ಅಂಬೇಡ್ಕರ್‌ರಿಂದಲೇ ಆರ್ಯರ ಆಕ್ರಮಣ, ಆಗಮನ ಸಿದ್ದಾಂತ ತಿರಸ್ಕಾರ; ಪರಿಶೀಲನೆ ವರದಿಯಲ್ಲಿ ಪ್ರತಿಪಾದನೆ

ಬೆಂಗಳೂರು; ಆರ್ಯರ ಆಕ್ರಮಣ ಮತ್ತು ಆಗಮನ ಎಂಬ ಎರಡೂ ಸಿದ್ಧಾಂತಗಳನ್ನು ಡಾ ಬಿ ಆರ್‌ ಅಂಬೇಡ್ಕರ್‌ ಅವರು ತಿರಸ್ಕರಿಸಿದ್ದಾರೆ. ಆರ್ಯ-ದ್ರಾವಿಡ ಎಂಬ ವರ್ಗೀಕರಣಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ. ಹಾಗಿದ್ದರೂ ಅವರ ವಿಚಾರಗಳನ್ನು ಬದಿಗಿಟ್ಟು ಹಳೆಯ ಸುಳ್ಳುಗಳನ್ನೇ ಪಠ್ಯಗಳಲ್ಲಿ ಖಚಿತ ಸತ್ಯಗಳು ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ದ್ವಿತೀಯ ಪಿಯುಸಿ ಪಠ್ಯಪುಸ್ತಕದ ಕುರಿತು ರೋಹಿತ್‌ ಚಕ್ರತೀರ್ಥ ಸಲ್ಲಿಸಿರುವ ಪರಿಶೀಲನಾ ವರದಿಯಲ್ಲಿ ಪ್ರತಿಪಾದಿಸಿದ್ದರು.

 

ಭಾರತದ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖದೊಂದಿಗೆ) ಪಠ್ಯಪುಸ್ತಕದಲ್ಲಿನ ವೈದಿಕ ಸಂಸ್ಕೃತಿ, ಮೂಲ, ಪ್ರಮುಖ ಲಕ್ಷಣಗಳು, ಹೊಸ ಧರ್ಮಗಳ ಉದಯ, ಜೈನಧರ್ಮ ಮತ್ತು ಬೌದ್ಧ ಧರ್ಮದ ಅಧ್ಯಾಯವನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಈ ಅಂಶವಿದೆ. ಪರಿಶೀಲನಾ ವರದಿಯನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಪರಿಶೀಲನಾ ವರದಿಯಲ್ಲೇನಿದೆ?

 

ವೈದಿಕ ಸಂಸ್ಕೃತಿಯ ಐದು ಪುಟಗಳಷ್ಟು ವಿಸ್ತಾರವಾಗಿದ್ದು ಸಾಕಷ್ಟು ತಪ್ಪು ಮಾಹಿತಿಗಳನ್ನು ಒಳಗೊಂಡಿದೆ. ಅಧ್ಯಾಯದ ಪ್ರಾರಂಭದ ವಾಕ್ಯದಲ್ಲೇ ‘ಆರ್ಯರು’ ಒಂದು ವಿಭಿನ್ನ ಸಂಸ್ಕೃತಿಯನ್ನು ಬೆಳೆಸಿದರು ಎಂದು ಹೇಳಲಾಗಿದೆ. ಆರ್ಯ ಎಂಬುದು ಜನಾಂಗ ಸೂಚಕ ಶಬ್ಧ ಅಲ್ಲ; ಆರ್ಯರ ಆಗಮನ ಆಗಲಿ ಆಕ್ರಮ ಆಗಲೀ ನಡೆದಿಲ್ಲ; ಅದೊಂದು ಸುಳ್ಳು ಸಿದ್ಧಾಂತ ಎಂಬುದು ಕಳೆದ ಎರಡು ದಶಕಗಳಿಂದ ಪ್ರಚಲಿತವಿರುವಾಗ ಮತ್ತು ಇತ್ತೀಚೆಗೆ ಆರ್ಯ ಜನಾಂಗ ಸಿದ್ಧಾಂತವು ವೈಜ್ಞಾನಿಕವಾಗಿಯೂ ತಪ್ಪೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಠ್ಯವನ್ನು ಸಂಪೂರ್ಣ ಪರಿಷ್ಕರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಪ್ರಸ್ತಾಪಿಸಲಾಗಿದೆ.

 

‘ಈ ಇಡೀ ಅಧ್ಯಾಯದಲ್ಲಿ ಆರ್ಯ ಎಂಬ ಜನಾಂಗದ ಅಸ್ತಿತ್ವವನ್ನು ಸಾದಿಸಲು ಸಾಕಷ್ಟು ಯತ್ನಿಸಲಾಗಿದೆ. ಆರ್ಯ ಎಂಬ ಜನಾಂಗ ಇತ್ತು ಎಂದು ಸಾಧಿಸಲು ಸ್ವಾಮಿ ದಯಾನಂದ ಸರಸ್ವತಿ, ಬಾಲಗಂಗಾಧರ ತಿಲಕ್‌, ಮ್ಯಾಕ್ಸ್‌ ಮುಲ್ಲರ್‌, ಪ್ರೊಫೆಸರ್‌ ಮ್ಯಾಕ್‌ ಡೊನಾಲ್‌ ಮುಂತಾದವರ ಹೆಸರುಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಇವರು ಯಾರೂ ಪ್ರಾಕ್ತನ ವಿಜ್ಞಾನಿಗಳಾಗಿರಲಿಲ್ಲ. ತಮ್ಮ ಸಿದ್ಧಾಂತಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಬೆಳೆಸಲಿಲ್ಲ ಎಂಬುದನ್ನು ಗಮನಿಸಬೇಕು,’ ಎಂದು ಪರಿಶೀಲನಾ ವರದಿಯಲ್ಲಿ ಹೇಳಲಾಗಿದೆ.

 

 

ಪರಿಶೀಲನಾ ವರದಿ ಪ್ರತಿ

 

ಇತಿಹಾಸ ಪಠ್ಯದಲ್ಲಿ ಒಂದು ವಿಚಾರವನ್ನು ಪ್ರಸ್ತುತಿಪಡಿಸುವಾಗ ಆ ವಿಚಾರದಲ್ಲಿ ವೈಜ್ಞಾನಿಕ ಸತ್ಯಗಳು ಏನು ಎಂಬುದು ಮುಖ್ಯವಾಗುತ್ತವೆಯೇ ವಿನಃ ಸಾಮಾಜಿಕ ಚಿಂತಕರು ಹೇಳಿದ ಅಭಿಪ್ರಾಯಗಳಲ್ಲ. 20ನೇ ಶತಮಾನದದಲ್ಲಿ ಆರ್ಯ-ದ್ರಾವಿಡ ಸಿದ್ದಾಂತಗಳ ಚರ್ಚೆ ನಡೆದಿದ್ದಾಗ ಅದನ್ನು ಅತ್ಯಂತ ವೈಜ್ಞಾನಿಕವಾಗಿ ಪ್ರಶ್ನಿಸಿದವರು ಡಾ ಬಾಬ ಸಾಹೇಬ್‌ ಅಂಬೇಡ್ಕರ್‌. ಅವರು ಆರ್ಯರ ಆಕ್ರಮಣ ಮತ್ತು ಆಗಮನ ಎಂಬ ಎರಡೂ ಸಿದ್ಧಾಂತಗಳನ್ನು ತಿರಸ್ಕರಿಸಿದ್ದಾರೆ. ಮಾತ್ರವಲ್ಲ ಆರ್ಯ ದ್ರಾವಿಡ ಎಂಬ ವರ್ಗೀಕರಣಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ ಎಂಬುದನ್ನು ಅತ್ಯಂತ ಖಚಿತ ಶಬ್ದಗಳಲ್ಲಿ ಹೇಳಿದ್ದಾರೆ. ಹಾಗಿದ್ದಾಗ್ಯೂ ಅವರ ವಿಚಾರಗಳನ್ನು ಬದಿಗಿಟ್ಟು ಹಳೆಯ ಸುಳ್ಳುಗಳನ್ನೇ ಪಠ್ಯದಲ್ಲಿ ಖಚಿತ ಸತ್ಯಗಳು ಎಂಬಂತೆ ಬಿಂಬಿಸುತ್ತ ಮುಂದುವರಿಸುವುದು ಸರಿಯಲ್ಲ ಎಂದೂ ವರದಿಯಲ್ಲಿ ವಿವರಿಸಿದ್ದಾರೆ.

