ಹಾಸಿಗೆ, ದಿಂಬು ಖರೀದಿಯಲ್ಲಿ 19 ಕೋಟಿ ಅವ್ಯವಹಾರ ಆರೋಪ; ಐಎಎಸ್‌ ಮಂಜುನಾಥ್‌ ಪ್ರಸಾದ್‌ಗೆ ಕ್ಲೀನ್‌ಚಿಟ್‌

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿನ ವಸತಿ ಶಾಲೆಗಳ ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ, ದಿಂಬು, ಸೊಳ್ಳೆ ಪರದೆ, ಹೊದಿಕೆ, ಜಮಖಾನ ಖರೀದಿಯಲ್ಲಿ ಅಂದಾಜು 19 ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ನಡೆದಿರುವ ಭ್ರಷ್ಟಚಾರದ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಹಿಂದಿನ ಕಾರ್ಯದರ್ಶಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರಿಗೆ ಈ ಪ್ರಕರಣದಿಂದ ಕ್ಲೀನ್‌ ಚಿಟ್‌ ನೀಡಲಾಗಿದೆ.

 

2012ರಿಂದ 2015ರ ಅವಧಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ 4 ವರ್ಷಗಳಾದರೂ ಒಂದೇ ಒಂದು ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಇತ್ತೀಚೆಗಷ್ಟೇ ವಿಧಾನಸಭೆಗೆ ವರದಿ ಸಲ್ಲಿಸಿತ್ತು. ವರದಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕಿದ್ದ ಸರ್ಕಾರವು ಇದೀಗ ಇಲಾಖೆಯ ಕಾರ್ಯದರ್ಶಿಯವರನ್ನೇ ಆರೋಪ ಮುಕ್ತಗೊಳಿಸಿರುವುದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮಾಡಿದ್ದ ಶಿಫಾರಸ್ಸುಗಳನ್ನು ಬದಿಗೆ ಸರಿಸಿದಂತಾಗಿದೆ.

 

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿದ್ದ ವರದಿ ಸಲ್ಲಿಕೆಯಾದ ಕೆಲವೇ ತಿಂಗಳಲ್ಲೇ ಇಲಾಖೆಯ ಹಿಂದಿನ ಕಾರ್ಯದರ್ಶಿ ಎನ್‌ ಮಂಜುನಾಥ ಪ್ರಸಾದ್‌ ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಲಾಗಿದೆ ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸದನಕ್ಕೆ ಲಿಖಿತ ಉತ್ತರ ಒದಗಿಸಿದ್ದಾರೆ. ಈ ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2012-ರಿಂದ 2015ರಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ಮತ್ತು ವಸತಿ ಶಾಲೆಗಳಿಗೆ ಅಗತ್ಯವಿರುವ ಹಾಸಿಗೆ, ದಿಂಬಳಗಳ ಖರೀದಿಯಲ್ಲಿ ಅವ್ಯವಹಾರ ಆಗಿತ್ತು. ಈ ಸಂಬಂಧ 2019ರ ಅಕ್ಟೋಬರ್‌ 25ರಂದು ಶಿಸ್ತು ಕ್ರಮ ಜರುಗಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಮಂಜುನಾಥ್‌ ಪ್ರಸಾದ್‌ ಅವರು ನೀಡಿರುವ ವಿವರಣೆ/ಸಮಜಾಯಿಷಿಯನ್ನು ಅಂಗೀಕರಿಸಿರುವ ಸರ್ಕಾರವು 2022ರ ಮಾರ್ಚ್‌ 29ರಂದು ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

 

ಹಾಸಿಗೆ, ದಿಂಬು, ಸೊಳ್ಳೆ ಪರದೆ, ಹೊದಿಕೆ, ಜಮಖಾನಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ಪೂರೈಕೆ ಮಾಡಿ 19 ಕೋಟಿಗೂ ಅಧಿಕ ಮೊತ್ತದಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಸಮಾಜ ಕಲ್ಯಾಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿತ್ತು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ 14ನೇ ವಿಧಾನಸಭೆಯ ಸಮಿತಿಯು ಈ ಪ್ರಕರಣದ ಕುರಿತು 2017ರ ಮಾರ್ಚ್‌ 27ರಂದು ವರದಿಯನ್ನು ಮಂಡಿಸಿತ್ತು. ವರದಿ ಮಂಡನೆಯಾಗಿ 4 ವರ್ಷಗಳಾದರೂ ವರದಿಯ ಪೂರ್ಣ ಪ್ರಮಾಣದಲ್ಲಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿರಲಿಲ್ಲ.

 

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಕುರಿತು 14ನೇ ವಿಧಾನಸಭೆ ಸಮಿತಿ 7ನೇ ವರದಿ ಶಿಫಾರಸ್ಸುಗಳ ಅನುಷ್ಠಾನದ ಕುರಿತು 2022ರ ಜನವರಿ 18ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು. ಸಮಿತಿಯ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಸೇರ್ಪಡೆಗೊಳಿಸಲಾಗಿತ್ತು.

 

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಾಸಿಗೆ, ದಿಂಬು ಖರೀದಿ ಹಗರಣ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿದ್ದ ವರದಿಯನ್ನು ಸಮಿತಿಯ ಹಾಲಿ ಅಧ್ಯಕ್ಷ ಕೃಷ್ಣಬೈರೇಗೌಡ ಅವರು ಕೈಗೆತ್ತಿಕೊಂಡಿರುವುದು ಹಗರಣಕ್ಕೆ ಮತ್ತೊಮ್ಮೆ ಮಹತ್ವ ಬಂದಂತಾಗಿತ್ತು.

 

ಸಮಿತಿಯ ಶಿಫಾರಸ್ಸುಗಳೇನಿದ್ದವು?

 

 

ವಸತಿ ಶಾಲೆಗಳಿಗೆ ಬೇಕಾಗುವ ಹಾಸಿಗೆ, ದಿಂಬು, ಮಂಚ, ಊಟದ ಟೇಬಲ್‌ನ್ನು ಒದಗಿಸುವ ಉದ್ದೇಶದಿಂದ 27.16 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಬಳಿ 3.47 ಕೋಟಿ ಉಳಿದಿತ್ತು. ಇಲಾಖೆ ಟಿಪ್ಪಣಿ ಪ್ರಕಾರ 25.06 ಕೋಟಿ ರು.ಗಳನ್ನು ಉಪಯೋಗಿಸಿ 4.07 ಕೋಟಿ ರು.ಗಳನ್ನು ಹಿಂದಿರುಗಿಸಲಾಗಿತ್ತು. ಈ ಮಾಹಿತಿಯು ಬಿಡುಗಡೆಯಾದ ಅನುದಾನಕ್ಕೆ ಹೊಂದಿಕೆಯಾಗದ ಕಾರಣ ಇದನ್ನು ಮರು ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಶಿಫಾರಸ್ಸು ಮಾಡಿತ್ತು. ಈ ಕುರಿತು ‘ದಿ ಫೈಲ್‌’ 2022ರ ಜನವರಿ 18ರಂದು ವರದಿ ಪ್ರಕಟಿಸಿತ್ತು.

 

ಹಾಸಿಗೆ, ದಿಂಬು ಖರೀದಿ ಹಗರಣ; ವರದಿ ನೀಡಿ 4 ವರ್ಷವಾದರೂ ಕ್ರಮವಿಲ್ಲ

 

 

‘ಅನುದಾನ ಬಿಡುಗಡೆ ಮಾಡಿದರೂ ಮೂಲಸೌಕರ್ಯವನ್ನು ಒದಗಿಸುವ ಬಗ್ಗೆ ಗಮನಹರಿಸದೇ ಹಣವನ್ನು ಉಳಿತಾಯವಾಗಿ ಇಟ್ಟಿರುವುದು ಸರಿಯಲ್ಲ. ಖರೀದಿಸಿದ್ದ ಸಾಮಗ್ರಿಗಳು ಉತ್ತಮವಾಗಿಲ್ಲ. ಖರೀದಿಯನ್ನು ಸಮಗ್ರವಾಗಿ ಮತ್ತೊಮ್ಮೆ ಪರಿಶೀಲಿಸಿ ಲೋಪ ಕಂಡು ಬಂದಲ್ಲಿ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

 

 

ಹಾಸಿಗೆ, ದಿಂಬುಗಳನ್ನು ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಖರೀದಿಸದೇ ಮಂಜೂರಾದ ಸಂಖ್ಯೆಯ ಮೇಲೆ ಖರೀದಿ ಮಾಡಿ ಅಧಿಕ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿತ್ತು. ಹಾಸಿಗೆ, ದಿಂಬುಗಳನ್ನು ಹೆಚ್ಚುವರಿ ಹಣದ ಮೇಲೆ ಖರೀದಿಸಿ ಈ ಖರೀದಿಯ ವೇಳೆ ಕೆಟಿಪಿಪಿ ಅಧಿನಿಯಮ ಉಲ್ಲಂಘನೆ ಮಾಡಲಾಗಿತ್ತು. ಅಲ್ಲದೆ ಈ ಖರೀದಿಯಲ್ಲಿ ವ್ಯಾಟ್‌ ತೆರಿಗೆಯನ್ನು ಶೇ. 14.5ರಂತೆ ನೀಡಿರುವ ಕುರಿತು ಇಲಾಖೆಯ ಗಮನ ಸೆಳೆದಿತ್ತು. ಖರೀದಿಯಲ್ಲಿ ಅಕ್ರಮ ಕಂಡು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿತ್ತು.

 

 

ಹಾಸಿಗೆ, ದಿಂಬು ಖರೀದಿಯಲ್ಲಿ ನಡೆದಿದೆ ಎನ್ನಲಾಗಿದ್ದ ಅಕ್ರಮಗಳ ಕುರಿತು 2017ರಲ್ಲಿ ಪ್ರತಿಪಕ್ಷ ಬಿಜೆಪಿಯು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿತ್ತು. ವಿದ್ಯಾರ್ಥಿ ನಿಲಯಗಳಿಗೆ ಪೂರೈಸಲು ಎಂಟು ವಿವಿಧ ವಸ್ತುಗಳನ್ನು ₹2,715 ದರದಲ್ಲಿ ಖರೀದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈ ವಸ್ತುಗಳ ಬೆಲೆ ₹1,800 ಇದೆ. ದುಬಾರಿ ದರ ನೀಡಿ ಖರೀದಿ ಮಾಡಿರುವುದರಿಂದ ದೊಡ್ಡ ಮಟ್ಟದ ಅವ್ಯವಹಾರ ಆಗಿದೆ ಎಂದು ಬಿಜೆಪಿಯ ಹಿಂದಿನ ವಕ್ತಾರ ಅಶ್ವತ್ಥನಾರಾಯಣ (ಹಾಲಿ ಸಚಿವ) ಆರೋಪಿಸಿದ್ದರು.

 

 

ಹಾಸಿಗೆ, ದಿಂಬು, ಸೊಳ್ಳೆಪರದೆ, ಹೊದಿಕೆ, ಜಮಖಾನಗಳನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಖರೀದಿ ಪ್ರಕ್ರಿಯೆ ನಡೆಸಿತ್ತಾದರೂ ಖಾಸಗಿ ಸಂಸ್ಥೆಗಳ ಮೂಲಕ ಇದನ್ನು ಪೂರೈಸಲು ಅವಕಾಶ ಕಲ್ಪಿಸಿ, ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.

 

 

ಖಾಸಗಿ ಸಂಸ್ಥೆ ಮೂಲಕ ದುಬಾರಿ ದರದಲ್ಲಿ ಖರೀದಿಸುವ ಮೂಲಕ ಬೊಕ್ಕಸಕ್ಕೆ ₹ 8ಕೋಟಿಯಿಂದ ₹ 10 ಕೋಟಿ ನಷ್ಟ ಉಂಟು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿತರಿಸಿದ ಸಮವಸ್ತ್ರ ಕೂಡ ಕಳಪೆಯಾಗಿದ್ದು, ಅಲ್ಲಿಯೂ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಎರಡೂ ಹಗರಣಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.

 

 

ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿ ವಸತಿ ನಿಲಯಗಳ ಹಾಸಿಗೆ ಹಾಗೂ ದಿಂಬು ಖರೀದಿಯಲ್ಲಿ ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸರ್ಕಾರವು ಉಪ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಅಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಹೇಳಿದ್ದರು.

 

 

ಪ್ರಕರಣದಲ್ಲಿ ಅಧಿಕಾರಿಗಳೇ ತಪ್ಪೆಸಗಿದ್ದಾರೆ ಎಂಬುದಾಗಿ ಖುದ್ದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೇ ಒಪ್ಪಿಕೊಂಡಿದ್ದರು. ಆಡಳಿತ ಪಕ್ಷದ ಸದಸ್ಯರಾಗಿದ್ದ ಪರಿಷತ್‌ನ ಮಾಜಿ ಸದಸ್ಯ ವಿ ಎಸ್ ಉಗ್ರಪ್ಪನವರೂ ಕೂಡ ಪ್ರಕರಣದಲ್ಲಿ ಅಧಿಕಾರಿಗಳೇ ತಪ್ಪೆಸಗಿದ್ದಾರೆ ಎಂದು ಪ್ರಸ್ತಾಪಿಸಿದ್ದರು.

the fil favicon

SUPPORT THE FILE

Latest News

Related Posts