ಪಲಿಮಾರು, ಮುರುಘಾ, ಶೃಂಗೇರಿ, ಆದಿಚುಂಚನಗಿರಿ ಸೇರಿ 178 ಮಠಗಳಿಗೆ 108.24 ಕೋಟಿ ರು ಅನುದಾನ

photo credit;indiatoday

ಬೆಂಗಳೂರು; ಅಕ್ಷರ ದಾಸೋಹದ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಪರಿಹಾರ ನೀಡದೇ ಅವರನ್ನು ಬೀದಿಗೆ ತಳ್ಳಿರುವ ರಾಜ್ಯ ಬಿಜೆಪಿ ಸರ್ಕಾರವು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದ ವಿವಿಧ ಸಮಾಜಗಳ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು, ಟ್ರಸ್ಟ್‌ಗಳಿಗೆ 142.59 ಕೋಟಿ ರು. ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.

 

ಈ ಪೈಕಿ 178 ಮಠಗಳಿಗೆ ಒಟ್ಟು 108.24 ಕೋಟಿ ರು., 59 ದೇವಸ್ಥಾನಗಳಿಗೆ 21.35 ಕೋಟಿ, ಸಂಘ ಸಂಸ್ಥೆ, ಟ್ರಸ್ಟ್‌ಗಳಿಗೆ 13.00 ಕೋಟಿ ರು. ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿ 2022ರ ಆಗಸ್ಟ್‌ 11ರಂದು ಆದೇಶ ಹೊರಡಿಸಿದೆ. ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಫಲಿಮಾರು ಮಠ, ಆದಿಚುಂಚನಗಿರಿ ಶಾಖಾ ಮಠ, ವಿರಕ್ತ ಮಠಗಳು, ಜಂಗಮ ಮಠಗಳು, ರಂಭಾಪುರಿ, ವ್ಯಾಸರಾಜ, ಶೃಂಗೇರಿ ಶಂಕರಮಠ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌, ಸಿದ್ಧಾರೂಢ ಮಠ, ರಾಘವೇಂದ್ರಸ್ವಾಮಿ ಮಠ, ಬೆಕ್ಕಿನ ಕಲ್ಮಠ, ಮುರುಘರಾಜೇಂದ್ರ ಮಠ ಸೇರಿದಂತೆ ಒಟ್ಟು 178 ಮಠಗಳಿಗೆ ಅನುದಾನ ನೀಡಲು ಆದೇಶ ಹೊರಡಿಸಿದೆ.

 

ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಆದೇಶದ ಪ್ರತಿ

 

ಬಿಜೆಪಿ ರಾಷ್ಟ್ರೀಯ ಘಟಕದ ಧುರೀಣರು ಮುರುಘಾ ಮಠಕ್ಕೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದರ ಬೆನ್ನಲ್ಲೇ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ಗೆ 5.00 ಕೋಟಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಚನ್ನಬಸವೇಶ್ವರ ಮಹಾಮಠಕ್ಕೆ 5 ಕೋಟಿ ರು. ನೀಡಿದೆ. ಉಳಿದ ಮಠಗಳಿಗಿಂತಲೂ ಅತಿ ಹೆಚ್ಚು ಅನುದಾನವನ್ನು ಈ ಎರಡೆಊ ಮಠಗಳಿಗೆ ಒದಗಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಉಡುಪಿಯ ಕುಂಜಾರುಗಿರಿಯ ದುರ್ಗಾ ಬೆಟ್ಟದ ಪರಿಸರದಲ್ಲಿ ಮಧ್ವವನ ಅಭಿವೃದ್ಧಿಗಾಗಿ ಫಲಿಮಾರು ಮಠದ ಶ್ರೀ ರಾಮಾಂಜನೇಯ ಪ್ರತಿಷ್ಠಾನ, ಚಿಕ್ಕಮಗಳೂರಿನ ದೊಡ್ಡಕುರುಬರಹಳ್ಳಿಯ ಶ್ರೀ ಬಸವ ತತ್ವ ಪೀಠಕ್ಕೆ ತಲಾ 3.00 ಕೋಟಿ ರು. ಒದಗಿಸಿದೆ.

