ಕೆಂಗೇರಿ ವಿಭಾಗವೊಂದರಲ್ಲೇ ಗುತ್ತಿಗೆದಾರರಿಗೆ 445 ಕೋಟಿ ರು. ಬಾಕಿ; ಬಿಬಿಎಂಪಿಯಲ್ಲೇ ಉಳಿದ ಬಿಲ್‌ಗಳು

photo credit;thebengalurulive

ಬೆಂಗಳೂರು; ರಾಜರಾಜೇಶ್ವರಿ ವಲಯದ ಕೆಂಗೇರಿ ವಿಭಾಗವೊಂದರಲ್ಲೇ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು 445.40 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಬಿಲ್‌ಗಳು ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿಯೇ ಉಳಿದುಕೊಂಡಿರುವುದನ್ನು ಇಂಡಿಯನ್‌ ಆಡಿಟ್‌ ಅಂಡ್‌ ಅಕೌಂಟೆಂಟ್‌ ಇಲಾಖೆಯು ಹೊರಗೆಡವಿದೆ.

 

ಬಿಬಿಎಂಪಿಯ ರಾಜರಾಜೇಶ್ವರಿ ವಲಯಕ್ಕೆ ಸಂಬಂಧಿಸಿದಂತೆ (2019-20 ಮತ್ತು 2020-21) ಲೆಕ್ಕ ಪರಿಶೋಧನೆ ತಪಾಸಣೆ ನಡೆಸಿದ ವೇಳೆಯಲ್ಲಿ 445.40 ಕೋಟಿ ರು.ಮೊತ್ತದ ಬಿಲ್‌ಗಳು ಬಾಕಿ ಉಳಿದಿರುವುದು ತಿಳಿದು ಬಂದಿದೆ. ಬಾಕಿ ಉಳಿದಿರುವ ಬಿಲ್‌ಗಳನ್ನು ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಗಳು ಹಿರಿತನ ಆಧಾರದ ಮೇಲೆ ಕೈಗೆತ್ತಿಕೊಂಡಿಲ್ಲ ಎಂಬ ಅಂಶವೂ ಬಹಿರಂಗವಾಗಿದೆ.

 

ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಗುತ್ತಿಗೆದಾರರು ಮಾಡಿದ್ದ ಆರೋಪಗಳು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಬಿಬಿಎಂಪಿಯ ಗುತ್ತಿಗೆದಾರರು ಇದಕ್ಕೆ ದನಿಗೂಡಿಸಿದ್ದರು. ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಹೈಕೋರ್ಟ್, ‘ಇನ್ನೂ ಎಷ್ಟು ಜನ ಸಾಯಬೇಕು ಎಂದುಕೊಂಡಿದ್ದೀರಿ’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

 

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿ ಗುತ್ತಿಗೆ ಹಣ ಪಾವತಿ ಸಂಬಂಧ ಬಿ.ಬಿ ಉಮೇಶ್‌ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

 

ಇದರ ಬೆನ್ನಲ್ಲೇ ತೋಟಗಾರಿಕೆ ಸಚಿವ ಮುನಿರತ್ನ ಅವರು ಪ್ರತಿನಿಧಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿಯ ಕೆಂಗೇರಿ ವಿಭಾಗವೊಂದರಲ್ಲೇ 445 ಕೋಟಿ ರು. ಮೊತ್ತದ ಬಿಲ್‌ಗಳು ಬಾಕಿ ಇದೆ ಎಂದು ಇಂಡಿಯನ್‌ ಆಡಿಟ್‌ ಅಕೌಂಟ್ಸ್‌ ಇಲಾಖೆಯ ಲೆಕ್ಕ ತಪಾಸಣೆಯು ಹೊರಗೆಡವಿರುವುದು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ವಿವರಣೆ ಕೇಳಿರುವ ಇಂಡಿಯನ್‌ ಆಡಿಟ್‌ ಅಕೌಂಟ್ಸ್‌ ಇಲಾಖೆಯ ಮುಖ್ಯ ಲೆಕ್ಕ ಪರಿಶೋಧನಾಕಾರಿಯು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2022ರ ಏಪ್ರಿಲ್ 22ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ಮತ್ತು ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಇಂಡಿಯನ್‌ ಆಡಿಟ್‌ ಅಕೌಂಟ್ಸ್‌ನಿಂದ ಬರೆದಿರುವ ಪತ್ರದ ಪ್ರತಿ

 

‘ಬಿಲ್‌ ರಿಜಿಸ್ಟರ್‌ಮತ್ತು ಬಾಕಿ ಇರುವ ಬಿಲ್‌ಗಳನ್ನು ಪರಿಶೀಲಿಸಲಾಗಿದೆ. 2019-20 ಮತ್ತು 2020-21ನೇ ಸಾಲಿನ ಮಾತ್ರವಲ್ಲದೇ 2015ರಿಂದಲೂ ಬಿಲ್‌ಗಳು ಬಾಕಿ ಇವೆ. 2021ರ ಡಿಸೆಂಬರ್‌ವರೆಗೆ ಒಟ್ಟು 427 ಬಿಲ್‌ಗಳು ಬಾಕಿ ಇವೆ. ಇದರ ಮೊತ್ತ 445.40 ಕೋಟಿ ರು.ಆಗಿವೆ. ಇವಿಷ್ಟೂ ಬಿಲ್‌ಗಳನ್ನು ಮಂಜೂರು ಮಾಡಲು ಕೆಂಗೇರಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್‌ ಅವರು ಬಿಬಿಎಂಪಿ ಪ್ರಧಾನ ಕಚೇರಿಗೆ ಕಳಿಸಿದ್ದಾರೆ. 3 ತಿಂಗಳಿಂದ 80 ತಿಂಗಳಾದರೂ (ಫೆ.2022ರವರೆಗೆ) ಬಿಲ್‌ಗಳು ಪಾಸ್‌ ಆಗಿಲ್ಲ. ಹಿರಿತನದ ಆಧಾರವನ್ನು ಸಿಎಒ ಪರಿಗಣಿಸುತ್ತಿಲ್ಲ.,’ ಎಂದು ಲೆಕ್ಕ ತಪಾಸಣೆ ವರದಿಯಲ್ಲಿ ವಿವರಿಸಿದ್ದಾರೆ.

 

2015ರಲ್ಲಿ 2.98, 819 ರು. ಮೊತ್ತದ 3 ಬಿಲ್‌ಗಳು ಬಾಕಿ ಇವೆ. ಅದೇ ರೀತಿ 2019ರಲ್ಲಿ 7,10, 69, 934 ರು. ಮೊತ್ತದ 37 ಬಿಲ್‌ಗಳು, 2020ರಲ್ಲಿ 11.93 ಕೋಟಿ ರು. ಮೊತ್ತದ 37 ಬಿಲ್‌ಗಳು, 2021 (ಡಿಸೆಂಬರ್ 21) 31.88 ಕೋಟಿ ರು.ಮೊತ್ತದ 251 ಬಿಲ್‌ಗಳು ಬಾಕಿ ಇದ್ದವು.

 

ಕಾಮಗಾರಿ ಬಿಲ್‌ನ ಹಣ ಬಿಡುಗಡೆಗೆ ಶೇ 40ರಷ್ಟು ಲಂಚ ಕೊಡಬೇಕಾದ ಸ್ಥಿತಿ ಇದೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ 2019ರ ನವೆಂಬರ್‌ನಿಂದ ₹3,500 ಕೋಟಿ ಬಿಲ್ ಬಾಕಿ ಉಳಿದಿದೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ‍‍ಗುತ್ತಿಗೆದಾರರು ಎಚ್ಚರಿಸಿದ್ದರು. 2 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರನ್ನು ಹೊಂದಿದ್ದು, ಅದರಲ್ಲಿ 200ರಿಂದ 300 ಗುತ್ತಿಗೆದಾರರು ₹10,000 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

 

ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್‌ ಪಾವತಿಯ ವೇಳೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಡಾ.ಆರ್​. ಗೋವಿಂದರಾಜ್ ಅವರು ನಿಯಮಬಾಹಿರವಾಗಿ 680 ಕೋಟಿ ರೂ. ಪಾವತಿ ಮಾಡಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts