ವಿಶ್ವವಿದ್ಯಾಲಯ, ಕಾಲೇಜುಗಳಲ್ಲೂ ಧ್ಯಾನ; ಆರ್ಟ್‌ ಆಫ್‌ ಲಿವಿಂಗ್‌ ಜೊತೆ ಒಡಂಬಡಿಕೆ, ಯುಜಿಸಿ ಪತ್ರ

ಬೆಂಗಳೂರು; ಆಜಾದಿ ಕಾ ಅಮೃತ್‌ ಮಹೋತ್ಸವ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯು ಇದೀಗ ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನ ಸಹಯೋಗದಲ್ಲಿ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಹರ್ ಘರ್‌ ಧ್ಯಾನ್‌ ಅಭಿಯಾನವನ್ನು ನಡೆಸಲಿದೆ.

 

ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಅಕ್ಟೋಬರ್‌ 26ರಂದೇ ‘ಭಾರತದ ಸ್ವಾಸ್ಥ್ಯಕ್ಕಾಗಿ ಮನೆ ಮನೆಗೂ ಧ್ಯಾನ ‘ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಇದಾಗಿ ಒಂದು ತಿಂಗಳ ಅಂತರದಲ್ಲೇ   ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು 2022ರ ನವೆಂಬರ್‌ 24ರಂದು ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಪತ್ರವನ್ನು ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಟಿಪ್ಪಣಿ ಕಳುಹಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಹರ್‌ ಘರ್‌ ಧ್ಯಾನ್‌ ಅಭಿಯಾನವನ್ನು ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ಯುಜಿಸಿ ಹೊರಡಿಸಿರುವ ಟಿಪ್ಪಣಿಯು ಚರ್ಚೆಗೆ ಗ್ರಾಸವಾಗಿದೆ.

 

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಷನ್‌ನ ತರಬೇತುದಾರರು ಈಗಾಗಲೇ ಅಭಿವೃದ್ಧಿಪಡಿಸಿರುವ ಧ್ಯಾನದ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಯುಜಿಸಿಯ ಕಾರ್ಯದರ್ಶಿ ರಜನೀಶ್‌ ಜೈನ್‌ ಅವರು ಹೊರಡಿಸಿರುವ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

 

ಈ ಅಭಿಯಾನಕ್ಕೆ ವಿಶ್ವವಿದ್ಯಾಲಯವಾಗಲೀ ಕಾಲೇಜುಗಳಾಗಲಿ ಯಾವುದೇ ಶುಲ್ಕವನ್ನು ಭರಿಸುವ ಅಗತ್ಯವಿಲ್ಲ. ಇದೊಂದು ಉಚಿತ ಕಾರ್ಯಕ್ರಮವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ಮತ್ತು ಅದರ ಮಾನ್ಯತೆ ಪಡೆದಿರುವ ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಉತ್ತೇಜಿಸಲು ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನದ ಮಾದರಿಗಳನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಿದೆ.

 

ಅದೇ ರೀತಿ ವಿದ್ಯಾರ್ಥಿಗಳಲ್ಲಿ ಧ್ಯಾನ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಪಡಿಸಲು ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಹಿರಿಯ ಬೋಧಕರನ್ನು ಆರ್ಟ್‌ಆಫ್‌ ಲಿವಿಂಗ್‌ ಫೌಂಡೇಷನ್‌ನಲ್ಲಿ ನೋಂದಾಯಿಸಬೇಕು. ಅವರನ್ನು ಧ್ಯಾನದ ರಾಯಭಾರಿಗಳನ್ನು ಎಂದು ಕರೆಯಲಾಗುತ್ತದೆ. ಆರ್ಟ್‌ ಅಫ್‌ ಲಿವಿಂಗ್‌ ಈ ಕುರಿತು ನೇರವಾಗಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳನ್ನು ಸಂಪರ್ಕಿಸಲಿದೆ. ಅವರೊಂದಿಗೆ ಸಮನ್ವಯ ಸಾಧಿಸುವ ಮೂಲಕ ಧ್ಯಾನದ ರಾಯಭಾರಿಗಳನ್ನು ನಾಮನಿರ್ದೇಶನ ಮಾಡಬೇಕು ಎಂದು ರಾಜೇಶ್‌ ಜೈನ್‌ ಅವರು ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

‘ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಧ್ಯಾನ ಮಾಡಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಧ್ಯಾನ ಮಾಡಿಸಲಾಗುತ್ತಿದೆ. ಎಲ್ಲ ಶಾಲೆಗಳಲ್ಲೂ ಇದನ್ನು ಅಳವಡಿಸಲು ಅವಕಾಶ ಕಲ್ಪಿಸುವಂತೆ ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಬೇಕು’ ಎಂದೂ ಟಿಪ್ಪಣಿಯಲ್ಲಿ ಸಚಿವ ಬಿ ಸಿ ನಾಗೇಶ್‌ ಅವರು ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

 

ಅಲ್ಲದೇ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಅಕ್ಟೋಬರ್‌ 26ರಂದೇ ‘ಭಾರತದ ಸ್ವಾಸ್ಥ್ಯಕ್ಕಾಗಿ ಮನೆ ಮನೆಗೂ ಧ್ಯಾನ ‘ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

 

ಸಾಂವಿಧಾನಿಕವಾಗಿ ಮತ್ತು ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸಮಾನತೆ ನೆಲೆಯಲ್ಲಿ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಬಿಟ್ಟು ಶಿಕ್ಷಣ ಸಚಿವರು ಏಕಪಕ್ಷೀಯ ತೀರ್ಮಾನಗಳಿಂದ ದಿನಕ್ಕೊಂದು ಹೊಸ ಬಗೆಯ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ. ಜಾತ್ಯತೀತ, ವೈಜ್ಞಾನಿಕ ನೆಲೆಯಲ್ಲಿ ಆಧುನಿಕ ಶಿಕ್ಷಣ ನೀಡುವ ಬದಲು, ಶಾಲಾ ಶಿಕ್ಷಣವನ್ನು ಅಸ್ತವ್ಯಸ್ತಗೊಳಿಸಲು ಪಣ ತೊಟ್ಟಂತೆ ವರ್ತಿಸುತ್ತಿದ್ದಾರೆ’ ಎಂದು ಲೇಖಕರು, ಸಾಹಿತಿಗಳು ಜಂಟಿ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

the fil favicon

SUPPORT THE FILE

Latest News

Related Posts