ಟೆಂಡರ್‌ ಗೋಲ್ಮಾಲ್‌; ಆರ್ಥಿಕ ಇಲಾಖೆ ಸುತ್ತೋಲೆ ಉಲ್ಲಂಘಿಸಿ 5 ಕೋಟಿ ಹೆಚ್ಚಿನ ಮೊತ್ತಕ್ಕೆ ಅನುಮೋದನೆ

ಬೆಂಗಳೂರು; ಟೆಂಡರ್ ಮೊತ್ತಕ್ಕಿಂತ ಶೇ 5ಕ್ಕಿಂತ ಹೆಚ್ಚಿನ ಮೊತ್ತವನ್ನು ಅಂಗೀಕರಿಸದಂತೆ ಆರ್ಥಿಕ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲಂಘಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್‌ ವಿಭಾಗವು ಇಲಾಖೆಯು ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಶೇ.9.50ರಷ್ಟು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಕೋವಿಡ್‌-19 ನಿರ್ವಹಣೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ 14 ವೈದ್ಯಕೀಯ ಕಾಲೇಜುಗಳಿಗೆ 180 ಸಂಖ್ಯೆಯ ಹಾಸಿಗೆಗಳನ್ನು ಪಿಐಸಿಯು, 750 ಹಾಸಿಗೆಗಳನ್ನು ಐಸಿಯುಗಳಾಗಿ ಮೇಲ್ದರ್ಜೆಗೇರಿಸುವುದು ಮತ್ತು 510 ಹಾಸಿಗೆಗಳಿಗೆ ಆಕ್ಸಿಜನ್‌ ಔಟ್‌ಲೆಟ್‌ಗಳ್ನು ಅಳವಡಿಸುವ ಕಾಮಗಾರಿಗಳಿಗೆ ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಶೇ.9.50ರಷ್ಟು ಹೆಚ್ಚಳ ಮಾಡಿ ಟೆಂಡರ್‌ ಮೊತ್ತವನ್ನೇ ಪರಿಷ್ಕೃತಗೊಳಿಸಿದೆ. ಟೆಂಡರ್‌ ಮೊತ್ತವನ್ನು ಪರಿಷ್ಕೃತಗೊಳಿಸಿದ್ದ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಲು ಸಚಿವ ಡಾ ಕೆ ಸುಧಾಕರ್‌ ಅವರು ಅನುಮೋದಿಸಿದ್ದರು ಎಂದು ಗೊತ್ತಾಗಿದೆ.

 

ಇದರಿಂದಾಗಿ ಒಟ್ಟು ಟೆಂಡರ್‌ ಮೊತ್ತದಲ್ಲಿ ಒಟ್ಟಾರೆ 5 ಕೋಟಿ ರು. ಹೆಚ್ಚಳವಾದಂತಾಗಿದೆ. ಈ ಸಂಬಂಧ 2022ರ ಜೂನ್‌ 6ರಂದೇ ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ ಎಲ್ಲಾ ಕಾಮಗಾರಿಗಳಿಗೆ ಒಟ್ಟು 20.27 ಕೋಟಿ ರು.ಗಳಿಗೆ ಟೆಂಡರ್‌ ಕರೆದಿತ್ತು. ಇದರಲ್ಲಿ ಬಿಡ್‌ ಮಾಡಿದ್ದ ಕಂಪನಿಗಳ ಪೈಕಿ ಬೆಂಗಳೂರಿನ ಸ್ಟಾರ್‌ ಇನ್ಫ್ರಾ ಟೆಕ್‌ ಕಂಪನಿಯು ಕಡಿಮೆ ದರ ನಮೂದಿಸಿ ಎಲ್‌ 1 ಆಗಿ ಹೊರಹೊಮ್ಮಿತ್ತು. ಆದರೆ ಇದೇ ಕಂಪನಿಯ ಜತೆ ಸಂಧಾನ ನಡೆಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್‌ ವಿಭಾಗವು ಒಟ್ಟು ಮೊತ್ತವನ್ನು 22.20 ಕೋಟಿಗೆ ಏರಿಸಿತ್ತು. ಇದು ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಶೇ. 9.50ರಷ್ಟು ಹೆಚ್ಚಳವಾಗಿತ್ತು.

 

ಇದರ ಪ್ರಕಾರ ಈ ಮೊತ್ತಕ್ಕೆ ಜಿಎಸ್‌ಟಿ 2.66 ಕೋಟಿ, ಇತರೆ 60.31 ಲಕ್ಷ ರು ಸೇರಿ ಒಟ್ಟು 25.46 ಕೋಟಿ ರು.ಗಳಾಗಿದೆ. ಈಮೊತ್ತವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿನ ಹಂಚಿಕೆಯಾಗಿರುವ ಮೊತ್ತದಲ್ಲಿ 19.86 ಕೋಟಿ ರು, ಹಾಗೂ ಇನ್ನುಳಿದ 5.60 ಕೋಟಿ ರು.ಗಳನ್ನು ನಿರ್ದೇಶನಾಲಯದ 2022-23ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ (4210-03-105-1-24-386)ರಲ್ಲಿ ಹಂಚಿಕೆಯಾಗಿರುವ ಕಟ್ಟಡ ಕಾಮಗಾರಿ ಅನುದಾನ 25.00 ಕೋಟಿ ರು.ಗಳಲ್ಲಿ ಭರಿಸಲು 2022ರ ಜೂನ್‌ 6ರಂದೇ ಆಡಳಿತಾತ್ಮಕ ಅನುಮೋದನೆ ಹೊರಡಿಸಿದೆ.

 

ಮೇ 10ರಂದು ಆರ್ಥಿಕ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಟೆಂಡರ್ ಮೊತ್ತದಲ್ಲಿ ಶೇ 5ಕ್ಕಿಂತ ಜಾಸ್ತಿ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಇಲ್ಲ. ಒಂದು ವೇಳೆ ಅನಿವಾರ್ಯ ಸಂದರ್ಭವಾದರೆ ಸಮರ್ಥನೀಯ ಕಾರಣಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆಯಬೇಕು ಎಂದು ತಿಳಿಸಿತ್ತು.

 

ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಸುತ್ತೋಲೆಯನ್ನು ನೇರಾನೇರ ಉಲ್ಲಂಘಿಸಿದ್ದರೂ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ. ಕೋವಿಡ್‌ 19 ಮೂರನೇ ಅಲೆ ಸಿದ್ಧತೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿಗಾಗಿ ಅಂದಾಜಿಸಿದ್ದ ಮೊತ್ತವು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಹಲವು ಪಟ್ಟು ಹೆಚ್ಚಾಗಿತ್ತು.

Your generous support will help us remain independent and work without fear.

Latest News

Related Posts