ಬೆಂಗಳೂರು; ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೋಟಾರ್ ವಾಹನ ಖರೀದಿಸಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಪರಿಷತ್‌ನ ಹಿಂದಿನ ಸಭಾಪತಿ ಡಿ ಹೆಚ್ ಶಂಕರಮೂರ್ತಿ, ಹಾಲಿ ಸಚಿವ ವಿ ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ, ಡಾ ಜಿ ಪರಮೇಶ್ವರ್, ರಾಜ್ಯಸಭಾ ಹಾಲಿ ಸದಸ್ಯ ಲಹರ್ ಸಿಂಗ್ ಸಿರೋಯಾ, ಬಸವನಗೌಡ ಆರ್ ಪಾಟೀಲ್ ಯತ್ನಾಳ್ ಸೇರಿದಂತೆ ಒಟ್ಟು 65 ಸದಸ್ಯರು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂಬುದನ್ನು ಮಹಾಲೆಕ್ಕಪರಿಶೋಧಕರು (ಸಿಎಜಿ) ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ವಿಧಾನಪರಿಷತ್‌ನ 2014ರಿಂದ 2018ನೇ ಸಾಲಿನವರೆಗೆ ಲೆಕ್ಕ ಪರಿಶೋಧನೆ ನಡೆಸಿರುವ ಮಹಾಲೆಕ್ಕಪರಿಶೋಧಕರು (ಸಿಎಜಿ) ಈ ಸಂಬಂಧ ರಾಜ್ಯಪಾಲರಿಗೂ 2022ರ ಮೇ 18ಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ. ಆರ್‌ಟಿಐ ಅಡಿ ಈ ಮಾಹಿತಿಯು ‘ದಿ ಫೈಲ್’ಗೂ ಲಭ್ಯವಾಗಿದೆ.
ಕಂಪ್ಯೂಟರ್/ಲ್ಯಾಪ್‌ಟಾಪ್ ಖರೀದಿಗೆ 2014-ರಿಂದ 2018ರವರೆಗೆ ಒಟ್ಟು 55 ಸದಸ್ಯರು ಮುಂಗಡ ಹಣ ಪಡೆದಿದ್ದರು. ಈ ಪೈಕಿ 39 ಸದಸ್ಯರು ಉಪಕರಣಗಳ ಖರೀದಿಸಿರುವ ಸಂಬಂಧ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಮತ್ತು ಈ ಸಂಬಂಧ ಸಚಿವಾಲಯದ ಅಧಿಕಾರಿಗಳು ಕ್ಯಾಶ್ ಬುಕ್‌ನ್ನು ನಿರ್ವಹಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ವರದಿಯಲ್ಲಿ ಬಹಿರಂಗಗೊಳಿಸಿದ್ದಾರೆ.
ಅದೇ ರೀತಿ 2016-18ನೇ ಸಾಲಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಖರೀದಿ ಮುಂಗಡ ಪಡೆದಿದ್ದ 26 ಸದಸ್ಯರು ಸಚಿವಾಲಯಕ್ಕೆ ದಾಖಲೆಗಳನ್ನು ಒದಗಿಸಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್ ಮುಂಗಡ ಪಡೆದು ಯಾವುದೇ ದಾಖಲೆ ನೀಡದ ಸದಸ್ಯರ ಪೈಕಿ 17 ಮಂದಿ ಸದಸ್ಯರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಇನ್ನುಳಿದವರು ಹಾಲಿ ಸದಸ್ಯರಾಗಿ ಮುಂದುವರೆದಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಂಪ್ಯೂಟರ್/ಲ್ಯಾಪ್‌ಟಾಪ್ ಪಡೆದು ದಾಖಲೆ ನೀಡದ ಸದಸ್ಯರ ಪಟ್ಟಿ
ಡಿ ಹೆಚ್ ಶಂಕರಮೂರ್ತಿ, ಮತ್ತಿಕಟ್ಟಿ ವೀರಣ್ಣ, ಸಿ ಹೆಚ್ ವಿಜಯಶಂಕರ್, ಆರ್ ವಿ ವೆಂಕಟೇಶ್, ವಿ ಸೋಮಣ್ಣ, ಬಸವರಾಜ ಹೆಚ್ ಪಾಟೀಲ್, ಎಸ್ ಆರ್ ಪಾಟೀಲ್, ವೀರಕುಮಾರ್ ಅಪ್ಪಾಸೋ ಪಾಟೀಲ್, ಎಂ ಆರ್ ಸೀತಾರಾಂ, ವಿಮಲಾಗೌಡ (ದಿವಂಗತ), ವೈ ಎ ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಲಹರ್ ಸಿಂಗ್ ಸಿರೋಯಾ, ಎಂ ಡಿ ಲಕ್ಷ್ಮಿನಾರಾಯಣ, ಕೆ ಬಿ ಶಾಣಪ್ಪ, ಡಾ ಜಿ ಪರಮೇಶ್ವರ್,
ಎನ್ ಎಸ್ ಭೋಸರಾಜ್, ಹೆಚ್ ಎಂ ರೇವಣ್ಣ, ಡಿ ಯು ಮಲ್ಲಿಕಾರ್ಜುನ್, ಐವನ್ ಡಿಸೋಜಾ, ನಸೀರ್ ಅಹ್ಮದ್, ಟಿ ಜಾನ್, ಮೋಟಮ್ಮ, ವಿಜಯಸಿಂಗ್, ಬಿ ಜಿ ಪಾಟೀಲ್, ಬಸವನಗೌಡ ಆರ್ ಪಾಟೀಲ್ (ಯತ್ನಾಳ್), ಕೆ ಸಿ ಕೊಂಡಯ್ಯ, ಎಂ ಕೆ ಪ್ರಾಣೇಶ್, ಎಂ ಎ ಗೋಪಾಲಸ್ವಾಮಿ, ಕಾಂತರಾಜ್ (ಬಿಎಂಎಲ್), ಎಂ ನಾರಾಯಣಸ್ವಾಮಿ, ಎಸ್ ರವಿ, ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ, ಘೋಟ್ನೇಕರ ಶ್ರೀಕಾಂತ್ ಲಕ್ಷ್ಮಣ, ಜಿ ರಘು ಅಚಾರ್, ಕೋಟ ಶ್ರೀನಿವಾಸ ಪೂಜಾರಿ, ಆರ್ ಧರ್ಮಸೇನ, ಎಸ್ ನಾಗರಾಜ್ (ಸಂದೇಶ್ ನಾಗರಾಜ್), ಪಿ ಆರ್ ರಮೇಶ್ ಅವರು ದಾಖಲೆಗಳನ್ನು ಒದಗಿಸಿಲ್ಲ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಇನ್ನುಳಿದಂತೆ ಮೋಹನ್ ಕೊಂಡಜ್ಜಿ, ಕೆ ಪ್ರತಾಪಚಂದ್ರಶೆಟ್ಟಿ, ಮಾನೆ ಶ್ರೀನಿವಾಸ್, ಸುನೀಲ್ ಸುಬ್ರಮಣಿ, ಸಿ ಆರ್ ಮನೋಹರ್, ಎನ್ ಅಪ್ಪಾಜಿಗೌಡ, ಆರ್ ಪ್ರಸನ್ನಕುಮಾರ್, ಬಸವರಾಜ ಪಾಟೀಲ್ ಇಟಗಿ, ಪ್ರದೀಪ್ ಶೆಟ್ಟರ್, ಪುಟ್ಟಣ್ಣ, ಎಂ ಶ್ರೀನಿವಾಸ್, ಬಸವರಾಜ ಹೊರಟ್ಟಿ, ಎನ್ ಶರಣಪ್ಪಮಟ್ಟೂರ್, ವಿ ಎಸ್ ಉಗ್ರಪ್ಪ, ವಿವೇಕರಾವ್ ವಸಂತರಾವ್ ಪಾಟೀಲ್ ಅವರು ಕಂಪ್ಯೂಟರ್/ಲ್ಯಾಪ್‌ಟಾಪ್ ಖರೀದಿ ಸಂಬಂಧ ದಾಖಲೆಗಳನ್ನು ಒದಗಿಸಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಅದೇ ರೀತಿ 2016-18ನೇ ಸಾಲಿನಲ್ಲಿ ಮೋಟಾರು ವಾಹನ ಪಡೆದಿರುವ ಒಟ್ಟು ಸದಸ್ಯರ ಪೈಕಿ 26 ಮಂದಿ ವಾಹನ ಖರೀದಿ ಸಂಬಂಧ ದಾಖಲೆಗಳನ್ನೇ ವಿಧಾನಪರಿಷತ್ ಸಚಿವಾಲಯಕ್ಕೆ ನೀಡಿಲ್ಲ ಎಂದು ಸಿಎಜಿ ಲೆಕ್ಕಪರಿಶೋಧನೆಯು ಬಹಿರಂಗಗೊಳಿಸಿದೆ.
ಮೋಟಾರುವಾಹನ ಪಡೆದು ದಾಖಲೆ ನೀಡದ ಸದಸ್ಯರ ಪಟ್ಟಿ
ಎಂ ಕೆ ಪ್ರಾಣೇಶ್, ವಿಜಯಸಿಂಗ್, ಕೆ ಟಿ ಶ್ರೀಕಂಠೇಗೌಡ, ಸಿ ಎಂ ಲಿಂಗಪ್ಪ, ಎಸ್ ರವಿ, ಎಸ್ ಆರ್ ಪಾಟೀಲ್, ಕಾಂತರಾಜ್(ಬಿಎಂಎಲ್), ಎನ್ ಎಸ್ ಭೋಸರಾಜ್, ರಿಜ್ವಾನ್ ಅರ್ಷದ್, ಆರ್ ಚೌಡರೆಡ್ಡಿ ತೂಪಲ್ಲಿ, ಪುಟ್ಟಣ್ಣ, ಮೋಹನ್ ಕುಮಾರ್ ಕೊಂಡಜ್ಜಿ, ಟಿ ಎ ಶರವಣ, ಜಯಮ್ಮ, ಎಂ ನಾರಾಯಣಸ್ವಾಮಿ, ಪ್ರದೀಪ್ ಶೆಟ್ಟರ್, ಬಸವರಾಜ ಪಾಟೀಲ್ ಇಟಗಿ, ವಿವೇಕರಾವ್ ವಸಂತರಾವ್ ಪಾಟೀಲ್, ಇಕ್ಬಾಲ್ ಅಹಮದ್ ಸರಡಗಿ, ಎನ್ ಅಪ್ಪಾಜಿಗೌಡ, ರಾಮಪ್ಪ ತಿಮ್ಮಾಪುರ, ಐವನ್ ಡಿ ಸೋಜಾ, ಆಯನೂರು ಮಂಜುನಾಥ, ಅರವಿಂದಕುಮಾರ್ ಅರಳಿ, ವಿ ಎಸ್ ಉಗ್ರಪ್ಪ, ಅರುಣ ಶಹಾಪುರ ಅವರು ಮೋಟಾರು ವಾಹನ ಪಡೆದು ದಾಖಲೆ ನೀಡಿಲ್ಲ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.
‘ಬಹುತೇಕ ಸದಸ್ಯರು ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೋಟಾರು ವಾಹನಗಳನ್ನು ಖರೀದಿ ಮಾಡಿಲ್ಲ. ಕೆಲವು ಸದಸ್ಯರ ಕುಟುಂಬ ಸದಸ್ಯರ ಸೋದರ, ಕುಟುಂಬ ಸದಸ್ಯರೇ ಸದಸ್ಯರ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ಈ ಸೌಲಭ್ಯ ಇರುವುದು ಕೇವಲ ಸದಸ್ಯರಿಗಷ್ಟೇ ವಿನಃ ಅವರ ಕುಟುಂಬ ಸದಸ್ಯರಿಗಲ್ಲ. ದಾಖಲೆ ನೀಡಿಲ್ಲ ಎಂದು ಸಿಎಜಿ ಹೇಳಿರುವುದು ಅವರು ಯಾವ ಉಪಕರಣವನ್ನೂ ಖರೀದಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಖರೀದಿಸಿದ್ದರೆ ದಾಖಲೆಗಳನ್ನು ಒದಗಿಸಬಹುದಾಗಿತ್ತು. ಹೀಗಾಗಿ ಈ ಸೌಲಭ್ಯ ದುರ್ಬಳಕೆ ಆಗಿದೆ ಎಂಬುದು ಗೊತ್ತಾಗುತ್ತೆ ,’ ಎನ್ನುತ್ತಾರೆ ವಿಧಾನಪರಿಷತ್‌ನ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು.
ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಸಭಾಪತಿ, ಉಪ ಸಭಾಪತಿ, ವಿರೋಧ ಪಕ್ಷದ ನಾಯಕರು, ಸರ್ಕಾರಿ ಮುಖ್ಯ ಸಚೇತಕರು, ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರ ವೇತನ ಮತ್ತು ಭತ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಕಾಯ್ದೆ’ ತಿದ್ದುಪಡಿ ಮಸೂದೆಗೆ ಇತ್ತೀಚೆಗಷ್ಟೇ ರಾಜ್ಯಪಾಲರ ಅಂಕಿತ ಬಿದ್ದಿದೆ.
ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ 1956 ರ ತಿದ್ದುಪಡಿ ಪ್ರಕಾರ, ರಾಜ್ಯ ಸರ್ಕಾರಕ್ಕೆ 25.40 ಕೋಟಿ ಹೆಚ್ಚುವರಿ ವೆಚ್ಚ ಆಗುತ್ತಿದೆ.