ಕೆಬಿಜೆಎನ್‌ಎಲ್‌ ಟೆಂಡರ್‌ನಲ್ಲಿ ಅಕ್ರಮ ಆರೋಪ; 282 ಕೋಟಿ ರು ಮೊತ್ತದ ಕಾಮಗಾರಿ ಆಂಧ್ರದ ಪಾಲು?

ಬೆಂಗಳೂರು; ಕೃಷ್ಣಭಾಗ್ಯ ಜಲನಿಗಮವು ನಾರಾಯಣಪುರ ವಿತರಣೆ ಕಾಲುವೆಗಳ ಕಾಮಗಾಗಿ ಸಂಬಂಧ 2022ರ ಸೆಪ್ಟಂಬರ್‌ನಲ್ಲಿ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ ಬಿಡ್‌ದಾರರ ಪ್ರಮಾಣಪತ್ರಗಳ ನೈಜತೆ ಮತ್ತು ತುಲನಾತ್ಮಕ ಪಟ್ಟಿಗಳನ್ನು ಪರಿಶೀಲಿಸದೆಯೇ 282.33 ಕೋಟಿ ರು. ಮೊತ್ತದ ಕಾಮಗಾರಿಗಳ ಗುತ್ತಿಗೆಯನ್ನು ಆಂಧ್ರ ಸೇರಿದಂತೆ ಹೊರ ರಾಜ್ಯದ ಗುತ್ತಿಗೆದಾರರು, ಕಂಪನಿಗಳಿಗೆ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಜಲಸಂಪನ್ಮೂಲ ಇಲಾಖೆಯಲ್ಲಿ ಶೇ. 40ರಷ್ಟು ಕಮಿಷನ್‌ ಆರೋಪಗಳು ಕೇಳಿ ಬಂದಿರುವ ನಡುವೆಯೇ ಕೃಷ್ಣಭಾಗ್ಯ ಜಲನಿಗಮದಲ್ಲಿ ಉನ್ನತ ಅಧಿಕಾರಿಗಳು ತಮ್ಮ ಸೋದರ ಸಂಬಂಧಿ, ಬೇನಾಮಿ ವ್ಯಕ್ತಿಗಳನ್ನು ಖಾಸಗಿ ಕಂಪನಿಗಳಲ್ಲಿ ಪಾಲುದಾರನನ್ನಾಗಿಸಿ ಆ ಕಂಪನಿಗಳಿಗೇ ಬಹುಕೋಟಿ ಮೊತ್ತದ ಟೆಂಡರ್‌ ನೀಡುವ ಮೂಲಕ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗುರುತರ ಆರೋಪಗಳು ಕೇಳಿ ಬಂದಿವೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿಯಲ್ಲಿ ಕೃಷ್ಣಭಾಗ್ಯ ಜಲನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಎಂ ಚಿಣಿ ಅವರು ನೂರಾರು ಕೋಟಿ ರು.ಗಳನ್ನು ಮಾರ್ಗಪಲ್ಲಟಗೊಳಿಸಿದ್ದರೂ ಜಲಸಂಪನ್ಮೂಲ ಸಚಿವ  ಗೋವಿಂದ ಕಾರಜೋಳ ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದರ ನಡುವೆಯೇ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌ ಅವರ ಮೇಲೆ ಗುರುತರವಾದ ಆರೋಪಗಳಡಿಯಲ್ಲಿ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ದಾಖಲಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

ಈ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಸಿದ್ದಗಂಗಪ್ಪ, ಸಮಿತಿಯ ಸಹಾಯಕ ಶಿವಮಾದಯ್ಯ, ನಿಗಮದ ತಾಂತ್ರಿಕ ನಿರ್ದೇಶಕರು, ಮುಖ್ಯ ಇಂಜಿನಿಯರ್‌, ಕಾರ್ಯನಿರ್ವಾಹಕ ಇಂಜನಿಯರ್‌ಗಳನ್ನು ದೂರಿನಲ್ಲಿ ಪ್ರತಿವಾದಿಯನ್ನಾಗಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕೃಷ್ಣಭಾಗ್ಯ ಜಲ ನಿಗಮದ ಕಾಮಗಾರಿಗಳ ಅನುಷ್ಠಾನ ಕುರಿತು ಟೆಂಡರ್‌ ಪ್ರಕ್ರಿಯೆಗಳಲ್ಲಿ ಸರ್ಕಾರದ ನೀತಿ ನಿಯಮ, ನಿರ್ದೇಶನ, ಕೆಟಿಪಿಪಿ ಕಾಯ್ದೆ ಉಲ್ಲಂಘಿಸಲಾಗಿದೆ. ಟೆಂಡರ್‌ನಲ್ಲಿ ಸ್ವಜನಪಕ್ಷಪಾತ ಎಸಗಿ ಭ್ರಷ್ಟಾಚಾರಕ್ಕೆ ಕಾರಣರಾಗಿರುವ ಇವರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಹೀಗಾಗಿ ನಿಗಮದ ವ್ಯವಸ್ಥಾಪಕ ನಿರ್ದಶಕರು, ಮುಖ್ಯ ಇಂಜಿಯರ್‌, ನಿಗಮದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ, ಸದಸ್ಯರು ಟೆಂಡರ್‌ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಜವಾಬ್ದಾರರಾಗಿರುವ ಇತರ ಅಧಿಕಾರಿಗಳ ಮೇಲೆ ವಿಚಾರಣೆ ನಡೆಸಬೇಕು,’ ಎಂದು ದೂರಿನಲ್ಲಿ ಕೋರಿದ್ದಾರೆ.

 

