ಬೆಂಗಳೂರು; ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರ ಮತ್ತು ವಿಧಾನ ಪರಿಷತ್ ಸಚಿವಾಲಯದ ಡಿ ಗ್ರೂಪ್ ಮಹಿಳಾ ನೌಕರಳೊಬ್ಬಳು ಶಾಮೀಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಿದ್ದರು ಎಂಬ ಸ್ಫೋಟಕ ಮಾಹಿತಿ ತಿಳಿದು ಬಂದಿದೆ.
ಮುಖ್ಯಮಂತ್ರಿಗಳ ಸಚಿವಾಲಯವು ದೀಪಾವಳಿ ಹಬ್ಬದ ಸೋಗಿನಲ್ಲಿ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಮತ್ತು ಲಕ್ಷಾಂತರ ರು. ಮೊತ್ತದ ನಗದು ಹಣವನ್ನು ನೀಡಿತ್ತು ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದೀಗ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರನೊಬ್ಬ ಡಿ ಗ್ರೂಪ್ ಮಹಿಳಾ ನೌಕರೊಬ್ಬಳನ್ನು ಬಳಸಿಕೊಂಡು ಮುಖ್ಯಮಂತ್ರಿಗಳ ಆಪ್ತ ಸಹಾಯಕನನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಲಾಗಿತ್ತು ಎಂಬ ಪ್ರಕರಣವು ಮುಖ್ಯಮಂತ್ರಿಗಳ ಸಚಿವಾಲಯವನ್ನು ಇನ್ನಷ್ಟು ಆಳಕ್ಕೆ ದೂಡಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರನೇ ಮುಖ್ಯಮಂತ್ರಿಗಳ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿದ್ದ ಎಂಬ ಪ್ರಕರಣವು ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರನು ಹತ್ತಾರು ಹನಿಟ್ರ್ಯಾಪ್ ಮಾಡಿಸಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹನಿಟ್ರ್ಯಾಪ್ ಪ್ರಕರಣವು ಗಮನಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಚಿವಾಲಯದ ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ದೂರು ದಾಖಲಾಗದಂತೆ ಸಂಧಾನದ ಮೂಲಕ ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಎಂದು ಹೇಳಲಾಗಿರುವ ಸಚಿವಾಲಯದ ಸಿ ಗುಂಪಿನ ನೌಕರನನ್ನು ಮುಖ್ಯಮಂತ್ರಿಗಳ ಆಪ್ತ ಸಹಾಯಕನ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಆತ ಈಗಾಗಲೇ ಬಹುಮಹಡಿ ಕಟ್ಟಡದಲ್ಲಿರುವ ಡಿಪಿಎಆರ್ ಕಚೇರಿಗೆ ವರದಿ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮತ್ತೊಂದು ಮೂಲದ ಪ್ರಕಾರ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾನೆ ಎಂದು ಹೇಳಲಾಗಿರುವ ಮುಖ್ಯಮಂತ್ರಿಗಳ ಆಪ್ತ ಸಹಾಯಕ, ವಿಧಾನಪರಿಷತ್ ಸಚಿವಾಲಯದ ಡಿ ಗ್ರೂಪ್ ಮಹಿಳಾ ನೌಕರಳ ಹೆಸರಿನಲ್ಲಿ ಕನಕಪುರದ ಬಳಿ 13 ಎಕರೆ ಜಮೀನು ಖರೀದಿಸಿದ್ದ. ಈ ಜಮೀನಿನ ದಾಖಲೆಗಳನ್ನು ತನ್ನ ವಶಕ್ಕೆ ನೀಡಲು ಸಿಎಂ ಆಪ್ತ ಸಹಾಯಕನು ಒತ್ತಾಯಪಡಿಸಿದಾಗ ಆಕೆ ವಿಡಿಯೋ ಮತ್ತು ಆಡಿಯೋವನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿದ್ದಳು ಎಂದೂ ಹೇಳಲಾಗುತ್ತಿದೆ.
‘ಬಿಜೆಪಿ ಶಾಸಕಾಂಗದ ಪಕ್ಷದ ಕಚೇರಿಯ ಗುತ್ತಿಗೆ ನೌಕರನೇ ಮುಖ್ಯಮಂತ್ರಿಗಳ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್ ಮಾಡಿಸಿರುವುದು ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು. ವಿಧಾನಸೌಧದ ಕಟ್ಟಡದಲ್ಲೇ ಇಂತಹ ತಂಡವೊಂದು ಕಾರ್ಯಾಚರಿಸುತ್ತಿರುವುದು ನಿಜಕ್ಕೂ ಗಾಬರಿಬೀಳಿಸುವಂತಿದೆ. ಈ ಪ್ರಕರಣವನ್ನು ತನಿಖೆಗೊಳಪಡಿಸಿದ್ದರೆ ಇನ್ನಷ್ಟು ಪ್ರಕರಣಗಳು ಹೊರಬೀಳುತ್ತಿದ್ದವು. ಆದರೆ ದೂರು ದಾಖಲಾಗದಂತೆ ಉನ್ನತ ಅಧಿಕಾರಿಗಳು ನೋಡಿಕೊಂಡಿರುವುದರ ಹಿಂದೆ ಅವರೂ ಸಹ ಈ ಬಲೆಗೆ ಬಿದ್ದಿದ್ದಾರೆ ಎಂದೆನಿಸುತ್ತದೆ,’ ಎನ್ನುತ್ತಾರೆ ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು.
ಈ ಕುರಿತು ಪ್ರತಿಕ್ರಿಯೆಗಾಗಿ ಮುಖ್ಯಮಂತ್ರಿಗಳ ಆಪ್ತ ಸಹಾಯಕನಿಗೆ ‘ದಿ ಫೈಲ್’ ವಾಟ್ಸಾಪ್ ಮೂಲಕ ಸಂಪರ್ಕಿಸಿದೆ. ಪ್ರತಿಕ್ರಿಯೆ ನೀಡಿದ ನಂತರ ಅದನ್ನು ವರದಿಯಲ್ಲಿ ಸೇರ್ಪಡೆಗೊಳಿಸಿ ಅಪ್‌ಡೇಟ್ ಮಾಡಲಾಗುವುದು.