 

‘ಇಡೀ ಅಧ್ಯಾಯವು ಅಸತ್ಯ, ಅರ್ಧಸತ್ಯ, ಉತ್ಪ್ರೇಕ್ಷೆಗಳ ಹಲವು ವಾಕ್ಯಗಳನ್ನು ತುಂಬಿಕೊಂಡಿದ್ದು ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ತಪ್ಪುಮಾಹಿತಿ ರವಾನಿಸುವಂತಿದೆ. ಅಲ್ಲದೆ ಪಠ್ಯದಲ್ಲಿ ವಿರೋಧಾಭಾಸದ ಹೇಳಿಕೆಗಳು ಬಹಳಷ್ಟು ಕಂಡು ಬರುತ್ತವೆ. ಆರ್ಯರನ್ನು ಅಲೆಮಾರಿ ದನಗಾಹಿಗಳು (ಪುಟ 27) ಎಂದು ಹೇಳಿ ಪುಟ 28ರಲ್ಲಿ ಆರ್ಯ ಎಂದರೆ ಕೃಷಿ ಅವಲಂಬಿತ ವ್ಯಕ್ತಿ ಎಂದು ಹೇಳಲಾಗಿದೆ. ಇದು ವಿದ್ಯಾರ್ಥಿಗಳನ್ನು ಉದ್ದೇಶಪೂರ್ವ ಗೊಂದಲದಲ್ಲಿ ಕೆಡವುವ ಪ್ರಯತ್ನ. ಆರ್ಯ ಎಂಬ ಶಬ್ದಕ್ಕೆ ಕೃಷಿ ಅವಲಂಬಿತ ವ್ಯಕ್ತಿ ಎಂಬ ಅರ್ಥವು ಯಾವ ಸಾಹಿತ್ಯದಲ್ಲಿ ಸಿಗುತ್ತದೆ ಎಂದು ಪಠ್ಯಪುಸ್ತಕ ರಚನಾಕಾರರೇ ಹೇಳಬೇಕು,’ ಎಂದು ಹೇಳಿರುವುದು ವರದಿಯಿಂದ ಗೊತ್ತಾಗಿದೆ.

 

ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ 4. 2 ರಲ್ಲಿದ್ದ ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿ ಬೌದ್ಧ ಜೈನ ದರ್ಶನಗಳ ಉದಯಕ್ಕೆ ಸಾಮಾಜಿಕ ಕಾರಣಗಳನ್ನು ಮುಂದೆ ಮಾಡುವುದು ಅಸಂಬದ್ಧ, ಇಂಥ ಕಾರಣಗಳನ್ನು ಯಾವುದೇ ಮೂಲ ಬೌದ್ಧ, ಜೈನ ಧಾರ್ಮಿಕ ಗ್ರಂಥಗಳಲ್ಲಿ ಕಾಣುವುದಿಲ್ಲ. ಒಂದು ವೇಳೆ ಇದ್ದರೆ ಪಠ್ಯಪುಸ್ತಕ ರಚನಾಕಾರರೇ ತೋರಿಸಬೇಕು ಎಂದೂ ರೋಹಿತ್‌ ಚಕ್ರತೀರ್ಥ ವರದಿಯಲ್ಲಿ ಸವಾಲು ಹಾಕಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts