ಬೆಂಗಳೂರು; ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಹಗರಣದ ಸೂತ್ರಧಾರರೊಲ್ಲಬ್ಬರಾದ ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರು ಮರಳು ಗಣಿಗಾರಿಕೆ, ಸಾಗಾಣಿಕೆ ವ್ಯಾಪಾರ ನಡೆಸುತ್ತಿದ್ದವರ ನಂಟೂ ಇತ್ತು ಎಂಬುದು ದೋಷಾರೋಪಣೆ ಪಟ್ಟಿಯು ಹೊರಗೆಡವಿದೆ.
ಮರಳು ಸಾಗಾಣಿಕೆಯ ಉಪ ಗುತ್ತಿಗೆ ಪಡೆದಿದ್ದ ಮಹಾರಾಷ್ಟ್ರದ ಸುರೇಶ್ ಕಟಗಾಂವ್ ಎಂಬುವರಿಗೆ ಎದುರಾಗಿದ್ದ ಸಮಸ್ಯೆ, ಅಡೆತಡೆಗಳನ್ನು ಬಿಜೆಪಿ ನಾಯಕಿ ಹಾಗೂ ಪಿಎಸ್‌ಐ ಹಗರಣದ ಸೂತ್ರಧಾರರಾದ ದಿವ್ಯಾ ಹಾಗರಿಗಿ ನಿವಾರಿಸಿದ್ದರು. ಈ ಹಗರಣದಲ್ಲಿ ಬಂಧನಕ್ಕೊಳಗಾಗುವ ಭೀತಿಯಿಂದ ಸಿಐಡಿ ಪೊಲೀಸರಿಂದ ತಲೆತಪ್ಪಿಸಿಕೊಂಡು ಅಲೆದಾಡುತ್ತಿದ್ದ ದಿವ್ಯಾ ಹಾಗರಗಿ ಸೇರಿದಂತೆ ಇನ್ನಿತರೆ ಆರೋಪಿಗಳಿಗೆ ಪುಣೆ ನಗರದ ಮಹಾತ್ಮ ಪುಲೆ ಕಾಲೋನಿಯಲ್ಲಿದ್ದ ವಸತಿ ಸಮುಚ್ಛಯದಲ್ಲಿ ಆಶ್ರಯ ಕಲ್ಪಿಸಿದ್ದರು. ಮರಳು ಗಣಿಗಾರಿಕೆ, ಸಾಗಾಣಿಕೆಯಲ್ಲಿ ಅಡೆತಡೆಗಳನ್ನು ದಿವ್ಯಾ ಹಾಗರಗಿ ಅವರು ನಿವಾರಿಸಿದ್ದರಿಂದಲೇ ಈ ನೆರವು ನೀಡಲು ಮೂಲ ಕಾರಣ ಎಂಬುದು ದೋಷಾರೋಪಣೆ ಪಟ್ಟಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.
ಅಫಜಲಪುರ ತಾಲೂಕಿನ ನಿವಾಸಿ ರವಿಮಾಳಿ ಅವರು ಕರ್ನಾಟಕ ಸರ್ಕಾರದಿಂದ ಪಡೆದುಕೊಂಡಿದ್ದ ಮರಳು ಬ್ಲಾಕ್ ಲೀಸ್ ಪರವಾನಿಗೆಯನ್ನು ಸುರೇಶ್ ಕಾಟಗಾಂವ ಅವರು 2019ರಿಂದಲೇ ಉಪ ಗುತ್ತಿಗೆ ಪಡೆದಿದ್ದರು. ಇವರು ಮರಳು ಗಣಿಗಾರಿಕೆ, ಸಾಗಾಣಿಕೆ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಅಡೆತಡೆಗಳು, ಸಮಸ್ಯೆಗಳು ಎದುರಾದವು. ಆಗ ಕಲ್ಬುರ್ಗಿ ನಗರದ ಬಿಜೆಪಿ ಪಕ್ಷದ ನಾಯಕಿ ದಿವ್ಯಾಹಾಗರಗಿ ಅವರನ್ನು ಸಂಪರ್ಕಿಸಿ ಅವರ ಬಳಿ ನಿಮಗಾಗುತ್ತಿರುವ ಸಮಸ್ಯೆ ಹೇಳಿಕೊಂಡರೆ ಅವರು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ಇವರ ಹಿತೈಷಿಗಳು ಸಲಹೆ ನೀಡಿದ್ದರು. ಹೀಗಾಗಿ ಸುರೇಶ್ ಕಾಟಗಾಂವ ಅವರು ದಿವ್ಯಾ ಹಾಗರಗಿ ಅವರನ್ನು ಭೇಟಿ ಮಾಡಿದ್ದರು ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
‘ದಿವ್ಯಾ ಹಾಗರಗಿ (ಆರೋಪಿ 18) ಅವರನ್ನು ಭೇಟಿ ಮಾಡಿ ಮರಳು ಗಣಿಗಾರಿಕೆಯಲ್ಲಿ ತಮಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿಕೊಂಡಿರುತ್ತಾರೆ. ಇದಕ್ಕೆ ಆರೋಪಿ ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದು ಅದರಂತೆ ತಮ್ಮ ಪ್ರಭಾವ ಬಳಸಿ ಸುರೇಶ್ ಕಾಟಗಾಂವ (ಆರೋಪಿ 21) ಅರಿಗೆ ಮರಳು ಸಾಗಾಟದಲ್ಲಿ ಆಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.
ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಕಾಶಿನಾಥ ಚಿಳ್ಳ ಸೇರಿದಂತೆ ಹಲವರು ಅಕ್ರಮ ಎಸಗಿರುವ ವಿಚಾರ ಗೊತ್ತಿದ್ದರೂ ಸುರೇಶ್ ಕಾಟಗಾಂವ ಎಂಬಾತ ಸಿಐಡಿ ಪೊಲೀಸರ ತನಿಖೆಗೆ ಸಿಗದಂತೆ ಮಾಡಿದ್ದ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳು ತಪ್ಪಿಸಿಕೊಳ್ಳುವಂತೆ ಮಾಡುವ ಉದ್ಧೇಶದಿಂದ ದಿವ್ಯಾ ಹಾಗರಗಿ ಮತ್ತಿತರ ಆರೋಪಿಗಳಿಗೆ ಸೊಲ್ಲಾಪುರದಿಂದ ಬಾಡಿಗೆ ವಾಹನ ಮಾಡಿಕೊಟ್ಟು ಪುಣೆಗೆ ಕಳಿಸಿದ್ದ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.
‘ತನಗೆ ಆಪ್ತರಾಗಿದ್ದ ಪುಣೆ ನಗರದ ನಿವಾಸಿ ಕಾಳಿದಾಸ ಹರಿದಾಸ ತಾಂಡಲೆ (ಆರೋಪಿ 22) ಮೂಲಕ ಮಹಾತ್ಮ ಪುಲೆ ಕಾಲೋನಿಯ ಸುನೀತ ಆಯಿ ಆಬಾ ಸದನ ವಸತಿ ಸಮುಚ್ಛಯದ 3ನೇ ಅಂತಸ್ತಿನಲ್ಲಿರುವ ಮನೆಯಲ್ಲಿ ಹೊರಗಿನವರಿಗೆ ತಿಳಿಯದಂತೆ ಬಾಡಿಗೆ ಮನೆ ಮಾಡಿಕೊಟ್ಟು ಆಶ್ರಯ ನೀಡಿ ಊಟ, ಉಪಚಾರ ವ್ಯವಸ್ಥೆ ಮಾಡಿಕೊಟ್ಟು ತಲೆಮರೆಸಿಕೊಳ್ಳಲು ಸಹಾಯ ಮಾಡಿ ಪ್ರಕರಣದ ತನಿಖೆಗೆ ಅಡ್ಡಿಪಡಿಸಿರುವುದು ತನಿಖೆಯಲ್ಲಿ ಸಂಗ್ರಹಿಸಿದ ದಾಖಲಾತಿಗಳು ಮತ್ತು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುತ್ತದೆ. ಆದ್ದರಿಂದ 21ನೇ ಆರೋಪಿ ಸುರೇಶ್ ಕಾಟಗಾಂವ ವಿರುದ್ಧ ಐಪಿಸಿ ಕಲಂ 212,, ರೆ/ವಿ 43ರಂತೆ ದೋಷಾರೋಪಣೆ ಮಾಡಲಾಗಿದೆ,’ ಎಂದು ವಿವರಿಸಲಾಗಿದೆ.
ಸದ್ಯ ಮಹಾರಾಷ್ಟ್ರದ ಸುರೇಶ್ ಕಟಗಾಂವ್ ಅವರಿಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಜಾಮೀನು ಮಂಜೂರು ಮಾಡಿದೆ. ಇಡೀ ಪಿಎಸ್‌ಐ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ಸುರೇಶ್ ಕಟಗಾಂವ್ ಒಬ್ಬರಿಗಷ್ಟೇ ಜಾಮೀನು ದೊರೆತಿದೆ.
ಪಿಎಸ್‌ಐ ಹಗರಣದಲ್ಲಿ ಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ 21ನೇ ಆರೋಪಿಯಾಗಿರುವ ಸೊಲ್ಹಾಪುರದ ನಿವಾಸಿಯಾದ ಸುರೇಶ್ ಕಟಗಾಂವ್ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತ್ತು.
ಆರೋಪಿ ಸುರೇಶ್ ಅವರು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ನೀಡಬೇಕು. ಆರೋಪಿಯು ಇಂಥದ್ದೇ ಆರೋಪದಲ್ಲಿ ಭಾಗಿಯಾಗಬಾರದು, ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಅಥವಾ ಸಾಕ್ಷ್ಯ ತಿರುಚಬಾರದು. ನ್ಯಾಯಾಲಯದ ಸೂಚಿಸಿದಾಗ ಪೀಠದ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿರುವುದನ್ನು ಸ್ಮರಿಸಬಹುದು.
ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120 (ಬಿ), 465, 468, 471, 410 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸುರೇಶ್ ಕಟಗಾಂವ್ 21ನೇ ಆರೋಪಿಯಾಗಿದ್ದಾರೆ. ಹಿರಿಯ ವಕೀಲ ಸಂದೇಶ್ ಚೌಟ ಅವರು ಆರೋಪಿ ಪರ ವಾದಿಸಿದ್ದರು.