2 ವರ್ಷದಲ್ಲಿ ಫ್ಲಿಪ್‌ಕಾರ್ಟ್‌ ಸೇರಿ ಬೃಹತ್‌ ಉದ್ದಿಮೆಗಳ 3,188.17 ಕೋಟಿ ಬಡ್ಡಿ, ದಂಡ ಮನ್ನಾ

ಬೆಂಗಳೂರು; ಕರ ಸಮಾಧಾನ ಯೋಜನೆಗಳ ಹೆಸರಿನಲ್ಲಿ ಫ್ಲಿಪ್‌ ಕಾರ್ಟ್‌, ಲಾರ್ಸೆನ್‌ ಅಂಡ್‌ ಟೂಬ್ರೋ ಪ್ರೈ ಲಿ., (ಎಲ್‌ ಅಂಡ್‌ ಟಿ ) ನಿತೀಷ್‌ ಎಸ್ಟೇಟ್ಸ್‌, ಬಿಇಎಂಎಲ್‌, ಕಿಡ್ಸ್‌ಕೆಂಪ್‌ ಸೇರಿದಂತೆ ಸಾವಿರಾರು ಕೋಟಿ ರು. ವಹಿವಾಟು ನಡೆಸುವ ಹಲವು ಕಂಪನಿಗಳಿಗೆ ಕಳೆದೆರಡು ವರ್ಷಗಳಲ್ಲಿ ವಿಧಿಸಿದ್ದ ಬಡ್ಡಿ ಮತ್ತು ದಂಡದ ಮೊತ್ತ 3,188.17 ಕೋಟಿ ರು.ಗಳನ್ನು ಮನ್ನಾ ಮಾಡಿದೆ.

 

ಕರ್ನಾಟಕ ಮಾರಾಟ ತೆರಿಗೆ, ಮೌಲ್ಯ ವರ್ಧಿತ, ಕೇಂದ್ರ ಮಾರಾಟ ತೆರಿಗೆ, ವಿಲಾಸಿ, ಕೃಷಿ ವರಮಾನ, ಮನರಂಜನಾ ತೆರಿಗೆ, ಕರ್ನಾಟಕ ಸರಕುಗಳ ಪ್ರವೇಶ ತೆರಿಗೆ ಅಡಿಯಲ್ಲಿ ತೆರಿಗೆ ನಮೂನೆ, ಸ್ವಘೋಷಿತ ತೆರಿಗೆ, ಹುಟ್ಟುವಳಿ ತೆರಿಗೆ ಬಾಧ್ಯತೆ ಕಡಿಮೆ ಘೋಷಿಸಿರುವುದು ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಬಡ್ಡಿ ಮತ್ತು ದಂಡವನ್ನು ವಿಧಿಸಲಾಗಿತ್ತು.

 

ದಾವೋಸ್‌ನಲ್ಲಿನಲ್ಲಿ  ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಕರ್ನಾಟಕವು ಉದ್ಯಮಿಗಳ ಸ್ನೇಹಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕರಸಮಾಧಾನ ಯೋಜನೆಯಡಿಯಲ್ಲಿ 3,188.17 ಕೋಟಿ ರು. ಬಡ್ಡಿ ಮತ್ತು ದಂಡ ಮನ್ನಾ ಮಾಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

2019ರಲ್ಲಿ ಜಾರಿಗೆ ಸಮಗ್ರ ಕರ ಸಮಾಧಾನ ಮತ್ತು 2021ರಲ್ಲಿ ಕರಸಮಾಧಾನ ಯೋಜನೆಯಡಿಯಲ್ಲಿ ಶೇ.100ರಷ್ಟು ಬಡ್ಡಿ ಮತ್ತು ದಂಡ ಮನ್ನಾ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಅದರಂತೆ 2019 ಮತ್ತು 2021ರಲ್ಲಿ ಒಟ್ಟು 3,188.17 ಕೋಟಿ ರು. ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಿದೆ. ಈ ಸಂಬಂಧ ‘ದಿ ಫೈಲ್‌’ಗೆ ದಾಖಲೆ ಮತ್ತು ಅಂಕಿ ಅಂಶಗಳು ಲಭ್ಯವಾಗಿವೆ.

 

ತೆರಿಗೆ ನಮೂನೆ ಸಲ್ಲಿಸದೇ ಇರುವ ಪ್ರಕರಣ, ತೆರಿಗೆ ನಮೂನೆ ಸಲ್ಲಿಸಿದ್ದರೂ ಸ್ವ-ಘೋಷಿತ ತೆರಿಗೆ ಬಾಧ್ಯತೆ ಪಾವತಿ ಮಾಡದೇ ಇರುವುದು, ಹುಟ್ಟುವಳಿ ತೆರಿಗೆ ಬಾಧ್ಯತೆ ಕಡಿಮೆ ಘೋಷಣೆ ಮಾಡಿರುವುದು, ಹೂಡುವಳಿ ತೆರಿಗೆ ಕ್ಲೇಮ್‌ನ್ನು ಹೆಚ್ಚಾಗಿ ಘೋಷಣೆ ಮಾಡಿರುವುದು, ವ್ಯಾಟ್‌ ನಮೂನೆ -240 (ವಾರ್ಷಿಕ ಲೆಕ್ಕ ಪರಿಶೋಧನಾ ವರದಿ_ ಸಲ್ಲಿಸದೇ ಇರುವ ಪ್ರಕರಣಗಳಲ್ಲಿ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತಿತ್ತು.

 

 

ಕೈಗಾರಿಕೋದ್ಯಮದ ಸಂಘ ಸಂಸ್ಥೆಗಳ ಮನವಿಯನ್ನು ಪರಿಗಣಿಸಿ ಕರಸಮಾಧಾನ ಯೋಜನೆಯಡಿ ಪ್ರಯೋಜನ ಪಡೆಯಲು ಎರಡು- ಮೂರು ಬಾರಿ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಹೀಗಾಗಿಯೇ ಒಟ್ಟು 3,188.17 ಕೋಟಿ ರು. ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ಟಿಪ್ಪಣಿಯಿಂದ ಗೊತ್ತಾಗಿದೆ.

 

ಸಮಗ್ರ ಕರ ಸಮಾಧಾನ ಮತ್ತು ಕರಸಮಾಧಾನ ಯೋಜನೆಯಡಿಯಲ್ಲಿ 2019ರಲ್ಲಿ ಒಟ್ಟು 1,93,251 ಮತ್ತು 2021ರಲ್ಲಿ 1,33,328 ಅರ್ಜಿಗಳು ಸಲ್ಲಿಕೆಯಾಗಿದ್ದವು. 2019ರಲ್ಲಿ 692.63 ಕೋಟಿ ರು. ಮತ್ತು 2021ರಲ್ಲಿ 400.61 ಕೋಟಿ ರು ಸೇರಿ 1,093.24 ಕೋಟಿ ರು. ತೆರಿಗೆ ಪಾವತಿಸಲಾಗಿತ್ತು. 2019ರಲ್ಲಿ 1,168.50 ಕೋಟಿ ರು., 2021ರಲ್ಲಿ 1,082.27 ಕೋಟಿ ರು. ಬಡ್ಡಿ ಮನ್ನಾ ಮಾಡಿದ್ದರೆ 2019ರಲ್ಲಿ 420.93 ಕೋಟಿ ಮತ್ತು 2021ರಲ್ಲಿ 516.45 ಕೋಟಿ ರು. ದಂಡ ಮನ್ನಾ ಮಾಡಲಾಗಿದೆ.

 

ಫ್ಲಿಪ್‌ ಕಾರ್ಟ್ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ಗೆ 5,22,826 ರಷ್ಟು ಬಡ್ಡಿಮೊತ್ತ ಮತ್ತು ದಂಡವನ್ನು ಕರಸಮಾಧಾನ ಯೋಜನೆಯಡಿಯಲ್ಲಿ ಮನ್ನ ಆಮಾಡಲಾಗಿದೆ. ಸನ್‌ ಲಕ್ಸ್‌ ಟೆಕ್ನಾಲಾಜೀಸ್‌ ಪ್ರೈ ಲಿಮಿಟೆಡ್‌ 3,29,488 ರು., ಆರ್‌ ಕೆ ಕನ್ಸ್‌ಟ್ರಕ್ಷನ್ಸ್‌ 7,64,266 ರು, ಬಿಇಎಂಎಲ್‌ ಲಿಮಿಟೆಡ್‌ ತೆರಿಗೆಯನ್ನು ವಿಳಂಬವಾಗಿ ಪಾವತಿಸಿದ್ದರಿಂದಾಗಿ 15,57,063 ರಷ್ಟು, ಲಾರ್ಸನ್‌ ಅಂಡ್‌ ಟೂಬ್ರೋ ಪ್ರೈ ಲಿ., 25,94, 194 ರು.,ಬಡ್ಡಿ ಮನ್ನಾ ಮಾಡಿರುವುದು ತಿಳಿದು ಬಂದಿದೆ.

 

ಫ್ಲಿಪ್‌ ಕಾರ್ಟ್‌ ಕಂಪನಿ ಮೇಲೆ ವಿಧಿಸಿದ್ದ ಬಡ್ಡಿ, ದಂಡದ ಮೊತ್ತ ಮನ್ನಾ ಮಾಡಿರುವ ಪ್ರತಿ

 

ಅದೇ ರೀತಿ ಮದ್ಯ ಮಾರಾಟದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ 2014ರ ಮಾರ್ಚ್‌ನಿಂದ 2016ರ ಮಾರ್ಚ್‌ ಅವಧಿಗೆ ಮದ್ಯ ಮಾರಾಟದ 226.19 ಕೋಟಿ ವಹಿವಾಟಿನ ಮೇಲೆ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿರಲಿಲ್ಲ ಎಂದು ಸಿಎಜಿ ಆಕ್ಷೇಪ ಎತ್ತಿತ್ತು.

 

ಶೇ. ಐದುವರೆ ದರದಲ್ಲಿ ಪಾವತಿಸಬೇಕಿದ್ದ ತೆರಿಗೆಯು 12.43 ಕೋಟಿ ಇತ್ತು. ಈ ಪೈಕಿ ಕೇವಲ 1.54 ಕೋಟಿ ಮಾತ್ರ ಪಾವತಿಯಾಗಿತ್ತು. ಇನ್ನುಳಿದ 10.89 ಕೋಟಿ ರು. ಬಾಕಿ ಇತ್ತು. ಕರ್ನಾಟಕ ಮೌವತೆ ಅಧಿನಿಯಮ 2003ರ ಪರಿಚ್ಛೇಧಗಳು 72(2)ಮತ್ತು 36ರ ಅಡಿಯಲ್ಲಿ 1.09 ಕೋಟಿ ಮತ್ತು 3.40 ಕೋಟಿ ರು. ದಂಡ ಮತ್ತು ಬಡ್ಡಿ ಪಾವತಿಗೆ ಬಾಕಿ ಇತ್ತು.

SUPPORT THE FILE

Latest News

Related Posts