ಬೆಂಗಳೂರು; ಡೀಮ್ಡ್ ಅರಣ್ಯ ವ್ಯಾಪ್ತಿಗೆ 1,73,023.19 ಹೆಕ್ಟೇರ್ ಪ್ರದೇಶವು ಒಳಪಡುವುದಿಲ್ಲ ಎಂದು ಈ ಹಿಂದೆಯೇ ನಮೂದಿಸಿದ್ದ ಅಂಶವನ್ನು ಬದಿಗೆ ಸರಿಸಿರುವ ರಾಜ್ಯ ಬಿಜೆಪಿ ಸರ್ಕಾರವು 1,73,023.19 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಪರಿಹಾರಾತ್ಮಕ ಅರಣ್ಯೀಕರಣ ಉದ್ಧೇಶಕ್ಕೆ ಮೀಸಲಿಡಲು ಪ್ರಸ್ತಾಪಿಸಿತ್ತು. ಅಲ್ಲದೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (2015) ಸಚಿವ ಸಂಪುಟ ಈ ಸಂಬಂಧ ಕೈಗೊಂಡಿದ್ದ ನಿರ್ಣಯದ ಆಶಯವನ್ನು ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದಲ್ಲಿದ್ದ 9,94,881.11 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ರದ್ದುಪಡಿಸಿ ಇತ್ತೀಚೆಗಷ್ಟೇ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ ಈ ಸಂಬಂಧದ ಟಿಪ್ಪಣಿ ಹಾಳೆಗಳಲ್ಲಿ ಉಲ್ಲೇಖಿಸಿದ್ದ ಅಂಶಗಳು ಮುನ್ನೆಲೆಗೆ ಬಂದಿವೆ.
ರಾಜ್ಯದ ಅಡ್ವೋಕೇಟ್ ಜನರಲ್ ಅವರು ರಾಜ್ಯದ ಡೀಮ್ಡ್ ಫಾರೆಸ್ಟ್ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಪರಿಷ್ಕೃತ ಪ್ರಮಾಣಪತ್ರದಲ್ಲಿ ಅನಾವಶ್ಯಕ ವಿಷಯಗಳನ್ನು ಪ್ರಸ್ತಾಪಿಸಿದ್ದರು ಎಂಬ ಮಾಹಿತಿಯೂ ಗೊತ್ತಾಗಿದೆ. ಈ ಕುರಿತಂತೆ ‘ದಿ ಫೈಲ್’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಡೀಮ್ಡ್ ಅರಣ್ಯಗಳಿಗಷ್ಟೇ ಸೀಮಿತಗೊಳಿಸಿ ಪ್ರಮಾಣಪತ್ರ ಸಲ್ಲಿಸುವುದು ಸೂಕ್ತ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಅಭಿಪ್ರಾಯಿಸಿದ್ದರು. ಈಗಾಗಲೇ ಸಲ್ಲಿಸಿರುವ ಪ್ರಮಾಣಪತ್ರವನ್ನು ಪರಿಶೀಲಿಸಬೇಕು ಮತ್ತು ಈ ಹಂತದಲ್ಲಿ ಯಾವುದೇ ಅಂಶಗಳು ಕೈಬಿಟ್ಟು ಹೋಗದಂತೆ ಗಮನದಲ್ಲಿರಿಸಿಕೊಳ್ಳಬೇಕು ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
3,30,185.74 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಪ್ರದೇಶವೆಂದು ಗುರುತಿಸಿರುವ ಕುರಿತು ಸರ್ವೋಚ್ಛ ನ್ಯಾಯಾಲಯದ ಮುಂದೆ ಅಫಿಡವಿಟ್‌ನ್ನು 2019ರ ಫೆ.23ರಂದು ಸಲ್ಲಿಸಿತ್ತು. ಆದರೆ ಕಂಡಿಕೆ ಸಂಖ್ಯೆ 820ರಲ್ಲಿ ಅಡ್ವೋಕೇಟ್ ಜನರಲ್ ಅವರು ನಮೂದಿಸಿದ್ದ ಕಾರಣಗಳಿಗಾಗಿ ಅಫಿಡವಿಟ್‌ನ್ನು ಹಿಂಪಡೆದಿತ್ತು. ಈಗ ಹೊಸದಾಗಿ ಅಫಿಡವಿಟ್ ಸಲ್ಲಿಸುವ ನಿಟ್ಟಿನಲ್ಲಿ ಅರಣ್ಯ ಸಚಿವರು ಅನುಮೋದಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಮತ್ತೊಮ್ಮೆ ಕರಡು ಅಫಿಡವಿಟ್‌ನ್ನು ಪರಿಷ್ಕರಿಸಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
‘ಡೀಮ್ಡ್ ಫಾರೆಸ್ಟ್ ಕುರಿತಂತೆ ತಯಾರಿಸಲಾದ ಪರಿಷ್ಕೃತ ಅಫಿಡವಿಟ್‌ನಲ್ಲಿ ಅನಾವಶ್ಯಕ ವಿಷಯಗಳನ್ನು ಪ್ರಸ್ತಾಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಿಂದಾಗಿ 2015ರ ಸಚಿವ ಸಂಪುಟದ ನಿರ್ಣಯದ ಆಶಯವನ್ನು ಉಲ್ಲಂಘಿಸಿದಂತಾಗುತ್ತದೆ. ಅಫಿಡವಿಟ್‌ನ ಕಂಡಿಕೆ 19ರಲ್ಲಿ 1,73,023.19 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುವುದಿಲ್ಲವೆಂದು ನಮೂದಿಸಿದ ಹೊರತಾಗಿಯೂ ವಿಸ್ತೀರ್ಣವನ್ನು ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕೆ ಮೀಸಲಿಡಲು ಉದ್ದೇಶಿಸಿರುವುದಾಗಿ ಪ್ರಸ್ತಾಪಿಸಲಾಗಿದೆ. ಈ ವಿಷಯವು ಸೇರಿದಂತೆ ಇನ್ನೂ ಕೆಲವು ವಿಷಯಗಳು ಅನಾವಶ್ಯಕವಾಗಿ ಅಫಿಡವಿಟ್‌ನಲ್ಲಿ ಸೇರಿರುವುದು ಕಂಡು ಬರುತ್ತದೆ,’ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಅವರು ಪ್ರಸ್ತಾಪಿಸಿದ್ದರು ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.
ಪುನರ್ಘಟಿತ ತಜ್ಞರ ಸಮಿತಿಯು 9,94, 881.11 ಹೆಕ್ಟೇರ್ ಪರಿಭಾವಿತ ಅರಣ್ಯ ವಿಸ್ತೀರ್ಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಈ ಹಿಂದೆಯೇ ಸಮಾಲೋಚಿಸಲಾಗಿತ್ತು. ಅಲ್ಲದೆ ಜಿಲ್ಲಾ ಸಮಿತಿಗಳು ಅಂತಿಮಗೊಳಿಸಿದ್ದ 3,94,941.31 ಹೆಕ್ಟೇರ್‌ಗಳಿಗೆ ಇಳಿಸಲಾಗಿತ್ತು. ಪರಿಭಾವಿತ ಅರಣ್ಯ ವಿಸ್ತೀರ್ಣವನ್ನು ಪುನರ್ಘಟಿತ ತಜ್ಞರ ಸಮಿತಿ ಗುರುತಿಸಿದ್ದ 9,94, 881.11 ಹೆಕ್ಟೇರ್ ಎಂದು ನಿರ್ದಿಷ್ಟಪಡಿಸಿ ಸರ್ವೋಚ್ಛ ನ್ಯಾಯಾಲಯವು ಹಾಗೂ ಕೇಂದ್ರೀಯ ಅಧಿಕಾರಸ್ಥ ಸಮಿತಿಯ ಮುಂದೆ ಪ್ರಮಾಣಪತ್ರ ಸಲ್ಲಿಸಲಾಗಿತ್ತು.
ಜಿಲ್ಲಾ ಮಟ್ಟದ ಸಮಿತಿಗಳು ಪರಿಭಾವಿತ ಅರಣ್ಯದ ವ್ಯಾಪ್ತಿಯಿಂದ ಕೈಬಿಟ್ಟಿರುವ ಒಟ್ಟಾರೆ 1,73, 022.00 ಹೆಕ್ಟೇರ್ ಪ್ರದೇಶವನ್ನು ಭವಿಷ್ಯದಲ್ಲಿ ಸರ್ಕಾರದ ಯೋಜನೆಗಳ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ‘ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಮಂಜೂರು ಮಾಡದೇ ಕೇವಲ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ನೀರಾವರಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇತ್ಯಾದಿ ಇಲಾಖೆಗಳ ಸಾರ್ವಜನಿಕ ಯೋಜನೆಗಳಿಗಾಗಿ ಉಪಯೋಗಿಸಬೇಕು. ಅಥವಾ ಅಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ಬಿಡಗುಡೆ ಮಾಡಲಾಗಿರುವ ಅರಣ್ಯ ಭೂಮಿಯ ಬದಲಿಗೆ ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕಾಗಿ ಬಿಡುಗಡೆ ಮಾಡಬೇಕು,’ ಎಂದು 2017ರ ಜೂನ್ 22ರಲ್ಲಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟವು ಅನುಮೋದನೆ ನೀಡಿತ್ತು ಎಂಬುದು ಗೊತ್ತಾಗಿದೆ.
ಅಲ್ಲದೆ ‘ ಡೀಮ್ಡ್ ಫಾರೆಸ್ಟ್ ಒಟ್ಟು ವಿಸ್ತೀರ್ಣವನ್ನು 3,26,177.27 ಹೆಕ್ಟೇರ್‌ನಲ್ಲಿ ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೋರಿಕೆಯಂತೆ 617.887 ಹೆಕ್ಟೇರ್ ವಿಸ್ತೀರ್ಣವನ್ನು ಕಡಿತಗೊಳಿಸಲು ಹಾಗೂ ಬೆಳಗಾವಿ ಜಿಲ್ಲೆಯ ಕೋರಿಕೆಯಂತೆ 4,627.555 ಹೆಕ್ಟೇರ್‌ಗಳನ್ನು ಹೆಚ್ಚಿಸಲು ಹಾಗೂ ಅಂತಿಮವಾಗಿ ಡೀಮ್ಡ್ ಫಾರೆಸ್ಟ್ ವಿಸ್ತೀರ್ಣವು 3,30,186.938 ಹೆಕ್ಟೇರ್ ಎಂದು ಘೋಷಿಸುವ ಮಾರ್ಪಾಡಿನೊಂದಿಗೆ ಸಚಿವ ಸಂಪುಟದ ಟಿಪ್ಪಣಿಯು ಕಂಡಿಕೆ 24ರಲ್ಲಿ ಒಳಗೊಂಡಿರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟವು ಅನುಮೋದಿಸಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿದ್ದ 9.94.881.11 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ರದ್ದುಪಡಿಸಿ ಇತ್ತೀಚೆಗಷ್ಟೇ ಸರ್ಕಾರ ಆದೇಶ ಹೊರಡಿಸಿತ್ತು. 3.30.186.93 ಹೆಕ್ಟೆರ್ ಪ್ರದೇಶವನ್ನು ಮಾತ್ರ ಡೀಮ್ಡ್ ಫಾರೆಸ್ಟ್ ಎಂದು ನಿಗದಿಪಡಿಸಲಾಗಿದೆ. ಘೋಷಿತ ಡೀಮ್ಡ್ ಪ್ರದೇಶ ಅರಣ್ಯೇಯೇತರ ಉದ್ದೇಶಕ್ಕೆ ಬಳಕೆ ಆಗದಂತೆ 2022 ಮೇ 5ರಂದು ಹೊರಡಿಸಿದ ಆದೇಶದಲ್ಲಿ ಸೂಚಿಸಿದೆ.
ತಜ್ಞರ ಸಮಿತಿಯು 9.94.881.11 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶ ಎಂದು ತಪ್ಪಾಗಿ ಗುರುತಿಸಿದೆ ಎಂಬ ಕಾರಣಕ್ಕೆ ಮರು ಪರಿಶೀಲನೆಗಾಗಿ 2014ರಲ್ಲಿ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಜಿಲ್ಲಾ, ವಿಭಾಗೀಯ, ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಹೊಸ ಪ್ರಮಾಣ ಪತ್ರ ಸಲ್ಲಿಸಿ ಡೀಮ್ಡ್ ಫಾರೆಸ್ಟ್ ವಿಸ್ತೀರ್ಣವನ್ನು ಗುರುತಿಸಿ ನೂತನ ಅಧಿಸೂಚನೆ ಹೊರಡಿಸಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ.
