಿದೆ. ಇತರರು ಪ್ರೋತ್ಸಾಹ ಧನವನ್ನು ಕೇಳುವ ಸಾಧ್ಯತೆ ಇರುವುದರಿಂದ (ಆಇ 181 ವೆಚ್ಚ-6, 2022 ದಿನಾಂಕ 18-03-2022) ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗುತ್ತಿದೆ,’ ಎಂದು 2022ರ ಮಾರ್ಚ್‌ 18ರಂದು ಸಮಾಜ ಕಲ್ಯಾಣ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ವಿಭಾಗಕ್ಕೆ ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.

 

ಆದರೂ ಸಮಾಜ ಕಲ್ಯಾಣ ಇಲಾಖೆಯು ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಮುಂದೆ 2022ರ ನವೆಂಬರ್‌ 17ರಂದು ಮತ್ತೊಮ್ಮೆ ಮಂಡಿಸಿದೆ. ‘ಆಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯು ಪ್ರಸ್ತಾವನೆಗೆ ಸಹಮತಿಸಿದೆ. ಪ್ರಸ್ತುತ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿಸುವ ಬಗ್ಗೆ ಆದೇಶಕ್ಕೆ ಮಂಡಿಸಿದೆ,’ ಎಂದು 2022ರ ನವೆಂಬರ್‌ 17ರಂದು ಕಡತ ಮಂಡಿಸಿದೆ.

 

ಮತ್ತೊಂದು ವಿಶೇಷ ಸಂಗತಿ ಎಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವೈಯಕ್ತಿಕ ಗೃಹ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣಕ್ಕಾಗಿ 20,000 ರು. ಸಹಾಯ ಧನ ಒದಗಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2021ರ ಜುಲೈ 2ರಂದು ನಡೆದಿದ್ದ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯು ನಿರ್ಣಯಿಸಿತ್ತು. ಆದರೆ ಈ ನಿರ್ಣಯ ಕೈಗೊಂಡು 2 ವರ್ಷಗಳಾದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. 2 ವರ್ಷಗಳಿಂದಲೂ ಈ ಸಂಬಂಧದ ಕಡತವು ಇನ್ನೂ ಪ್ರಗತಿಯಲ್ಲೇ ಇದೆ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಎಸ್‌ಸಿಪಿ/ಟಿಎಸ್‌ಪಿ ರಾಜ್ಯ ಘಟಕದಡಿಯಿಲ್ಲಿ ಒಟ್ಟು 3551.75 ಲಕ್ಷ ರು ಅನುದಾನವನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ 2019-20ಮತ್ತು 2020-21ನೇ ಸಾಲಿನಲ್ಲಿ ಈಗಾಗಲೇ ಪಾವತಿಸಿರುವ ಮೊತ್ತಕ್ಕೆ ಲೆಕ್ಕ ಹೊಂದಾಣಿಕೆ ಮಾಡಿಕೊಂಡು ಜಿಲ್ಲೆಗಳಲ್ಲಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಪಾವತಿಸಲು ಅನುದಾನ ಬಿಡುಗಡೆ ಮಾಡಿರುವಂತೆ ಎಸ್‌ಸಿಪಿ ಅಡಿ 268 ಲಕ್ಷ ರು. ಕೇಂದ್ರ ಕಚೇರಿಯ ಬ್ಯಾಂಕ್‌ ಖಾತೆಯಲ್ಲಿ ಲಭ್ಯವಿದೆ.

 

2020-21ನೇ ಸಾಲಿನಲ್ಲಿ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಪ.ಜಾತಿ ಮತ್ತು ಪ.ಪಂಗಡ ಫಲಾನುಭವಿಗಳಿಗೆ ಪ್ರತಿ ಶೌಚಾಲಯಕ್ಕೆ 15,000 ರು. (ಕೇಂದ್ರದ ಪಾಲು 7,800 ಮತ್ತು ರಾಜ್ಯದ ಪಾಲು 4,800) ಮತ್ತು ರಾಜ್ಯ ಘಟಕದಡಿ ಹೆಚ್ಚುವರಿ 3,000 ರುನಂತೆ ಪ್ರೋತ್ಸಾಹ ಧನ ಪಾವತಿಸಲು ಎಸ್‌ಸಿಪಿ ಅಡಿ 847.71 ಲಕ್ಷ ಮತ್ತು ಟಿಎಸ್‌ಪಿ ಅಡಿ 331.32 ಲಕ್ಷ ರು. ಸೇರಿ ಒಟ್ಟಾರೆ 1179.03 ಲಕ್ಷ ಅನುದಾನನವನ್ನು ಎಸ್‌ಸಿಪಿ ಟಿಎಸ್‌ಪಿ ಅಡಿ ಒದಗಿಸಬೇಕಿದೆ.

 

ಆದರೆ 2020-21ನೇ ಸಾಲಿನಲ್ಲಿ ಉಳಿಕೆಯಾದ ಅನುದಾನದಲ್ಲಿ 2020-21ನೇ ಸಾಲಿನಲ್ಲಿ ಜಿಲ್ಲೆಗಳಿಗೆ 436.77 ಲಕ್ಷ ರು. ಬಿಡುಗಡೆಯಾಗಿದೆ. ಕೇಂದ್ರ ಕಚೇರಿಯಲ್ಲಿ 268.00 ಲಕ್ಷ ರು. ಲಭ್ಯವಿದೆ. ಈ ಅನುದಾವನ್ನು ಹೊರತುಪಡಿಸಿ 474.26 ಲಕ್ಷ ರು. ಅಗತ್ಯವಿದೆ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts