ಬೆಂಗಳೂರು; ನಕಲಿ ಪ್ರವೇಶ ಪತ್ರ, ಎಲೆಕ್ಟ್ರಾನಿಕ್ ಡಿವೈಸ್, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರದಲ್ಲಿ ಅನಧಿಕೃತವಾಗಿ ಮೊಬೈಲ್ ದೂರವಾಣಿ ಹೊಂದಿರುವುದು ಸೇರಿದಂತೆ ಇನ್ನಿತರೆ ದುರಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 2020-21ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು 45 ಅಭ್ಯರ್ಥಿಗಳನ್ನು ಅನರ್ಹಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
2020-21ನೇ ಸಾಲಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ನೇಮಕಾತಿ ಪರೀಕ್ಷೆ, ಇಲಾಖೆ ಪರೀಕ್ಷೆಗಳಲ್ಲಿ ನಡೆದ ದುರಾಚಾರ ಪ್ರಕರಣಗಳ ವಿಚಾರಣೆಯಲ್ಲಿ ಅನರ್ಹಗೊಳಿಸಿರುವ ಪ್ರಕರಣಗಳ ಕುರಿತು ಕೆಪಿಎಸ್ಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಥಮದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳು, 2020ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಲ್ಲಿ ವಿವಿಧ ರೀತಿಯ ಅಕ್ರಮಗಳನ್ನು ಎಸಗಿರುವ ಆಭ್ಯರ್ಥಿಗಳ ಪಟ್ಟಿಯನ್ನೂ ವರದಿಯಲ್ಲಿ ಪ್ರಕಟಿಸಿರುವುದು ತಿಳಿದು ಬಂದಿದೆ.
ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆ ( 2019ರ ಫೆ.11ರಂದು ಹೊರಡಿಸಿದ್ದ ಅಧಿಸೂಚನೆ)ಯಲ್ಲಿ ನಿಖಿಲ ಕಲಾಲ್, ಅಶ್ಚಿನಿ, ರೇಣುಕ ಕದಮ್, ರಾಮಚಂದ್ರ ಮಕ್ಕಳಗೇರಿ, ಸಂತೋಷ್ ಕೂಗೆ, ಪ್ರಕಾಶ್ ಮಾದಿಗಾರ ಎಂಬುವರು ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂತ್ ಡಿವೈಸ್, ಮೈಕ್ರೋಚಿಪ್ ಬಳಸಿದ್ದರು. ಈ ಕುರಿತು ನಡೆಸಿದ್ದ ವಿಚಾರಣೆ ವೇಳೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿರುವುದು ಸಾಬೀತಾಗಿತ್ತು. ಹೀಗಗಿ ಈ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಯೋಗವು ಆದೇಶಿಸಿರುವುದು ವರದಿಯಿಂದ ಗೊತ್ತಾಗಿದೆ.
2018ನೇ ಸಾಲಿನಲ್ಲಿ ರಾಜ್ಯದ ವಿವಿಧ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇದ್ದ ಪ್ರಥಮದರ್ಜೆ ಸಹಾಯಕರ ಹುದ್ದೆಗಳಿಗೆ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಲ್ಲಿಕಾರ್ಜುನ ಬಸಪ್ಪ, ಮಮತಾ ಪೂಜಾರ್, ಪವಿತ್ರ ಎಚ್, ಯಲ್ಲಪ್ಪ ಬಿದ್ದಾಡೆಪ್ಪ ಎಂಬುವರು ನಕಲಿ ಪ್ರವೇಶ ಪಡೆದು ಅನಧಿಕೃತ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದರು. ಹೀಗಾಗಿ ಇವರನ್ನು ಪರೀಕ್ಷೆಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಿದೆ.
ಮಹೇಶ್‌ರಾವ್ ಸಾಬ್ ಗೌಡರ್, ಶ್ರೀನಿವಾಸ್, ರಘು ಎನ್. ಸಂತೋಷ್, ನಿಕಿತ್ ಎ ಕೆ, ವಿನಯ್ ಸಿ, ಸಾಗರ್ ಎಂ ಎಸ್, ರಶ್ಮಿ ಎನ್ ಎಸ್, ರಾಚಪ್ಪ ಜಿ ಜಿನ್ನೂರ್, ಹೊಳೆಪ್ಪ ಬಾಗೇವಾಡಿ, ವೇಣುಗೋಪಾಲ್, ಮಲ್ಲಿಕ್ ಸಾಬ್ ನದಾಫ್, ಸುರೇಶ್ ಧರಪ್ಪ, ರಾಮಪ್ಪಹೆರಕಲ್, ಬಸವರಾಜು ಕುಂಬಾರ್, ರಾಮಪ್ಪ ಸಿದ್ದಪ್ಪ ಬೊಮ್ಮನಾಳ್, ಅಶೋಕ್ ದರೆಪ್ಪ ಹಂಡೆನವರ್, ಕೃಷ್ಣ ದರೆಪ್ಪ ಹಂಡೆನವರ್, ಕರೆಪ್ಪ ಹನಮಂತ್ ತುಬಚಿ, ಮುಶ್ತಾಕ್ ಕೆ ವಾಟಿನಾಯಿಕ್, ವೆಂಕಟೇಶ್ ಜಿನ್ನೂರ್ ಎಂಬುವರು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಇವರ ಅಭ್ಯರ್ಥಿತ್ವವನ್ನು ಆಯೋಗವು ರದ್ದುಪಡಿಸಿರುವುದು ತಿಳಿದು ಬಂದಿದೆ.
ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಗೆ ಹಾಜರಾಗಿದ್ದ ಅಂಬ್ರೇಶ್ ಎಂಬಾತ ಓಎಂಆರ್ ಉತ್ತರ ಪತ್ರಿಕೆಯನ್ನು ಸಂವೀಕ್ಷಕರಿಗೆ ಹಿಂದಿರುಗಿಸದೇ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ಅಲ್ಲದೆ ಅದನ್ನು ಹರಿದುಹಾಕಿದ ನಂತರ ಒಎಂಆರ್ ಹಾಳೆಯನ್ನು ಹಿಂದಿರುಗಿಸಿದ್ದ. ಹೀಗಾಗಿ ಈತನನ್ನು ಮೂರು ಪರೀಕ್ಷೆಗಳಿಗೆ ಡಿಬಾರ್ ಮಾಡಿ ಆದೇಶಿಸಲಾಗಿದೆ.
ಚಂದ್ರಕಲಾ ಹಳ್ಳಿ, ಯಲ್ಲಾಲಿಂತಗ ಆರ್ ಕಂಕನವಾಡಿ ಎಂಬುವರು ಅಸಲಿ ಅಭ್ಯರ್ಥಿಯಾದ ರೇಷ್ಮಾ ರಾಥೋಡ್ ಅವರಿಗೆ ಹಂಚಿಕೆಯಾಗಿದ್ದ ನೋಂದಣಿ ಸಂಖ್ಯೆಯಡಿಯಲ್ಲಿ ಪರೀಕ್ಷಾ ಮೇಲ್ವಿಚಾರಕರಿಗೆ ಮುಚ್ಚಳಿಕೆ ಪತ್ರ ನೀಡಿ ಆಯೋಗದಿಂದ ಜಾರಿಮಾಡಲಾಗಿದ್ದ ಪ್ರವೇಶ ಪತ್ರದ ಹೊರತಾಗಿ ನಕಲಿ ಪ್ರವೇಶ ಪತ್ರದೊಂದಿಗೆ ಹಾಜರಾಗಿದ್ದರು. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.
2020ರ ಪ್ರಥಮ ಇಲಾಖಾ ಪರೀಕ್ಷೆಯಲ್ಲಿ ಕಾವ್ಯಾ ಕೃಷ್ಣ ಸುಳ್ಳದ, ಸಂತೋಷ್‌ಕುಮಾರ್, ಮಲ್ಲಪ್ಪ ಭಗವತಿ, ಶಿವಮ್ಮ, ಶೋಭಾ ಪೂಜೇರಿ, ಶಫೀಉಲ್ಲಾ, ನವೀನ್ ಮಾರುತಿ, ಮಾರುತಿ ನಿಂಗಪ್ಪ ಎಂಬವರು ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿದ್ದರು. ಹೀಗಾಗಿ ಇವರ ಇವರ ಫಲಿತಾಂಶವನ್ನು ರದ್ದುಗೊಳಿಸಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಕಳೆದ 5 ವರ್ಷಗಳ ಹಿಂದೆ ನಡೆಸಿದ್ದ ಸಹಾಯಕ ಅಭಿಯಂತರರು, ಎಫ್‌ಡಿಎ, ಎಸ್‌ಡಿಎ ಪರೀಕ್ಷೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ದೈಹಿಕ ಶಿಕ್ಷಕರ ಹುದ್ದೆಗಳ ಪರೀಕ್ಷೆಯಲ್ಲಿಯೂ ಬ್ಲೂಟೂತ್ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಹಲವು ಅಭ್ಯರ್ಥಿಗಳು ಅಕ್ರಮ ನಡೆಸಿದ್ದರು ಎಂಬುದು ಬಹಿರಂಗವಾಗಿತ್ತು.
ಎಲೆಕ್ಟ್ರಾನಿಕ್ ಡಿವೈಸ್ ಬಳಸಿದ್ದನ್ನು ಅಭ್ಯರ್ಥಿಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರೂ ಇದುವರೆಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ತನಿಖಾ ವರದಿ ಸಲ್ಲಿಸಿಲ್ಲ. ಕರ್ನಾಟಕ ಲೋಕಸೇವಾ ಆಯೋಗವು 2017ರ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಸಿದ್ದ ಎಸ್‌ಡಿಎ, ಎಫ್‌ಡಿಎ ಹಾಗೂ 2017ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಸಿದ್ದ ಸಹಾಯಕ ಅಭಿಯಂತರರ ಪರೀಕ್ಷೆಗಳಲ್ಲಿಯೂ ಬೇರೆ ವ್ಯಕ್ತಿಗಳ ಸಹಾಯದಿಂದ ಎಲೆಕ್ಟ್ರಾನಿಕ್ ಡಿವೈಸ್ ಬಳಸಲಾಗಿತ್ತು ಎಂದು ವಿಚಾರಣೆಯಲ್ಲಿ ಕೆಲ ಅಭ್ಯರ್ಥಿಗಳು ಸ್ವ ಇಚ್ಛಾ ಹೇಳಿಕೆಯನ್ನೂ ನೀಡಿದ್ದನ್ನು ಸ್ಮರಿಸಬಹುದು.