ಹಿಂದಿನ ಎಸ್.ಎಂ.ಕೃಷ್ಣ ಸರ್ಕಾರ ರಾಜ್ಯದಲ್ಲಿ 9.94 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಘೋಷಿಸಿತ್ತು. ಈ ಪ್ರದೇಶದಲ್ಲಿ ದಶಕಗಳಿಂದ ಸಾವಿರಾರು ರೈತರು ಕೃಷಿ ಮಾಡುತ್ತಿದ್ದು, ಮನೆಗಳನ್ನು ಕಟ್ಟಿಕೊಂಡಿರುವುದರಿಂದ ರಾಜ್ಯದಲ್ಲಿರುವ ಡೀಮ್ಡ್ ಅರಣ್ಯ ವ್ಯಾಪ್ತಿ ಹಾಗೂ ಕಂದಾಯ ಇಲಾಖೆಗೆ ಸೇರಬೇಕಾದ ಭೂಮಿಯನ್ನು ಗುರುತಿಸಿ ಅಧಿಕಾರಿಗಳು ಸುಪ್ರೀಕೋರ್ಟ್‌ಗೆ ವರದಿ ಸಲ್ಲಿಸಿದ್ದರು.
ಅದರಂತೆ, 6.64 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಕೈಬಿಟ್ಟು ಕಂದಾಯ ಇಲಾಖೆಗೆ ಸೇರಿಸಲಾಗಿದೆ. ಈ ಭೂಮಿಯನ್ನು ಮುಂದೆ ಅರ್ಹರಿಗೆ ಹಂಚಿಕೆ ಮಾಡಲಾಗುವುದು. ಅರಣ್ಯ ಇಲಾಖೆ ತನ್ನ ವಶದಲ್ಲಿರುವ ಆರು ಲಕ್ಷ ಹೆಕ್ಟೇರ್ ಡೀಮ್ಡ್ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಿದ್ದು, ಈ ಭೂಮಿಯಲ್ಲಿ ಅಗತ್ಯ ಇರುವಷ್ಟನ್ನು ಸರ್ಕಾರದ ಬಳಿಯೇ ಉಳಿಸಿಕೊಂಡು ಉಳಿದ ಭೂಮಿಯನ್ನು ಒತ್ತುವರಿದಾರರಿಗೆ ಹಂಚಲು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದನ್ನು ಸ್ಮರಿಸಬಹುದು.
ಕೊಡಗು ಜಿಲ್ಲೆಯಲ್ಲಿ 12 ಸಾವಿರ, ಹಾಸನದಲ್ಲಿ 30 ಸಾವಿರ, ಚಿಕ್ಕಮಗಳೂರು ಜಿಲ್ಲೆಯಲ್ಲಿ 45 ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ. ಈ ಭೂಮಿಯಲ್ಲಿ ಕಾಫಿ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ 30 ವರ್ಷಗಳ ಅವಧಿಗೆ ಒತ್ತುವರಿದಾರರಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಪೈಕಿ ಶೇ 80ರಷ್ಟು ಮಂದಿ ಐದು ಎಕರೆಗಿಂತಲೂ ಕಡಿಮೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದರು.
‘ಒತ್ತುವರಿ ಮಾಡಿಕೊಂಡವರು ಸರ್ಕಾರಕ್ಕೆ ಹಣ ಪಾವತಿಸದೆ ಹಲವು ವರ್ಷಗಳಿಂದ ಭೂಮಿಯನ್ನು ಅನುಭವಿಸುತ್ತಿದ್ದರು. ಇನ್ನು ಮುಂದೆ ಅವರು ಗುತ್ತಿಗೆ ಹಣ ಪಾವತಿಸಬೇಕಾಗುತ್ತದೆ. ಆ ಮೂಲಕ, ಒತ್ತುವರಿ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ದಾಖಲೆಗಳಲ್ಲಿ ಗುರುತಿಸಲಾಗುತ್ತದೆ. ಇದೇ ರೀತಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒತ್ತುವರಿಯಾಗಿರುವ ಗೇರು ಭೂಮಿಯನ್ನು ಕೂಡಾ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ’ ಎಂದು ಅವರು ವಿವರಿಸಿದ್ದನ್ನು ಸ್ಮರಿಸಬಹುದು.