ಬೆಂಗಳೂರು; ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಪಠ್ಯಪುಸ್ತಕ ಪರಿಶೀಲನೆ ಮಾಡಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ರಚನೆಯಾದ ದಿನದಿಂದ ವರದಿ ಸಲ್ಲಿಸುವವರೆಗೂ ಒಂದೇ ಒಂದು ಸಭೆಯನ್ನು ನಡೆಸಿಲ್ಲ.
ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಸಾಹಿತಿ ಬರಗೂರು ರಾಮಚಂದ್ರಪ್ಪ, ಮುಡಂಬಡಿತ್ತಾಯ ಮತ್ತು ಪಠ್ಯ ಪುಸ್ತಕ ಪರಿಶೀಲನೆ ನಡೆಸಲು ರಚನೆಯಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿಗೆ ಪಾವತಿಯಾಗಿರುವ ಗೌರವ ಸಂಭಾವನೆ ಕುರಿತಾದ ಮಾಹಿತಿಯು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಸಮಿತಿಯು ಸಭೆಗಳನ್ನು ನಡೆಸದಿರುವುದು ಮುನ್ನೆಲೆಗೆ ಬಂದಿದೆ.
ರೋಹಿತ್ ಚಕ್ರತೀರ್ಥ ಸಮಿತಿಯು ರಚನೆಯಾದ ದಿನದಿಂದ ವರದಿ ಸಲ್ಲಿಸುವವರೆಗೂ ನಡೆಸಿರುವ ಸಭೆ, ನಡವಳಿ, ಪಾವತಿಸಿರುವ ಸಂಭಾವನೆ ಕುರಿತು ಮಾಹಿತಿ ಪಡೆಯಲು ‘ದಿ ಫೈಲ್’ 2022ರ ಜೂನ್ 13ರಂದು ಆರ್‌ಟಿಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ಪಠ್ಯ ಪುಸ್ತಕ ಸಂಘವು ಮಾಹಿತಿ ನೀಡಿದೆ.
‘ಸಮಿತಿಯು ಕಾರ್ಯಾಗಾರಗಳನ್ನು ಪಠ್ಯಪುಸ್ತಕ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದೆ. ಯಾವುದೇ ಸಭೆಗಳನ್ನು ನಡೆಸಿರುವುದಿಲ್ಲ .ಆದ್ದರಿಂದ ಸಭೆಯ ನಡವಳಿ ಲಭ್ಯವಿರುವುದಿಲ್ಲ,’ ಎಂದು ಎಂದು ಉತ್ತರಿಸಿದೆ. ಆದರೆ ಯಾವ ಯಾವ ದಿನಾಂಕದಲ್ಲಿ ಕಾರ್ಯಾಗಾರಗಳು ನಡೆಸಲಾಗಿದೆ, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಇನ್ನಿತರೆ ವಿವರಗಳನ್ನು ಹಂಚಿಕೊಂಡಿಲ್ಲ. ಬದಲಿಗೆ ಸಮಿತಿ ಸದಸ್ಯರಿಗೆ ಪಾವತಿಸಿರುವ ಉಪಸ್ಥಿತಿ, ಸ್ಥಳೀಯ, ಪ್ರಯಾಣ, ದಿನ ಭತ್ಯೆಗಳ ವಿವರಗಳನ್ನಷ್ಟೇ ಒದಗಿಸಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘವು ನೀಡಿರುವ ಮಾಹಿತಿ ಪ್ರಕಾರ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಸದಸ್ಯರಿಗೆ ಉಪಸ್ಥಿತಿ, ಸ್ಥಳೀಯ, ಪ್ರಯಾಣ ಭತ್ಯೆ ಎಂದು ಒಟ್ಟು 2,42, 980 ರು.ಗಳನ್ನು ಪಾವತಿಸಿದೆ.
ಉಪಸ್ಥಿತಿ ಭತ್ಯೆಯೆಂದು 1,61,000 ರು., ಸ್ಥಳೀಯ ಭತ್ಯೆ 66,300 ರು., ಪ್ರಯಾಣ ಭತ್ಯೆ 9,980, ದಿನಭತ್ಯೆ 5,700 ರು. ಪಾವತಿಸಿದೆ. ಆದರೆ ಸಮಿತಿ ಸದಸ್ಯರು ಎಲ್ಲಿ ಉಪಸ್ಥಿತರಿದ್ದರು, ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿಯನ್ನು ಒದಗಿಸಿಲ್ಲ.
ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಹಲವು ದಾರ್ಶನಿಕರಿಗೆ ಅವಮಾನವಾಗುವಂತೆ ಪರಿಷ್ಕರಿಸಿ ನೈಜ ಸಂಗತಿಗಳನ್ನು ಮರೆಮಾಚಿ, ಸುಳ್ಳುಗಳಿಂದ ಕೂಡಿರುವ ಅಂಶಗಳನ್ನು ತುರುಕುವ ಮೂಲಕ ಇದೇ ಸಮಿತಿಯು ವರದಿಯ ಪೀಠಿಕೆಯಲ್ಲಿನ ಆಶಯಗಳನ್ನು ಉಲ್ಲಂಘಿಸಿತ್ತು.
ಪಠ್ಯ ಪರಿಷ್ಕರಿಸಿದ ರೋಹಿತ್ ಚಕ್ರತೀರ್ಥ ವರದಿ ಸುತ್ತ ‘ದಿ ಫೈಲ್’ನ 10 ವರದಿಗಳು
ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿದ್ದ ಸಮಿತಿಯು ಪರಿಷ್ಕರಿಸಿದ್ದ 83 ಶೀರ್ಷಿಕೆಗಳ ಪಠ್ಯಪುಸ್ತಕಗಳು ಅನುಪಯುಕ್ತ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ತೀರ್ಮಾನಿಸಿದ್ದ ಪಠ್ಯಪುಸ್ತಕಗಳು ಓದುಗರ ಕೈ ಸೇರಬಾರದು ಎಂದು ಸರ್ಕಾರವು ಕ್ರಮಕೈಗೊಂಡಿರುವುದನ್ನು ಸ್ಮರಿಸಬಹುದು.