ಬೆಂಗಳೂರು; ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯದ ಹಾಲಿ ಇರುವ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಟೆಂಡರಿಗಿಟ್ಟ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿರುವುದು ಸೇರಿದಂತೆ ಹಲವು ಪ್ರಮುಖ ಅಂಶಗಳಿಗೆ ಸಚಿವ ಸಂಪುಟದ ಅನುಮೋದನೆಯಿಲ್ಲದೆಯೇ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಛಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮೂರು ತಿಂಗಳ ಅಂತರದಲ್ಲೇ ಕಟ್ಟಡ ನವೀಕರಣ, ಹೊಸ ಕಟ್ಟಡ ಕಾಮಗಾರಿ ಪ್ರಕ್ರಿಯೆಗಳಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ; ED/137/HPU/2021-ED) ‘ದಿ ಫೈಲ್’ಗೆ ಲಭ್ಯವಾಗಿವೆ.
ತಮ್ಮ ಸಂಬಂಧಿಯೊಬ್ಬರ ಸೇರಿದ ಕಟ್ಟಡ ನಿರ್ಮಾಣ ಕಂಪನಿಯೊಂದಕ್ಕೆ ವಿಶ್ವವಿದ್ಯಾಲಯದ ಕಾಮಗಾರಿ ಗುತ್ತಿಗೆ ನೀಡುವ ಉದ್ದೇಶದಿಂದಲೇ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಗುರುತರ ಆಪಾದನೆಗೂ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಗುರಿಯಾಗಿದ್ದಾರೆ.
ಟೆಂಡರಿಗಿಟ್ಟ ಮೊತ್ತಕ್ಕಿಂತ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಿದ್ದರೂ ಅದಕ್ಕೆ ಉನ್ನತ ಶಿಕ್ಷಣ ಇಲಾಖೆಯು ಯಾವುದೇ ಸೂಕ್ತ ಸಮರ್ಥನೆಯನ್ನೂ ನೀಡಿಲ್ಲ. ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಪ್ರಮುಖ ಅಂಶಗಳಿಗೆ ಅನುಮೋದನೆಯನ್ನೂ ಕೋರಿಲ್ಲ. ಅಂದಾಜು ಪಟ್ಟಿಗಳಿಗೆ ಸಕ್ಷಮ ಅಧಿಕಾರಿಯ ಸಹಿಯೊಂದಿಗೆ ದೃಢೀಕರಣವೂ ಆಗಿಲ್ಲ. ಒಟ್ಟಾರೆ ಇಡೀ ಕಾಮಗಾರಿ ಸಂಬಂಧ ನಡೆದಿರುವ ಮೂಲ ಪ್ರಕ್ರಿಯೆಗಳಲ್ಲಿಯೇ ಅಕ್ರಮಗಳು ನಡೆದಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.
ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ನೃಪತುಂಗ ವಿಶ್ವವಿದ್ಯಾಲಯ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ವರ್ಗಾಯಿಸಿರುವುದೇ ಅಕ್ರಮ ನಡೆದಿದೆ ಎಂಬ ಶಂಕೆಗೆ ಮೂಲ ಕಾರಣ. ವಿಶ್ವವಿದ್ಯಾಲಯದ ಹಾಲಿ ಇರುವ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ವಹಿಸಿ 2022ರ ಜನವರಿ 5ರಂದೇ ಸರ್ಕಾರವು ಆದೇಶ ಹೊರಡಿಸಿರುವುದು ತಿಳಿದು ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ನೇರವಾಗಿ ಕಾಮಗಾರಿ ವಹಿಸಿರುವುದರ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಸ್ವಜನಪಕ್ಷಪಾತವಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಯನ್ನು ಬೇರೊಂದು ಇಲಾಖೆಯ ಇಂಜಿನಿಯರ್ ಘಟಕಕ್ಕೆ ವಹಿಸಬೇಕಾದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) 199ರ ಕಲಂ 4(ಜಿ) ವಿನಾಯಿತಿ ಪಡೆದು ಕ್ರಮವಹಿಸಬೇಕು. ಇದಾದ ನಂತರ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಸಲ್ಲಿಸುವ ಪ್ರಸ್ತಾವನೆಗೆ 4(ಜಿ) ವಿನಾಯಿತಿ ಕೋರುವ ಅಂಶವನ್ನು ಉಲ್ಲೇಖಿಸಬೇಕು.
4(ಜಿ) ಅನುಮೋದನೆ ಪಡೆದಿಲ್ಲ
ಆದರೆ ನೃಪತುಂಗ ವಿಶ್ವವಿದ್ಯಾಲಯದ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧ ಈ ಯಾವ ಪ್ರಕ್ರಿಯೆಗಳನ್ನೂ ನಡೆಸದೆಯೇ ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ವರ್ಗಾಯಿಸಲಾಗಿದೆ.
‘ಕಾಮಗಾರಿಯನ್ನು ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ 199ರ ಕಲಂ 4(ಜಿ) ರಡಿ ವಿನಾಯಿತಿ ಪಡೆದು ಕ್ರಮವಹಿಸಬೇಕಿರುತ್ತದೆ. ತದನಂತರ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಈ ಅಂಶಕ್ಕೆ ಅನುಮೋದನೆ ಕೋರಿರುವುದು ಕಂಡುಬಂದಿರುವುದಿಲ್ಲ. ಈ ಕ್ರಮವು ಕೆಟಿಪಿಪಿಯ ನಿಯಮಗಳ ಉಲ್ಲಂಘನೆಯಾಗಿದೆ,’ ಎಂದು ಲಭ್ಯ ಇರುವ ದಾಖಲೆಗಳಿಂದ ತಿಳಿದು ಬಂದಿದೆ.
ಅದೇ ರೀತಿ ಈ ಯೋಜನೆ ಕುರಿತು ಯೋಜನೆಯ ಅಂದಾಜು, ರೇಖಾ ನಕ್ಷೆ, ಅಂದಾಜು ಪಟ್ಟಿಗಳಿಗೆ ಯಾವುದೇ ಸಕ್ಷಮ ಅಧಿಕಾರಿ/ ಪ್ರಾಧಿಕಾರ ಸಹಿಯೊಂದಿಗೆ ದೃಢೀಕರಿಸಿರುವುದಿಲ್ಲ (ಅಸಿಸ್ಟಂಟ್ ಇಂಜಿನಿಯರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್) ಕೇವಲ ಪದನಾಮವನ್ನು ಮಾತ್ರ ದಾಖಲಿಸಲಾಗಿದೆಯೇ ವಿನಃ ಎಲ್ಲಿಯೂ ಸಹಿ ಕಂಡುಬಂದಿರುವುದಿಲ್ಲ ಎಂದು ಗೊತ್ತಾಗಿದೆ.
ಹಾಗೆಯೇ ಟೆಂಡರ್‌ನಲ್ಲಿ ಸ್ವೀಕೃತವಾದ ಮೊತ್ತವು ಅಂದಾಜು ಮೊತ್ತಕ್ಕಿಂತ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ಪ್ರೀಮಿಯಂ ಅಗಿದ್ದಲ್ಲಿ ಅಂಗೀಕರಿಸಬಾರದು ಎಂದು 2022ರ ಮೇ 10ರಂದೇ ಆರ್ಥಿಕ ಇಲಾಖೆಯು ಸೂಚಿಸಿದೆ. ಆದರೆ ಈ ಪ್ರಕರಣದಲ್ಲಿ ಪರಿಷ್ಕೃತ ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಶೇ. 9.95ಕ್ಕಿಂತ ಹೆಚ್ಚಾಗಿದೆ. ಆದರೂ ಇದಕ್ಕೆ ಸಕ್ಷಮ ಪ್ರಾಧಿಕಾರವು ಸೂಕ್ತ ಸಮರ್ಥನೆಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.
ನೃಪತುಂಗ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಮತ್ತು ಬಿಸಿಎ ಪದವಿಗಳಡಿ 24 ಕೋರ್ಸುಗಳು, 7 ಸ್ನಾತಕೋತ್ತರ ಬೋಧನಾಶಾಖೆಗಳು ಮತ್ತು 3 ಸಂಶೋಧನಾ ಕೇಂದ್ರಗಳು ಇರಲಿವೆ. ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರವು 55 ಕೋಟಿ ಅನುದಾನ ಮಂಜೂರು ಮಾಡಿದೆ. ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 100 ವರ್ಷಗಳ ಹಿಂದೆ (1921ರಲ್ಲಿ) ಸ್ಥಾಪಿಸಿದ್ದ ಈ ಶಿಕ್ಷಣ ಸಂಸ್ಥೆಯು ಹಂತಹಂತವಾಗಿ ಬೆಳೆದು ಬಂದಿದೆ. ಇದೀಗ ಸಂಸ್ಥೆ ಪೂರ್ಣಪ್ರಮಾಣದಲ್ಲಿ ವಿಶ್ವವಿದ್ಯಾಲಯದ ರೂಪ ಪಡೆಯುತ್ತಿದೆ.