ಬೆಂಗಳೂರು; ಮಹಾರಾಷ್ಟ್ರ ಹೈಬ್ರಿಡ್ಸ್ ಸೀಡ್ ಕಂಪನಿ ಲಿಮಿಟೆಡ್ (ಮಹಿಕೋ)ಯು ಬೋಲ್‌ಗಾರ್ಡ್ ಬಿಟಿ ಹತ್ತಿ ತಳಿಯ ಮಾರ್ಪಾಡಿತ ಬಿ ಟಿ ಹತ್ತಿಯ ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟ, ಕೀಟ ಮತ್ತು ಕಳೆ ನಿರ್ವಹಣೆ ಹಾಗೂ ಜೈವಿಕ ದಕ್ಷತೆಯನ್ನು ರಾಜ್ಯದಲ್ಲಿ ಪ್ರಯೋಗ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ಈ ಕುರಿತು 2022ರ ಮಾರ್ಚ್ 9ರಂದೇ ಸರ್ಕಾರಕ್ಕೆ ಪತ್ರವನ್ನು ಬರೆದಿರುವ ಕಂಪನಿಯು ರಾಜ್ಯದಲ್ಲಿ ಪ್ರಯೋಗ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಕೋರಿದೆ. ಈ ಕುರಿತು ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2022ರ ಜುಲೈ 4ರಂದು ಸಭೆ ನಡೆದಿದೆ.
ಮಹಿಕೋ ಕಂಪನಿಯು ದೇಶದಲ್ಲಿ ಇದೇ ಮೊದಲ ಬಾರಿಗೆ ಬೋಲ್‌ಗಾರ್ಡ್ ಬಿಟಿ ಹತ್ತಿ ಮತ್ತು ಬೋಲ್‌ಗಾರ್ಡ್ II ಬಿಟಿ ಹತ್ತಿಯನ್ನು ಪರಿಚಯಿಸುತ್ತಿದೆ. ಇದು ಹತ್ತಿ ಹುಳುಗಳನ್ನು ನಿರ್ವಹಿಸುವ ಭಾರತದ ರೈತರಿಗೆ ಪರಿಣಾಮಕಾರಿಯಾಗಿ ಉಪಯೋಗವಾಗಲಿದೆ. ಅಲ್ಲದೆ ಮುಂದಿನ ಪೀಳಿಗೆಗೆ ಜಿಎಂ ಕಾಟನ್ ತಂತ್ರಜ್ಞಾನವನ್ನೂ ಪರಿಚಯಿಸುತ್ತಿದೆ. ಇದಕ್ಕೆ ಬೋಲೋಗಾರ್ಡ್ ರೌಂಡ್‌ಅಪ್ ರೆಡಿ ಫ್ಲೆಕ್ಸ್ ಬಿಟಿ ಹತ್ತಿ ಎಂದು ಹೆಸರಿಡಲಾಗಿದೆ.
2007, 2008, 2009ರಲ್ಲಿಯೂ ಜೈವಿಕ ತಂತ್ರಜ್ಞಾನ ಮಂಡಳಿಯ ಅನುಮತಿ ಪಡೆದು ಈ ಹಿಂದೆಯೂ ಬಿಜಿಆರ್‌ಆರ್‌ಎಫ್ ಮತ್ತು ಆರ್‌ಆರ್‌ಎಫ್ ತಳಿಯ ಹತ್ತಿ ಬೆಳೆ ಪ್ರಯೋಗಕ್ಕೆ ಒಡ್ಡಲಾಗಿತ್ತು. ಹೀಗಾಗಿ ಹೊಸದಾಗಿ ಪರಿಚಯಿಸುತ್ತಿರುವ ಬಿ ಟಿ ಹತ್ತಿಯ ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟ, ಕೀಟ ಮತ್ತು ಕಳೆ ನಿರ್ವಹಣೆ ಹಾಗೂ ಜೈವಿಕ ದಕ್ಷತೆಯನ್ನು ರಾಜ್ಯದಲ್ಲಿ ಪ್ರಯೋಗ ಮಾಡಲು ಮಂಡಳಿಯು ಅನುಮತಿ ನೀಡಬೇಕು ಎಂದು ಕಂಪನಿ ಕೋರಿದೆ ಎಂದು ತಿಳಿದು ಬಂದಿದೆ.
‘ರಾಜ್ಯದಲ್ಲಿ ಜೈವಿಕ ಸಂಶೋಧನೆ, ಸಂಶೋಧನೆಯ 2ನೇ ಹಂತದ ಪ್ರಯೋಗ ಮಾಡಲು ಉದ್ದೇಶಿಸಿದೆ. ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟ, ಕೀಟ ಮತ್ತು ಕಳೆ ನಿರ್ವಹಣೆ ಹಾಗೂ ಜೈವಿಕ ದಕ್ಷತೆ, ಸಾಮಾಜಿಕ, ಆರ್ಥಿಕ ಲಾಭಗಳು ಕುರಿತಾಗಿ ಪ್ರಯೋಗಕ್ಕೆ ಒಡ್ಡಬೇಕಿದೆ,’ಎಂದು ಪತ್ರದಲ್ಲಿ ವಿವರಿಸಿದೆ. ಕಂಪನಿಯು ಹೊಸದಾಗಿ ಪರಿಚಯಿಸುತ್ತಿರುವ ಬಿ ಟಿ ಹತ್ತಿಯ ತಳಿಯನ್ನು ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಯೋಗ ಮಾಡಲು ಮುಂದಾಗಿದೆ.
ಬೀಜ ಅಧಿನಿಯಮ 1966ರ ಸೆಕ್ಷನ್ 14(1)ರ ಅನ್ವಯ ರಾಜ್ಯದಾದ್ಯಂತ ಮಹಿಕೋ ಕಂಪನಿಯ ಬಿ.ಟಿ.ಹತ್ತಿ ಬೀಜದ ಮಾರಾಟವನ್ನು ನಿಷೇಧಿಸಿ ಕೃಷಿ ಇಲಾಖೆ ನಿರ್ದೇಶಕರು 2014ಲ್ಲೇ ಆದೇಶ ಹೊರಡಿಸಲಾಗಿತ್ತು. ಇದಲ್ಲದೇ ಕೃಷಿ ಇಲಾಖೆಯ ಬೀಜ ಪೂರೈಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಯಲ್ಲಿ ಸೇರಿಸಿದ್ದನ್ನು ಸ್ಮರಿಸಬಹುದು.
ಯಾವುದೇ ಬೀಜ ಮಾರಾಟಗಾರರು ಮಹಿಕೋ ಕಂಪನಿಯ ಬಿ.ಟಿ.ಹತ್ತಿ ಬೀಜವನ್ನು ಮುಂದಿನ ಆದೇಶದವರೆಗೆ ಮಾರಾಟ ಮಾಡಬಾರದೆಂದು ಎಚ್ಚರಿಸಿದ್ದರು. ಅದೇರೀತಿ ರೈತರು ಸಹ ಮಹಿಕೋ ಕಂಪನಿಯ ಬಿ.ಟಿ.ಹತ್ತಿ ಬೀಜ ಖರೀದಿಸಬಾರದೆಂದು ಕೋರಿದ್ದರು. 2013ರ ಮುಂಗಾರು ಹಂಗಾಮಿನಲ್ಲಿ ಮಹಿಕೋ ಕಂಪನಿಯ ಬಿ.ಟಿ.ಹತ್ತಿ ಬೀಜದ ಇಳುವರಿ ಶೇ. 50ಕ್ಕಿಂತ ಕಡಿಮೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕೃಷಿ ನಿರ್ದೇಶಕರು ಈ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.