ಕಲಿಕಾ ಹಾಳೆಗಳ ಜೆರಾಕ್ಸ್‌ ಪ್ರತಿ ಮಾಡಿಸಲು ಭಿಕ್ಷೆಗಿಳಿದ ಶಾಲಾ ಶಿಕ್ಷಕರು; ದಿವಾಳಿಯಾಯಿತೇ ಸರ್ಕಾರ?

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಖಾಸಗಿ ಕಂಪನಿಗೆ ಸರ್ಕಾರಿ ಬೊಕ್ಕಸದಿಂದಲೇ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿರುವ ಸರ್ಕಾರವು ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮದ ಭಾಗವಾಗಿ ಕಲಿಕಾ ಹಾಳೆಗಳ ಜೆರಾಕ್ಸ್‌ ಪ್ರತಿಗಳನ್ನು ಶಾಲೆಗಳಿಗೆ ಪೂರೈಸಲೂ ತನ್ನ ಬಳಿ ಹಣವಿಲ್ಲವೆಂದು ಕೈ ಎತ್ತಿದೆ!

 

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 278.23 ಕೋಟಿ ರು. ಅನುದಾನವಿದ್ದರೂ ರಾಜ್ಯ ಬಿಜೆಪಿ ಸರ್ಕಾರವೀಗ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರನ್ನು ಕಲಿಕಾ ಹಾಳೆಗಳನ್ನು ಜೆರಾಕ್ಸ್‌ ಮಾಡಿಸಲು ಜೋಳಿಗೆ ಕೈಯಲ್ಲಿ ಕೊಟ್ಟು ಅಕ್ಷರಶಃ ಭಿಕ್ಷೆಗೆ ಇಳಿಸಿದೆ.

 

ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬೆಂಕಿಯನ್ನು ತಣ್ಣಗಾಗಿಸುವ ಹೆಸರಿನಲ್ಲಿ ತಿದ್ದೋಲೆ ಹೊರಡಿಸಿ ಮತ್ತಷ್ಟು ಗೊಂದಲ ಎಬ್ಬಿಸಿರುವ ಹೊತ್ತಿನಲ್ಲೇ ವಿದ್ಯಾ ಪ್ರವೇಶ-ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳನ್ನು ಜೆರಾಕ್ಸ್‌ ಮಾಡಿಸಲು ದಾನಿಗಳ ಬಳಿ ಹಣ ಸಂಗ್ರಹಿಸಿ ಎಂದು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ನಿರ್ದೇಶಕರು 2022ರ ಜೂನ್‌ 27ರಂದು ಹೊರಡಿಸಿರುವ ಸುತ್ತೋಲೆಯು ಮುನ್ನೆಲೆಗೆ ಬಂದಿದೆ. ಈ ಸುತ್ತೋಲೆ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆ ಪ್ರತಿ

 

ಸುತ್ತೋಲೆಯಲ್ಲೇನಿದೆ?

 

ದಾನಿಗಳು, ಸಿಎಸ್‌ಆರ್‌ ಅನುದಾನ ಲಭ್ಯತೆ ಮೇರೆಗೆ ಮಗುವಾರು ಅಥವಾ ಒಂದು ತರಗತಿಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿಷಯವಾರು ಕಲಿಕಾ ಹಾಳೆಗಳನ್ನು ಜೆರಾಕ್ಸ್‌ ಮಾಡಿಸಿ ಮಕ್ಕಳಿಂದ ಕಲಿಕಾ ಅಭ್ಯಾಸ ಚಟುವಟಿಕೆಗಳನ್ನು ಜೆರಾಕ್ಸ್ ಮಾಡಿಸಿದ ಅಭ್ಯಾಸ ಹಾಳೆಗಳಲ್ಲಿ ಅಥವಾ ನೋಟ್‌ ಪುಸ್ತಕಗಳಲ್ಲಿ ಮಾಡಿಸಬೇಕು.

 

ದಾನಿಗಳ ನೆರವು ಪಡೆಯಬೇಕು ಎಂದು ಸುತ್ತೋಲೆ ಹೊರಡಿಸಿರುವ ಪ್ರತಿ

 

ಅಥವಾ ಶಾಲೆಯಲ್ಲಿ ಲಭ್ಯವಿರುವ ಶಾಲಾನುದಾನ, ಎಸ್‌ಡಿಎಮ್‌ಸಿ ಅನುದಾನ ಇತ್ಯಾದಿ ಯಾವುದೇ ಸರ್ಕಾರದ ಅನುದಾನವನ್ನು ಬಳಸುವುದಾದಲ್ಲಿ ಒಂದು ತರಗತಿ/ವಿಭಾಗಕ್ಕೆ ಒಂದು ವಿಷಯಕ್ಕೆ ಒಂದು ಪ್ರತಿಯಂತೆ ಮಾತ್ರ ಜೆರಾಕ್ಸ್‌ ಪ್ರತಿ ಮಾಡಿಸಿ ಪ್ರತಿ ಆಧಾರದಿಂದ ಎಲ್ಲಾ ಮಕ್ಕಳಿಂದ ಅವರವರ ನೋಟ್‌ ಪುಸ್ತಕಗಳಲ್ಲಿ ಕಲಿಕಾ ಚಟುವಟಿಕೆಗಳನ್ನು ಮಾಡಿಸಲು ತಗರಗತಿ ಶಿಕ್ಷಕರು ಕ್ರಮವಹಿಸುವುದು ಎಂದು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನೆ ನಿರ್ದೇಶಕರು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

 

ಈ ಸುತ್ತೋಲೆಯನ್ನು ಪಾಲಿಸಲು ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ಮುಖ್ಯ ಶಿಕ್ಷಕರು ಮತ್ತು ತರಗತಿ ಶಿಕ್ಷಕರು 38 ವಿಷಯಗಳ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಸಾಮರ್ಥ್ಯ ಆಧರಿತ ಕಲಿಕಾ ಹಾಳೆಗಳ ಜೆರಾಕ್ಸ್‌ಗೆ ತಗುಲುವ ಅಂದಾಜು 5,000 ರು. ಗಳಿಗಾಗಿ ದಾನಿಗಳನ್ನು ಹುಡುಕತ್ತ ಇದೀಗ ಅಕ್ಷರಶಃ ಜೋಳಿಗೆ ಹಿಡಿದು ನಿಂತಿದ್ದಾರೆ.

 

ಸೀಮೆಸುಣ್ಣ ಡಸ್ಟರ್‌, ರಿಜಿಸ್ಟ್ರರ್, ನೋಂದಣಿ, ಹಾಜರಿ ಪುಸ್ತಕ, ಕಸಪೊರಕೆ, ನಗದು ವಹಿ ರಿಜಿಸ್ಟರ್‌, ಅಂಕಪಟ್ಟಿ ವಹಿ, ವಿದ್ಯುತ್‌ ಬಿಲ್‌ ಸೇರಿ ಇದಕ್ಕೆ ಶಾಲಾನುದಾನವೆಂದು ವಾರ್ಷಿಕವಾಗಿ ಪ್ರತಿ ಶಾಲೆಯಲ್ಲಿ 100 ಮಕ್ಕಳಿದ್ದರೆ 25,000 ರು., 200 ಮಕ್ಕಳಿದ್ದರೆ 50,000 ರು. 250 ಮಕ್ಕಳಿಗೂ ಹೆಚ್ಚಿದ್ದರೆ 75,000 ರು. ಶಾಲಾನುದಾನ ನೀಡಲು ಆದೇಶವಿದೆ.

 

ಕಳೆದ ಶೈಕ್ಷಣಿಕ ಸಾಲಿನಲ್ಲಿ ಈ ಸಾಮಗ್ರಿಗಳಿಗೆ ಪ್ರತಿ ಶಾಲೆಯು ಕನಿಷ್ಠ 22,000 ರು. ಗಳಿಂದ ಗರಿಷ್ಠ 25,000 ರು. ಖರ್ಚು ಮಾಡಿದೆ. ಆದರೆ ಸರ್ಕಾರವು ಇದುವರೆಗೆ ನೀಡಿರುವುದು ಕೇವಲ 6,250 ರು. ಮಾತ್ರ. ಉಳಿದ ಹಣವನ್ನು ನೀಡಿಲ್ಲ. ಅದೇ ರೀತಿ ರಾಜ್ಯದ ಬಹುತೇಕ ಹಿರಿಯ ಪ್ರಾಥಮಿಕ, ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಶಾಲಾನುದಾನ ರೂಪದಲ್ಲಿ ಬಿಡಿಗಾಸನ್ನೂ ಕೊಟ್ಟಿಲ್ಲ. ಎಂದು ಗೊತ್ತಾಗಿದೆ.

 

‘ಕೋವಿಡ್‌ ಸಾಂಕ್ರಾಮಿಕ ಸನ್ನಿವೇಶದಿಂದಾಗಿ ಕಳೆದ 2 ಶೈಕ್ಷಣಿಕ ವರ್ಷಗಳಲ್ಲಿ ರಾಜ್ಯ ಎಲ್ಲಾ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದನ್ನು ಗಮನಿಸಬಹುದು. ಬೋಧನಾ ಕಲಿಕೆ ಪ್ರಕ್ರಿಯೆಗಳ ಹಿನ್ನಡೆಯಿಂದಾಗಿ ಮಕ್ಕಳಲ್ಲಿ ಉಂಟಾಗಿರು ಕಲಿಕಾ ಅಂತರವನ್ನು ಸರಿದೂಗಿಸುವ ಹಿನ್ನೆಲೆಯಿಂದ ತರಗತಿ 1ರಿಂದ 9ನೇ ತರಗತಿವರೆಗೆ ವಿದ್ಯಾರ್ಥಿಗಳ ಕಲಿಕೆಗೆ ಚೇತರಿಕೆ ನೀಡುವ ಸಲುವಾಗಿ 2022-23ನೇ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಉಪಕ್ರಮವನ್ನು ಅಳವಡಿಸಲಾಗುತ್ತಿದೆ,’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

 

ತರಗತಿ 1ರಿಂದ 3ನೇ ತರಗತಿವರೆಗೆ ಮೊದಲ ಮೂರು ತಿಂಗಳಿಗೆ ವಿದ್ಯಾ ಪ್ರವೇಶ ಅನುಷ್ಠಾನಗೊಂಡಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಶಿಕ್ಷಕರ ಕೈಪಿಡಿ ಹಾಗೂ ಮಕ್ಕಳ ಕಲಿಕಾ ಹಾಳೆಗಳ ಮಾಹಿತಿಯನ್ನು ಅಪ್ಲೋಡ್‌ ಮಾಡಲಾಗಿದೆ. ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನಾತ್ಮಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳಿಗೆ ಕಳಿಸಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.

 

ಕಲಿಕಾ ಚೇತರಿಕೆ ಮುದ್ರಿತ ಸಾಹಿತ್ಯ ಶಾಲೆಗಳಿಗೆ ತಲುಪುವವರೆಗೆ ಮಾತ್ರ ಮಕ್ಕಳ ಕಲಿಕಾ ಸಮಯ ಮತ್ತು ಅವಕಾಶದ ಸಮಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಅಧ್ಯಯನ, ಕಲಿಕಾಂಶ, ಕಲಿಕೆಯ ಫಲಗಳಿಗೆ ಪೂರಕವಾಗಿ ಕಲಿಕೆ ಅಭ್ಯಾಸದ ಚಟುವಟಿಕೆಗಳಿಗೆ ಅವಶ್ಯವಿರುವ ಅಂದರೆ ಈಗಾಗಲೇ ಕಲಿಕಾ ಚೇತರಿಕೆ ತರಬೇತಿ ಮೂಲಕ ಎಲ್ಲಾ ಶಿಕ್ಷಕರಿಗೆ ಅರ್ಥ್ಯೆಯಿಸಲಾಗಿರುವಂತೆ ಆಯಾ ಕಾಲಾವಧಿಗೆ ತಕ್ಕಂತೆ ಆಯಾ ಕಲಿಕೆಯ ಹಾಳೆಗಳನ್ನು ಮಾತ್ರ ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

 

2022-23ನೇ ಸಾಲಿಗೆ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ಒಟ್ಟಾರೆ 26,351.88 ಕೋಟಿ ರು.ಅನುದಾನದ ಪೈಕಿ 21,875.62 ಕೋಟಿ ರು. (ಶೇ.83) ಅನುದಾನವು ವೇತನ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ. ಉಳಿದ 4,477.26 ಕೋಟಿ ರು. (ಶೇ.17) ಅನುದಾನವನ್ನು ವೇತನೇತರ ವೆಚ್ಚಗಳಿಗೆ ಒದಗಿಸಲಾಗುತ್ತಿದೆ.

 

ವಿದ್ಯಾ ವಿಕಾಸ, ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿ, ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆಮೂಲಭೂತ ಸೌಕರ್ಯ, ಮಧ್ಯಾಹ್ನ ಉಪಹಾರ, ಕ್ಷೀರಭಾಗ್ಯ ಯೋಜನೆ, ಸಮಗ್ರ ಶಿಕ್ಷಣ ಕರ್ನಾಟಕ, ಶಿಕ್ಷಣ ಗುಣಮಟ್ಟಸುಧಾರಣೆ, ವಿದ್ಯಾರ್ಥಿ ಪ್ರೇರಣಾ ಗುಣಮಟ್ಟ ಭರವಸೆ ಕಾರ್ಯಕ್ರಮ, ಸೈನಿಕ ಶಾಲೆಗಳಿಗೆ ಒಟ್ಟು 4,323.92 ಕೋಟಿ ರು. ಅನುದಾನ ಒದಗಿಸಿದೆ.

the fil favicon

SUPPORT THE FILE

Latest News

Related Posts