ಕಳಂಕಿತ ಅಧಿಕಾರಿಯ ಪುನರ್‌ ನೇಮಕಕ್ಕೆ 4-5 ಕೋಟಿ ವ್ಯವಹಾರ; ನಿಗಮದ ಅಧ್ಯಕ್ಷರ ವಿರುದ್ಧವೇ ದೂರು

photo credit-dnaindia

ಬೆಂಗಳೂರು; ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರು. ವಂಚಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಸೇವೆಯಿಂದಲೇ ವಜಾ ಆಗಿದ್ದ ನಿಗಮದ ಅಂದಿನ ಪ್ರಧಾನ ವ್ಯವಸ್ಥಾಪಕ ಜಿ ಕಿಶೋರ್‌ಕುಮಾರ್‌ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ನಿಗಮದ ಹಾಲಿ ಅಧ್ಯಕ್ಷ ಡಾ ಬೇಳೂರು ರಾಘವೇಂದ್ರಶೆಟ್ಟಿ ಅವರು ನಾಲ್ಕರಿಂದ ಐದು ಕೋಟಿ ರು. ಹಣದ ವ್ಯವಹಾರ ಮಾತುಕತೆ ನಡೆಸಿದ್ದರು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಬೇಳೂರು ರಾಘವೇಂದ್ರ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀಕಾಂತ ಚೌರಿ ಎಂಬಾತ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿ ಜೈಲು ಸೇರಿರುವ ಬೆನ್ನಲ್ಲೇ ವಜಾಗೊಂಡಿದ್ದ ಪ್ರಧಾನ ವ್ಯವಸ್ಥಾಪಕರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು 4-5 ಕೋಟಿ ರು.ಹಣದ ವ್ಯವಹಾರ ಮಾತುಕತೆ ನಡೆದಿತ್ತುಎಂಬುದು ಮಹತ್ವ ಪಡೆದುಕೊಂಡಿದೆ.

ಪಿಎಸ್‌ಐ ಹಗರಣ; ನಿಗಮದ ಅಧ್ಯಕ್ಷ ರಾಘವೇಂದ್ರಶೆಟ್ಟಿ ಆಪ್ತ ಕಾರ್ಯದರ್ಶಿ ದಾಖಲೆ ಬಹಿರಂಗ

ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಎಂಎಲ್‌ಎ ಟಿಕೆಟ್‌ಗಾಗಿ ತಯಾರಿ ನಡೆಸಿರುವ ರಾಘವೇಂದ್ರ ಶೆಟ್ಟಿ ಅವರು ಇದಕ್ಕಾಗಿ ನಿಗಮದ ಕೆಲ ಟೆಂಡರ್‌ಗಳಲ್ಲಿ ನಿಯಮಗಳನ್ನೂ ಮೀರಿ ತಮ್ಮ ಆಪ್ತೇಷ್ಟರಿಗೆ ನೀಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸುತ್ತಿದ್ದರು. ಚುನಾವಣೆ ಟಿಕೆಟ್‌ಗಾಗಿ ಹೆಚ್ಚು ಹಣ ಬೇಕಿರುವ ಕಾರಣ ನಿಗಮದ ಕೆಲಸದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದೂ ವ್ಯವಸ್ಥಾಪಕ ನಿರ್ದೇಶಕರನ್ನೂಕೋರಿದ್ದರು ಎಂಬ ಆಪಾದನೆಯೂ ಅವರ ವಿರುದ್ಧ ಕೇಳಿ ಬಂದಿದೆ.

 

ಅದೇ ರೀತಿ ನಿಗಮದ ಶೋರೂಂಗಳಿಂದ ಲಕ್ಷಗಟ್ಟಲೇ ಬೆಲೆಬಾಳುವ ಗಂಧದ ಹಾಗೂ ಇತರೆ ಸಾಮಾನುಗಳನ್ನು ಹೇಳದೇ ಕೇಳದೇ ಅನಾಮತ್ತಾಗಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಮತ್ತೊಂದು ಗುರುತರ ಆರೋಪಕ್ಕೂ ರಾಘವೇಂದ್ರ ಶೆಟ್ಟಿ ಅವರು ಗುರಿಯಾಗಿದ್ದಾರೆ. ಲಕ್ಷಗಟ್ಟಲೇ ಬೆಲೆಬಾಳು ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದರೂ ಇವಕ್ಕೆ ಹಣ ಪಾವತಿಸಿಲ್ಲ. ಹೀಗಾಗಿ ಅವರಿಗೆ ನೋಟೀಸ್‌ ಕೂಡ ಜಾರಿಯಾಗಿತ್ತು ಎಂಬುದು ತಿಳಿದು ಬಂದಿದೆ.

 

ನಿಗಮದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳ ಕುರಿತು ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರು ಮುಖ್ಯ ಕಾರ್ಯದರ್ಶಿಗೆ 2022ರ ಜೂನ್‌ 1ರಂದು 6 ಪುಟಗಳ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಡಿ ರೂಪ ಅವರು ಮುಖ್ಯಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿ

 

ಹಾಗೆಯೇ ನಿಗಮದ 302 ಹಾಗೂ 303ನೆ ಬೋರ್ಡ್ ಮೀಟಿಂಗ್‌ಗಳ ಸಭೆ ನಡವಳಿಗೆ ಬೇಳೂರು ರಾಘವೇಂದ್ರ ಶೆಟ್ಟಿ ವಿನಾ ಕಾರಣ ಸಹಿ ಮಾಡಿಲ್ಲ. ಈ ಸಭೆಗಳಲ್ಲಿ ಜೋರಾಗಿ ಕೂಗುತ್ತಾ ಅಶಾಂತ ವಾತಾವರಣ ಉಂಟು ಮಾಡಿ ಕೆಲಸಕ್ಕೆ ಧಕ್ಕೆ ಉಂಟು ಮಾಡಿದ್ದರು. 2022ರ ಮೇ 27ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಂದು ಗಂಟೆವರೆಗೂ ಸಭೆ ನಡೆಸಲು ಬಿಟ್ಟಿರಲಿಲ್ಲ. ಬದಲಿಗೆ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪ ಆವರು ಕಾರಣ ಎಂದು 5-6 ಬಾರಿ ಕೂಗಿ ಕೂಗಿ ಹೇಳಿ ಒತ್ತಡ ಹೇರಿದ್ದರು ಎಂದು ಗೊತ್ತಾಗಿದೆ.

 

‘ಕಳೆದ 18 ತಿಂಗಳಿಂದಲೂ ಈ ವರ್ತನೆಯು ಅತಿ ಉಗ್ರ ಹಾಗೂ ಆಕ್ರಮಣಕಾರಿಯಾಗಿತ್ತು. ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಬೆದರಿಕೆ ಮತ್ತು ಒತ್ತಡ ಹೇರುತ್ತಿರುವ ಕಾರಣ ಇದರ ಬಗ್ಗೆ ಆತ್ಮಹತ್ಯೆ ಬೆದರಿಕೆ ದೂರನ್ನು ಠಾಣೆಯಲ್ಲಿ ದಾಖಲಿಸಲು ಪರವಾನಿಗೆ ನೀಡಬೇಕು,’ ಎಂದು ವ್ಯವಸ್ಥಾಪಕ ನಿರ್ದೇಶಕರಾದ ರೂಪ ಮೌದ್ಗಿಲ್‌ ಅನುಮತಿ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

‘2017-18ನೇ ಸಾಲಿನಲ್ಲಿ ಈ ನಿಗಮಕ್ಕೆ 25.00 ಕೋಟಿ ರು. ವಂಚಿಸಿ ಸೇವೆಯಿಂದ ವಜಾ ಆದ ಕಿಶೋರ್‌ಕುಮಾರ್‌ನನ್ನು ಮತ್ತೆ ನಿಗಮಕ್ಕೆ ವಾಪಸ್ಸು ಸೇವೆಗೆ ತೆಗೆದುಕೊಳ್ಳುವ ಬಗ್ಗೆ ಬೋರ್ಡ್‌ ಮುಂದೆ ರಾಘವೇಂದ್ರ ಶೆಟ್ಟಿ ಅವರು ತಂದಿದ್ದರು. ಇದನ್ನು ನನ್ನ ಬಳಿಯೂ ಪ್ರಸ್ತಾಪಿಸಿದ್ದರಲ್ಲದೆ ಬೋರ್ಡ್‌ ಮುಂದೆ ತನ್ನಿ, ಬೋರ್ಡ್‌ನಲ್ಲಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿರುತ್ತಾರೆ. ಈ ನಿಗಮಕ್ಕೆ 25 ಕೋಟಿ ವಂಚಿಸಿ ಸೇವೆಯಿಂದ ವಜಾ ಆದ ಕಿಶೋರ್‌ಕುಮಾರ್‌ನನ್ನು ಮತ್ತೆ ನಿಗಮಕ್ಕೆ ವಾಪಸ್‌ ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಬೋರ್ಡ್‌ ಮುಂದೆ ತರಲು ನಾನು ನಿರಾಕರಿಸಿದ್ದೇನೆ. ಆದರೂ ಈ ಕೆಲಸಕ್ಕಾಗಿ ರಾಘವೇಂದ್ರ ಶೆಟ್ಟಿ ಹಾಗೂ ಕಿಶೋರ್‌ಕುಮಾರ್‌ ನಡುವೆ ಸುಮಾರು 4-5 ಕೋಟಿ ಹಣದ ವ್ಯವಹಾರದ ಮಾತುಕತೆ ಆಗಿರುತ್ತದೆ,’ ಎಂದು ಪತ್ರದಲ್ಲಿ ಡಿ ರೂಪಾ ಮೌದ್ಗಿಲ್‌ ಅವರು ಉಲ್ಲೇಖಿಸಿದ್ದಾರೆ.

 

ಅಲ್ಲದೆ ‘ನಿಗಮದ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡಬಾರದು ಎಂದು 2003ರ ಮೇ 7ರಂದು ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರದಲ್ಲಿ ಸೂಚಿಸಿದ್ದರೂ ಪ್ರತಿ ದಿನವೂ ನಿಗಮದ ಕಚೇರಿ ಕ್ಲರ್ಕ್‌ಗಳನ್ನು ಕರೆದು ಆ ಫೈಲ್‌ ಕೊಡು, ಈ ಫೈಲ್‌ ಕೊಡು ಎಂದು ರಾಘವೇಂದ್ರ ಶೆಟ್ಟಿ ಒತ್ತಾಯ ಮಾಡುತ್ತಿದ್ದಾರೆ,’ ಎಂದೂ ಮುಖ್ಯಕಾರ್ಯದರ್ಶಿಗೆ ಬರೆದ ದೂರಿನಲ್ಲಿ ವಿವರಿಸಿದ್ದಾರೆ.

 

ಹಾಗೆಯೇ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ನಿಗಮದ ಹೊಚ್ಚ ಹೊಸ ಇನ್ನೋವ ಕ್ರಿಸ್ಟಾ (ವಾಹನ ಸಂಖ್ಯೆ; ಕೆಎ 01 ಎಂವಿ 1711) ಸ್ವತಃ ಚಲಾಯಿಸಿ ರಾತ್ರಿ 8-30ರ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹಿರಿಯೂರು ಬಳಿ ಆಕ್ಸಿಡೆಂಟ್‌ ಮಾಡಿದ್ದಾರೆ. ನಂತರ ಅದನ್ನು ಡ್ರೈವರ್‌ ಮಾಡಿದ್ದು ಎಂದು ತಿರುಚಿದ್ದರು ಎಂಬ ಸಂಗತಿಯೂ ರೂಪ ಮೌದ್ಗಿಲ್‌ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

 

ಈ ವಾಹವನ್ನುಹೊಸದಾಗಿ ಡಿಸೆಂಬರ್‌ 2019ರಲ್ಲಿ ಖರೀದಿಸಲಾಗಿತ್ತು. ಇದರ ವೆಚ್ಚ 14.00 ಲಕ್ಷ ರು. ಈಗ ಇದರ ರಿಪೇರಿಗೆ 10.84 ಲಕ್ಷ ರು.ವೆಚ್ಚವಾಗಿದೆ. ಈ ಹಣವನ್ನೂ ಈಗಾಗಲೇ ನಿಗಮದಿಂದಲೇ ಪಾವತಿಸಲಾಗಿದೆ. ಇವರ ಬೇಜವಾಬ್ದಾರಿಯಿಂದಾಗಿ ನಿಗಮಕ್ಕೆ 10.84 ಲಕ್ಷ ರು. ವ್ಯರ್ಥ ವೆಚ್ಚವಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಅದೇ ರೀತಿ ‘ನಾನು ಬಂದಹೊಸದರಲ್ಲಿ ನನಗೆ ಬಂದ ವರದಿ ಪ್ರಕಾರ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ತಮಗೆ ಸ್ತ್ರೀಯೇ ಪಿ ಎ ಬೇಕೆಂದು ಮ್ಯಾನ್‌ಪವರ್‌ ಏಜೆನ್ಸಿಗೆ ಒತ್ತಾಯ ಮಾಡಿದ್ದರು. ನಂತರ ಈ ವಿಷಯ ನನಗೆ ತಿಳಿದಿದೆ ಎಂದು ಗೊತ್ತಾಗಿ ಆ ನಂತರ ನನ್ನನ್ನು ಕೇಳುವುದನ್ನು ನಿಲ್ಲಿಸಿದ್ದಾರೆ,’ ಎಂಬ ಸಂಗತಿಯು ಪತ್ರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts