40 ಲಕ್ಷ ರು ಲಂಚ ಪಡೆದ ಆರೋಪ; 1 ಕೋಟಿಗೂ ಹೆಚ್ಚು ಪರಿಹಾರ ವಿತರಿಸಿದ ವಿಶೇಷ ಭೂಸ್ವಾಧೀನಾಧಿಕಾರಿ

ಬೆಂಗಳೂರು; ರೈಲ್ವೇ ಇಲಾಖೆಗೆ ಭೂಸ್ವಾಧೀನವಾಗಿರುವ ಪ್ರಕರಣವೊಂದರಲ್ಲಿ 1 ಕೋಟಿ ರು.ಗೂ ಹೆಚ್ಚಿನ ಪರಿಹಾರ ನೀಡಿ 40 ಲಕ್ಷ ರುಪಾಯಿ ಲಂಚ ಪಡೆದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್‌ ಎಂಬುವರು ಗುರುತರವಾದ ಆರೋಪಕ್ಕೆ ಗುರಿಯಾಗಿದ್ದಾರೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಸವನಹಳ್ಳಿ ಗ್ರಾಮದ ಪ್ರಕರಣದಲ್ಲಿ ವಾರಸುದಾರರ ಸಹಿಗಳನ್ನು ಪಡೆದುಕೊಳ್ಳದೇ ಪರಿಹಾರ ವಿತರಿಸದಂತೆ ತಕರಾರು ಅರ್ಜಿ ನೀಡಿದ್ದರೂ ಅದನ್ನು ಪರಿಗಣಿಸದೇ ಅರ್ಜಿದಾರನ ಸೋದರನಿಗೆ 1 ಕೋಟಿಗೂ ಹೆಚ್ಚು ಪರಿಹಾರ ನೀಡಿ ಅವರಿಂದ 40 ಲಕ್ಷ ರು ಲಂಚ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಂದಾಯ ಇಲಾಖೆಯೂ ಅಭಿಪ್ರಾಯಿಸಿದೆ. ಈ ಪ್ರಕರಣ ಸಂಬಂಧ ‘ದಿ ಫೈಲ್‌’ಗೆ ಮಹತ್ವದ ದಾಖಲೆಗಳು (ಕಂಇ 79 ಬಿಎಂಎಂ 2022) ಲಭ್ಯವಾಗಿವೆ.

 

‘ವಾರಸುದಾರರಿಗೆ ಸಹಿಗಳನ್ನು ಪಡೆದುಕೊಳ್ಳದೇ ಪರಿಹಾರವನ್ನು ವಿತರಿಸದಂತೆ ತಕರಾರು ಅರ್ಜಿ ನೀಡಿದ್ದರೂ ಆ ತಕರಾರನ್ನು  ಎದುರುದಾರರು ಪರಿಗಣಿಸದೇ ಆತನ ಸೋದರನಾದ ನಾರಾಯಣ ಅವರಿಗೆ 1 ಕೋಟಿ ರೂ ಗೂ ಹೆಚ್ಚು ಪರಿಹಾರ ಹಣವನ್ನು ನೀಡಿ ನಾರಾಯಣ ಅವರಿಂದ ಸುಮಾರು 40 ಲಕ್ಷ ಹಣವನ್ನು ಲಂಚವನ್ನಾಗಿ ಪಡೆದುಕೊಂಡು ಸದರಿಯವರಿಗೆ ಮತ್ತು ಸದರಿಯವರ ಎಲ್ಲಾ ಸಹೋದರರಿಗೆ ಸಮನಾಗಿ ಹಂಚುವಂತೆ ಅರ್ಜಿ ಸಲ್ಲಿಸದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿರುವ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಅವರ ವಿರುದ್ಧ ಹೆಚ್ಚಿನ ವಿಚಾರಣೆ ನಡೆಸಲು ಕಂದಾಯ ಇಲಾಖೆಯು ಸಹಮತಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರವಾದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಕಳಿಸಬಹುದು,’ ಎಂದು ಕಂದಾಯ ಇಲಾಖೆಯು ಮೇಲಾಧಿಕಾರಿಗಳಿಗೆ ಕಡತವನ್ನು ಮಂಡಿಸಿರುವುದು ತಿಳಿದು ಬಂದಿದೆ. ಇದಕ್ಕೆ ಸಚಿವ ಆರ್‌ ಅಶೋಕ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಪ್ರಕರಣದ ವಿವರ

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಸವನಹಳ್ಳಿ ಗ್ರಾಮದ ಸರ್ವೆ ನಂಬರ್‌ 76/2ರಲ್ಲಿ 1 ಎಕರೆ ಜಮೀನನ್ನು ರೈಲ್ವೇ ಇಲಾಖೆಯು ಭೂಸ್ವಾಧೀನ ಕಾಯ್ದೆ ಕಲಂ 28(3) ಅಡಿಯಲ್ಲಿ ಭೂಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿಗೆ ಹನುಮಂತರಾಯಪ್ಪ ಮತ್ತು ಬಿ ಸಿ ನಾರಾಯಣಪ್ಪ ಎಂಬುವರು ಜಂಟಿ ವಾರಸುದಾರರಾಗಿದ್ದರು.

 

ಈ ಸಂಬಂಧ ನಿಗದಿಪಡಿಸಲಾದ ಪರಿಹಾರದ ಹಣವನ್ನು ಅರ್ಜಿದಾರ ಮತ್ತು ಅರ್ಜಿದಾರ ತಂದೆಯ ಉಳಿದ ವಾರಸುದಾರರ ಸಹಿಗಳನ್ನು ಪಡೆದುಕೊಳ್ಳದೇ ವಿತರಿಸಬಾರದು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್‌ ಅವರಿಗೆ ತಕರಾರು ಅರ್ಜಿ ಸಲ್ಲಿಸಿದ್ದರು.

 

ಆದರೆ ವಿಶೇಷ ಭೂಸ್ವಾಧೀನಾಧಿಕಾರಿ ಈ ತಕರಾರನ್ನು ಪರಿಗಣಿಸದೆಯೇ ಅರ್ಜಿದಾರ ಸೋದರ ನಾರಾಯಣ ಎಂಬುವರಿಗೆ 1 ಕೋಟಿಗೂ ಹೆಚ್ಚು ಪರಿಹಾರ ನೀಡಿ ಅವರಿಂದ ಸುಮಾರು 40 ಲಕ್ಷ ರು. ಲಂಚವನ್ನಾಗಿ ಪಡೆದಿದ್ದರು ಎಂದು ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಭೀಮಾನಾಯ್ಕ್‌ ಅವರು ಲೋಕಾಯುಕ್ತಕ್ಕೆ ಆಕ್ಷೇಪಣೆಯನ್ನೂ ಸಲ್ಲಿಸಿದ್ದರು ಎಂದು ಲಭ್ಯವಿರುವ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಭೀಮಾನಾಯ್ಕ್‌ ಆಕ್ಷೇಪಣೆಯಲ್ಲೇನಿತ್ತು?

 

ಒಟ್ಟು ಪರಿಹಾರದ ಹಣ 1,57,27,281 ರು. ಪೈಕಿ ರೈಲ್ವೆ ಇಲಾಖೆಯಲ್ಲಿ ಲಭ್ಯವಿದ್ದ ಅನುದಾನದ ಪೈಕಿ 75.00 ಲಕ್ಷ ರು ಗಳನ್ನು ನೇರವಾಗಿ ಬಿ ಸಿ ನಾರಾಯಣಪ್ಪ ಅವರ ಖಾತೆಗೆ 2020ರ ಸೆ.5ರಂದು ಮತ್ತು 2020ರ ನವೆಂಬರ್‌ 19ರಂದು 25 ಲಕ್ಷ ರು ಗಳನ್ನು ನೆಫ್ಟ್‌ ಮುಖಾಂತರ ಜಮೆ ಆಗಿತ್ತು. ಹನುಮಂತರಾಯಪ್ಪ ಅವರ ಮಗಳು ರೂಪ್‌ ಹೆಚ್‌, ಮುನಿಲಕ್ಷ್ಮಮ್ಮ, ಹನುಮಂತರಾಯಪ್ಪ, ಚೌಡಮ್ಮ ಮತ್ತು ಲಕ್ಷ್ಮಮ್ಮ ಅವರು ಪರಿಹಾರದ ಬಾಬ್ತು ಸಂಬಂಧ ಜಂಟಿಯಾಗಿ 2021ರ ಮಾರ್ಚ್‌ 20ರಂದು ತಕರಾರು ಅರ್ಜಿ ಸಲ್ಲಿಸಿದ್ದರು.

 

ಈ ಸಂಬಂಧ 2021ರ ಆಗಸ್ಟ್‌ 9ರಂದು ನಡೆದಿದ್ದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ 2021ರ 29ರಂದು ಮತ್ತೊಂದು ವಿಚಾರಣೆಗೆ ಹಾಜರಾಗಲು ತಿಳಿವಳಿಕೆ ಪತ್ರ ನೀಡಲಾಗಿತ್ತು. ದೂರುದಾರರು ಆಪಾದಿಸಿರುವಂತೆ ನಾರಾಯಣ ಅವರ ಜೊತೆ ಶಾಮೀಲಾಗಿಲ್ಲ ಹಾಗೂ ಲಂಚವನ್ನು ಪಡೆದಿಲ್ಲ. ದಾಖಲಾತಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಭೀಮಾನಾಯ್ಕ್‌ ಅವರು ಆಕ್ಷೇಪಣೆಯಲ್ಲಿ ವಿವರಿಸಿದ್ದರು.

 

ಲೋಕಾಯುಕ್ತ ತನಿಖೆಯಲ್ಲಿ ಕಂಡು ಬಂದ ಅಂಶಗಳಿವು

 

ಈ ಆಕ್ಷೇಪಣೆ ಮತ್ತು ದೂರುದಾರರು ಮಾಡಿದ್ದ ಆರೋಪಗಳು ಮತ್ತು ಇದಕ್ಕೆ ಪೂರಕವಾಗಿ ನೀಡಿದ್ದ ದಾಖಲಾತಿಗಳನ್ನು ಲೋಕಾಯುಕ್ತ ತನಿಖಾಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದರು.’ಎದುರುದಾರರು ತಮ್ಮ ಆಕ್ಷೇಪಣೆಯಲ್ಲಿ ಹೇಳಿರುವ ಪ್ರಕಾರ 2020ರ ನವೆಂಬರ್‌ 12ರಂದು 100 ರು.ಗಳ ಇ-ಸ್ಟಾಂಪ್‌ನಲ್ಲಿ ಪ್ರಮಾಣಪತ್ರದ ಅನುಬಂಧ-4 ಎಂದು ಗುರುತಿಸಿ ಸಲ್ಲಿಸಿರುತ್ತಾರೆ. ಇದನ್ನು ಪರಿಶೀಲಿಸಿದಾಗ ಈ ಪ್ರಮಾಣ ಪತ್ರವನ್ನು ದೂರುದಾರರಾದ ಹನುಮಂತರಾಯಪ್ಪ ಅವರು ನೋಟರಿ ಮಾಡಿಸಿ ಸಲ್ಲಿಸಿಲ್ಲ. ಬದಲಿಗೆ ಬಿ ಸಿ ನಾರಾಯಣಪ್ಪ ಅವರು ನೋಟರಿ ಮಾಡಿ ಸಲ್ಲಿಸಿರುತ್ತಾರೆ. ಅಲ್ಲದೇ 2020ರ ನವೆಂಬರ್‌ 12ರ ನೋಟರಿ ಪ್ರಮಾಣಪತ್ರದಲ್ಲಿ  ದೂರುದಾರರು ಸಹಿ ಮಾಡಿರುತ್ತಾರೆಂದು ಸುಳ್ಳು ಮಾಹಿತಿ ನೀಡಿದ್ದಾರೆ,’ ಎಂದು ಲೋಕಾಯುಕ್ತ ವಿಚಾರಣಾಧಿಕಾರಿಯು ಅಭಿಪ್ರಾಯಿಸಿದ್ದರು.

 

ಅದೇ ರೀತಿ 2020ರ ಸೆ.23ರಂದು ನೋಟರಿಯವರ ಪತ್ರದಲ್ಲಿ ದೂರುದಾರರ ಹೆಬ್ಬೆಟ್ಟಿನ ಗುರುತು ಇರುವುದು ಸ್ಪಷ್ಟವಾಗಿ ಕಂಡು ಬಂದಿಲ್ಲ. ಎದುರುದಾರರು ದೃಢೀಕರಿಸುವ ನಕಲು ಪ್ರತಿಯನ್ನು ಹಾಜರುಪಡಿಸಿರುವುದರಿಂದ ಯಾರ ಹೆಬ್ಬೆಟ್ಟಿನ ಗುರುತು ಇದೆ ಎಂಬುದನ್ನು ಪತ್ತೆ ಹಚ್ಚಲು ಬರುವುದಿಲ್ಲ ಎಂಬ ಅಂಶವನ್ನು ವಿವರಿಸಿದೆ.

 

‘ಹೀಗಾಗಿ ದೂರುದಾರರು ನೋಟರಿಯವರಿಂದ ಪ್ರಮಾಣೀಕೃತ ಪತ್ರವನ್ನು ಹಾಜರುಪಡಿಸಿರುತ್ತಾರೆರಂದು ಪತ್ರದಲ್ಲಿ ಹಿಂದಿನ ದಿನಾಂಕವನ್ನು ನಮೂದಿಸಿ ನೋಟರಿ ಮಾಡಲಾಗಿದೆ. ಬಿ ಸಿ ನಾರಾಯಣಪ್ಪ ಅವರು ಸಲ್ಲಿಸಿರುವ ನೋಟರಿ ಪ್ರಮಾಣೀಕೃತ ಪತ್ರಗಳನ್ನು ಹನುಮಂತರಾಯಪ್ಪ ಅವರು ಹಾಜರುಪಡಿಸಿರುತ್ತಾರೆಂದು ಸುಳ್ಳು ಮಾಹಿತಿ ಹಾಗೂ ದಾಖಲಾತಿಗಳನ್ನು ಹಾಜರುಪಡಿಸಿರುವುದರಿಂದ ದೂರುದಾರರಾದ ಹನುಮಂತರಾಯಪ್ಪ ಅವರು ತಮ್ಮ ಪ್ರತ್ಯುತ್ತರದಲ್ಲಿ ಸುಳಳು ನೋಟರಿ ಮಾಡಿಸಿರುತ್ತಾರೆಂದು ಆಪಾದಿಸಿರುವ ಅಂಶವು ಸಾಬೀತಾಗಿರುತ್ತದೆ,’ ಎಂದು ತನಿಖಾಧಿಕಾರಿಯು ವರದಿಯಲ್ಲಿ ವಿವರಿಸಿದ್ದಾರೆ.

SUPPORT THE FILE

Latest News

Related Posts