ಮುಸ್ಲಿಮರು: ಭರತ ಭೂಮಿಯ ಮಲತಾಯಿ ಮಕ್ಕಳು!

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕೋಮುವಾದಿಗಳ ವಿಷಬಿತ್ತನೆ ಫಲವಾಗಿ ಮುಸ್ಲಿಮರು ತಮ್ಮ ಹುಟ್ಟಿನಿಂದಾಗಿಯೇ ಆರೋಪಿಗಳು! ಅವರಲ್ಲಿ ಅದೃಷ್ಟ ಇದ್ದವರು, ಪ್ರವಾಹದೊಂದಿಗೇ ಈಜುವ ಬುದ್ಧಿವಂತರು ಮಾತ್ರ ಬಚಾವಾಗುತ್ತಾರೆ. ಇತರರು ಹಿಂದುತ್ವದ ಕೋಮು ದಬ್ಬಾಳಿಕೆಗೆ ಬಲಿಯಾಗುತ್ತಾರೆ ಇಲ್ಲವೇ ಭಯದಿಂದಲೇ ಅಸಹಾಯಕರಾಗಿ ಶರಣಾಗುತ್ತಾರೆ.

 

ನವಭಾರತಕ್ಕಾಗಿ ನವಕರ್ನಾಟಕ ಎಂಬ ಹುಸಿ ಘೋಷಣೆ ಕೇಳಿದರೆ, ನೋಡಿದರೆ ರೋಮಾಂಚನವೇನೂ ಆಗುತ್ತಿಲ್ಲ, ಅದರ ಬದಲಿಗೆ ನಗು ಬರುತ್ತದೆ. ಭಾರತೀಯರೆಂಬ ನಮ್ಮ ನಡುವೆಯೇ ಹುಟ್ಟಿ ಬೆಳೆದ ಮುಸ್ಲಿಮರ ವಿರುದ್ಧ ಸರಣಿ ಕಾರ್ಯಕ್ರಮಗಳನ್ನು ಎಡೆಬಿಡದೇ ಆಯೋಜಿಸುತ್ತಿರುವುದನ್ನೇ ನವಕರ್ನಾಟಕ ಎನ್ನಬೇಕೇ?

 

 

ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುವುದಕ್ಕೆ ನಿರ್ಬಂಧ, ಮಸೀದಿಯಲ್ಲಿ ಆಝಾನ್ ವಿರುದ್ಧ ಗದ್ದಲ ಸೃಷ್ಟಿಸಿ ದೇವಾಲಯಗಳಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ ಪಠಣದ ಬೆದರಿಕೆ, ಯುಗಾದಿಯ ಮಾರನೇ ದಿನವೇ ನಡೆಯುವ ಮಾಂಸಾಹಾರಕ್ಕೆ ಪ್ರಾಮುಖ್ಯ ಇರುವ ಹೊಸತಡಕು ಆಚರಣೆ ಸಂದರ್ಭದಲ್ಲಿ ಮುಸ್ಲಿಮರು ಮಾರಾಟ ಮಾಡುವ ಹಲಾಲ್ ಮಾಂಸ ತಿರಸ್ಕರಿಸಿ ಜಟ್ಕಾ ಕಟ್ ಮಾಂಸ ಖರೀದಿಸುವಂತೆ ಪ್ರಚಾರ, ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮಾವಿನಹಣ್ಣನ್ನು ಮುಸ್ಲಿಮರಿಗೆ ಸಗಟು ಮಾರಾಟ ಮಾಡುವ ಬದಲು ಹಿಂದೂಗಳ ಏಕಸ್ವಾಮ್ಯಕ್ಕೆ ಚಿತಾವಣೆ, ಹಿಂದೂ ದೇವಾಲಯಗಳಿಗೆ ತೆರಳಲು ಮುಸ್ಲಿಮರು ಚಲಾಯಿಸುವ ವಾಹನ ಬಳಕೆ ಕೈಬಿಡಲು ಮನವೊಲಿಕೆ, ಅಕ್ರಮ ನಿರ್ಮಾಣಗಳ ನೆಪವೊಡ್ಡಿ ಮುಸ್ಲಿಮರ ಮನೆ ನೆಲಸಮಕ್ಕೆ ಬುಲ್ಡೋಜರ್ ಬಳಕೆಯ ಎಚ್ಚರಿಕೆ…….ಈಗ ಅಕ್ಷಯ ತೃತೀಯ ದಿನದಂದು ಹಿಂದೂಗಳ ಮಾಲೀಕತ್ವದ ಆಭರಣ ಅಂಗಡಿಯಲ್ಲಿ ಖರೀದಿಸುವಂತೆ ಮನವಿ ಮಾಡಲಾಗುತ್ತಿದೆ.  ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯಲ್ಲಿ ಕೋಮುವಾದದ ಮಾನಸಿಕ ಅಸ್ವಸ್ಥರಿಂದ ಒಂದೊಂದು ಬಗೆಯ ಮುಸ್ಲಿಂ ಆರ್ಥಿಕ ದಿಗ್ಬಂಧನಕ್ಕೆ ಕರೆ!

