ಸರ್ಕಾರಿ ಭೂಮಿ ಕಬಳಿಕೆ;ಖಾಸಗಿ ಜಾಲ ಕಾರ್ಯಾಚರಣೆ, ಭೂಮಿ ತಂತ್ರಾಂಶ ದುರ್ಬಳಕೆ, ಸಿಬ್ಬಂದಿಗಳೇ ಭಾಗಿ

photo credit;vaarthabharti

ಬೆಂಗಳೂರು; ಭೂಮಿ ಉಸ್ತುವಾರಿ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಲೋಚಕರನ್ನೇ ಬಳಸಿಕೊಂಡು ರಾಮನಗರ ಜಿಲ್ಲೆಯಲ್ಲಿನ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಪ್ರಕರಣವು ಮುನ್ನೆಲೆಗೆ ಬಂದ ಬೆನ್ನಲ್ಲೇ ಇಂತಹ ಪ್ರಕರಣಗಳು ಇಡೀ ರಾಜ್ಯದಾದ್ಯಂತ ಕಂಡು ಬಂದಿವೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು ಅನುಮಾನಿಸಿದೆ.

 

ಭೂಮಿ ತಂತ್ರಾಂಶದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಾಲೋಚಕರ ಮೂಲಕವೇ ದತ್ತಾಂಶಗಳನ್ನು ಕದಿಯಲಾಗುತ್ತಿದೆ. ಇದನ್ನು ಬಳಸಿಕೊಂಡು ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಪಹಣಿಗಳನ್ನು ತಯಾರಿಸಲಾಗುತ್ತಿದೆ ಎಂದು ಶಾಸಕ  ಕೆ ಜಿ ಬೋಪಯ್ಯ ಅವರ  ಅಧ್ಯಕ್ಷತೆಯಲ್ಲಿರುವ  ಸಮಿತಿಯು ಶಂಕಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಭೂಮಿ ಉಸ್ತುವಾರಿ ಕೋಶದ ನಿರ್ದೇಶಕರಿಗೆ 2022ರ ಅಕ್ಟೋಬರ್‌ 13ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಖಾಸಗಿ ವ್ಯಕ್ತಿಗಳು ಭೂಮಿ ತಂತ್ರಾಂಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಾಲೋಚಕರ ಮೂಲಕ ದತ್ತಾಂಶಗಳನ್ನು ಪಡೆದು ಖಾಸಗಿ ಸೈಬರ್‌ ಸೆಂಟರ್‌ಗಳಲ್ಲಿ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಪಹಣಿಗಳನ್ನು ತಯಾರಿಸಿರುವ ಕುರಿತು ಇತರೆ ಜಿಲ್ಲೆಗಳಲ್ಲಿ ಖಾಸಗಿ ವ್ಯಕ್ತಿಗಳು ಮಾಡಿರಬಹುದು ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು ಅನುಮಾನ ವ್ಯಕ್ತಪಡಿಸಿದೆ.

 

ಅದರಂತೆ ರಾಜ್ಯದ ಇತರೆ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ  ಅಕ್ರಮವಾಗಿ ಪಹಣಿಗಳನ್ನು ತಯಾರಿಸಿರುವ ಕುರಿತು ಪರಿಶೀಲಿಸಿ ಕಾನೂನು ರೀತಿ ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಭೂಮಿ ತಂತ್ರಾಂಶವನ್ನು ದುರ್ಬಳಕೆಯಾಗದ ರೀತಿಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು,’ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

 

ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ಆರ್​​ಟಿಸಿ ಮಾಡಿಸಿ ಅಸಲಿ ದಾಖಲೆ ಎಂಬಂತೆ ಭೂಮಿ ಮಾರಾಟ ಮಾಡುತ್ತಿದ್ದ 7 ಮಂದಿಯನ್ನು ರಾಮನಗರದ  ಪೊಲೀಸರು ಬಂಧಿಸಿದ್ದರು. ಇವರೆಲ್ಲರೂ ರಿಯಲ್ ಎಸ್ಟೆಟ್ ಏಜೆಂಟ್, ಸೈಬರ್ ಮಾಲೀಕ, ಬ್ರೋಕರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಹಾರ್ಡ್​ವೇರ್ ಎಂಜಿನಿಯರ್ ಆಗಿದ್ದರು. ಓರ್ವ ಜಮೀನು ಖರೀದಿದಾರ ಸೇರಿದಂತೆ 7 ಮಂದಿ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಸರ್ಕಾರಿ ಸರ್ವರ್​ನಲ್ಲಿರುವ ತಂತ್ರಾಂಶಗಳ ಲೋಪಗಳಿಂದಾಗಿ ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ದಾಖಲೆ ತಿದ್ದಲಾಗುತ್ತಿತ್ತು. ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಮಾಡಲಾಗದ ಕೆಲಸವನ್ನು ಮಾಡುತ್ತಿದ್ದ ಆರೋಪಿಗಳು ಫಲಾನುಭವಿಗಳಿಗೆ ಆರ್‌ಟಿಸಿ ಕೊಡುತ್ತಿದ್ದರು.

 

ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬರುವ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಪ್ರಕರಣದಲ್ಲಿಯೂ ಚಾಮರಾಜನಗರದ ಅಂದಿನ ಜಿಲ್ಲಾಧಿಕಾರಿ ಡಾ ಎಂ ಆರ್‌ ರವಿ ಅವರ ವಿರುದ್ಧವೂ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು. ಖಾಸಗಿ ವ್ಯಕ್ತಿ ನೀಡಿದ್ದ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು (ಆರ್‌ಎಂ09/18-19 ದಿನಾಂಕ 19-07-2021)ರಂದು ಆದೇಶ ಹೊರಡಿಸಿದ್ದರು. ಈ ಸಂಬಂಧ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಗೆ ವರದಿಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

 

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಹಾಗೂ ಮೀನುಕುಂಟೆ ಗ್ರಾಮಗಳಲ್ಲಿ 95.13 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಮ್ಯುಟೇಷನ್‌ ಮಾಡಲಾಗಿತ್ತು. ಈ ವಿಶೇಷ ತಹಶೀಲ್ದಾರ್‌ ಕೆ ಎನ್‌ ನಾರಾಯಣಪ್ಪ, ಹಕ್ಕುದಾಖಲೆ ಶಿರಸ್ತೆದಾರ್‌ ಸಿ ಹೆಚ್‌ ಸೂಲಯ್ಯ, ವಿಷಯ ನಿರ್ವಾಹಕ ಹನುಮಂತಯ್ಯ, ರಾಜಸ್ವ ನಿರೀಕ್ಷಕ ಶಾಂತವೀರೇಗೌಡ, ನಿವೃತ್ತ ಗ್ರಾಮ ಲೆಕ್ಕಿಗ ನಾರಾಯಣರೆಡ್ಡಿ, ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ ಮತ್ತಿತರರು ಭಾಗಿಯಾಗಿದ್ದರು. ಈ ಪ್ರಕರಣ ಸಂಬಂಧ ಸರ್ಕಾರಕ್ಕೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ವರದಿಯನ್ನೇ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

 

ಅದೇ ರೀತಿ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸರ್ಕಾರಿ ಗೋಮಾಳ, ನೀರಿನ ಕುಂಟೆ, ಪಿ-ನಂಬರ್‌ ಇರುವ ಸ್ವತ್ತುಗಳನ್ನು ಗ್ರಾಮ ಪಂಚಾಯ್ತಿಯ ಪಿಡಿಒ, ಎಸ್‌ಡಿಎ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಇ-ಸ್ವತ್ತು ನೋಂದಣಿ ಮಾಡಿದ್ದ ಪ್ರಕರಣದಲ್ಲೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಈ ಸಂಬಂಧ ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪೂರ್ವಾನುಮತಿಯನ್ನೂ ನೀಡಿಲ್ಲ ಎಂದು ಗೊತ್ತಾಗಿದೆ.

 

ಹಾಗೆಯೇ ದೇವನಹಳ್ಳಿ ತಾಲೂಕಿನ ಧರ್ಮಪುರ ಗ್ರಾಮದ ಸರ್ವೆ ನಂಬರ್ 1 ಮತ್ತು 22ರಲ್ಲಿ ಅಕ್ರಮವಾಗಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ 18 ಜನರಿಗೆ ಖಾತೆ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿಯೂ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರೂ ಲೋಕಾಯುಕ್ತಕ್ಕೆ ವರದಿಯನ್ನೂ ನೀಡಿಲ್ಲ. ಕಂದಾಯ ಇಲಾಖೆ ವ್ಯಾಪ್ತಿಯ ಭೂಮಿ ತಂತ್ರಾಂಶ ಕಚೇರಿಯಲ್ಲಿಯೇ ರಾಜಾರೋಷವಾಗಿ ಅಕ್ರಮವಾಗಿ ಪಹಣಿಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ತಯಾರಿಸುತ್ತಿದ್ದರೂ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts