ಶ್ರೀಗಂಧ ನೀತಿ ಪರಿಷ್ಕರಿಸಿ ಸಚಿವ ಸಂಪುಟಕ್ಕೆ ಮಂಡನೆ; ಕಾರ್ಪೋರೇಟ್‌ ಜಂಟಿ ಉದ್ಯಮಕ್ಕೆ ರತ್ನಗಂಬಳಿ

ಬೆಂಗಳೂರು; ಖಾಸಗಿ ಭೂ ಮಾಲೀಕರು, ಶ್ರೀಗಂಧ ಬೆಳೆಗಾರ-ಕಂಪನಿಗಳ (ಕಾರ್ಪೋರೇಟ್‌) ಜಂಟಿ ಉದ್ಯಮ ಸೇರಿದಂತೆ ರಾಜ್ಯದಲ್ಲಿ ಖಾಸಗಿ ಶ್ರೀಗಂಧದ ಕೃಷಿ ನೀತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗಂಧ ನೀತಿಯನ್ನು ಸರ್ಕಾರವು ಪರಿಷ್ಕರಿಸಿದೆ.

 

ರಾಜ್ಯದಲ್ಲಿ ಶ್ರೀಗಂಧ ಮರದ ಸಂಪನ್ಮೂಲವು ಕಡಿಮೆಯಾಗುತ್ತಿದೆ ಎಂಬ ಕಾರಣವನ್ನು ಮುಂದಿರಿಸಿಕೊಂಡು ನಗರ ಪ್ರದೇಶಗಳ ಹತ್ತಿರದಲ್ಲಿರುವ ಭೂಮಾಲೀಕರು, ಕೃಷಿ ಕಾರ್ಮಿಕರು ಲಭ್ಯತೆ ಇಲ್ಲದಿರುವುದರಿಂದ ಕಾರ್ಪೋರೇಟ್‌ ಜಂಟಿ ಉದ್ಯಮದಲ್ಲಿ ಶ್ರೀಗಂಧ ಮರದ ಸಾಗುವಳಿ ಪ್ರದೇಶ ಹೆಚ್ಚಿಸಲು ಮುಂದಾಗಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯು ಈ ಸಂಬಂಧ ಸಚಿವ ಸಂಪುಟಕ್ಕೆ (ಇ-ಕಡತ ಸಂಖ್ಯೆ;ಅಪಜೀ 32 ಎಫ್‌ಡಿಪಿ 2020-2022) ಪ್ರಸ್ತಾವನೆ ಸಲ್ಲಿಸಿದೆ. ಇದನ್ನು  ಸಚಿವ ಸಂಪುಟದ ಮುಂದೆ ಮಂಡಿಸಲು ಅರಣ್ಯ ಖಾತೆಯ ಪ್ರಭಾರವನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದ್ದಾರೆ.  ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸುಧಾರಿತ ಸಸಿಗಳ ಸ್ಟಾಕ್‌ ಉತ್ಪಾದನೆ, ಅರಣ್ಯ ಸಸ್ಯಕ್ಷೇತ್ರಗಳಲ್ಲಿ ಶ್ರೀಗಂಧ ಮರದ ಸಸಿಗಳ ಉತ್ಪಾದನೆ ಹೆಚ್ಚಳ, ಖಾಗಿ ಸಸ್ಯ ಕ್ಷೇತ್ರಗಳಲ್ಲಿ ಶ್ರೀಗಂಧದ ಸಸಿಗಳ ಉತ್ಪಾದನೆಗೆ ಪ್ರೋತ್ಸಾಹ, ಶ್ರೀಗಂಧ ಮರಗಳ ರಕ್ಷಣೆಯ ಕ್ರಮಗಳ ಸುಧಾರಣೆ, ಅರಣ್ಯ ಪ್ರದೇಶಗಳಲ್ಲಿ ಶ್ರೀಗಂಧದ ನೆಡುತೋಪುಗಳು, ಶ್ರೀಗಂಧ ತೋಟಗಳ ಗುರುತಿಸುವಿಕೆ, ರಕ್ಷಣೆ, ಖಾಸಗಿ ಭೂ ಮಾಲೀಕರು, ರೈತರಿಗಾಗಿ ಕಾರ್ಯನೀತಿ, ಸುಧಾರಿತ ಕೃಷಿ ಮಾದರಿ, ಶ್ರೀಗಂಧ ಬೆಳೆಗಾರ-ಕಂಪನಿಗಳ (ಕಾರ್ಪೋರೇಟ್‌) ಜಂಟಿ ಉದ್ಯಮ, ಶ್ರೀಗಂಧ ಬೆಳೆಗಾರರ ಸಹಕಾರ ಸಂಘದ ಮೂಲಕ ಕ್ಲಸ್ಟರ್‌ ಅಭಿವೃದ್ಧಿ, ಖಾಸಗಿ ಶ್ರೀಗಂಧ ಎಸ್ಟೇಟ್‌ಗಳಿಗೆ ನೆರವು,’ ನೀಡಲು ಇಲಾಖೆಯು ಹೊಸ ನೀತಿಯಲ್ಲಿ ಪ್ರಸ್ತಾಪಿಸಿದೆ.

 

ಸಚಿವ ಸಂಪುಟಕ್ಕೆ ಮಂಡನೆಯಾಗಿರುವ ಪ್ರಸ್ತಾವನೆ

 

ಅದೇ ರೀತಿ ಶ್ರಿಗಂಧ ಮರದ ಕಟಾವು, ಸಾಗಾಣಿಕೆ, ಮಾರಾಟ, ಮರ ಕಡಿಯುವ ಮತ್ತು ಸಾಗಣೆ ಪ್ರಕ್ರಿಯೆಗಳ ಸರಳೀಕರಣಕ್ಕಾಗಿ ಆನ್ಲೈನ್‌ ವ್ಯವಸ್ಥೆ, ಶ್ರೀಗಂಧ ಮರದ ವರ್ಗೀಕರಣದ ಸರಳೀಕರಣ, ಶ್ರೀಗಂಧ ಮರವನ್ನು ಪರಿವರ್ತಿಸುವ ವಿಷಯದಲ್ಲಿ ಸಾಮರ್ಥ್ಯ ವರ್ಧನೆ, ಉತ್ತೇಜನ, ಇ-ಮಾರ್ಕೇಂಟಿಂಗ್‌ ಮೂಲಕ ಕುಶಲ ಕಲಾವಿದರು ತಯಾರಿಸಿದ ಶ್ರೀಗಂಧ ಕರಕುಶಲ ವಸ್ತುಗಳ ಮಾರಾಟ, ಉದ್ದೇಶಿತ ಸಾಂಸ್ಥಿಕ ಮತ್ತು ಮಾನಿಟಿರಿಂಗ್‌ ಇತ್ಯಾದಿಗಳನ್ನೂ ನೂತನ ನೀತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

 

‘ಶ್ರೀಗಂಧದ ಕುರಿತ ನೀತಿಯನ್ನು ರಾಜ್ಯದಲ್ಲಿ ಖಾಸಗಿ ಶ್ರೀಗಂಧದ ಕೃಷಿಗೆ ಅನುಕೂಲವಾಗುವಂತೆ ಪರಿಷ್ಕರಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀಗಂಧದ ಮರಗಲ ಕಟಾವು, ಸಾಗಾಣೀಕೆ ಮತ್ತು ಮಾರಾಟ ಮುಂತಾದ ಪ್ರಕ್ರಿಯೆಗಳಿಗೆ ಕರ್ನಾಟಕ ಅರಣ್ಯ ನಿಯಮಗಳು 1969ರಲ್ಲಿನ ನಿಬಂಧನೆಗಳಣ್ನು ಸರಳೀಕರಣಗೊಳಿಸಿ ಅವಶ್ಯ ತಿದ್ದುಪಡಿಗಳನ್ನು ತರಲು ಈ ಟಿಪ್ಪಣಿಯಲ್ಲಿ ಪ್ರಸ್ತಾಪಿಸಲಾಗಿದೆ,’ ಎಂದು ಇಲಾಖೆಯು ತಿಳಿಸಿದೆ.

 

ಟಿಪ್ಪು ಸುಲ್ತಾನ್‌ ಆಡಳಿತ ಸಮಯದಲ್ಲಿ ಶ್ರೀಗಂಧ ಮರವನ್ನು ರಾಯಲ್‌ ಟ್ರೀ ಎಂದು ಘೋಷಿಸಲಾಗಿತ್ತು. 1792ರ ರಾಜ್ಯ ಬಜೆಟ್‌ನಲ್ಲಿ ಶ್ರಿಗಂಧವನ್ನು ಆರ್ಥಿಕತೆಯ ಪ್ರಮುಖ ಮೂಲವಾಗಿ ಪರಿಗಣಿಸಲಾಗಿತ್ತು. ವಾಣಿಜ್ಯ ಮಹತ್ವ ಹೊಂದಿರುವ ಶ್ರೀಗಂಧವು 16 ಪ್ರಭೇದಗಳನ್ನು ಒಳಗೊಂಡಿದೆ. ಜಗತ್ತಿನ ಒಟ್ಟು ಶ್ರೀಗಂಧ ಉತ್ಪಾದನೆಯ ಪೈಕಿ ಶೇ.85ರಷ್ಟು ಭಾರತ ದೇಶದಲ್ಲಿ ಉತ್ಪಾದನೆಯಾಗುತ್ತಿದೆ.

 

ಮಾರುಕಟ್ಟೆ ದರದ ಪ್ರಲೋಭನೆಯಿಂದಾಗಿ ಶ್ರೀಗಂಧ ಕಳ್ಳಸಾಗಾಣಿಕೆಯಿಂದಾಗಿ ಶ್ರೀಗಂಧ ಮರಗಳು ವಿನಾಶದ ಅಂಚಿಗೆ ಬಂದಿವೆ. ಕಳೆದ 25 ವರ್ಷಗಳಿಂದ ಶ್ರೀಗಂಧದ ಉತ್ಪಾದನೆಯು ಪೂರ್ಣ ಪ್ರಮಾಣದಲ್ಲಿ ಕುಂಠಿತವಾಗಿದೆ.

the fil favicon

SUPPORT THE FILE

Latest News

Related Posts