ಟೆಂಡರ್‌ ಗೋಲ್ಮಾಲ್‌; ಪ.ಜಾತಿ, ಪ.ಪಂಗಡ ಗುತ್ತಿಗೆದಾರರಿಗೆ ಅವಕಾಶ ತಪ್ಪಿಸಿದ ಆರೋಗ್ಯ ಇಲಾಖೆ

ಬೆಂಗಳೂರು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ, ದುರಸ್ತಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ 29.70 ಕೋಟಿ ರು. ಮೊತ್ತದ ಕಾಮಗಾರಿಗಳ ಗುತ್ತಿಗೆ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಗುತ್ತಿಗೆದಾರರು ಭಾಗವಹಿಸುವುದನ್ನು ತಪ್ಪಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್‌ ವಿಭಾಗವು ಪ್ಯಾಕೇಜ್‌ ಟೆಂಡರ್‌ ಕರೆದಿರುವುದು ಇದೀಗ ಬಹಿರಂಗವಾಗಿದೆ.

 

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವಿವಿಧ ಕಾಮಗಾರಿಗಳ ಟೆಂಡರ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕಾರ್ಪೋರೇಟ್‌ ಕಂಪನಿಗಳು ದೂರು ಸಲ್ಲಿಸಿದ್ದರೂ ಸಚಿವ ಕೆ ಸುಧಾಕರ್‌ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಇದರ ಬೆನ್ನಲ್ಲೇ ಪ.ಜಾತಿ ಮತ್ತು ಪ.ಪಂಗಡ ಗುತ್ತಿಗೆದಾರರಿಗೆ ಅವಕಾಶ ಸಿಗದಂತೆ ಇಲಾಖೆಯ ಇಂಜಿನಿಯರಿಂಗ್‌ ವಿಭಾಗವು ಕರೆದಿರುವ ಟೆಂಡರ್‌ ಮುನ್ನೆಲೆಗೆ ಬಂದಿದೆ.

 

 

ಟೆಂಡರ್‌ನಲ್ಲಿ ಬೇರೆ ಬೇರೆ ಜಿಲ್ಲೆಯ ತಾಲೂಕಿನ ಕಾಮಗಾರಿಗಳನ್ನು ಒಂದುಗೂಡಿಸಿ ಟೆಂಡರ್‌ ಆಹ್ವಾನಿಸಿರುವ ಇಲಾಖೆಯ ಇಂಜಿನಿಯರಿಂಗ್‌ ವಿಭಾಗವು ಕೆಟಿಪಿಪಿ ಕಾಯ್ದೆ ಮತ್ತು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್‌ಗಳ ಪಾವತಿ ಸಂಬಂಧ 2022ರ ಮೇ 11ರಂದು ಆರ್ಥಿಕ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲಂಘಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಅವರಿಗೆ ಸಾಮಾಜಿಕ ಹೋರಾಟಗಾರ ಮರಿಲಿಂಗೇಗೌಡ ಮಾಲೀಪಾಟೀಲ್‌ ಎಂಬುವರು ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ರಾಮನಗರ, ಕನಕಪುರ, ಆನೇಕಲ್‌, ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್‌, ಬಾಗೇಪಲ್ಲಿ, ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಶಿಕಾರಿಪುರ, ಭದ್ರಾವತಿ, ತುಮಕೂರು, ಚಿತ್ರದುರ್ಗ, ತಿಪಟೂರು, ಪಾವಗಡ, ಕುಣಿಗಲ್‌, ಮೊಳಕಾಲ್ಮೂರು, ಚಾಮರಾಜನಗರ, ಕೊಳ್ಳೇಗಾಲ, ಹೆಚ್‌ ಡಿ ಕೋಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಹಾಸನ, ಅರಕಲಗೂಡು, ಅರಸೀಕೆರೆ, ಮಂಡ್ಯ, ಕೊಡಗು, ನಾಗಮಂಗಲ, ವಿರಾಜಪೇಟೆ, , ವಿಜಯಪುರ, ಬಾಲಗಕೋಟೆ, ಮುದ್ದೇಬಿಹಾಳ, ಇಂಡಿ, ಬೀಳಗಿ, ನವಲಗುಂದ, ರೋಣ, ಮುಂಡರಗಿಯಲ್ಲಿ ಒಟ್ಟಾರೆ 23.20 ಕೋಟಿ ರು ಮೊತ್ತದ ಪ್ಯಾಕೇಜ್‌ ಟೆಂಡರ್‌ನ್ನು 2022ರ ಸೆ.19ರಂದೇ ಆಹ್ವಾನಿಸಿದೆ.

 

 

ಪ್ಯಾಕೇಜ್‌ ಟೆಂಡರ್‌ ಆಹ್ವಾನಿಸುವ ಮೂಲಕ ಎಸ್‌ ಸಿ ಎಸ್‌ಟಿ ಸಮುದಾಯದ ಗುತ್ತಿಗೆದಾರರಿಗೆ ಕೆಟಿಪಿಪಿ ಕಾಯ್ದೆಯಲ್ಲಿ ಕಲ್ಪಿಸಿದ್ದ ಮೀಸಲಾತಿ ನೀತಿಯನ್ನು ನೇರಾನೇರ ಉಲ್ಲಂಘಿಸಲಾಗಿದೆ ಎಂದು ಮಾಲೀಪಾಟೀಲ್‌ ಅವರು ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿದೆ.

 

 

‘ಎಸ್‌ಸಿ ಎಸ್‌ಟಿ ಸಮುದಾಯದ ಗುತ್ತಿಗೆದಾರರಿಗೆ ಮೀಸಲಾತಿ ನೀಡಲು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ಕ್ಕೆ ಸೂಕ್ತ ತಿದ್ದುಪಡಿ ತರಲಾಗಿದೆ. ಸರ್ಕಾರಿ ಟೆಂಡರ್‌ಗಳಲ್ಲಿ ಪರಿಶಿಷ್ಟ ಜಾತಿ (ಶೇ.17.15), ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಶೇ.24.1ರಷ್ಟು ಮೀಸಲಾತಿ ಒದಗಿಸಲಾಗಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್‌ ವಿಭಾಗವು ಆಹ್ವಾನಿಸಿರುವ ಟೆಂಡರ್‌ನಲ್ಲಿ ಉದ್ದೇಶಪೂರ್ವಕವಾಗಿ ಪ.ಜಾತಿ ಮತ್ತು ಪ.ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗದಂತೆ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಪ್ಯಾಕೇಜ್‌ ಮಾದರಿಯಲ್ಲಿ ರೂಪಿಸಿರುವುದೇ ಇದಕ್ಕೆ ನಿದರ್ಶನ,’ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

 

ಸುತ್ತೋಲೆಯಲ್ಲೇನಿದೆ?

 

 

ಸಾರ್ವಜನಿಕ ಸಂಗ್ರಹಣೆಗಳ ಪ್ಲ್ಯಾನಿಂಗ್‌, ಪ್ಯಾಕೇಜಿಂಗ್‌ ಮತ್ತು ಶೆಡ್ಯೂಲಿಂಗ್‌ ಹಾಗೂ ಅನುದಾನ ಲಭ್ಯಗೊಳಿಸುವ ಬಗ್ಗೆ ತಿಳಿಸಿರುವಂತೆ ಕಾರ್ಯಯೋಜನೆಯ ಅನುಷ್ಠಾನವನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೇಜ್‌ ಮಾಡಬೇಕು. ಅದರಂತೆ ಪ್ಯಾಕೇಜಿಂಗ್‌ ಮಾಡುವ ಸಂದರ್ಭದಲ್ಲಿ ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪ್ಯಾಕೇಜ್‌ ಮೊತ್ತವನ್ನು ಗರಿಷ್ಠ 100.00 ಲಕ್ಷ ರು.ಗಳಿಗೆ ಸೀಮಿತಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

 

 

ಅದೇ ರೀತಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 9ರ ಅನ್ವಯ ಸಂಗ್ರಹಣಾ ಪ್ರಾಧಿಕಾರವು ಟೆಂಡರ್‌ ಆಹ್ವಾನಿಸುವ , ಅಂಗೀಕರಿಸುವ ಪ್ರಾಧಿಕಾರಗಳನ್ನು ನೇಮಕ ಮಾಡಬೇಕಾಗುತ್ತದೆ. ಈ ರೀತಿ ನೇಮಕಗೊಂಡ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಾಧಿಕಾರವು ಟೆಂಡರ್‌ ರ್‌ ಕರೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

 

 

ಆದರೆ ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್‌ ವಿಭಾಗವು ಉಲ್ಲಂಘಿಸಿದೆ ಎಂದು ದೂರಿರುವ ಮರಿಲಿಂಗೇಗೌಡ ಮಾಲೀಪಾಟೀಲ್‌ ‘ ಈ ಎಲ್ಲಾ ಕಾಮಗಾರಿಗಳನ್ನು ಒಟ್ಟುಗೂಡಿಸಿ ಟೆಂಡರ್‌ ಆಹ್ವಾನಿಸಿರುವುದು ಆರ್ಥಿಕ ವಾಗಿ ಸಬಲರಾಗಿರುವ ಕೆಲವೇ ಕೆಲವು ಗುತ್ತಿಗೆದಾರರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿದೆ. ಅವರಿಗಷ್ಟೇ ಕಾಮಗಾರಿ ಸಿಗುವಂತೆ ಮಾಡುವ ಪೂರ್ವ ನಿಯೋಜಿತ ಯೋಜನೆಯ ಟೆಂಡರ್‌ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ,’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

 

ಜಿಲ್ಲಾ ವ್ಯಾಪ್ತಿಯೊಳಗಿನ ತಾಲೂಕಿನ ಕಾಮಗಾರಿಗಳನ್ನು ಒಂದುಗೂಡಿಸಿ ಟೆಂಡರ್‌ ಆಹ್ವಾನಿಸಿದರೆ ಸರ್ಕಾರವು ಎಸ್‌ ಸಿ ಎಸ್‌ಟಿ ಸಮುದಾಯದ ಗುತ್ತಿಗೆದಾರರಿಗೆ ಮೀಸಲಾತಿ ನೀಡಿದಂತಾಗುತ್ತದೆ. ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದಶ್ಕ ಕಾಯ್ದೆ 1999ರ ತಿದ್ದುಪಡಿಯಂತೆ ಟೆಂಡರ್‌ಗಳಲ್ಲಿ ಪ.ಜಾತಿಗೆ ಶೇ.17.5, ಪ.ಪಂಗಡಗಳ ಗುತ್ತಿಗೆದಾರರಿಗೆ ಶೇ.24ರಷ್ಟು ಕಾಮಗಾರಿಗಳು ಸಂವಿಧಾನಬದ್ಧವಾಗಿ ದೊರಕಲಿದೆ ಎಂದು ದೂರಿನಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ.

the fil favicon

SUPPORT THE FILE

Latest News

Related Posts