ಬೆಂಗಳೂರು; ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದ ತಹಶೀಲ್ದಾರ್ ಶಶಿಧರ ಬಗಲಿ ಮತ್ತಿತರರ ಅಕ್ರಮಕೂಟವು ಭೂ ಹಿಡುವಳಿದಾರರನ್ನೇ ಬದಲಿಸಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಈ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಅಂತಿಮ ತನಿಖಾ ವರದಿಯು ಬಳ್ಳಾರಿ ಭೂ ಹಗರಣದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ.
ಹಿಡುವಳಿದಾರರನ್ನೆ ಬದಲಿಸಿದ ಅಕ್ರಮಕೂಟ
ಬಳ್ಳಾರಿಯ ಕೌಲ್ ಬಜಾರ್ ಬಳಿಯ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ಸರ್ವೆ ನಂಬರ್ 597/ಬಿ2ಎ1ರ ಪೈಕಿ 3.50 ಎಕರೆ ಜಮೀನು ಹಂಪಮ್ಮ ಎಂಬುವರು ಹಿಡುವಳಿ ಮಾಲೀಕರಾಗಿದ್ದರು. ಅದೇ ರೀತಿ ಸರ್ವೆ ನಂಬರ್ 597/ಬಿ2ಎ3 ರ ಪೈಕಿ 4.00 ಎಕರೆ ವಿಸ್ತೀರ್ಣ ಜಮೀನಿಗೆ ದ್ರಾಕ್ಷಾಯಣಮ್ಮ ಅವರು ಮಾಲೀಕರಾಗಿದ್ದರೆ, ಸರ್ವೆ ನಂಬರ್ 597/ಬಿ2ಎ1ಎ1ರ ಪೈಕಿ 0-50 ಸೆಂಟ್ಸ್ ಜಮೀನಿಗೆ ಖಂಡೋಜಿರಾವ್ ಎಂಬುವರು ಮಾಲೀಕರಾಗಿದ್ದರು. ಹಾಗೆಯೇ ಸರ್ವೇ ನಂಬರ್ 597/ಬಿ2ಎ1ಎ1ರ ಪೈಕಿ 2.88 ಎಕರೆ ಜಮೀನು ಬಾಪಟ್ಲ ಬಾಪುರಾವ್ ಅವರ ಹೆಸರಿನಲ್ಲಿತ್ತು. ಸರ್ವೆ ನಂಬರ್ 597/ಬಿ2ಎ1ಎ2ರ ಪೈಕಿ 0.50 ಸೆಂಟ್ಸ್ ಜಮೀನು ಡಿ ಲಕ್ಷ್ಮಿದೇವಿ, ಎಂ ರುಕ್ಮೀಣಮ್ಮ, ಎ ಪಿ ಮೋಹನ ವೇಲು ಮೊದಲಿಯಾರ್ ಎಂಬುವರ ಹೆಸರಿನಲ್ಲಿತ್ತು.
ಮ್ಯುಟೇಷನ್, ಪಹಣಿಯೇ ಅಕ್ರಮ
ಈ ಜಮೀನುಗಳನ್ನು ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳಾದ ಕೃಷ್ಣಮೂರ್ತಿ, ಪುರಂದರ, ಭಾಗ್ಯಲಕ್ಷ್ಮಿ, ಪರಿಮಳದೇವಿ, ದಿವಂಗತ ಎ ದಿವಾಕರ್ ಅವರ ಪತ್ನಿ ಎ ಆಶಾಲತಾ, ಇವರ ಮಕ್ಕಳಾದ ಎ ವಿ ಎಸ್ ಪ್ರಸಾದ್, ಎ ಬಿ ಎಸ್ ಚಕ್ರವರ್ತಿ, ಎ ಹಿಮಬಿಂದು, ಎ ಕುಮುದಿನಿ ಅವರ ಹೆಸರಿಗೆ ಅಂದಿನ ಸಹಾಯಕ ಆಯುಕ್ತ ಆರ್ ವೆಂಕಟೇಶಲು (ಆಪಾದಿತ 2) ಎಂಬವರು ಕಾನೂನು ರೀತಿ ಸಕಾರಾತ್ಮಕವಲ್ಲದ ಮ್ಯುಟೇಷನ್ ಮಾಡಿ ಪಹಣಿಗಳನ್ನು ಹೊರಡಿಸಿದ್ದರು ಎಂಬುದು ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿಯಿಂದ ತಿಳಿದು ಬಂದಿದೆ.
ಇದನ್ನಾಧರಿಸಿಯೇ ಅಂದಿನ ತಹಶೀಲ್ದಾರ್ ಆಗಿದ್ದ ಶಶಿಧರ ಬಗಲಿ ಅವರು (ಆಪಾದಿತ -3) ಕಂದಾಯ ನಿರೀಕ್ಷಕ ವೀರೇಶ್ ಬಾಬು (ಆಪಾದಿತ -4) ಅವರ ಜತೆ ಸೇರಿಕೊಂಡು ಮತ್ತು ತಮ್ಮ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡು ಅಂದಿನ ಶಾಸಕರೂ ಆಗಿದ್ದ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದಲೇ ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳ ಹೆಸರಿನಲ್ಲಿ ಹಕ್ಕು ಬದಲಾವಣೆ ಮಾಡಿ ಪಹಣಿಗಳನ್ನು ಮಾಡಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.
ಹಕ್ಕು ಬದಲಾವಣೆ ಪರಿಶೀಲಿಸದ ಬಗಲಿ
ಈ ಪಹಣಿಗಳನ್ನುಮಾಡುವ ಪೂರ್ವದಲ್ಲಿ ಈ ಐದು ಸರ್ವೆ ನಂಬರ್‌ಗಳಲ್ಲಿದ್ದ ದೊಟ್ಟು 11-38-05 ಎಕರೆ ವಿವಿಧ ಚೆಕ್ ಬಂದಿಗಳುಳ್ಳ ಜಮೀನುಗಳು ಈ ಹಿಂದೆ ಎ ಲಕ್ಷ್ಮಮ್ಮ ಮತ್ತು ಇತರರ ಹೆಸರುಗಳಲ್ಲಿ ಹಕ್ಕು ಬದಲಾವಣೆಗಳು ಮತ್ತು ಪಹಣಿಗಳು ಇದ್ದವೇ ಅಥವಾ ಇಲ್ಲವೇ ಎಂಬುದನ್ನು ಶಶಿಧರ ಬಗಲಿ ಅವರು ಪರಿಶೀಲಿಸಿಕೊಂಡಿರಲಿಲ್ಲ. ಬದಲಿಗೆ ಸಹಾಯಕ ಆಯುಕ್ತ ವೆಂಕಟೇಶಲು ಅವರ ಕಚೇರಿ ಆದೇಶಗಳನ್ನು ಜಾರಿಗೆ ತರುವ ತರಾತುರಿಯಲ್ಲಿ ಇಲಾಖಾ ನಿಯಮಗಳನ್ನು ಅನುಸರಿಸದೇ ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳು, ಹಾಗೂ ಮೃತ ಮಗನ ಹೆಂಡತಿ, ಅವರ ಮೊಮ್ಮಕ್ಕಳ ಹೆಸರಿಗೆ ಈ 5 ಸರ್ವೇ ನಂಬರ್‌ಗಳಲ್ಲಿನ ಒಟ್ಟು 11-38 ಎಕರೆ ವಿವಿಧ ಚೆಕ್‌ಬಂದಿಗಳುಳ್ಳ ಜಮೀನಿನುಗಳಿಗೆ ಮ್ಯುಟೇಷನ್ ಮತ್ತು ಪಹಣಿಗಳನ್ನು ಮಾಡಿದ್ದರು.
ಸಚಿವ ಬಿ ಶ್ರೀರಾಮುಲು ಅಧಿಕಾರ ದುರುಪಯೋಗ?
ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ಈ ಬೆಳವಣಿಗೆಗಳು ನಡೆಯುತ್ತಿದ್ದ ಹೊತ್ತಿನಲ್ಲಿ ಬಿ ಶ್ರೀರಾಮುಲು ಅವರು (2010) ಶಾಸಕರಾಗಿದ್ದರು. ‘ಇವರು ತಮ್ಮ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ ಬಳ್ಳಾರಿ ನ್ಯಾಯಾಲಯದಲ್ಲಿ (ಒ ಎಸ್ ನಂ 69/2003) 27.25 ಎಕರೆ ಜಮೀನಿಗೆ ಡಿಕ್ರಿ ತನ್ನ ಪರವಾಗಿದೆ, ಇದರಲ್ಲಿ ಬಳ್ಳಾರಿ ಗ್ರಾಮದ ಸರ್ವೆ ನಂಬರ್ 597/ಬಿ231ಎ1ಎ1 ಮತ್ತು ಸರ್ವೆ ನಂ 597/ಬಿ2ಎ3ರ ಜಮೀನುಗಳು ನಕಾಶೆಗಳಂತೆ ಮತ್ತು ತನ್ನ ಅನುಭವದಂತೆ ಹೊಂದಾಣಿಕೆಯಾಗದೇ ಇರುವುದರಿಂದ ತಾನು ಎ ಲಕ್ಷ್ಮಮ್ಮ ಮತ್ತು ಇತರರ ಕಡೆಯಿಂದ ಭೂಮಿ ಮೇಲೆ ಅನುಭವವಿದ್ದಾಗ್ಯೂ ಸರ್ವೆ ಲೆಕ್ಕ ದಾಖಲೆಗಳಲ್ಲಿ ಹಾಗೂ ಆರ್‌ಟಿಸಿಗಳಿಗೆ ತಕ್ಕಂತೆ ವಿಸ್ತೀರ್ಣ ಸರಿ ಇರುವುದಿಲ್ಲ. ಹೀಗಾಗಿ ಮೇಲ್ಕಂಡ ಜಮೀನುಗಳ ಸ್ಥಳ ಪರಿಶೀಲಿಸಿ ಅದರಂತೆ ಉಳಿದ ವಿಸ್ತೀರ್ಣವನ್ನು ತನ್ನ ಹೆಸರಿನಲ್ಲಿ ಪಟ್ಟಾ ಬದಲಾವಣೆ ಮತ್ತು ನಕಾಶೆಗಳನ್ನು ತಯಾರಿಸಿಕೊಡಬೇಕು ಎಂದು ತಹಶೀಲ್ದಾರ್ ಶಶಿಧರ ಬಗಲಿ’ ಅವರಿಗೆ ಮನವಿ ಸಲ್ಲಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಶ್ರೀರಾಮುಲು ಅವರಿಗೆ ಬಗಲಿ ಸಹಕರಿಸಿದ್ಹೇಗೆ?
ಶ್ರೀರಾಮುಲು ಅವರು ಸಲ್ಲಿಸಿದ್ದ ಮನವಿಯನ್ನು ತಹಶೀಲ್ದಾರ್ ಶಶಿಧರ ಬಗಲಿ ಅವರು ಪುರಸ್ಕರಿಸಿದ್ದರು. ಅಂದಿನ ಸರ್ವೆ ಸೂಪರ್‌ವೈಸರ್ ಜಿ ಎಸ್ ಗಡಕೇಶ್ವರ್ ಮತ್ತಿತರರೊಂದಿಗೆ ಅಕ್ರಮಕೂಟ ರಚಿಸಿಕೊಂಡು ದುರುದ್ದೇಶದಿಂದಲೇ ಜಮೀನುಗಳ ವಿಸ್ತೀರ್ಣವನ್ನು ಹೆಚ್ಚಿಸಲಾಗಿತ್ತು.
ಸರ್ವೆ ನಂಬರ್ 57ಬಿ 2 ಎ1ಎ1ಎ1ಕೆ ರಲ್ಲಿ ಬಾಪಟ್ಲ ಬಾಪರಾವ್ ಹೆಸರಿನಲ್ಲಿದ್ದ 2.88.05 ಎಕರೆ ಜಮೀನಿನಲ್ಲಿ ಭೌತಿಕವಾಗಿ ಯಾವುದೇ ಹೆಚ್ಚಿಗೆ ಜಮೀನು ಇರದಿದ್ದರೂ ಇದೇ ಜಮೀನಿನ ಪಕ್ಕದಲ್ಲಿದ್ದ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ಅರುಣ ಅವರ (ಸರ್ವೆ ನಂಬರ್ 597ಬಿ2ಎ1ಎ1ಸಿ ) 17.25 ಎಕರೆ ಜಮೀನಿನಲ್ಲಿನ 5.69 ಎಕರೆ ಜಮೀನನ್ನು ತೆಗೆದುಕೊಳ್ಳಲಾಗಿತ್ತು.
‘ಅಂದರೆ ಸದರಿ ಜಮೀನಿನ ನಕ್ಷೆ ಮೇಲೆ ಓವರ್ ಲ್ಯಾಪಿಂಗ್ ಮಾಡಿ ಸರ್ವೆ ನಂಬರ್ 597ಬಿ2ಎ1ಎ1ಎ1ಕೆ ರ ಜಮೀನಿನ ನಕ್ಷೆಯಲ್ಲಿ 2.88.05ಕ್ಕಿಂತ 8.57 ಎಕರೆ ಜಮೀನು ಹೆಚ್ಚಿಗೆ ಇದೆ ಎಂದು ಅಂದರೆ 5.69 ಎಕರೆ ಜಮೀನು ಹೆಚ್ಚಾಗಿದೆ ಎಂದು ವಿಸ್ತೀರ್ಣ ಹೆಚ್ಚಿಸಿರುತ್ತಾರೆ,’ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.