 

 

 

ಮೊದಲೇ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಇನ್ನಷ್ಟು ದಿಕ್ಕೆಟ್ಟ ಸ್ಥಿತಿಗೆ ತಳ್ಳುವ ಹುನ್ನಾರ! ಮುಸ್ಲಿಮರ ಅಸಹಾಯಕತೆ ನೋಡಿ ಸಂಭ್ರಮಿಸುವ ಅಮಾನವೀಯ ಉನ್ಮಾದ! ಭಾರತೀಯರ ವಿರುದ್ಧ ಭಾರತೀಯರನ್ನೇ ಎತ್ತಿಕಟ್ಟುವ ದೇಶದ್ರೋಹದ ಚಟುವಟಿಕೆಗಳಿಗೆ ಸರ್ಕಾರದ ಮೌನಸಮ್ಮತಿ! ಅದಕ್ಕೆ ತಕ್ಕಂತೆ ಮುಸ್ಲಿಂ ವಿರೋಧಿ ರೋಗದ ಖಾಸಗಿ ಸುದ್ದಿವಾಹಿನಿಗಳಿಂದಲೂ ವಿಷಬಿತ್ತನೆ. ಮೊದಲೆಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದರೆ ಭಾರತೀಯ ಮುಸ್ಲಿಮರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆಂದೂ, ಅಲ್ಲೆಲ್ಲೋ ತಾವೇ ಪಾಕಿಸ್ತಾನ ಧ್ವಜ ಹಾರಿಸಿ ಮುಸ್ಲಿಮರು ಹಾರಿಸಿದರೆಂದೂ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದೂ ಇತರ ಸಮುದಾಯಗಳಿಗೆ ಸೇರಿದ ಭಾರತೀಯರನ್ನು ಎತ್ತಿ ಕಟ್ಟುತ್ತಿದ್ದ ಮನೋರೋಗಿಗಳ ಸಂಘಟನೆ ಈಗ ದಿನಕ್ಕೊಂದು ಕಾರ್ಯಕ್ರಮ ಹೆಣೆಯುವಲ್ಲಿ ನಿರತವಾಗಿದೆ.

 

ಮುಸ್ಲಿಮರ ವಿರುದ್ಧ ಯಾಕಿಂಥ ದ್ವೇಷ?

 

ಕಿಟ್ಟೆಲ್ ಕನ್ನಡ-ಕನ್ನಡ ನಿಘಂಟಿನಲ್ಲಿ ….ಣ್ಣೆ ಎಂಬ ಪದಕ್ಕೆ ಅರ್ಥದ ಜತೆ …..ಣ್ಣೆ ಉಂಡರೂ ತುರುಕರ ಸಹವಾಸ ಬೇಡ ಎಂಬ ಗಾದೆಯನ್ನೂ ಕಿಟ್ಟೆಲ್ ಉಲ್ಲೇಖಿಸಿದ್ದಾರೆ. ಈ ಗಾದೆ ಯಾಕಾಗಿ ಹುಟ್ಟಿಕೊಂಡಿತು? ಯಾರಿಂದ ಹುಟ್ಟಿಕೊಂಡಿತು? ತುರುಕರು ಎಂದರೆ ತುರ್ಕಿ ದೇಶಕ್ಕೆ ಸೇರಿದವರು ಎಂದು ವಾದಕ್ಕಾಗಿ ಸಮಜಾಯಿಷಿ ನೀಡಬಹುದು. ಆದರೆ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ತುರುಕರೆಂದರೆ ಮುಸ್ಲಿಮರೇ. ಈ ಗಾದೆಯ ಅರ್ಥ ಏನು? ತುರುಕರ ಸಹವಾಸ ಬೇಡ ಎನ್ನುವವರು …ಣ್ಣೆ ಉಣ್ಣುತ್ತಾರೆಂದೇ? ತುರುಕರ ಸಹವಾಸಕ್ಕಿಂತ …ಣ್ಣೆ ಉಣ್ಣುವುದೇ ಹಿತಕರ ಎಂದೇ?

 

 

ಖಂಡಿತ ಅಲ್ಲ. ಮುಸ್ಲಿಮರ ಸಹವಾಸ ಬೇಡವೇ ಬೇಡ ಎನ್ನುವುದಷ್ಟೇ ಅದರರ್ಥ. ಮುಸ್ಲಿಮರ ಸಹವಾಸ ಬೇಡ ಎನ್ನುವಂಥ ಅಪರಾಧ ಅವರು ಮಾಡಿರುವುದಾದರೂ ಏನು? ಒಟ್ಟಾಗಿ ಭಾರತವನ್ನು ತೆಗೆದುಕೊಳ್ಳುವುದಾದರೆ ರಾಜಕೀಯ ಕಾರಣಗಳಿಗಾಗಿ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನ ಪ್ರತ್ಯೇಕ ಇಸ್ಲಾಂ ರಾಷ್ಟ್ರವಾಯಿತು. ಭಾರತ ಜಾತ್ಯತೀತ ರಾಷ್ಟ್ರವಾಯಿತು. ಹಾಗೆಂದ ಮಾತ್ರಕ್ಕೆ ಎಲ್ಲ ಮುಸ್ಲಿಮರು ಭಾರತ ಬಿಟ್ಟು ಹೋಗಲಿಲ್ಲ. ಪಾಕಿಸ್ತಾನ ಭಾಗದಲ್ಲಿದ್ದ ಎಲ್ಲ ಹಿಂದೂಗಳೂ ಭಾರತಕ್ಕೆ ಬರಲಿಲ್ಲ. ಪಾಕಿಸ್ತಾನ ಎಷ್ಟೆಂದರೂ ಜಗಳ ಮಾಡಿ ಆಸ್ತಿ ಪಾಲು ಪಡೆದು ಬೇರೆ ಹೋದ ಸಹೋದರ ಎಂದು ನಾನು ಬಲವಾಗಿ ನಂಬಿಕೊಂಡಿದ್ದು ಈ ಮಾತನ್ನು ಸಂದರ್ಭ ಸಿಕ್ಕಾಗಲೆಲ್ಲ ಹೇಳಿದ್ದೇನೆ. ಹೀಗಾಗಿ ಪಾಕಿಸ್ತಾನವನ್ನು ನನ್ನಂಥವರು ದ್ವೇಷಿಸುವ ಪ್ರಶ್ನೆಯೇ ಇಲ್ಲ.

 

 

ಇನ್ನು ಭಾರತ ನೆಲದಲ್ಲೇ ನಮ್ಮ ಜತೆಯಲ್ಲೇ ಹುಟ್ಟಿ ಬೆಳೆದ ಮುಸ್ಲಿಮರನ್ನು ಯಾಕಾದರೂ ದ್ವೇಷಿಸುತ್ತೇವೆ? ಪಾಕಿಸ್ತಾನ ವಿಭಜನೆಯೊಂದಿಗೆ ಭಾರತ ಸ್ವಾತಂತ್ರ್ಯ ಪಡೆದ ದಿನದಿಂದಲೇ ಮುಸ್ಲಿಂ ವಿರೋಧಿ ವಿಷಬಿತ್ತನೆ ಶುರುವಾಗಿದ್ದಲ್ಲ. ಅದಕ್ಕೂ ಮೊದಲೇ.1894 ರಲ್ಲಿ ಮೊದಲ ಮುದ್ರಣ ಕಂಡ ಕಿಟ್ಟೆಲ್ ನಿಘಂಟು ಸಿದ್ಧವಾಗಲು ಕೆಲವು ವರ್ಷಗಳ ಶ್ರಮ ಇದ್ದೇ ಇರುತ್ತದೆ. ರಾಜ್ಯದ ವಿವಿಧೆಡೆಗಳಲ್ಲಿ ಓಡಾಡಿ ಸಂಗ್ರಹಿಸಿದ ಗಾದೆಗಳನ್ನು ಸಂಬಂಧಪಟ್ಟಲ್ಲಿ ಅವರು ಉಲ್ಲೇಖಿಸಿದ್ದಾರೆ. ಮೊಘಲರ ಆಕ್ರಮಣ ಹಿನ್ನೆಲೆಯಲ್ಲಿ ಈ ಗಾದೆ ಹುಟ್ಟಿಕೊಳ್ಳುವುದೂ ಸಾಧ್ಯವಿಲ್ಲ. ಇದು ಕನ್ನಡ ಗಾದೆ.ಯಾವುದೋ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ಹೊರಹೊಮ್ಮಿದ ಈ ಮಾತು ಗಾದೆಯಾಗಿ ರೂಢಿಗೆ ಬಂದಿರಬಹುದು.

 

 

ನನಗೆ ಪ್ರಾಥಮಿಕ ಶಾಲೆಯಲ್ಲಿ ಶಬೀರ್ ಹೊಡೆದಿದ್ದ ಎಂದು ಎಲ್ಲ ಮುಸ್ಲಿಮರನ್ನು ದ್ವೇಷಿಸುತ್ತಾ ಹೋಗಬೇಕೆ? ನಮ್ಮ ಶಾಲೆಯ ಫಾದರ್ ನಿವಾಸದ ವಾಟರ್ ಟ್ಯಾಂಕ್ ಗೆ ಬಿದ್ದಾಗ ನನ್ನನ್ನು ಕಾಪಾಡಿದ ಮೊಹ್ಮದ್ ಮುಸ್ಲಿಮನಲ್ಲವೇ? ಮಡಿಕೇರಿ ದಸರಾದಲ್ಲಿ ಗೌಳಿಬೀದಿಯ ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯದ ಮಂಟಪ ಕಟ್ಟುವ ಕಾರ್ಯದಲ್ಲಿ ಸಂಪೂರ್ಣವಾಗಿ ಭಾಗಿಯಾಗುತ್ತಿದ್ದ ಫಝುಲುಲ್ಲಾ ಮುಸ್ಲಿಮನಲ್ಲವೇ? ಅದೆಷ್ಟೋ ಹಿಂದೂಗಳು ಮುಸ್ಲಿಮರ ದರ್ಗಾಗಳಿಗೆ ಹೋಗಿ ಹರಕೆ ಕಟ್ಟುತ್ತಿಲ್ಲವೇ? ಪೂಜೆ ಸಲ್ಲಿಸುತ್ತಿಲ್ಲವೇ? ಅದೆಷ್ಟೋ ಮುಸ್ಲಿಮರು ಮಾರುತಿ ಮಂದಿರಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಿಲ್ಲವೇ?

 

 

ಅಷ್ಟೇ ಏಕೆ? ನನ್ನ ಅಮ್ಮ ಸೊಗಸಾದ ಉರ್ದು ಮಾತನಾಡುತ್ತಿದ್ದರು, ಉರ್ದು ಓದುತ್ತಿದ್ದರು. ಇದನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ ಉರ್ದು ಕೇವಲ ಮುಸ್ಲಿಮರ ಭಾಷೆಯಲ್ಲ, ಅದು ಭಾರತೀಯ ಭಾಷೆ ಎಂದು ಅರಿಯದವರಿಗೆ ಸ್ಪಷ್ಟಪಡಿಸುವುದಕ್ಕೆ‌ .ಮುಸ್ಲಿಂ ಹಬ್ಬಗಳ ಸಂದರ್ಭದಲ್ಲಿ ನಮ್ಮ ಅಜ್ಜಿ (ಅಮ್ಮನ ಅಮ್ಮ) ಮನೆಗೆ ಆಚರಣೆ ಸಂಬಂಧಿಸಿದ ನವಿಲುಗರಿಯ ಬೀಸಣಿಗೆಯೊಂದಿಗೆ ಮುಸ್ಲಿಮರ ಮೊದಲ ಭೇಟಿ ಅಲ್ಲಿನ ಪದ್ಧತಿಯಾಗಿತ್ತು. ಅದಕ್ಕೆ ಧಾರ್ಮಿಕವಾಗಿ ಏನೆಂದು ಹೇಳುತ್ತಿದ್ದವರೆಂದು ನನಗೆ ನೆನಪಾಗುತ್ತಿಲ್ಲ‌. ನಮ್ಮ ಅಜ್ಜಿ ಮನೆಯಿಂದಲೇ ಹಬ್ಬಕ್ಕೆ ಸಂಬಂಧಿಸಿದ ಆಚರಣೆ ಆರಂಭವಾಗುತ್ತಿದ್ದುದನ್ನು ಬಾಲ್ಯದಲ್ಲಿ ನೋಡಿದ ನೆನಪಿದೆ. ವಿವರಗಳು ಮಸುಕಾಗಿವೆ. ಅದು ಹಾಗಿರಲಿ. ಕರ್ನಾಟಕದ ಅಸಂಖ್ಯಾತ ಊರುಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯ ಸಾರುವ ಆಚರಣೆಗಳನ್ನು ನಾವು ಆಗಿಂದಾಗ್ಗೆ ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿಲ್ಲವೇ? ಇದರರ್ಥ ಹಿಂದೂ ಮುಸ್ಲಿಂ ಭಾವೈಕ್ಯ ಈ ನೆಲದ ಸಹಜ ಗುಣ. ಭಾರತದ ಪ್ರಗತಿಗೆ ಆದು ಅನಿವಾರ್ಯ.

