ಮುರುಘಾ ಶರಣರಿಗೆ ಭೀತಿ!; ನಿರ್ದಿಷ್ಟ ಪ್ರಕರಣ ಉಲ್ಲೇಖಿಸದೇ ತಡೆಯಾಜ್ಞೆ ಕೋರಿ ಅಸಲುದಾವೆ

ಬೆಂಗಳೂರು; ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಪೋಷಕರು ಎಂದು ಹೇಳಿಕೊಳ್ಳುತ್ತಲೇ ತಮ್ಮ ಕುರಿತಾದ ಅಪ್ರಿಯವಾದ ಸಂಗತಿಗಳ ಕುರಿತು ಯಾರೂ ಪ್ರಕಟಿಸಬಾರದು ಮತ್ತು ಚರ್ಚಿಸಬಾರದು ಎಂದು ನಿರ್ದಿಷ್ಟ ಪ್ರಕರಣ, ನಿರ್ದಿಷ್ಟ ವಸ್ತು ಸಂಗತಿಯನ್ನು ಉಲ್ಲೇಖಿಸದೇ ತಡೆಯಾಜ್ಞೆ ಕೋರಿರುವ ಚಿತ್ರದುರ್ಗ ಮುರುಘಾಮಠದ ಡಾ ಶಿವಮೂರ್ತಿ ಮುರುಘಾ ಶರಣರು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವೆ ಸಲ್ಲಿಸಿದ್ದಾರೆ.

 

ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡಿರುವ ಬೆನ್ನಲ್ಲೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮುರುಘಾ ಶರಣರು ಸಲ್ಲಿಸಿರುವ ಅಸಲು ದಾವೆಯು ಕುತೂಹಲ ಕೆರಳಿಸಿದೆ. 2022ರ ಏಪ್ರಿಲ್‌ 13ರಂದು ಸಲ್ಲಿಸಿರುವ ಅಲಸು ದಾವೆ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ವೈಯಕ್ತಿಕವಾಗಿ ಅಸಲು ದಾವೆ ಸಲ್ಲಿಸಲಾಗಿದೆಯೇ ವಿನಃ ಮಠದ ಮೂಲಕ ಅಸಲು ದಾವೆ ಸಲ್ಲಿಸಿಲ್ಲ.

 

ಈ ಅರ್ಜಿಯು ಮಠದ ಮುಖ್ಯಸ್ಥರಿಗೆ ಸಂಬಂಧಿಸಿದ ಯಾವುದೇ ವರದಿಯ ಮೇಲೆ ಸಂಪೂರ್ಣ ನಿಷೇಧ ಹೇರಲಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕಾನೂನು ತಜ್ಞರು, ವಕೀಲರು ಅಭಿಪ್ರಾಯಿಸಿದ್ದಾರೆ.

 

ಡೆಕ್ಕನ್‌ ಹೆರಾಲ್ಡ್‌, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಟೈಮ್ಸ್‌ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್‌, ದಿ ಹಿಂದು, ವಿಜಯ್‌ ಟೈಮ್ಸ್‌, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಸಂಜೆವಾಣಿ, ಈ ಸಂಜೆ, ವಿಜಯ ಕರ್ನಾಟಕ, ಡೈಲಿ ಸಾಲಾರ್‌, ಸಿಯಾಸತ್‌, ಡೈಲಿ ಪಾಸ್ಬಾನ್‌, ಈನಾಡು, ಆಂಧ್ರ ಜ್ಯೋತಿ, ಮಲಯಾಳಂ ಮನೋರಮ, ಎನ್‌ಡಿಟಿವಿ, ನ್ಯೂಸ್‌ 9, ಟೈಮ್ಸ್‌ ನೌ, ಆಜ್‌ತಕ್‌, ಟಿವಿ ಟುಡೆ, ಸಿಎನ್‌ಬಿಸಿ, ಸ್ಟಾರ್‌, ಸ್ಟಾರ್ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಉದಯ ಟಿವಿ, ಈ ನಾಡು (ಕನ್ನಡ), ಈ ಟಿವಿ ಕನ್ನಡ ನ್ಯೂಸ್‌ ಡಿವಿಜನ್‌, ಸಮಯ ಟಿವಿ, ಜನಶ್ರೀ, ಪಬ್ಲಿಕ್‌, ಕಲರ್ಸ್‌ ಕನ್ನಡ, ರಾಜ್‌ ನ್ಯೂಸ್‌ ಕನ್ನಡ, ಕಸ್ತೂರಿ ನ್ಯೂಸ್‌ 24, ಕಲ್ಕಿ ಕನ್ನಡ, ಪ್ರಜಾ ಟಿವಿ ಕನ್ನಡ, ಅಸೋಸಿಯೇಟೆಡ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿ (ಟಿವಿ 9 , ನ್ಯೂಸ್‌ 9), ಏಷ್ಯಾ ನ್ಯೂಸ್‌ ನೆಟ್‌ ವರ್ಕ್‌ ಪ್ರೈವೈಟ್‌ ಲಿಮಿಟೆಡ್‌, ಕಸ್ತೂರಿ ಮೀಡಿಯಾ ಪ್ರೈವೈಟ್‌ ಲಿಮಿಟೆಡ್, ದ್ವಿಗ್ವಿಜಯ ನ್ಯೂಸ್‌, ಬೆಂಗಳೂರು ಮಿರರ್‌, ಈ ಟಿವಿ ಭಾರತ್‌ ಕನ್ನಡ ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿಸಿದೆ. ಡಿಜಿಟಲ್‌ ಮಾಧ್ಯಮಗಳನ್ನು, ಟ್ವಿಟರ್‌, ಫೇಸ್‌ಬುಕ್‌ಗಳನ್ನು ಪ್ರತಿವಾದಿಯನ್ನಾಗಿಸಿಲ್ಲ.