 

 

ಒಂದು ಕೋಟಿ ಅನುದಾನ ಪಡೆದ ಮಠಗಳ ಪಟ್ಟಿ

 

ಕೊಪ್ಪಳದ ರಾಘವೇಂದ್ರ ಸ್ವಾಮಿಗಳ ಮಠ, ನರಗುಂದ ತಾಲೂಕಿನ ದೊರೆಸ್ವಾಮಿ ಮಠ, ಪುಣ್ಯಾರಣ್ಯ, ಪತ್ರಿವನಮಠ, ತಿಪಟೂರಿನ ದಸರಿಘಟ್ಟದ ಆದಿಚುಂಚನಗಿರಿ ಶಾಖಾ ಮಠ, ಶ್ರೀ ಶೃಂಗೇರಿ ಶಿವಗಂಗಾ ಶಾರದಾ ಪೀಠ, ಚಿಕ್ಕನಾಯಕನಹಳ್ಳಿಯ ತಮ್ಮಡಿಹಳ್ಳಿ ಮಠ, ಉಡುಪಿಯ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠ, ದಾವಣಗೆರೆಯ ಹಳೇ ಕುಂದುವಾಡದ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿ ಮಠ, ಧಾರವಾಡದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್‌, ಧಾರವಾಡ ಜಿಲ್ಲೆಯ ಸಿದ್ದರೂಢ ಮಠ, ಬೆಂಗಳೂರು ಹನುಮಂತ ನಗರದ ಕುಂದಾಪುರ ವ್ಯಾಸರಾಜ ಮಠ, ಬೆಂಗಳೂರು ಗಿರಿ ನಗರದ ಭಂಡಾರಕೆರೆ ಮಠ, ಬೆಳಗಾವಿಯ ಸವದತ್ತಿ ತಾಲೂಕಿನ ಸಂಬಯ್ಯನಮಠ, ಬೆಳಗಾವಿಯ ಶ್ರೀ ಶೂನ್ಯಸಂಪಾದನ ಮಠ, ಹೊಳೆನರಸೀಪುರದ ಎಡತೊರೆ ಶ್ರೀ ಯೋಗನಂದೇಶ್ವರ ಸರಸ್ವತಿ ಮಠ, ಮೈಸೂರು ಟಿ ನರಸೀಪುರದ ಶ್ರೀ ವ್ಯಾಸರಾಜ ಮಠ ಸೋಸಲೆ, ಮೈಸೂರಿನ ಮಹಾಲಿಂಗೇಶ್ವರ ಮಠ, ಮಾಗಡಿಯ ಶ್ರೀ ಜಂಗಮ ಮಠ, ಹಾವೇರಿ ಸವಣೂರಿನ ರೇವಣಸಿದ್ದೇಶ್ವರ ಮಠ, ಶಿಗ್ಗಾಂವಿಯ ವಿರಕ್ತ ಮಠ, ಬಂಕಾಪುರದ ಅರಳಳ್ಳೇ ಮಠ, ಸವಣೂರಿನ ಕಲ್ಮಠ, ಹಾವೇರಿಯ ಹುಕ್ಕೇರಿ ಮಠ, ಹಾನಗಲ್‌ನ ಶ್ರೀ ಗುರುನಂಜೇಶ್ವರ ಮಠ, ದೊಡ್ಡಹುಣಸೆ ಕಲ್ಮಠ, ವಿರಕ್ತಮಠ, ಸಿದ್ದಲಿಂಗೇಶ್ವರ ಕಲ್ಮಠ, ಶ್ರೀ ಹೊಸಮಠಕ್ಕೆ ತಲಾ 1 ಕೋಟಿ ರು., ಅನುದಾನ ನೀಡಿ ಆದೇಶ ಹೊರಡಿಸಿದೆ.