ರಾಯಚೂರು ಗ್ರಾಮೀಣ ವಿಧಾನಸಭಾ ವ್ಯಾಪ್ತಿಯ ಎನ್‌ಆರ್‌ಬಿಸಿಯ (ವಿತರಣೆ ಸಂಖ್ಯೆ 26,27,28,29 ಮತ್ತು 28,337 ರಿಂದ 32,920 ಕಿ ಮೀ ವರೆಗೂ) 91 ಕೋಟಿ ರು. ಅಂದಾಜು ಮೊತ್ತದ ಕಾಮಗಾರಿಯ ನಿರ್ವಹಣೆಗಾಗಿ ಕರೆದಿದ್ದ ಟೆಂಡರ್‌ನ್ನು (ಇಂಡೆಂಟ್‌ ಸಂಖ್ಯೆ 23168) ಆಂಧ್ರ ಮೂಲದ ಸುಧಾಕರ ಇನ್ಫ್ರಾ ಪ್ರೈವೈಟ್‌ ಲಿಮಿಟೆಡ್‌ಗೆ ನೀಡಿರುವುದರ ಹಿಂದೆ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಈ ಟೆಂಡರ್‌ನಲ್ಲಿ ಉದಯ ಶಿವಕುಮಾರ್‌ ಇನ್ಫ್ರಾ ಪ್ರೈ ಲಿಮಿಟೆಡ್‌, ಅಮರಗುಂಡಪ್ಪ ಮೇಟಿ ಮತ್ತಿತರರು ಸ್ಥಳೀಯ ಗುತ್ತಿಗೆದಾರ ಕಂಪನಿಗಳು ಭಾಗವಹಿಸಿದ್ದವು. ಟೆಂಡರ್‌ನಲ್ಲಿ ವಿಧಿಸಿದ್ದ ಎಲ್ಲಾ ಷರತ್ತುಗಳನ್ನು ಪೂರೈಸಿ ಈ ಸಂಬಂಧ ದಾಖಲಾತಿಗಳನ್ನು ಒದಗಿಸಿದ್ದರು. ಆದರೂ ಯಾವುದೇ ಸಕಾರಣಗಳಿಲ್ಲದೆಯೇ ಸ್ಥಳೀಯ ಗುತ್ತಿಗೆ ಕಂಪನಿಗಳ ಬಿಡ್‌ಗಳನ್ನು ತಿರಸ್ಕರಿಸಿ ಆಂಧ್ರ ಮೂಲದ ಸುಧಾಕರ ಇನ್ಫ್ರಾ ಪ್ರೈವೈಟ್‌ ಲಿಮಿಟೆಡ್‌ನೊಂದಿಗೆ ಶಾಮೀಲಾಗಿ ಟೆಂಡರ್‌ ಗುತ್ತಿಗೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಅಲ್ಲದೇ ಆಲಮಟ್ಟಿ ಡ್ಯಾಂನಲ್ಲಿ ಹೊಸ ಅತಿಥಿ ಗೃಹ ನಿರ್ಮಾಣ 12.11 ಕೋಟಿ, ಯುಕೆಪಿ ಮೂರನೇ ಹಂತದ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿ ಕಾಮಗಾರಿಗಳಿಗಾಗಿ 34.01 ಕೋಟಿ, ಆಯಕಟ್ಟು ರಸ್ತೆಗಳಸುಧಾರಣೆ ಮತ್ತು ಅಭಿವೃದ್ಧಿ (ನಾಗಬೆಟ್ಟ ಅಚ್ಚುಕಟ್ಟು ಪ್ರದೇಶ), 41.12 ಕೋಟಿ, ಗುಂಡಕರ್ಜಿಗಿಯಿಂದ ಬಸರಕೋಡ ಮತ್ತು ಗೋನಾಳದಿಂದ ಬಸರಕೋಡ, ಹುಲ್ಲೂರು ಕೊಪ್ಪ, ಸೈದಾಪೂರದಿಂದ ಬಸರಕೋಡಿನ ಹೊರ ರಸ್ತೆ (ಚಿಮ್ಮಲಗಿ ಏತ ನೀರಾವರಿ ಯೋಜನೆ ವ್ಯಾಪ್ತಿ) ನಿರ್ಮಾಣಕ್ಕೆ 33.61 ಕೋಟಿ, ಹೆರಕಲ್‌ ಸೇತುವೆ, ಬ್ಯಾರೇಜ್‌ನ ಗೇಟುಗಳನ್ನು ಎತ್ತರಿಸುವುದು 10.98 ಕೋಟಿ,ಗುತ್ತಿ ಬಸವಣ್ಣ ಮತ್ತು ಇಂಡಿ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಹೊಸದಾದ ವಿ ಟಿ ಪಂಪ್‌ ಮೋಟಾರ್‌ಗಳನ್ನು ಅಳವಡಿಸುವುದಕ್ಕೆ 59.50 ಕೋಟಿ ರು ಮೊತ್ತದ ಟೆಂಡರ್‌ನಲ್ಲಿಯೂ ಬಹುದೊಡ್ಡ ಅಕ್ರಮಗಳಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

‘ಯಶಸ್ವಿ ಬಿಡ್‌ದಾರರ ಯಂತ್ರೋಪಕರಣಗಳು ಹಾಗೂ ಇನ್ನಿತರ ಪ್ರಮಾಣಪತ್ರಗಳ ನೈಜತೆಯನ್ನು ಪರಿಶೀಲಿಸಿ ಪ್ರತಿಯೊಂದು ಕಾಮಗಾರಿಗಳ ತುಲನಾತ್ಮಕ ಪಟ್ಟಿಗಳನ್ನು ತನಿಖೆಗೆ ಒಳಪಡಿಸಬೇಕು. ಯಾವ ಕಾರಣಕ್ಕೆ ಟೆಂಡರ್‌ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಪರಿಶೀಲಿಸಿದರೆ ಇಲ್ಲಿ ನಡೆದಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರ ಆರೋಪಗಳು ರುಜುವಾತಾಗುತ್ತವೆ,’ ಎಂದು ದೂರಿನಲ್ಲಿ ಭವಾನಿಮಠ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

the fil favicon

SUPPORT THE FILE

Latest News

Related Posts