ಬೆಂಗಳೂರು; ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ 19 ರೋಗಿಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ಆಮ್ಲಜನಕ ಪೂರೈಕೆಯಾಗುವಂತೆ ನೋಡಿಕೊಳ್ಳದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ನಿರ್ದೇಶಕರು ಸೇರಿದಂತೆ ಬೋಧಕ, ಬೋಧಕತೇರ ಸಿಬ್ಬಂದಿ ವಿಫಲರಾಗಿದ್ದರು ಎಂಬ ಸಂಗತಿಯನ್ನು ನಿವೃತ್ತ ನ್ಯಾಯಮೂರ್ತಿ ಬಿ ಎ ಪಾಟೀಲ್ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗವೂ ಸಾಬೀತುಪಡಿಸಿದೆ.
ಆಮ್ಲಜನಕ ಕೊರತೆಯಿಂದಾಗಿ ಕೋವಿಡ್-19 ರೋಗಿಗಳು ದಾರುಣವಾಗಿ ಮರಣ ಹೊಂದಿದ ಘಟನೆಗೆ ಸಂಬಂಧಿಸಿದಂತೆ ನೀಡಿರುವ ತನಿಖಾ ವರದಿಯಲ್ಲಿ ಚಾಮಜರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ ಸಂಜೀವ್ ಜಿ ಎಂ ಸೇರಿದಂತೆ ಬೋಧಕ, ಬೋಧಕೇತರ ವಿಭಾಗದ 10 ಮಂದಿ ನಿರ್ಲಕ್ಷ್ಯ ವಹಿಸಿದ್ದರು ಎಂಬುದು ಪ್ರಸ್ತಾಪವಾಗಿರುವುದು ಇದೀಗ ಮುನ್ನೆಲೆಗೆ ಬಂದಿದೆ.
ಅಲ್ಲದೆ ಈ ಘಟನೆಗೆ ಯಾವುದೇ ಒಬ್ಬ ವ್ಯಕ್ತಿಯ ನಿರ್ಲಕ್ಷ್ಯ ಕಾರಣವಲ್ಲ. ಒಟ್ಟು ವ್ಯವಸ್ಥೆಯಲ್ಲಿನ ಕುಂದುಕೊರತೆಗಳೇ ಕಾರಣ ಎಂದು ಚಿಮ್ಸ್‌ನ ನಿರ್ದೇಶಕರು ನೀಡಿರುವ ಸಮಜಾಯಿಷಿಯು ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯಗಳತ್ತ ಮತ್ತೊಮ್ಮೆ ಬೊಟ್ಟು ಮಾಡಿ ತೋರಿಸಿದಂತಾಗಿದೆ. 2021ರ ಅಕ್ಟೊಬರ್ 4ರಂದು ನೀಡಿರುವ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾದ ಕೆಲ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ ತನಿಖಾ ವರದಿಯಲ್ಲಿ ಪ್ರಸ್ತಾಪಿಸಿರುವ ಡಾ ಸಂಜೀವ್ ಜಿ ಎಮ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಸಹಮತಿ ವ್ಯಕ್ತಪಡಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಕೆಸಿಎಸ್‌ಆರ್ ನಿಯಮ 13ರ ಪ್ರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅನಧಿಕೃತ ಟಿಪ್ಪಣಿಯನ್ನು ಹೊರಡಿಸಿದೆ.
ಆಮ್ಲಜನಕ ಕೊರತೆಯಿಂದಾಗಿ ಚಾಮರಾಜನಗರದಲ್ಲಿ ಸಾವನ್ನಪ್ಪಿದವರ ನೈಜ ಸಂಖ್ಯೆಯನ್ನು ಸರ್ಕಾರವು ಮುಚ್ಚಿಟ್ಟಿರುವ ಬೆನ್ನಲ್ಲೇ ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಬಿ ಎ ಪಾಟೀಲ್ ನೇತೃತ್ವದ ಆಯೋಗದ ತನಿಖಾ ವರದಿಯು ಮುನ್ನೆಲೆಗೆ ಬಂದಿದೆ.
’10 ಮಂದಿಯ ಪೈಕಿ ಚಿಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 6 ಮಂದಿ ಖಾಯಂ ನೌಕರರಾಗಿದ್ದರೆ ಉಳಿದ 04 ಮಂದಿ ಗುತ್ತಿಗೆ/ತಾತ್ಕಾಲಿಕ ನೌಕರರಾಗಿದ್ದಾರೆ. ಇವರೆಲ್ಲರೂ ಸಂಸ್ಥೆಯ ಸೇವೆಯಿಂದ ಬಿಡುಗಡೆಗೊಂಡಿದ್ದಾರೆ. ಸಂಸ್ಥೆಯಿಂದ ರಾಜೀನಾಮೆ/ಅವಧಿ ಪೂರ್ಣಗೊಂಡು ಬಿಡುಗಡೆ ಹೊಂದಿರುವ ಗುತ್ತಿಗೆ/ತಾತ್ಕಾಲಿಕ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯವೆಂದು,’ ಚಿಮ್ಸ್‌ನ ನಿರ್ದೇಶಕರು ಸರ್ಕಾರಕ್ಕೆ ತಿಳಿಸಿದ್ದಾರೆ ಎಂಬುದು ಗೊತ್ತಾಗಿದೆ.
ಒಬ್ಬ ವ್ಯಕ್ತಿಯ ನಿರ್ಲಕ್ಷ್ಯವಲ್ಲ
ಈ ದುರಂತದ ಬಗ್ಗೆ ತನಿಖಾ ಆಯೋಗವು ನೀಡಿದ್ದ ವರದಿ ಆಧರಿಸಿ ಚಾಮರಾಜನಗರ ವೈದ್ಯಕೀಯ ಸಂಸ್ಥೆಯ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ನೋಟೀಸ್ ಜಾರಿಗೊಳಿಸಿತ್ತು. ಇದಕ್ಕೆ ಉತ್ತರಿಸಿದ್ದ ನಿರ್ದೇಶಕ ಡಾ ಸಂಜೀವ್ ಜಿ ಎಂ ಅವರು ಈ ಘಟನೆಗೆ ತಾವೊಬ್ಬರೇ ಕಾರಣರಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
‘ಸದರಿ ಘಟನೆ ಯಾವುದೇ ಒಬ್ಬ ವ್ಯಕ್ತಿಯ ನಿರ್ಲಕ್ಷ್ಯತೆಯಿಂದ ಜರುಗಿದ ಘಟನೆಯಲ್ಲ. ಒಟ್ಟು ವ್ಯವಸ್ಥೆಯಲ್ಲಿನ ಕುಂದುಕೊರತೆಗಳಿಂದಾಗಿ ಅನಿರೀಕ್ಷಿತವಾಗಿ ದುರದೃಷ್ಟವಶಾತ್ ಜರುಗಿದೆ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮತ್ತು ಸದ್ಭಾವನೆಯಿಂದ ನಿರ್ವಹಿಸಿರುತ್ತೇನೆ. ಸಂಸ್ಥೆಯ ಮುಖ್ಯಸ್ಥನಾಗಿದ್ದೇನೆ ಎನ್ನುವ ಒಂದೆ ಕಾರಣಕ್ಕಾಗಿ ನನ್ನನ್ನೇ ಪೂರ್ಣ ಹೊಣೆಗಾರನ್ನಾಗಿಸಿವುದು ನ್ಯಾಯಸಮ್ಮತವಲ್ಲ,’ ಎಂದು ತಮ್ಮ ವಿರುದ್ಧ ಆರೋಪಗಳನ್ನು ಅಲ್ಲಗಳೆದು 2022ರ ಏಪ್ರಿಲ್ 26 ರಂದು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ತನಿಖಾ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದ ಕೋವಿಡ್ 19 ರೋಗಿಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ಆಮ್ಲಜನಕ ಪೂರೈಕೆಯಾಗುವಂತೆ ನೋಡಿಕೊಳ್ಳದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ವಿಫಲರಾಗಿರುವ ಬಗ್ಗೆ ಸಂಸ್ಥೆಯ ನಿರ್ದೇಶಕ ಡಾ ಸಂಜೀವ್ ಜಿ ಎಂ ಅವರಿಗೆ ಕಾರಣ ಕೇಳುವ ನೋಟೀಸ್ ಹೊರಡಿಸಿತ್ತು.
ಇದೇ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ರಿಟ್ ಅರ್ಜಿ (ಸಂಖ್ಯೆ 8773/2021)ಗೆ ಸಂಬಂಧಿಸಿದಂತೆ ಮರಣ ಹೊಂದಿದ ವ್ಯಕ್ತಿಗಳ ವಾರಸುದಾರರಿಗೆ 15.00 ಲಕ್ಷ ರು. ಪರಿಹಾರ ಹಾಗೂ ಆ ಕುಟುಂಬದ ಅರ್ಹ ವ್ಯಕ್ತಿಗೆ ಉದ್ಯೋಗ ನೀಡುವ ಕುರಿತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಚಾಮರಾಜನಗರ ದುರ್ಘಟನೆ ಬಗ್ಗೆ ಐದು ಬಗೆಯ ತನಿಖೆಗಳು ಆರಂಭವಾಗಿವೆ. ಐಎಎಸ್ ಅಧಿಕಾರಿ ಶಿವಯೋಗಿ ಸಿ. ಕಳಸದ ಪ್ರಾಥಮಿಕ ತನಿಖೆ ನಡೆಸಿದ್ದರು. ಆರೋಗ್ಯ ಇಲಾಖೆ ಆಂತರಿಕ ತನಿಖೆ ನಡೆಸಿತ್ತು. ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ತನ್ನದೇ ಪೊಲೀಸ್ ವಿಭಾಗಕ್ಕೆ ತನಿಖೆಯ ಹೊಣೆ ಒಪ್ಪಿಸಲಾಗಿತ್ತು. ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.