‘ದಿ ಫೈಲ್‌-ವಾರ್ತಾಭಾರತಿ’ ವರದಿ ಪರಿಣಾಮ; ದಾನಿಗಳಿಂದ ಹಣ ಸಂಗ್ರಹಣೆಗೆ ಸೂಚಿಸಿದ್ದ ಸುತ್ತೋಲೆ ಹಿಂತೆಗೆತ

Photo Credit; Financial Express

ಬೆಂಗಳೂರು; ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮದ ಭಾಗವಾಗಿ ಕಲಿಕಾ ಹಾಳೆಗಳನ್ನು ಜೆರಾಕ್ಸ್‌ ಮಾಡಿಸಲು ದಾನಿಗಳ ಬಳಿ ಹಣ ಸಂಗ್ರಹಿಸಿ ಎಂದು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ನಿರ್ದೇಶಕರು 2022ರ ಜೂನ್‌ 27ರಂದು ಹೊರಡಿಸಿದ್ದನ್ನು ‘ದಿ ಫೈಲ್‌’-ವಾರ್ತಾಭಾರತಿ ವರದಿ ಪ್ರಕಟಿಸುತ್ತಿದ್ದಂತೆ ಸರ್ಕಾರವು ಇದೀಗ ಆ ಸುತ್ತೋಲೆಯನ್ನು ಹಿಂಪಡೆದಿದೆ. ಆದರೆ ಸುತ್ತೋಲೆ ಹಿಂಪಡೆದಿರುವುದಕ್ಕೆ ಕಾರಣಗಳನ್ನು ಪ್ರಸ್ತಾಪಿಸಿಲ್ಲ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 278.23 ಕೋಟಿ ರು. ಅನುದಾನವಿದ್ದರೂ ರಾಜ್ಯ ಬಿಜೆಪಿ ಸರ್ಕಾರವೀಗ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರನ್ನು ಕಲಿಕಾ ಹಾಳೆಗಳನ್ನು ಜೆರಾಕ್ಸ್‌ ಮಾಡಿಸಲು ಜೋಳಿಗೆ ಕೈಯಲ್ಲಿ ಕೊಟ್ಟು ಅಕ್ಷರಶಃ ಭಿಕ್ಷೆಗೆ ಇಳಿಸಿತ್ತು.

 

ಈ ಕುರಿತು ‘ದಿ ಫೈಲ್‌’ ಮತ್ತು ವಾರ್ತಾಭಾರತಿ ಪ್ರಕಟಿಸಿದ್ದ ವರದಿಯು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸರ್ಕಾರವು ಈ ಮೊದಲು ಹೊರಡಿಸಿದ್ದ ಸುತ್ತೋಲೆ ಹಿಂಪಡೆದು 2022 ಜುಲೈ 2ರಂದು ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘2022-23ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಉಪಕ್ರಮವನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು 2022ರ ಜೂನ್‌ 27ರಂದು ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಸದರಿ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ,’ ಎಂದು ತಿಳಿಸಿದೆ.

 

ಪರಿಷ್ಕೃತ ಸುತ್ತೋಲೆ ಪ್ರತಿ

 

ಕಲಿಕಾ ಚೇತರಿಕೆ ಕಾರ್ಯಕ್ರಮದ ಮುದ್ರಿತ ಸಾಹಿತ್ಯ ಶಾಲೆಗಳಿಗೆ ತಲುಪುವವರೆಗೂ ಮಾತ್ರ ಅನುದಾನವನ್ನು ಬಳಸಿಕೊಂಡು ಕಲಿಕೆ ಮತ್ತು ಅಭ್ಯಾಸದ ಚಟುವಟಿಕೆಗಳಿಗೆ ಅವಶ್ಯವಿರುವ ಚಟುವಟಿಕೆ ಹಾಳೆಗಳನ್ನು ಒಂದು ತರಗತಿ/ವಿಭಾಗಕ್ಕೆ ಒಂದು ಪ್ರತಿಯಂತೆ ಸಿದ್ಧಪಡಿಸಿಕೊಳ್ಳಲು ಅನುಮತಿ ನೀಡಿರುವುದು ಪರಿಷ್ಕೃತ ಸುತ್ತೋಲೆಯಿಂದ ತಿಳಿದು ಬಂದಿದೆ.

‘ಈಗಾಗಲೇ ವಿದ್ಯಾಪ್ರವೇಶ-ಕಲಿಕಾ ಚೇತರಿಕ ಉಪಕ್ರಮಗಳ ಸಾಹಿತ್ಯ ಸರಬರಾಜಾಗುತ್ತಿದ್ದು ಯಾವುದೇ ವಿಳಂಬಕ್ಕೆ ಆಸ್ಪದ ಕೊಡದೇ ಕೂಡಲೇ ಶಾಲೆಗಳಿಗೆ ತಲುಪಿಸಿ ಈ ಉಪಕ್ರಮವನ್ನು ಯಶಸ್ವಿಗೊಳಿಸಬೇಕು,’ ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಿದೆ.

 

ಆದರೀಗ ಕಿರಿಯ ಪ್ರಾಥಮಿಕ ಶಾಲೆಗಳಿಗೆ 2,500 ರು. ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಲಾ 5,000 ರು.ಗಳನ್ನು ಬಿಡುಗಡೆ ಮಾಡಿದೆ. ಕಲಿಕಾ ಹಾಳೆಗಳ ಜೆರಾಕ್ಸ್‌ ಮಾತ್ರವಲ್ಲ ಉಳಿದ ಖರ್ಚನ್ನೂ ಇದೇ ಹಣದಲ್ಲಿಯೇ ಭರಿಸಬೇಕಿದೆ.

 

ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಉಪಕ್ರಮಗಳ ಶಿಕ್ಷಕರ ಕೈಪಿಡಿ ಮತ್ತು ಕಲಿಕಾ ಹಾಳೆಗಳ ಮುದ್ರಣ ಮತ್ತು ಸರಬರಾಜು ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ. 2022-23ನೇ ಸಾಲಿನ ಪ್ರಥಮ ಕಂತಿನ ಅನುದಾನವನ್ನು ಈಗಾಗಲೇ ಪಿಎಫ್‌ಎಂಎಸ್‌ ಮೂಲಕ ಶಾಲೆಗೆ ಬಿಡುಗಡೆಗೊಳಿಸಲಾಗಿದ್ದರೂ ಈ ಅನುದಾನವೂ ವಾಸ್ತವಿಕ ವೆಚ್ಚಕ್ಕೆ ಸರಿ ಹೊಂದುತ್ತಿಲ್ಲ ಎಂಬ ಆಕ್ಷೇಪಗಳು ಶಿಕ್ಷಕರ ವಲಯದಿಂದ ವ್ಯಕ್ತವಾಗಿವೆ.

ಜೂನ್‌ 27ರಂದು ಹೊರಡಿಸಿದ್ದ ಸುತ್ತೋಲೆಯಲ್ಲೇನಿತ್ತು?

 

ದಾನಿಗಳು, ಸಿಎಸ್‌ಆರ್‌ ಅನುದಾನ ಲಭ್ಯತೆ ಮೇರೆಗೆ ಮಗುವಾರು ಅಥವಾ ಒಂದು ತರಗತಿಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿಷಯವಾರು ಕಲಿಕಾ ಹಾಳೆಗಳನ್ನು ಜೆರಾಕ್ಸ್‌ ಮಾಡಿಸಿ ಮಕ್ಕಳಿಂದ ಕಲಿಕಾ ಅಭ್ಯಾಸ ಚಟುವಟಿಕೆಗಳನ್ನು ಜೆರಾಕ್ಸ್ ಮಾಡಿಸಿದ ಅಭ್ಯಾಸ ಹಾಳೆಗಳಲ್ಲಿ ಅಥವಾ ನೋಟ್‌ ಪುಸ್ತಕಗಳಲ್ಲಿ ಮಾಡಿಸಬೇಕು.

 

ಅಥವಾ ಶಾಲೆಯಲ್ಲಿ ಲಭ್ಯವಿರುವ ಶಾಲಾನುದಾನ, ಎಸ್‌ಡಿಎಮ್‌ಸಿ ಅನುದಾನ ಇತ್ಯಾದಿ ಯಾವುದೇ ಸರ್ಕಾರದ ಅನುದಾನವನ್ನು ಬಳಸುವುದಾದಲ್ಲಿ ಒಂದು ತರಗತಿ/ವಿಭಾಗಕ್ಕೆ ಒಂದು ವಿಷಯಕ್ಕೆ ಒಂದು ಪ್ರತಿಯಂತೆ ಮಾತ್ರ ಜೆರಾಕ್ಸ್‌ ಪ್ರತಿ ಮಾಡಿಸಿ ಪ್ರತಿ ಆಧಾರದಿಂದ ಎಲ್ಲಾ ಮಕ್ಕಳಿಂದ ಅವರವರ ನೋಟ್‌ ಪುಸ್ತಕಗಳಲ್ಲಿ ಕಲಿಕಾ ಚಟುವಟಿಕೆಗಳನ್ನು ಮಾಡಿಸಲು ತಗರಗತಿ ಶಿಕ್ಷಕರು ಕ್ರಮವಹಿಸುವುದು ಎಂದು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನೆ ನಿರ್ದೇಶಕರು ಸುತ್ತೋಲೆಯಲ್ಲಿ ವಿವರಿಸಿದ್ದರು.

 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಖಾಸಗಿ ಕಂಪನಿಗೆ ಸರ್ಕಾರಿ ಬೊಕ್ಕಸದಿಂದಲೇ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿರುವ ಸರ್ಕಾರವು ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮದ ಭಾಗವಾಗಿ ಕಲಿಕಾ ಹಾಳೆಗಳ ಜೆರಾಕ್ಸ್‌ ಪ್ರತಿಗಳನ್ನು ಶಾಲೆಗಳಿಗೆ ಪೂರೈಸಲೂ ತನ್ನ ಬಳಿ ಹಣವಿಲ್ಲವೆಂದು ಕೈ ಎತ್ತಿದ್ದನ್ನು ಸುತ್ತೋಲೆ ಆಧರಿಸಿ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

 

ಕಲಿಕಾ ಹಾಳೆಗಳ ಜೆರಾಕ್ಸ್‌ ಪ್ರತಿ ಮಾಡಿಸಲು ಭಿಕ್ಷೆಗಿಳಿದ ಶಾಲಾ ಶಿಕ್ಷಕರು; ದಿವಾಳಿಯಾಯಿತೇ ಸರ್ಕಾರ?

 

ತರಗತಿ 1ರಿಂದ 3ನೇ ತರಗತಿವರೆಗೆ ಮೊದಲ ಮೂರು ತಿಂಗಳಿಗೆ ವಿದ್ಯಾ ಪ್ರವೇಶ ಅನುಷ್ಠಾನಗೊಂಡಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಶಿಕ್ಷಕರ ಕೈಪಿಡಿ ಹಾಗೂ ಮಕ್ಕಳ ಕಲಿಕಾ ಹಾಳೆಗಳ ಮಾಹಿತಿಯನ್ನು ಅಪ್ಲೋಡ್‌ ಮಾಡಲಾಗಿದೆ. ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನಾತ್ಮಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳಿಗೆ ಕಳಿಸಲಾಗಿತ್ತು.

ಈ ಸುತ್ತೋಲೆಯನ್ನು ಪಾಲಿಸಲು ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ಮುಖ್ಯ ಶಿಕ್ಷಕರು ಮತ್ತು ತರಗತಿ ಶಿಕ್ಷಕರು 38 ವಿಷಯಗಳ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಸಾಮರ್ಥ್ಯ ಆಧರಿತ ಕಲಿಕಾ ಹಾಳೆಗಳ ಜೆರಾಕ್ಸ್‌ಗೆ ತಗುಲುವ ಅಂದಾಜು 5,000 ರು. ಗಳಿಗಾಗಿ ದಾನಿಗಳನ್ನು ಹುಡುಕುತ್ತ ಇದೀಗ ಅಕ್ಷರಶಃ ಜೋಳಿಗೆ ಹಿಡಿದು ನಿಂತಿದ್ದರು.

ಸೀಮೆಸುಣ್ಣ ಡಸ್ಟರ್‌, ರಿಜಿಸ್ಟ್ರರ್, ನೋಂದಣಿ, ಹಾಜರಿ ಪುಸ್ತಕ, ಕಸಪೊರಕೆ, ನಗದು ವಹಿ ರಿಜಿಸ್ಟರ್‌, ಅಂಕಪಟ್ಟಿ ವಹಿ, ವಿದ್ಯುತ್‌ ಬಿಲ್‌ ಸೇರಿ ಇದಕ್ಕೆ ಶಾಲಾನುದಾನವೆಂದು ವಾರ್ಷಿಕವಾಗಿ ಪ್ರತಿ ಶಾಲೆಯಲ್ಲಿ 100 ಮಕ್ಕಳಿದ್ದರೆ 25,000 ರು., 200 ಮಕ್ಕಳಿದ್ದರೆ 50,000 ರು. 250 ಮಕ್ಕಳಿಗೂ ಹೆಚ್ಚಿದ್ದರೆ 75,000 ರು. ಶಾಲಾನುದಾನ ನೀಡಲು ಆದೇಶವಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಈ ಸಾಮಗ್ರಿಗಳಿಗೆ ಪ್ರತಿ ಶಾಲೆಯು ಕನಿಷ್ಠ 22,000 ರು. ಗಳಿಂದ ಗರಿಷ್ಠ 25,000 ರು. ಖರ್ಚು ಮಾಡಿದೆ. ಆದರೆ ಸರ್ಕಾರವು ಇದುವರೆಗೆ ನೀಡಿರುವುದು ಕೇವಲ 6,250 ರು. ಮಾತ್ರ. ಉಳಿದ ಹಣವನ್ನು ನೀಡಿಲ್ಲ. ಅದೇ ರೀತಿ ರಾಜ್ಯದ ಬಹುತೇಕ ಹಿರಿಯ ಪ್ರಾಥಮಿಕ, ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಶಾಲಾನುದಾನ ರೂಪದಲ್ಲಿ ಬಿಡಿಗಾಸನ್ನೂ ಕೊಟ್ಟಿರಲಿಲ್ಲ.

 

2022-23ನೇ ಸಾಲಿಗೆ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ಒಟ್ಟಾರೆ 26,351.88 ಕೋಟಿ ರು.ಅನುದಾನದ ಪೈಕಿ 21,875.62 ಕೋಟಿ ರು. (ಶೇ.83) ಅನುದಾನವು ವೇತನ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ. ಉಳಿದ 4,477.26 ಕೋಟಿ ರು. (ಶೇ.17) ಅನುದಾನವನ್ನು ವೇತನೇತರ ವೆಚ್ಚಗಳಿಗೆ ಒದಗಿಸಲಾಗುತ್ತಿದೆ.

ವಿದ್ಯಾ ವಿಕಾಸ, ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿ, ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆಮೂಲಭೂತ ಸೌಕರ್ಯ, ಮಧ್ಯಾಹ್ನ ಉಪಹಾರ, ಕ್ಷೀರಭಾಗ್ಯ ಯೋಜನೆ, ಸಮಗ್ರ ಶಿಕ್ಷಣ ಕರ್ನಾಟಕ, ಶಿಕ್ಷಣ ಗುಣಮಟ್ಟಸುಧಾರಣೆ, ವಿದ್ಯಾರ್ಥಿ ಪ್ರೇರಣಾ ಗುಣಮಟ್ಟ ಭರವಸೆ ಕಾರ್ಯಕ್ರಮ, ಸೈನಿಕ ಶಾಲೆಗಳಿಗೆ ಒಟ್ಟು 4,323.92 ಕೋಟಿ ರು. ಅನುದಾನ ಒದಗಿಸಿದೆ.

SUPPORT THE FILE

Latest News

Related Posts