ಬೆಂಗಳೂರು; ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಎಂಆರ್‌ಐ ಉಪಕರಣಗಳ ಖರೀದಿ ಟೆಂಡರ್‌ನಲ್ಲಿ ಬಿಡ್ ಮಾಡಲು ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪನಿಗೆ ಅವಕಾಶ ನೀಡಿರುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಇದೇ ಕಂಪನಿಗೆ ಆರ್ಥಿಕವಾಗಿ ಲಾಭ ಮಾಡಿಕೊಡಲು ವಾಮಮಾರ್ಗ ಹಿಡಿದಿದೆ.
ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲೊಂದಾದ ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಏಮ್ಸ್‌ನಂತಹ ಸಂಸ್ಥೆಗಳಲ್ಲಿ ತಾಂತ್ರಿಕವಾಗಿ ಹೆಚ್ಚು ಮೇಲ್ದರ್ಜೆಯಲ್ಲಿರುವ ಎಂಆರ್‌ಐ 3.0 ಟೆಸ್ಲಾ ಉಪಕರಣಗಳನ್ನು ಹೊಂದಿದ್ದರೆ ಇತ್ತ ಬೆಂಗಳೂರಿನ ಬಿಎಂಸಿಆರ್‌ಐ ಮತ್ತು ಹುಬ್ಬಳ್ಳಿಯಲ್ಲಿರುವ ಕಿಮ್ಸ್‌ಗೆ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪನಿಯು ತಯಾರಿಸಿರುವ ಎಂಆರ್‌ಐ 1.5 ಟೆಸ್ಲಾ ಉಪಕರಣಗಳನ್ನು ಸರಬರಾಜು ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಯು ಹಿಂಬಾಗಿಲಿನ ಮೂಲಕ ಪ್ರವೇಶಿಸಿದೆ. ಅಲ್ಲದೆ ಈ ಪ್ರಸ್ತಾವನೆಗೆ ತಾಂತ್ರಿಕ ತಜ್ಞರ ಸಮಿತಿಯ ಅಭಿಪ್ರಾಯ ಪಡೆದಿರುವ ಬಗ್ಗೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ.
ಕೇಂದ್ರ ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ನಡೆಸಿರುವ ಈ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿರುವ ಬೆನ್ನಲ್ಲೇ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪನಿಯ ಉಪಕರಣಗಳನ್ನು ಸರಬರಾಜು ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ತಾಂತ್ರಿಕವಾಗಿ ಉನ್ನತ ದರ್ಜೆಯಲ್ಲಿರುವ ಎಂಆರ್‌ಐ 3.0 ಟೆಸ್ಲಾ ಉಪಕರಣವನ್ನು ಖರೀದಿಸಿದರೆ 10.30 ಕೋಟಿ ರು. ಹೆಚ್ಚುವರಿಯಾಗಲಿದೆ ಎಂಬ ಕಾರಣವನ್ನು ಮುಂದಿರಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯ ಹಿಂದೆ ಕಮಿಷನ್ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೊಡಗು, ಕೊಪ್ಪಳ ಸೇರಿದಂತೆ ಹೊಸದಾಗಿ ಆರಂಭಗೊಳ್ಳಲಿರುವ ಮೆಡಿಕಲ್ ಕಾಲೇಜುಗಳಲ್ಲಿ 1.5 ಟೆಸ್ಲಾ ಉಪಕರಣ ಕೊಡಬಹುದು. ಆದರೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ 3 ಸಂಖ್ಯೆಯ 1.5 ಟೆಸ್ಲಾ ಉಪಕರಣಗಳಿವೆ. ಆದರೂ ಮತ್ತೆರಡು 1.5 ಟೆಸ್ಲಾ ಉಪಕರಣವನ್ನು ಖರೀದಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶಾನಾಲಯವು ಲಾಬಿ ನಡೆಸಿರುವುದು ಕಮಿಷನ್ ವ್ಯವಹಾರದ ಆರೋಪಕ್ಕೆ ಪುಷ್ಠಿ ದೊರೆತಂತಾಗಿದೆ.
ಕೋವಿಡ್ 19ರ ಮೂರನೇ ಅಲೆ ಸಿದ್ಧತೆಗಾಗಿ 01 ಸಂಖ್ಯೆ ಎಂಆರ್‌ಐ 3 ಟೆಸ್ಲಾ ಖರೀದಿಸಲು 15.00 ಕೋಟಿ ರು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ (ಆದೇಶ ಸಂಖ್ಯೆ; ಎಂಇಡಿ 373 ಎಂಪಿಎಸ್ 2021, 12-10-2021) ಅನುಮೋದನೆ ನೀಡಲಾಗಿತ್ತು. ಈ ಸಂಬಂಧ ಟೆಂಡರ್ ಕರೆದಿತ್ತು. ಇದರಲ್ಲಿ ಭಾಗವಹಿಸಿದ್ದ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಹಣಕಾಸು ಲಕೋಟೆಯಲ್ಲಿ ಎಂಆರ್‌ಐ 3.0 ಟೆಸ್ಲಾ ಗೆ 17.72 ಕೋಟಿ ರು. (ಜಿಎಸ್‌ಟಿ ಸೇರಿ) ರು., ಸಿಎಂಸಿ ಮೊತ್ತವು ಆರು ವರ್ಷಕ್ಕೆ 4,87,14,856 ರು. ಎಂದು ನಮೂದಿಸಿತ್ತು. ಒಟ್ಟಾರೆ 22, 59, 24, 856 ರು. ವೆಚ್ಚವಾಗಲಿದೆ.
ಇದು ಅಂದಾಜಿಸಿದ ಮೊತ್ತಕ್ಕಿಂತ ಹೆಚ್ಚಾಗಿದ್ದು ಇದರ ಬದಲಿಗೆ 1.5 ಟೆಸ್ಲಾ ಉಪಕರಣವನ್ನು ಖರೀದಿಸಿದರೆ ಒಂದಕ್ಕೆ 9,90,00,000 (ಜಿಎಸ್‌ಟಿ ಸೇರಿ) ಮತ್ತು ಸಿಎಂಸಿ ಮೊತ್ತವು 6 ವರ್ಷಕ್ಕೆ 2,38,79, 660 ರು. ಸೇರಿ ಒಟ್ಟಾರೆ 12,28,79, 660 ರು. ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಪ್ರಸ್ತಾವನೆಯಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಅಲ್ಲದೆ ‘ಎಂಆರ್‌ಐ ಟೆಸ್ಲಾ ಉಕರಣವನ್ನು ಖರೀದಿಸಲು ಒಂದು ಸಂಸ್ಥೆಗೆ 22, 59, 24,856 ರು. ಗಳಾಗುತ್ತದೆ. ಎಂಆರ್‌ಐ 1.5 ಟೆಸ್ಲಾ ಉಪಕರಣವನ್ನು ಖರೀದಿಸಿದರೆ ಒಂದು ಸಂಖ್ಯೆಗೆ 12,28,79, 660 ರು. ಆಗಲಿದೆ. ಎಂಆರ್‌ಐ 3 ಟೆಸ್ಲಾ ಮತ್ತು ಎಂಆರ್‌ಐ 1.5 ಟೆಸ್ಲಾ ಉಪಕರಣಕ್ಕೆ ರು. 10, 30, 45, 956 ರು.ಗಳಷ್ಟು ಮೊತ್ತ ವ್ಯತ್ಯಾಸವಾಗುತ್ತದೆ, ‘ ಎಂದು ಪ್ರಸ್ತಾವನೆಯಲ್ಲಿ ಹೇಳಿದೆ.
ಈ ಪ್ರಸ್ತಾವನೆ ಕುರಿತು ತಾಂತ್ರಿಕ ತಜ್ಞರ ಸಮಿತಿಯ ಅಭಿಪ್ರಾಯ ಪಡೆದಿರುವ ಬಗ್ಗೆ ಯಾವ ಮಾಹಿತಿಯನ್ನೂ ಸಲ್ಲಿಸದ ವೈದ್ಯಕೀಯ ಶಿಕ್ಷಣ ನಿರ್ದೇಶಾನಾಲಯವು ‘ ಎಂಆರ್‌ಐ 3.0 ಟೆಸ್ಲಾ 1 ಸಂಖ್ಯೆ ಉಪಕರಣ ಖರೀದಿಸುವ ಬದಲಾಗಿ 1.5 ಟೆಸ್ಲಾವನ್ನು ಖರೀದಿಸಿ ಬೀಎಂಸಿಆರ್‌ಐ ಹಾಗೂ ಕಿಮ್ಸ್ ಹುಬ್ಬಳ್ಳಿಗೆ ಸರಬರಾಜು ಮಾಡಲು ನಿರ್ದೇಶನ ನೀಡಬೇಕು,’ ಎಂದು ಕಡತವನ್ನು ಮಂಡಿಸಿದೆ.
ದೇಶದ ಪ್ರತಿಷ್ಠಿತ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಈಗಾಗಲೇ ಎಂಆರ್‌ಐ 3.0 ಟೆಸ್ಲಾ 5 ಉಪಕರಣಗಳಿವೆ. ಇದು ತಾಂತ್ರಿಕವಾಗಿ ಹೆಚ್ಚು ಮೇಲ್ದರ್ಜೆಯಲ್ಲಿರುವ ಉಪಕರಣ. ಮ್ಯಾಗ್ನಟಿಕ್ ಬಲ ಹೆಚ್ಚು. ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಹೆಚ್ಚು ಉಪಯುಕ್ತವಲ್ಲದೆ ದಪ್ಪಗಿರುವ ರೋಗಿಗಳ ಇಮೇಜ್ ಸ್ಪಷ್ಟತೆ ಇರುತ್ತೆ. ಅದೇ ರೀತಿ ಮೆದುಳು ಇಮೇಜ್‌ನಲ್ಲಿ ಸ್ಪಷ್ಟತೆ ಇರುತ್ತದೆಯಲ್ಲದೆ ದೇಹದೊಳಗೆ ಇಂಪ್ಲಾಟ್ ಅಳವಡಿಸಿರುವ ರೋಗಿಗಳನ್ನು ಪರೀಕ್ಷಿಸಲು ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ವೈದ್ಯಕೀಯ ಸಿಬ್ಬಂದಿಯೊಬ್ಬರು.
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 60 ಕೋಟಿ ರು. ವೆಚ್ಚದಲ್ಲಿ ಸಿಟಿ ಸ್ಕ್ಯಾನರ್, ಎಂಆರ್‌ಐ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಅನುಮತಿ ಪಡೆಯದೇ ಇರುವ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪನಿಯ ಏಜೆನ್ಸಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಕೇಂದ್ರ ಹಣಕಾಸು ಸಚಿವಾಲಯದ ಸುತ್ತೋಲೆಯನ್ನೇ ಬದಿಗಿರಿಸಿತ್ತು. ಈ ಮೂಲಕ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನೇ ಉಲ್ಲಂಘಿಸಿರುವ ಗುರುತರ ಆರೋಪಕ್ಕೆ ಗುರಿಯಾಗಿದೆ. ಈ ಕುರಿತು ‘ದಿ ಫೈಲ್’ 2022ರ ಏಪ್ರಿಲ್ 1ರಂದು ವರದಿ ಪ್ರಕಟಿಸಿತ್ತು.
ಸಿಟಿ ಸ್ಕ್ಯಾನರ್‌ಗಳ ಖರೀದಿಯಲ್ಲಿ ಕೇಂದ್ರದ ಮಾರ್ಗಸೂಚಿ ಉಲ್ಲಂಘನೆ; ಚೀನಾ ಕಂಪನಿ ಏಜೆನ್ಸಿಗೆ ಮಣೆ
ಅಷ್ಟೇ ಅಲ್ಲ, ಇಡೀ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ರೀತಿಯ ಲೋಪಗಳನ್ನೆಸಗಿರುವ ಆರೋಪಕ್ಕೆ ಗುರಿಯಾಗಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಚೀನಾದ ಕಂಪನಿಯ ಏಜೆನ್ಸಿಗೆ ಉಪಕರಣಗಳ ಸರಬರಾಜು ಮತ್ತು ಅಳವಡಿಸಲು ಲೆಟರ್ ಆಫ್ ಕ್ರೆಡಿಟ್ ಪತ್ರವನ್ನೂ ತೆರೆಮರೆಯಲ್ಲಿ ನೀಡಿದೆ ಎಂದು ಗೊತ್ತಾಗಿದೆ. ಈ ಮೂಲಕ ರಾಜ್ಯದ ರೋಗಿಗಳ ದತ್ತಾಂಶಗಳನ್ನೂ ಚೀನಾ ಕಂಪನಿಗೆ ತಲುಪಿಸಿದಂತಾಗಿದೆ.
ಅದೇ ರೀತಿ ಟೆಂಡರ್ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ ಗಿರೀಶ್ ಅವರ ನಿವೃತ್ತಿಗೆ ಒಂದು ತಿಂಗಳು ಬಾಕಿ ಇರುವಾಗಲೇ ಟೆಂಡರ್ ಪ್ರಕ್ರಿಯೆಯನ್ನು ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಿದರೂ ಈ ಬಗ್ಗೆ ಅಂತಿಮ ನಿರ್ಧಾರಗಳನ್ನು ಪ್ರಕಟಿಸಬಾರದು. ಆದರೂ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪನಿ ಎಜೆನ್ಸಿಗೆ ಲೆಟರ್ ಆಫ್ ಕ್ರೆಡಿಟ್ ಪತ್ರ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಕಂಪನಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2021ರ ಡಿಸೆಂಬರ್ 28ರಂದೇ ದೂರು ಸಲ್ಲಿಸಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮಾಹಿತಿ ಕೋರಿತ್ತು. ಆದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆ ವೇಳೆಯಲ್ಲಿ ಚೀನಾ ಕಂಪನಿಗಳು ಉತ್ಪಾದಿಸಿರುವ ಎಲ್ಲಾ ರೀತಿಯ ಉಪಕರಣಗಳನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿತ್ತು. ಒಂದೊಮ್ಮೆ ಚೀನಾದ ಕಂಪನಿಗಳ ಏಜೆನ್ಸಿಗಳು ಟೆಂಡರ್‌ನಲ್ಲಿ ಭಾಗವಹಿಸುವ ಮುನ್ನ ಭಾರತ ಸರ್ಕಾರದ ಅನುಮತಿ ಪತ್ರವನ್ನು ಪಡೆದಿರಬೇಕು ಎಂದು ಕೇಂದ್ರದ ಹಣಕಾಸು ಸಚಿವಾಲಯವು ಮಾರ್ಗಸೂಚಿ ಹೊರಡಿಸಿತ್ತು.
ಆದರೆ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯು ಕರೆದಿದ್ದ ಟೆಂಡರ್‌ನಲ್ಲಿ ಚೀನಾ ಕಂಪನಿ ಪರವಾಗಿ ಭಾಗವಹಿಸಿದ್ದ ಬೆಂಗಳೂರಿನ ಏಜೆನ್ಸಿಯೊಂದು ಭಾರತ ಸರ್ಕಾರದ ಯಾವುದೇ ಅನುಮತಿ ಪತ್ರವನ್ನು ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದನ್ನು ಪರಿಶೀಲಿಸದೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಏಜೆನ್ಸಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಭಾರತ ಸರ್ಕಾರದ ಸುತ್ತೋಲೆಯನ್ನು ನೇರಾನೇರ ಉಲ್ಲಂಘಿಸಿದೆ ಎಂಬ ಆಪಾದನೆ ಕೇಳಿ ಬಂದಿದೆ.