 

 

ತುಮಕೂರು ಜಿಲ್ಲೆಯ ತಿಪಟೂರಿನ ಷಡಕ್ಷರ ಮಠ, ಬೆಂಗಳೂರಿನ ತಿಪ್ಪಶೆಟ್ಟಿ ಮಠ, ಹುಕ್ಕೇರಿ ತಾಲೂಕಿನ ಶ್ರೀ ಹಾವೇರಿ ಮಠ, ಬೆಳಗಾವಿ ಅಥಣಿಯ ಶ್ರೀ ಶಿವಯೋಗಿ ಮುರಘೇಂದ್ರ ಮಠ (ಗಚ್ಚನಮಠ), ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ 2 ಕೋಟಿ ರು. ಅನುದಾನ ಒದಗಿಸಿದೆ.

 

ಶ್ರೀ ಗುರುಸಿದ್ದರಾಮೇಶ್ವರ ರಾಜಯೋಗ ಸುಕ್ಷೇತ್ರ ಶ್ರೀಮದ್‌ ಯಳನಾಡು 1 ಕೋಟಿ ರು., ಶಿರಸಿ ತಾಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನ (ರಥ ನಿರ್ಮಾಣ) 3 ಕೋಟಿ ರು., ವಿಜಯಪುರದ ಶ್ರೀ ವ್ಯಾಸಮಧ್ವ ಸಂಸ್ಕೃತ ವಿದ್ಯಾಲಯಕ್ಕೆ 25 ಲಕ್ಷ ರು.ಅನುದಾನ ಒದಗಿಸಿದೆ.

 

ಹಾಗೆಯೇ ಉಡುಪಿಯ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ ಗೀತ ಮಂದಿರಕ್ಕೆ 60 ಲಕ್ಷ ರು., ಎಸ್‌ಜಿಎಸ್‌ಬಿವಿ ವಿರಕ್ತ ಮಠ ಮಹಾಗಾಂವಕ್ಕೆ 50 ಲಕ್ಷ ರು., ಪಂಡಿತ್‌ ಬಸವರಾಜ ರಾಜಗುರು ಸಭಾಭವನಕ್ಕೆ 1 ಕೋಟಿ ರು., ಬೆಂಗಳೂರಿನ ಬಸವನಗುಡಿಯಲ್ಲಿರುವ ದ್ವೈತ ವೇದಾಂತ ಅಧ್ಯಯನ ಮತ್ತು ಸಂಶೋಧನ ಪ್ರತಿಷ್ಠಾನ, ಶಂಕರಪುರಂನ ಶ್ರೀ ಜಯಸತ್ಯಪ್ರಮೋದ ನಿಧಿ, ಬೆಂಗಳೂರಿನ ಶ್ರೀ ವಿಶ್ವೇಶ್ವರ ತೀರ್ಥ ಸಂಶೋಧನಾ ಕೇಂದ್ರ, ಮೈಸೂರಿನ ಉತ್ತನಹಳ್ಳಿಯ ಭಾರತೀಯ ಯೋಗಧಾಮಕ್ಕೆ ತಲಾ 1 ಕೋಟಿ ರು. ಅನುದಾನ ನೀಡಿ ಆದೇಶ ಹೊರಡಿಸಿದೆ.

 

ವಿವಿಧ ದೇವಾಲಯಗಳ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲು ಯಾವುದೇ ತಕರಾರು ಇಲ್ಲದೇ ಸಹಮತಿ ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆಯು ವಿಶೇಷ ಅನುದಾನದಡಿಯಲ್ಲಿ 116 ಕೋಟಿ ರು. ಬಿಡುಗಡೆ ಮಾಡಿ 2022ರ ಜುಲೈ 21ರಂದು ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts