ತರಳಬಾಳು ಜಗದ್ಗುರು, ಇತರರಿಂದ ಜೀವ ಭಯದ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಹಿಳೆ

ಬೆಂಗಳೂರು; ತರಳಬಾಳು ಜಗದ್ಗುರು ಡಾ ಶ್ರೀಶ್ರೀಶ್ರೀ 1108 ಶಿವಮೂರ್ತಿ ಶಿವಾಚಾರ್ಯ, ತರಳಬಾಳು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ್‌ ಸೇರಿದಂತೆ ಹಲವರಿಂದ ರಕ್ಷಣೆ ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ಸಾವು ಸಂಭವಿಸಿದರೆ ಇವರೆಲ್ಲರೂ ಕಾರಣರು ಎಂದು ಬೆಂಗಳೂರಿನ ಆರ್‌ ಟಿ ನಗರದ ನಿವಾಸಿ ಶಿಲ್ಪ ಟಿ ಎಸ್‌ ಎಂಬುವರು ಬೆಂಗಳೂರಿನ ಜೆ ಸಿ ನಗರದ ಉಪ ವಿಭಾಗದ ಡಿಸಿಪಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

 

ಸಿದ್ದೇಶ್‌ ಎಂಬುವರ ಪತ್ನಿಯಾದ ಶಿಲ್ಪ ಎಂಬುವರು ಇದೇ ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಮಹಾನಿರ್ದೇಶಕ, ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೂ ಸಲ್ಲಿಸಿದ್ದಾರೆ. ಜೆ ಸಿ ನಗರದ ಉಪ ವಿಭಾಗ ವ್ಯಾಪ್ತಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಈ ದೂರನ್ನು ಎನ್‌ಸಿಆರ್‌ ಎಂದು ಪರಿಗಣಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳದಂತೆ ಆರ್‌ ಟಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮನವಿ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರೂ ಅಸಹಾಯಕರಾಗಿದ್ದಾರೆ ಎಂದು ಗೊತ್ತಾಗಿದೆ.

 

ಶಿಲ್ಪ ಅವರು ಜೆ ಸಿ ನಗರದ ಉಪ ವಿಭಾಗದ ಡಿಸಿಪಿಗೆ ಸಲ್ಲಿಸಿರುವ ಮನವಿ  ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಿಲ್ಪ ಎಂಬುವರು ಜೆ ಸಿ ನಗರ ಉಪ ಆಯುಕ್ತರಿಗೆ ಸಲ್ಲಿಸಿರುವ ದೂರಿನ ಪ್ರತಿ

 

‘ನನಗೆ ಮತ್ತು ನನ್ನ ಕುಟುಂಬದವರಿಗೆ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಯವರಿಂದ, ತರಳಬಾಳು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ್‌ ಎಚ್‌ ಎಂ, ನೌಕರರಾದ ಮರುಳಸಿದ್ದಪ್ಪ, ಆತನ ಹೆಂಡತಿ, ಸುರೇಶ್‌, ವಾಹನ ಚಾಲಕ ನಾಗೇಶ, ವೀರಯ್ಯ, ಪುನೀತ ಮತ್ತು ಸಹಚರರಿಂದ ರಕ್ಷಣೆ ಬೇಕಾಗಿದೆ. ಮತ್ತು ನನಗೆ ಮತ್ತು ನನ್ನ ಕುಟುಂಬದವರಿಗೆ ಏನೇ ತೊಂದರೆಯಾದರೆ, ಸಾವು ಸಂಭವಿಸಿದರೆ ಇವರೆಲ್ಲರೂ ಕಾರಣವಾಗುತ್ತಾರೆ,’ ಎಂದು ಮನವಿಯಲ್ಲಿ ಅಳಲು   ತೋಡಿಕೊಂಡಿದ್ದಾರೆ.

 

ಮನವಿಯಲ್ಲೇನಿದೆ?

 

‘ಜಗದ್ಗುರುಗಳು 2022ರ ಜನವರಿ 20ರಂದು ತರಳಬಾಳು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ, ನೌಕರರಾದ ಮರುಳಸಿದ್ದಪ್ಪ, ಸತೀಶ್‌, ವೀರಯ್ಯ, ಪುನೀತ್‌ ಮತ್ತು ಸಹಚರರನ್ನು ಕಳಿಸಿ ಅತಿಕ್ರಮಣ ಪ್ರವೇಶ ಮಾಡಿಸಿದ್ದಾರೆ. ನಮ್ಮ ರಕ್ಷಣೆಗೆ ಇದ್ದ ಸಿಸಿಟಿವಿಯನ್ನು ಧ್ವಂಸಗೊಳಿಸಿದ್ದಾರೆ. ನಮ್ಮ ಮನೆಯ ಗೇಟ್‌ ಬಾಗಿಲುಗಳನ್ನು ಹೊಡೆದು ತರಳಬಾಳು ಕೇಂದ್ರದ ಕಾರ್ಯದರ್ಶಿಯಾದ ವಿಶ್ವನಾಥ ಮತ್ತು ಮರುಳಸಿದ್ದಪ್ಪ, ಸಹಚರರು ನಮ್ಮ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಧ್ವಂಸಗೊಳಿಸಿ ಬೆಲೆಬಾಳುವ ವಸ್ತುಗಳನ್ನು ಅವರ ಸ್ವಂತ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಇದರ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಆದರೆ ಯಾವುದೇ ರೀತಿಯ ರಕ್ಷಣೆ ದೊರೆತಿಲ್ಲ. ಹಾಗೂ ಮರುಳಸಿದ್ದಪ್ಪ ಅವರು ನಾವು ವಾಸವಾಗಿರುವ ಕಟ್ಟಡದಲ್ಲಿ ಕುಟುಂಬ ಸಮೇತ ಅತಿಕ್ರಮಣ ಮಾಡಿ ವಾಸ ಮಾಡುತ್ತಿದ್ದಾರೆ,’ ಎಂದು ಶಿಲ್ಪ ಅವರು ಮನವಿಯಲ್ಲಿ   ವಿವರಿಸಿದ್ದಾರೆ.

 

ಹಾಗೆಯೇ ‘ನನಗೂ ಮತ್ತು ನನ್ನ ಕುಟುಂಬದವರಿಗೂ ಡಾ ಶ್ರೀಶ್ರೀಶ್ರೀ 1108 ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ತರಳಬಾಳು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ, ಕೇಂದ್ರದ ನೌಕರರಾದ ಮರುಳಸಿದ್ದಪ್ಪ ಅವರಿಂದ ರಕ್ಷಣೆ ಕೊಡಿಸಬೇಕು,’ ಎಂದು ಮನವಿ ಮಾಡಿರುವುದು ಗೊತ್ತಾಗಿದೆ.

 

ಕರ್ನಾಟಕ ಸರ್ಕಾರದ ಕುಮ್ಮಕ್ಕು 

 

‘ಕರ್ನಾಟಕ ಸರ್ಕಾರದ ಕುಮ್ಮಕ್ಕಿನಿಂದ ಜಗದ್ಗುರುಗಳು ಯಾವ ಹೀನ ಕೃತ್ಯ ಮಾಡಲು ಹೆದರುವುದಿಲ್ಲ ಎಂಬುದು ನಮಗೆ ಅರ್ಥವಾಗಿದೆ. ಜಗದ್ಗುರುಗಳ ಜತೆಗಿರುವ ಸುರೇಶ್‌, ಮರುಳಸಿದ್ದಪ್ಪ, ತಿಪ್ಪಣ್ಣನವರು ನಮ್ಮನ್ನು ನಮ್ಮ ಸ್ವಂತ ಊರಾದ ತೂಲಹಳ್ಳಿ, ವಿಜಯನಗರ (ಜಿಲ್ಲೆ)ದಿಂದ ಬಿಟ್ಟು ಕಳಿಸಿದ್ದಾರೆ. ಹಾಗೂ ಗಂಡ ಹೆಂಡತಿ ಸರಿಇಲ್ಲ ಎಂದು ಅಪಪ್ರಚಾರ ಮಾಡಿದ್ದಾರೆ. ನಾನು ನನ್ನಗಂಡನ ಜತೆ ಸರಿ ಇಲ್ಲದಿದ್ದರೆ 10 ವರ್ಷ ಒಟ್ಟಿಗೆ ಸಂಸಾರ ಮಾಡುತ್ತಿರಲಿಲ್ಲ. ನಮ್ಮದು ಸುಖ ಸಂಸಾರ. ಆದರೆ ಜಗದ್ಗುರುಗಳು ಪದೇ ಪದೇ ನಮ್ಮ ಸಂಸಾರಕ್ಕೆ ತೊಂದರೆ ಕೊಡುತ್ತಿದ್ದಾರೆ,’ ಎಂದು ಮನವಿಯಲ್ಲಿ   ವಿವರಿಸಿದ್ದಾರೆ.

 

ತರಳಬಾಳು ಕೇಂದ್ರದ ನೌಕರರಾದ ಮರುಳಸಿದ್ದಪ್ಪ ಮತ್ತು ಸುರೇಶ್‌ ಅವರ ವಾಹನ ಚಾಲಕರಾದ ನಾಗೇಶ್‌ ಎಂಬಾತ 2022ರ ಏಪ್ರಿಲ್‌ 20ರಂದು ಕುಡಿದ ಬಂದು ಗಲಾಟೆ ಮಾಡಿ ಮರುಳಸಿದ್ದಪ್ಪ ಮತ್ತು ನಾಗೇಶ್‌ ಹೆಂಡತಿ ನನಗೆ ಮತ್ತು ನನ್ನ ಗಂಡನಿಗೆ ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಇದರ ಬಗ್ಗೆ ದೂರು ನೀಡಲು ಹೋದ ಸಿದ್ದೇಶ ಅವರನ್ನು ಪೊಲೀಸ್‌ ಠಾಣೆಯಲ್ಲಿ ಇಟ್ಟುಕೊಂಡಿದ್ದರು ಎಂದು ಮನವಿ  ಮುಖೇನ ಗಮನಕ್ಕೆ ತಂದಿದ್ದಾರೆ.

 

ಈ ಕುರಿತು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ ತನಿಖಾಧಿಕಾರಿ ಮನವಿ ಸಲ್ಲಿಕೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ‘ಮನವಿ  ಮೇಲೆ ಎನ್‌ ಸಿ ಆರ್‌ ಮಾಡಲಾಗಿದೆ. ವಿಚಾರಣೆ ಆದ ನಂತರ ನಿಜ ಕಂಡು ಬಂದರೆ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು,’ ಎಂದು ಪ್ರತಿಕ್ರಿಯಿಸಿದ್ದಾರೆ.

SUPPORT THE FILE

Latest News

Related Posts