 

ಡೆಕ್ಕನ್‌ ಹೆರಾಲ್ಡ್‌ನ್ನು ಪ್ರತಿವಾದಿಯನ್ನಾಗಿಸಿರುವ ಮುರುಘಾ ಶರಣರು ಸಲ್ಲಿಸಿರುವ ಅಸಲು ದಾವೆಯಲ್ಲಿ ಪ್ರಜಾವಾಣಿ ಮತ್ತು ವಿಶ್ವವಾಣಿ ಪತ್ರಿಕೆಯನ್ನು ಹೆಸರಿಸದಿರುವುದು ಅಚ್ಚರಿ ಮೂಡಿಸಿದೆ. ಕಾಕತಾಳಿಯ ಎಂದರೆ ಶರಣರು ಪ್ರಜಾವಾಣಿಯಲ್ಲಿ ಆಗಾಗ್ಗೆ ಅಂಕಣಗಳನ್ನು ಬರೆಯುತ್ತಿರುವುದನ್ನು ನೆನೆಯಬಹುದು.

 

ಶ್ರೀ ಶ್ರೀ ಮುರುಘರಾಜೇಂದ್ರ ಬೃಹನ್ಮಠಕ್ಕೆ ಸಂಬಂಧಿಸಿದದಂತೆ ವರದಿಗಳು ಅಥವಾ ಲೇಖನಗಳು ಅಥವಾ ಯಾವುದೇ ಇತರ ವಿಷಯಗಳ ಪ್ರಸಾರ ಅಥವಾ ಕಾರ್ಯಕ್ರಮಗಳ ಪುನರಾವರ್ತಿತ ಪ್ರಸಾರ, ಅಥವಾ ಚರ್ಚೆಗಳು ಅಥವಾ ಯಾವುದೇ ರೀತಿಯ ಚರ್ಚೆ ಅಥವಾ ವರದಿ ಪ್ರಕಟಿಸಬಾರದು. ಪ್ರತಿವಾದಿಗಳು, ಅದರ ಸಹವರ್ತಿಗಳು, ಸೋದರ ಸಂಸ್ಥೆಗಳು, ಅದರ ಏಜೆಂಟ್‌ಗಳು, ಪ್ರತಿನಿಧಿಗಳು, ವರದಿಗಾರರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು / ಅಥವಾ ಯಾವುದೇ ವ್ಯಕ್ತಿ, ಘಟಕ, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ಅಥವಾ ಇಂಟರ್ನೆಟ್ ಮೂಲಕ ಅಥವಾ ಯಾವುದೇ ಪ್ರಕಟಣೆ, ಮರುಪ್ರಕಟಣೆ, ಯಾವುದೇ ಕಾರ್ಯಗಳನ್ನು ನಿರ್ವಹಿಸುವುದನ್ನು ತಡೆಯಬೇಕು ಎಂದು ಅಸಲು ದಾವೆಯಲ್ಲಿ ಕೋರಿದ್ದಾರೆ.

 

ಅನೇಕ ಪ್ರತಿಸ್ಪರ್ಧಿಗಳು, ಗುಂಪುಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಪಿರ್ಯಾದಿಯ ವರ್ಚಸ್ಸನ್ನು ಹಾಳುಗೆಡವಲು ಯತ್ನಿಸುತ್ತಿವೆ. ಸಾಮಾಜಿಕ ಮಾಧ್ಯಮದ ಪ್ರಾಯೋಜಿತ ಕೃತ್ಯಗಳು ಮಾನಹಾನಿಕರ ಸ್ವರೂಪದಲ್ಲಿವೆ. ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸಲು ಅನುಮತಿ ಇದೆಯಾದರೂ, ಇನ್ನೊಬ್ಬ ವ್ಯಕ್ತಿಯ ಪ್ರತಿಷ್ಠೆ ಮತ್ತು ಘನತೆಗೆ ಮಾನಹಾನಿ ಮತ್ತು ಕಳಂಕವನ್ನು ಉಂಟುಮಾಡಿದಾಗ ಕಾನೂನು ಕೂಡ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧವನ್ನು ಇರಿಸುತ್ತದೆ ಎಂದು ಅಸಲು ದಾವೆಯಲ್ಲಿ ಉಲ್ಲೇಖಿಸಲಾಗಿದೆ.

 

ಸುದ್ದಿ ವಾಹಿನಿಗಳು ವಿವಿಧ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತವೆ. ಆದ್ದರಿಂದ, ಪ್ರತಿವಾದಿಗಳ ಗುರಿಯು ಸತ್ಯಗಳ ಗುಂಪನ್ನು ಸಂವೇದನಾಶೀಲಗೊಳಿಸುವುದು ಮತ್ತು ಅವುಗಳನ್ನು ಹಗರಣವನ್ನಾಗಿ ಪರಿವರ್ತಿಸುವುದು, ಸಾರ್ವಜನಿಕ ಜೀವನದಲ್ಲಿ ಮತ್ತು ಸಾರ್ವಜನಿಕರಲ್ಲಿ ಫಿರ್ಯಾದಿಗಳ ಖ್ಯಾತಿಗೆ ಧಕ್ಕೆ ತರಲಿದೆ ಎಂದು ಹೇಳಿರುವುದು ಅಸಲು ದಾವೆಯಿಂದ ತಿಳಿದು ಬಂದಿದೆ.

 

ಫಿರ್ಯಾದಿಯು ಅತ್ಯಂತ ಸಾರ್ವಜನಿಕ, ಮುಕ್ತ ಮತ್ತು ಪಾರದರ್ಶಕ ಜೀವನವನ್ನು ನಡೆಸುತ್ತಿದ್ದಾರೆ ಪ್ರತಿವಾದಿಗಳು ಫಿರ್ಯಾದಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಈಗ ಪ್ರತಿವಾದಿಯಾಗಿರುವ ಸುದ್ದಿ ಸಂಸ್ಥೆಗಳಿಗೆ ಅಂತಹ ಯಾವ ಸ್ಪೋಟಕ ಸುದ್ದಿ ತಲುಪಿರಬಹುದು ಎಂಬುದು ಕುತೂಹಲ ಕೆರಳಿಸಿದೆ.

 

ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ತಡೆಯ್ಞಾಜೆ ಕೋರುವ ಹಿಂದಿನ ಮರ್ಮವಾದರೂ ಏನು, ಸಾರ್ವಜನಿಕ ಬದುಕಿನಲ್ಲಿ ದೊಡ್ಡ ಹೆಸರು ಇರುವವರು ಮತ್ತು ಸಮಾಜದ ಗಣ್ಯರನ್ನು ಗುರುತಿಸಿ ಬಸವ ಪ್ರಶಸ್ತಿಯನ್ನು ನೀಡುವ ಶರಣರಿಗೆ ಕಾಡುತ್ತಿರುವ ಭಯವಾದರೂ ಏನು, ಯಾವ ನಕಾರಾತ್ಮಕ ಸುದ್ದಿ ಅವರ ವರ್ಚಸ್ಸಿಗೆ ಕುಂದು ತರಬಹುದಾಗಿದೆ ಎಂಬ ಸಂಗತಿಯೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

 

ಈ ಅರ್ಜಿಯು ಮಠದ ಮುಖ್ಯಸ್ಥರಿಗೆ ಸಂಬಂಧಿಸಿದ ಯಾವುದೇ ವರದಿಯ ಮೇಲೆ ಸಂಪೂರ್ಣ ನಿಷೇಧವನ್ನು ಕೋರುತ್ತದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ. ಸಿದ್ಧಾರ್ಥ ವಶಿಷ್ಟ್ @ ಮನು ಶರ್ಮಾ vs State (ದೆಹಲಿ ಎನ್‌ಸಿಟಿ) ನಲ್ಲಿ ಸುಪ್ರೀಂ ಕೋರ್ಟ್ ಒಂದು ಸ್ಪಷ್ಟತೆ ನೀಡಿದೆ ಎಂದು ವಕೀಲ ವಿನಯ್‌ ಶ್ರೀನಿವಾಸ್‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ವಿನಯ್‌ ಶ್ರೀನಿವಾಸ್‌ ಅವರ ಪ್ರತಿಕ್ರಿಯೆ ಇಲ್ಲಿದೆ

 

“ತಿಳಿವಳಿಕೆ ಅಭಿವ್ಯಕ್ತಿ” (ಇಂಫಾರ್ಮೇಟಿವ್ ಎಕ್ಸ್ಪ್ರೆಷನ್ ) ಮತ್ತು “ಮಾಧ್ಯಮದಿಂದವಿಚಾರಣೆ ” (ಟ್ರಯಲ್ ಬೈ ಮೀಡಿಯಾ ) ರ ಮಧ್ಯೆ ವ್ಯತ್ಯಾಸ ನೀಡಿದೆ . ಜನರಿಗೆ ಸುದ್ದಿಯನ್ನು ಎಲ್ಲಿ ತಿಳಿಸಲಾಗುತ್ತದೆ ಮತ್ತು ವೀಕ್ಷಣೆಗಳು, ಇದು ನ್ಯಾಯಸಮ್ಮತವಾದ ಅಭಿವ್ಯಕ್ತಿಯಾಗಿದ್ದು, ಅದು ಎಷ್ಟೇ ಅಸಹ್ಯಕರವಾಗಿರಬಹುದು. ಕೆಲವರಿಗೆ , ಅದನ್ನು ತಡೆಯಲು ಸಾಧ್ಯವಿಲ್ಲ . ಆದರೆ ಯಾವುದೇ ವಿಚಾರಣೆ ಹಂತದಲ್ಲಿ , ಶಂಕಿತರು ಸಾಂವಿಧಾನಿಕ ರಕ್ಷಣೆಗೆ ಅರ್ಹರಾಗಿರುತ್ತಾರೆ ಹಾಗು ಆಗ ಮಾಧ್ಯಮದ ವಿಚಾರಣೆಯನ್ನು ವಿಶೇಷವಾಗಿ ತಪ್ಪಿಸಬೇಕು. ಅವನ ಹಕ್ಕುಗಳ ಆಕ್ರಮಣವನ್ನು ಅನುಮತಿಸಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಿಸಿದೆ ಎಂದು ವಿವರಿಸಲಾಗಿದೆ.

 

 

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯಗಳು ಅಂತಹ ವಿಶಾಲವಾದ ತಡೆಯಾಜ್ಞೆಗಳನ್ನು ನೀಡಲು ಸಾಧ್ಯವಿಲ್ಲ. ಆದರೆ ಇದು ನಡೆಯುತ್ತಿದೆ. ಸಂಸದ ತೇಜಸ್ವಿ ಸೂರ್ಯ ಅಂತಹ ಒಂದು ತಡೆಯಾಜ್ಞೆಯನ್ನು ಪಡೆದಿದ್ದರು, ಅಭ್ಯರ್ಥಿಗಳ ಬಗ್ಗೆ ಜನರಿಗೆ ತಿಳಿದುಕೊಳ್ಳುವ ಹಕ್ಕಿದೆ ಎಂದು ಹೇಳಿ ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿತು.

 

 

ಬಾಂಬೆಗೆ ಹೋದ 5 ಸಚಿವರು ತಡೆಯಾಜ್ಞೆ ಪಡೆದರು . ಈಗ ಮಠಾಧೀಶರು ವಿಶಾಲ ತಡೆಯಾಜ್ಞೆಯನ್ನು ಕೋರುತ್ತಿದ್ದಾರೆ (ಬ್ಲಾಂಕೆಟ್ ಬ್ಯಾನ್ ) . ನ್ಯಾಯಾಲಯಗಳು ಅದನ್ನು ನೀಡಬಾರದು. ನ್ಯಾಯಾಲಯಗಳು ಮಂಜೂರು ಮಾಡಿದರೆ ಅದು ಗಂಭೀರವಾದ ಆಕ್ರಮಣವಾಗುತ್ತದೆ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗೆಯೇ ಮಾಧ್ಯಮವು ವರದಿ ಮಾಡುವ ಸತ್ಯಗಳಿಗೆ ಅಂಟಿಕೊಳ್ಳಬೇಕು ಮತ್ತು ಮಾಧ್ಯಮದಿಂದ ವಿಚಾರಣೆಯನ್ನು ನಡೆಸಬಾರದು ಎನ್ನುತ್ತಾರೆ ವಿನಯ್‌ ಶ್ರೀನಿವಾಸ್‌

the fil favicon

SUPPORT THE FILE

Latest News

Related Posts