ಸಿರಿಗೆರೆ ಶ್ರೀಗಳ ವಿರುದ್ಧ ಪಂಡಿತಾರಾಧ್ಯರ ಕಿಡಿ; ಜಮೀನು ಖರೀದಿ, ಬಡ್ಡಿಹಣ, ಲೇವಾದೇವಿ ಕುರಿತಾದ ಪತ್ರ ಬಹಿರಂಗ

photo credit;publictv

ಬೆಂಗಳೂರು; ಸಿರಿಗೆರೆ ತರಳಬಾಳು ಜಗದ್ಗುರು ಮಠದಲ್ಲಿ ನಡೆದಿದೆ ಎನ್ನಲಾದ ಹಣದ ವ್ಯವಹಾರ, ಜಮೀನು ಖರೀದಿ, ಟ್ರಸ್ಟ್‌ ಡೀಡ್‌, ನಿಧಿ ಸಂಗ್ರಹ, ಬಡ್ಡಿ ಹಣ, ಲೇವಾದೇವಿ ವ್ಯವಹಾರ,ಸದ್ಧರ್ಮ ನ್ಯಾಯಪೀಠದಲ್ಲಿ ಮಾಡಿದ ಪಂಚಾಯ್ತಿ ಮತ್ತು ಅಲ್ಲಿ ನಡೆದಿವೆ ಎನ್ನಲಾದ ಹಣಕಾಸಿನ ಲೇವಾದೇವಿಗಳು ಇದೀಗ ಮುನ್ನೆಲೆಗೆ ಬಂದಿವೆ.

 

ಈ ಎಲ್ಲದರ ಕುರಿತು ಪ್ರಶ್ನಿಸಿ ಸಾಣೇಹಳ್ಳಿ ಪಂಡಿತಾರಾಧ್ಯರು ಮಠದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಬರೆದಿರುವ ಪತ್ರವು, ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಅವರ ಮಧ್ಯೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ. ಅಲ್ಲದೆ ಸಿರಿಗೆರೆ ತರಳಬಾಳು ಮಠದ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕೇಳಿ ಬರುತ್ತಿದ್ದ ಆರೋಪಗಳನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳ ಪತ್ರವು ಬಲಪಡಿಸಿದಂತಾಗಿದೆ.

 

‘ಬಡ್ಡಿ ವ್ಯವಹಾರ ಎನ್ನುವ ಪದವು ಬಳಸುವವರಿಗೆ ಮೈ ಮೇಲೆ ಎಚ್ಚರವಿರಬೇಕಿತ್ತು,’ ಎಂದು ಪತ್ರದಲ್ಲಿ ಉಲ್ಲೇಖಿಸಿ ಕಿಡಿ ಕಾರಿರುವ ಸಾಣೇಹಳ್ಳಿ ಪಂಡಿತಾರಾಧ್ಯರು, ತಮ್ಮ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಅವರಿಗೆ ಮಠದ ವೃತ್ತಾಂತವನ್ನು ಕೆದಕಿ ತಿರುಗೇಟು ನೀಡಿದ್ದಾರೆ. ಅದೇ ರೀತಿ ಯಾವ ಕಾರಣಕ್ಕೂ ವಾಟ್ಸ್‌ಪ್‌ ಮಾಡಬಾರದು, ಈ ಮೇಲ್‌ ಮಾಡಬಾರದು, ಸಿರಿಗೆರೆಗೆ ಬರಬಾರದು ಎಂದು ಕಟ್ಟಪ್ಪಣೆ ಮಾಡಿಸಿದ್ದರ ಹಿಂದಿನ ಕರಾಮತ್ತೇನು ಎಂದೂ ಪ್ರಶ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಸಾಣೆಹಳ್ಳಿ ಪಂಡಿರಾತಾಧ್ಯರು 2022ರ ಮೇ 26ರಂದು ಬರೆದಿದ್ದಾರೆ ಎನ್ನಲಾದ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಬರೆದಿರುವ ಪತ್ರದ ಪ್ರತಿ

 

ಈ ಪತ್ರದಲ್ಲಿರುವ ಸಹಿ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ‘ದಿ ಫೈಲ್‌’ ಅವರ ಮೊಬೈಲ್‌ ನಂಬರ್‌ಗೆ ವಾಟ್ಸಾಪ್‌ ಮೂಲಕ ಸಂದೇಶ ಕಳಿಸಿತ್ತು. ಆದರೆ ಪಂಡಿತಾರಾಧ್ಯ ಶ್ರೀಗಳು ಈ ಸಂಬಂಧ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

 

ಸಿರಿಗೆರೆ ತರಳಬಾಳು ಮಠದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಕುರಿತು ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಯಾವುದೇ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಅವರ ವಿರುದ್ಧ ನಡೆಯುತ್ತಿದೆ ಎನ್ನಲಾಗಿರುವ ವ್ಯವಸ್ಥಿತ ಅಪಪ್ರಚಾರ ಮತ್ತು ಆರೋಪಗಳು ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಮೇ 26ರಂದು ಬರೆದಿರುವ ಪತ್ರ ಮುಖೇನ ಸ್ಪಷ್ಟನೆ ಮತ್ತು ತಿರುಗೇಟು ನೀಡಿರುವುದು ಪತ್ರದಲ್ಲಿ ಪ್ರಸ್ತಾಪಿಸಿರುವ ಕೆಲ ಅಂಶಗಳಿಂದಾಗಿ ಗೊತ್ತಾಗಿದೆ.

 

‘ದಿ ಫೈಲ್‌’ಗೆ ಲಭ್ಯವಿರುವ 9 ಪುಟಗಳ ಪತ್ರದ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ.

 

6ನೇ ಪ್ಯಾರಾದಲ್ಲಿರುವ ಬಡ್ಡಿ ವ್ಯವಹಾರ ಎನ್ನುವ ಪದ ಬಳಸುವವರಿಗೆ ಮೈ ಮೇಲೆ ಎಚ್ಚರವಿರಬೇಕಿತ್ತು. ಹೆಬ್ಬಳ್ಳಿ ಮಲ್ಲಿಕಾರ್ಜುನ ಅವರ ಜಮೀನಿನ ಪೂರ್ಣ ವಿವರ ತಿಳಿಯದೇ ಕಲ್ಪನೆ ಮಾಡಿಕೊಂಡು ಬರೆದಿರುವುದು ಸರಿಯಲ್ಲ. 2015ರಲ್ಲೇ ಶ್ರೀ ಜಗದ್ಗುರುಗಳು ಅವರು ಈ ಜಮೀನಿನ ವ್ಯವಹಾರದ ಬಗ್ಗೆ ಕೇಳಿದಾಗ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇದುವರೆಗೂ ಮೌನವಾಗಿದ್ದು ಈಗ ನಿಜಲಿಂಗಪ್ಪನವರ ಮೂಲಕ ಬರೆಸುವ ಉದ್ದೇಶ ಏನೆಂದು ಯಾರಿಗಾದರೂ ಅರ್ಥವಾಗುತ್ತದೆ.

 

ನಾವು ಮಾಡುವುದು ಲೇವಾದೇವಿಯೆಂದಾದರೆ ತರಳಬಾಳು ಜಗದ್ಗುರುಗಳು ನಿಧಿ ಮತ್ತಿತರ ಹಣ ಸಂಗ್ರಹಿಸಿ ಅದನ್ನು ಬ್ಯಾಂಕ್‌ನಲ್ಲಿಟ್ಟು ಪಡೆದ ಬಡ್ಡಿ ಹಣವನ್ನೂ ಲೇವಾದೇವಿ ಎನ್ನಬೇಕೆ? ಇವರು ಮಾಡುವುದು ಮಾತ್ರ ಸಮಾಜಕ್ಕೆ, ಬೇರೆಯವರು ಮಾಡುವುದು ಸ್ವಾರ್ಥಕ್ಕೆ ಎಂದು ಸುಳ್ಳು ಆರೋಪ ಮಾಡುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿತ್ತು. ಎಲ್ಲ ವ್ಯವಹಾರಕ್ಕೂ ಲೆಕ್ಕವಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

 

7ನೇ ಪ್ಯಾರಾದಲ್ಲಿರುವ ಇಟ್ಟಿಗೆ ಗ್ರಾಮದ ಜಮೀನಿನ ಬಗ್ಗೆಯೂ ನಿಜಲಿಂಗಪ್ಪನವರಿಗೆ ಪೂರ್ಣ ಮಾಹಿತಿ ಇಲ್ಲ. ಶ್ರೀಜಗದ್ಗುರುಗಳಾದವರೂ ನಮ್ಮನ್ನು ಕೇಳದೇ ಕಡೂರಿನ ವಕೀಲ ಜಯಣ್ಣನ ಮಾತುಗಳಿಗೆ ಮಾನ್ಯತೆ ನೀಡಿರುವುದು ವಿಷಾದನೀಯ. ಸದರಿ ಜಮೀನಿನ ಮೂಲ ಮಾಲೀಕರೇ ಬೇರೆ. ಹರಾಜಿನಲ್ಲಿ ಕೊಂಡವರೇ ಬೇರೆ. ಕೊಂಡವರು ನಮಗೆ ದಾನ ಮಾಡಿದ್ದಾರೆ. ಅದಿನ್ನೂ ವ್ಯಾಜ್ಯದಲ್ಲೇ ಇದೆ. ಶ್ರೀ ಜಗದ್ಗುರುಗಳ ಅವರ ಹೆಸರಿನಲ್ಲೂ ಅನೇಕ ಜಮೀನುಗಳು ಮತ್ತು ಸೈಟುಗಳು ಇವೆ. ಅವುಗಳ ವ್ಯವಹಾರ ಹೇಗೆ ನಡೆದಿದೆ ಎಂದು ಅವರಿಗೇ ಗೊತ್ತು.

 

ಪ್ಯಾರಾ ನಂ 8ರಲ್ಲಿ ನಾವು ಮೂಲ ಮಠಕ್ಕೆ ಸರಿಯಾದ  ಲೆಕ್ಕ ಒಪ್ಪಿಸದೇ ಮರೆಮಾಚಿರುವುದು ಇತ್ತೀಚೆಗೆ ಗಮನಕ್ಕೆ ಬದ ಮೇಲಿನ ಪ್ರಕರಣಗಳಿಂದ ಕಂಡುಬಂದಿರುತ್ತದೆ ಎನ್ನುವ ಮೂಲಕ ಸಾರ್ವಜನಿಕರು ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಉದ್ದೇಶವಿರಬಹುದು. ಶಿಷ್ಯರಿಗೆ ನಾವೇನು ಎನ್ನುವ ಸತ್ಯ ಗೊತ್ತಿದೆ.

 

ನಾವು ಮಾಡಿರುವ ಪ್ರತಿಯೊಂದು ವ್ಯವಹಾರಕ್ಕೂ ಲೆಕ್ಕವಿದೆ. ಸಾಣೇಹಳ್ಳಿಯ ನಾಟಕೋತ್ಸವ ಮತ್ತಿತರ ಕಾರ್ಯಕ್ರಮಗಳೀಗೆ ಶ್ರೀ ಜಗದ್ಗುರುಗಳವರು ದಯಮಾಡಿಸಿದಾಗ ಕೆಲವು ಕಟ್ಟಡಗಳ ಉದ್ಘಾಟನೆಯನ್ನು ಸಹ ಮಾಡಿದ್ದಾರೆ. ಇಷ್ಟೆಲ್ಲ ಕಟ್ಟಡಗಳಿಗೆ ಹೇಗೆ ಹಣ ಬಂತು, ಶಿವಸಂಚಾರದ ಖರ್ಚಿಗೆ ಏನು ಮಾಡಿಕೊಂಡಿದ್ದೀರಿ ಎಂದು ಆಗ ಏಕೆ ಕೇಳಿರಲಿಲ್ಲ. ಆಗ ಇಲ್ಲದ ಅನುಮಾನ ಈಗ ದಿಢೀರನೆ ಉದ್ಭವಿಸಲು ಕಾರಣವೇನು,

 

‘ಸಾಣೆಹಳ್ಳಿಯ ಶ್ರೀಗಳು ತಮ್ಮ ಮನಸ್ಸಿಗೆ ತಿಳಿದಂತೆ ಮಾಡಿದ ಅನೇಕ ಜಮೀನುಗಳ ವ್ಯವಹಾರ ಮತ್ತು ಹಣಕಾಸು ಲೇವಾದೇವಿ ಲೆಕ್ಕ ಇನ್ನೂ ಬಗೆಹರಿದಿರುವುದಿಲ್ಲ. ಈ ರೀತಿ ಬಡ್ಡಿ ವ್ಯವಹಾರ ಮಾಡುವುದು ಧರ್ಮಬಾಹಿರ ಮತ್ತು ಕಾನೂನು ಬಾಹಿರ. ಇದನ್ನು ಪ್ರಶ್ನಿಸಿದಾಗ ನಮ್ಮ ಸಮಾಜದ ಪ್ರಗತಿ ಕುರಿತ ಸಮಾಲೋಚನಾ ಸಭೆ ಎಂಬ ಹೆಸರಿನಲ್ಲಿ 2022ರ ಏಪ್ರಿಲ್‌ 24ರಂದು ಸಾಣೇಹಳ್ಳಿ ಶ್ರೀಮಠದಲ್ಲಿ ಕರೆದಿದ್ದರು,’ ಎಂದೆಲ್ಲ ಹಸಿಸುಳ್ಳುಗಳನ್ನು ಹರಿಬಿಟ್ಟಿದ್ದಾರೆ. ಯಾವುದು ಧರ್ಮಬಾಹಿರ, ಯಾವುದು ಕಾನೂನುಬಾಹಿರ ಎನ್ನುವ ಅರಿವು ನಮಗೂ ಇದೆ.

 

ಅವರು ಸದ್ಧರ್ಮ ನ್ಯಾಯಪೀಠದಲ್ಲಿ ಮಾಡಿದ ಪಂಚಾಯತಿಯ ಎಲ್ಲ ವ್ಯವಹಾರಗಳೂ ಬಗೆಹರಿದಿವೆಯೇ, ಅಲ್ಲೇನು ಹಣಕಾಸಿನ ಲೇವಾದೇವಿ ಇಲ್ಲವೇ, ಅವರ ಧೋರಣೆ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎನ್ನುವಂತಾಗಿದೆ. ನಾವು ಮಾಡಿರುವುದು ಮನಸ್ಸಿಗೆ ತಿಳಿದಂತೆ ಅಲ್ಲ. ವಿವೇಕದಿಂದಲೇ ಎಲ್ಲ ಕಾರ್ಯಗಳನ್ನೂ ಮಾಡಿದ್ದೇವೆ.

 

ಶ್ರೀ ಶಿವಕುಮಾರ ಕಲಾಸಂಘ, ಶಿವಸಂಚಾರ, ಶಿವದೇಶ ಸಂಚಾರ, ಭಾರತ ಸಂಚಾರ, ಬಸವ ಸಂಚಾರ, ಶಿವಕುಮಾರ ರಂಗಶಾಲೆ, ಶ್ರಾವಣಸಂಜೆ ಮತ್ತೆ ಕಲ್ಯಾಣ, ಸರ್ವ ಶರಣ ಸಮ್ಮೇಳನ, ಸಾಣೆಹಳ್ಳಿಯಲ್ಲಿ ವರ್ಷದುದ್ದಕ್ಕೂ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳು ಪುಸ್ತಕ ಪ್ರಕಟಣೆ, ಇಷ್ಟಲಿಂಗ ದೀಕ್ಷೆ ಮುಂತಾದವುಗಳ ಮೂಲಕ ನೈಜ ಬಸವತತ್ವ ಪ್ರಸಾರ, ಪ್ರಚಾರ ಮಾಡಿದ್ದು ಬಸವತತ್ವ ಪ್ರಚಾರಕ್ಕಾಗಿ ದೇಶ ವಿದೇಶಗಳಿಗೆ ಹೋಗಿದ್ದು ತಪ್ಪೇ,

 

ಪ್ಯಾರಾ ನಂ 10ರಲ್ಲಿ ಪ್ರಸ್ತಾಪವಾಗಿರುವ ಸಾಣೇಹಳ್ಳಿ ಶಾಖಾಮಠದ ಗುರುಪಾದ ಸ್ವಾಮಿಗಳಿಂದ ಬರೆಸಿಕೊಂಡ ತಪ್ಪೊಪ್ಪಿಗೆ ಪತ್ರದ ವಿಚಾರ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಬಂದಿಲ್ಲ. ಇತಿಹಾಸದಲ್ಲಿ ಏನೇನು ಘಟನೆಗಳು ನಡೆದಿರುತ್ತವೆಯೋ ಬಲ್ಲವರಾರು? 142 ವರ್ಷಗಳ ಹಿಂದಿನ ಇತಿಹಾಸವನ್ನು ಈಗ ಕೆದಕುವ ಅಗತ್ಯವೇನಿದೆ, ಹೀಗೆ ಕೆದಕುವ ಮೂಲಕ ನಮ್ಮನ್ನು ಸಹ ಅಪರಾಧಿ ಎಂದು ಸಾರ್ವಜನಿಕರೆದರು ಸಾಬೀತುಪಡಿಸುವ ದುರುದ್ದೇಶ ಇದರ ಹಿಂದೆ ಇದೆ ಎಂದು ಒಬ್ಬ ದಡ್ಡನಿಗೂ ಗೊತ್ತಾಗುತ್ತದೆ.

 

 

ಪ್ಯಾರಾ 11ರಲ್ಲಿ ಸಾಣೇಹಳ್ಳಿ ಶ್ರೀಗಳವರು ತಮ್ಮ ವ್ಯಾಪ್ತಿಯನ್ನು ಮೀರಿ 2022ರ ಏಪ್ರಿಲ್‌ 24ರಂದುಕರೆದಿರುವ ಸಭೆ ಅಕ್ರಮವೆಂದೂ ಶಾಖಾಮಠದ ಸ್ವಾಮಿಗಳಾದ ಸಾಣೇಹಳ್ಳಿ ಶ್ರೀಗಳವರಿಗೆ ಈ ರೀತಿ ಇಡೀ ಸಮಾಜದ ಸಭೆಯನ್ನು ಕರೆಯಲು ಯಾವ ಅಧಿಕಾರ ಇಲ್ಲವೆಂದೂ ಈ ಮೀಟಿಂಗ್‌ನಲ್ಲಿ ತೀರ್ಮಾನವಾಗಿರುತ್ತದೆ ಎಂದಿರುವುದು ಆಶ್ಚರ್ಯಕರವಾಗಿದೆ.

 

ಈ ನಿರ್ಣಯವನ್ನು ಅಧ್ಯಕ್ಷರಾಗಲಿ, ಶ್ರೀ ಜಗದ್ಗುರುಗಳಾಗಲೀ ನಮಗೆ ಫೋನ್‌ ಇಲ್ಲವೇ ಲಿಖಿತ ಮೂಲಕ ತಿಳಿಸಿಲ್ಲ. ಜಮೀನು ಮತ್ತು ಹಣಕಾಸಿನ ಲೇವಾದೇವಿಯನ್ನು ತಪಾಸಣೆ ಮಾಡಲೂ ಸಹ ಒಂದು ಲೆಕ್ಕ ಪರಿಶೋಧನಾ ಸಮಿತಿ ನೇಮಕಗೊಂಡಿದೆ ಎಂದಿದೆ. ಆ ಸಮಿತಿಯ ಸದಸ್ಯರು ಯಾರು, ಏಕೆ ಇದುವರೆಗೂ ಬಂದು ಪರಿಶೀಲಿಸಿಲ್ಲ. ನಮ್ಮ ಮೆಲೆ ಭಕ್ತರು ಸಿಡಿದೇಳಬೇಕೆಂದೇ ಇಂಥ ಅಪ್ಪಟ ಸುಳ್ಳುಗಳ ಸೃಷ್ಟಿಯಾಗುತ್ತಿದೆಯೇ

 

ಪ್ಯಾರಾ ನಂ 13ರಲ್ಲಿ ಸಂಘದ ಬೈಲಾ ಮತ್ತು ಏಕವ್ಯಕ್ತಿ ಟ್ರಸ್ಟ್‌ ಡೀಡ್‌ ವಿಚಾರವಿದೆ. 1990ರಲ್ಲಿ ಟ್ರಸ್ಟ್‌ ಡೀಡ್ ರಚನೆಯಾಗಿದ್ದು ನಮ್ಮ ಗಮನಕ್ಕೆ  ಬಂದಿಲ್ಲ. ಆದರೂ ನೀವು ಸಹಿ ಮಾಡಿದ್ದೀರಲ್ಲಾ ಎಂದು ಯಾರಾದರೂ ನಮ್ಮನ್ನೇ ಕೇಳಬಹುದು. ಶ್ರೀ ಜಗದ್ಗುರುಗಳ ಮೇಲಿನ ನಂಬಿಕೆಯಿಂದ ಅವರು ಏನೇ ಕಳಿಸಿದರೂ ಸಂಸ್ಥೆಯ, ಮಠದ ಆಡಳಿತದ ಹಿತದೃಷ್ಟಿಯಿಂದಲೇ ಕಳಿಸಿರುತ್ತಾರೆಂದು ಕೆಲವು ದಾಖಲೆಗಳಿಗೆ ಓದದೇ ಸಹಿ ಮಾಡಿದ್ದೇವೆ. ಟ್ರಸ್ಟ್‌ ಡೀಡ್‌ಗೂ ಅದೇ ನಂಬಿಕೆಯಿಂದ ಸಹಿ ಮಾಡಿರಬಹುದು. ಮಲ್ಲಿಕಾರ್ಜುನ ಶ್ರೀಗಳಾಗಲೀ, ಶ್ರೀ ಹಿರಿಯ ಜಗದ್ಗುರುಗಳಾಗಲೀ,. ನಾವಾಗಲಿ ಟ್ರಸ್ಟ್‌ ಡೀಡ್‌ ಹಿನ್ನೆಲೆಯಲ್ಲಿ ಕರೆದಿದ್ದರೆನ್ನುವ ಸಭೆಯಲ್ಲಿ ಭಾಗವಹಿಸಿಲ್ಲ ಎನ್ನುವ ಸತ್ಯ ಶ್ರೀ ಜಗದ್ಗುರುಗಳಿಗೂ ಗೊತ್ತು.

 

ಇಂಗ್ಲೀಷ್‌ನಲ್ಲಿರುವ 24 ಪುಟಗಳ ಈ ಟ್ರಸ್ಟ್‌ ಡೀಡ್‌ನ್ನು ಯಾರೊಬ್ಬರೂ ಓದಿ ಸಹಿ ಮಾಡಿದ್ದಾರೆ ಎಂದು ಹೇಳಲಾಗದು. ಕೇವಲ ಇನ್‌ಕಮ್‌ ಟ್ಯಾಕ್ಸ್‌ಗಾಗಿ ಅದು ರಚನೆ ಆಗಿದ್ದರೆ ಇದುವರೆಗೂ ಏಕೆ ಬಯಲಿಗೆ ಬಂದಿರಲಿಲ್ಲ? ಆ ಟ್ರಸ್ಟ್‌ ಡೀಡ್‌ನಲ್ಲಿ ಏನಿದೆ ಎಂದು ಒಬ್ಬ ಭಕ್ತರಿಗಾದರೂ ಗೊತ್ತಿದೆಯೇ, ಪಂಡಿತಾರಾಧ್ಯ ಶ್ರೀಗಳೂ ಸಹಿ ಮಾಡಿದ್ದಾರೆ ಎಂದು ಪದೇ ಪದೇ ಭಕ್ತರಿಗೆ ಹೇಳಿ ದಾರಿತಪ್ಪಿಸುವ ಅಗತ್ಯವೇನಿದೆ ಎಂದೂ ಸಾಣೆಹಳ್ಳಿ ಪಂಡಿತಾರಾಧ್ಯರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

the fil favicon

SUPPORT THE FILE

Latest News

Related Posts