ಬೆಂಗಳೂರು; ಶರಾವತಿ ಮತ್ತು ಬಿಡದಿ ವ್ಯಾಪ್ತಿಯಲ್ಲಿ 2000 ಮೆಗಾ ವ್ಯಾಟ್ ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸದೆಯೇ ಅಗತ್ಯವಿಲ್ಲದಿದ್ದರೂ ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿಎಲ್) 1000 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕವನ್ನು 5,000 ಕೋಟಿ ರು. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದಲ್ಲಿ ಈಗಾಗಲೇ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದ್ದರೂ 5,000 ಕೋಟಿ ರು. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಒಂದು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಬಹುದೊಡ್ಡ ಅಕ್ರಮಕ್ಕೆ ದಾರಿಮಾಡಿಕೊಡಲಿದೆ. ಅಲ್ಲದೆ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಇರದಿದ್ದರೂ ಖಾಸಗಿ ಸಹಭಾಗಿತ್ವದಲ್ಲಿ ಮತ್ತೊಂದು ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕೈಗೆತ್ತಿಕೊಂಡರೆ ಎಸ್ಕಾಂಗಳ ಮೇಲೆ ಅಪಾರ ಪ್ರಮಾಣದ ನಷ್ಟದ ಹೊರೆ ಹೊರಿಸಲಿದೆ!
ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ)ಗಳಿಗೆ ಬಾಕಿ ಇರುವ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೇ ಎಸ್ಕಾಂಗಳ ನಷ್ಟಕ್ಕೆ ದಾರಿಮಾಡಿಕೊಡುವ ಯೋಜನೆಯನ್ನು ಇಂಧನ ಇಲಾಖೆಯು ಕೈಗೆತ್ತಿಕೊಂಡಿರುವುದು ಮುನ್ನೆಲೆಗೆ ಬಂದಿದೆ. ಹೊಸ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ವಿ ಸುನೀಲ್‌ಕುಮಾರ್ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳ ಸಂಬಂಧ ಯೋಜನಾ ವರದಿಯು ಮುಕ್ತಾಯಗೊಂಡಿರುವ ಬೆನ್ನಲ್ಲೇ ಮತ್ತೊಂದು ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ತರಾತುರಿಯಲ್ಲಿ ಕೈಗೆತ್ತಿಕೊಳ್ಳಲು ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆರ್ಥಿಕ ಇಲಾಖೆ ತಕರಾರು
ಇಂಧನ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ (FD 491 Exp-1/2021, EN 27 PPT 2021-DATE-21-07-2022)ಆರ್ಥಿಕ ಇಲಾಖೆಯು ತಕರಾರು ಎತ್ತಿದೆ. ‘ಕೆಪಿಸಿಎಲ್ ಈಗಾಗಲೇ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕರ್ನಾಟಕದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದ್ದರೂ ತಕ್ಷಣವೇ 1000 ಮೆಗಾ ವ್ಯಾಟ್ ಸಾಮರ್ಥ್ಯದ ಮತ್ತೊಂದು ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಯೋಜನೆಯನ್ನು ಖಾಸಗಿ ಸಹಭಾಗಿತ್ವದಡಿಯಲ್ಲಿ ಕೈಗೆತ್ತಿಕೊಳ್ಳುವುದು ಅಗತ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯು 2022ರ ಜುಲೈ 21ರಂದು ತನ್ನ ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.
ಖಾಸಗಿ ವಲಯವು 5000 ಕೋಟಿ ರು. ವೆಚ್ಚದಲ್ಲಿ ಪಂಪ್ಡ್ ಸ್ಟೋರೇಜ್ ಘಟಕವನ್ನು ಸ್ಥಾಪಿಸುತ್ತಿದ್ದರೂ ರಾಜ್ಯ ಸರ್ಕಾರವು ಸಂಬಂಧಪಟ್ಟ ಖಾಸಗಿ ಪಾಲುದಾರರೊಂದಿಗೆ 25 ವರ್ಷಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿರಬೇಕಾಗುತ್ತದೆ. ಖಾಸಗಿ ಪಾಲುದಾರರು ಮಾಡಿದ ಹೂಡಿಕೆಯ ಸುಮಾರು 50 ಪ್ರತಿಶತವನ್ನು ಕರ್ನಾಟಕ ಸರ್ಕಾರ/ ಎಸ್ಕಾಂಗಳು ಮೊದಲ ವರ್ಷದಲ್ಲಿಯೇ ಪಾವತಿಸಬೇಕಾಗುತ್ತದೆ ಎಂದೂ ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿರುವುದು ಗೊತ್ತಾಗಿದೆ.
ವಿಶೇಷವಾಗಿ ಈ ಘಟಕದ ಮೂಲಕ ಸೌರ ಮತ್ತು ಗಾಳಿ ವಿದ್ಯುತ್‌ನ್ನು ಗರಿಷ್ಟ ಸಮಯವಲ್ಲದವರೆಗೆ ಸಂಗ್ರಹಿಸುವುದು ಮತ್ತು ಸಂಗ್ರಹವಾಗಿರುವ ವಿದ್ಯುತ್‌ನ್ನು ಗರಿಷ್ಠ ಅವಧಿಯಲ್ಲಿ ಬಳಸುವ ಮೂಲ ಉದ್ದೇಶ ಹೊಂದಿದೆ. ಆದರೂ ಕರ್ನಾಟಕದಲ್ಲಿ 2021ರಲ್ಲೇ 14,367 ಮೆಗಾ ವ್ಯಾಟ್ ಸಾಮರ್ಥ್ಯದ ಗರಿಷ್ಠ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ. ಅಲ್ಲದೆ ಪಿಆರ್‌ಡಿಸಿಎಲ್‌ನ ಅಧ್ಯಯನದ ಪ್ರಕಾರ 2024ರವರೆಗೂ ಗರಿಷ್ಠ ಬೇಡಿಕೆಯನ್ನು ಪೂರೈಸಲಿದೆ ಎಂದು ಅಭಿಪ್ರಾಯದಲ್ಲಿ ಆರ್ಥಿಕ ಇಲಾಖೆಯು ವಿವರಿಸಿದೆ.
ವಿದ್ಯುತ್ ಶೇಖರಣಾ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ಮತ್ತು ಇಂಧನ ವಲಯದಲ್ಲಿ ದಕ್ಷತೆ ಜೊತೆಗೆ ಕೈಗಾರಿಕೆಗಳು ಮುಕ್ತ ಮಾರುಕಟ್ಟೆಯಿಂದ ನೇರವಾಗಿ ವಿದ್ಯುತ್ ಪಡೆಯುವ ಪ್ರವೃತ್ತಿಯನ್ನು ರೂಢಿಸಿಕೊಂಡಿವೆ. ಹೀಗಾಗಿ ಎಸ್ಕಾಂಗಳು ಸರಬರಾಜು ಮಾಡುವ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೂ ಖಾಸಗಿ ಸಹಭಾಗಿತ್ವದಲ್ಲಿ ಮತ್ತೊಂದು ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕೈಗೆತ್ತಿಕೊಂಡರೆ ಎಸ್ಕಾಂಗಳ ನಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದೂ ಆರ್ಥಿಕ ಇಲಾಖೆಯು ಹೇಳಿರುವುದು ತಿಳಿದು ಬಂದಿದೆ.