 

 

ಅಂದರೆ ಭಾರತೀಯ ಮನಸ್ಸು ಮುಸ್ಲಿಂ ವಿರೋಧಿ ವಿಷಬಿತ್ತನೆ ಮಾಡುವುದು ಸಾಧ್ಯವೇ ಇಲ್ಲ. ವಿವಿಧ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಂದ ಯಾವ್ಯಾವುದೋ ಸಂದರ್ಭದಲ್ಲಿ ನಮಗೆ ಅನ್ಯಾಯವಾಗಿಲ್ಲವೆ? ತೊಂದರೆಯಾಗಿಲ್ಲವೇ? ಎಲ್ಲ ಜಾತಿ, ಧರ್ಮ, ಜನಾಂಗಗಳಲ್ಲೂ ಅನ್ಯಾಯ ಮಾಡುವವರಿಲ್ಲವೇ? ಅನ್ಯಾಯ ಮಾಡುವುದು ಕೇವಲ ಮುಸ್ಲಿಮರ ಗುತ್ತಿಗೆ ಎಂದು ನಂಬಿಸುವ ವ್ಯವಸ್ಥಿತ ಸಂಚು ಕೇವಲ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ನಡೆಯುತ್ತಿದೆ ಎಂದು ಹೇಳಲಾಗದು. ಸದ್ಯಕ್ಕೆ ಮುಂದಿನ ಚುನಾವಣೆ ಗೆಲುವಿಗಾಗಿ ಹಿಂದೂ ಮತ್ತು ಮುಸ್ಲಿಮರನ್ನು ಪ್ರತ್ಯೇಕಿಸಿ ಮತಸೆಳೆಯುವ ಲೆಕ್ಕಾಚಾರ ಇರಬಹುದು. ಆದರೆ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೊದಲ ಭಾಗವಾಗಿ ಕ್ಷುದ್ರಜೀವಿಗಳ ಗುಂಪೊಂದು ಮುಸ್ಲಿಮರ ಮೇಲೆ ಗುರಿ ಇರಿಸಿದೆದೆಯಷ್ಟೇ‌. ಈವರೆಗೆ ಗುಜರಾತ್ ಮಾಡಲ್ ಎಂದು ಬೊಗಳುತ್ತಿದ್ದವರೆಲ್ಲ ಈಗ ಉತ್ತರ ಪ್ರದೇಶ ಮಾಡಲ್ ಎಂದು ಒದರಲಾರಂಭಿಸಿದ್ದಾರೆ.

 

 

ಗುಜರಾತ್ ಮಾಡಲ್ ಮತ್ತು ಉತ್ತರಪ್ರದೇಶ ಮಾಡಲ್ ಗೆ ಅಂಥ ವ್ಯತ್ಯಾಸವೇನಿಲ್ಲ. ಬದುಕಿರುವವರನ್ನು ಕೊಲ್ಲುವುದು ಗುಜರಾತ್ ಮಾಡಲ್, ಬದುಕನ್ನು ಕೊಲ್ಲುವುದು ಉತ್ತರಪ್ರದೇಶ(ಇಲ್ಲೂ ಗೋಮಾಂಸ ಹಿನ್ನೆಲೆಯಲ್ಲಿ ಮುಸ್ಲಿಮರ ಹತ್ಯೆಗಳಾಗಿವೆ)ಮಾಡಲ್. ಅಂದರೆ ಒಂದು ಕಾಲ ಘಟ್ಟದಲ್ಲಿ ಮುಸ್ಲಿಮರ ವಿರುದ್ಧ ವೈಯಕ್ತಿಕ ಮಟ್ಟದಲ್ಲಿದ್ದ ಸಿಟ್ಟನ್ನು ಈಗ ಸಂಘಟಿತವಾಗಿ ಸಾಮೂಹಿಕ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ. ಅಕ್ಕಪಕ್ಕದವರೋ, ಗೆಳೆಯರೋ ಆಗಿದ್ದ ಮುಸ್ಲಿಮರ ಜತೆಗಿನ ವೈಯಕ್ತಿಕ ಕಾರಣಕ್ಕೆ ಹುಟ್ಟಿಕೊಂಡ ಜಗಳದಿಂದ ಹುಟ್ಟಿಕೊಂಡಿರಬಹುದಾದ ಗಾದೆ ಇಡೀ ಸಮುದಾಯವನ್ನೇ ಆರೋಪಿಸುವಂತೆ ಬೆಳೆದು ಈಗ ಮುಸ್ಲಿಂ ಸಮುದಾಯವೇ ಸಾಮಾಜಿಕ ಅನಿಷ್ಠ ಎಂಬಂತೆ ವ್ಯವಸ್ಥಿತವಾಗಿ ನಂಬಿಸುವ ಹುನ್ನಾರಕ್ಕೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ.

 

 

ಮಾಧ್ಯಮಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದ ಸುದ್ದಿಗಳಲ್ಲಿನ ತಾರತಮ್ಯವನ್ನೂ ಗಮನಿಸಿದ್ದೇನೆ. ಭಯೋತ್ಪಾದಕರ ದಾಳಿಯಿಂದ ಮುಸ್ಲಿಮರು ಮೃತಪಟ್ಟಾಗ ‘ಭಯೋತ್ಪಾದಕ ದಾಳಿಯಿಂದ ಮೂವರ ಸಾವು’ ಎಂದು ಶೀರ್ಷಿಕೆ ಕೊಡುವ ಪತ್ರಕರ್ತರು ಹಿಂದೂಗಳು ಮೃತಪಟ್ಟಾಗ ‘ಭಯೋತ್ಪಾದಕರ ದಾಳಿಯಲ್ಲಿ ಮೂವರು ಹಿಂದೂಗಳ ಹತ್ಯೆ’ ಎಂಬ ಶೀರ್ಷಿಕೆ ಕೊಡುವ ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ. ಅಷ್ಟೇ ಏಕೆ? ಶ್ರೀಗಂಧ ಕಳ್ಳಸಾಗಣೆಯಲ್ಲಿ ಹಿಂದೂಗಳು ಸಿಕ್ಕಿ ಬಿದ್ದರೆ ಅದಕ್ಕೆ ಸಂಬಂಧಿಸಿದ ಸುದ್ದಿ ಗಮನ ಸೆಳೆಯದ ರೀತಿಯಲ್ಲಿ ಯಾವುದೋ ಮೂಲೆಯಲ್ಲಿದ್ದರೆ ಮುಸ್ಲಿಮರು ಸಿಕ್ಕಿಬಿದ್ದಾಗ ಶೀರ್ಷಿಕೆಯಲ್ಲೇ ಕುಖ್ಯಾತ …..ನ ತಂಡದ ಬಂಧನ ಎಂಬ ಸುದ್ದಿ ಗಮನ ಸೆಳೆಯುವ ಜಾಗದಲ್ಲಿ ಪ್ರಕಟವಾಗಿರುತ್ತದೆ.

 

 

ಬಡತನ, ಅಜ್ಞಾನ, ನಿರುದ್ಯೋಗ ಬಹುತೇಕ ಮುಸ್ಲಿಂ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಆ ನರಕದಿಂದ ಸಂಪೂರ್ಣ ಪಾರಾಗುವ ಯಾವುದೇ ಬೆಳಕಿಂಡಿ ಸದ್ಯಕ್ಕೆ ಗೋಚರಿಸುತ್ತಿಲ್ಲ. ರೌಡಿಗಳಂತೆ ಮಾತನಾಡುತ್ತಿರುವ ಬಿಜೆಪಿಯ ಜನಪ್ರತಿನಿಧಿಗಳು ಮುಸ್ಲಿಮರಿಗಿರುವ ಇದ್ದಬದ್ದ ಅವಕಾಶಗಳನ್ನೂ ಕಸಿದುಕೊಳ್ಳುವಂತೆ ವರ್ತಿಸುತ್ತಿದ್ದಾರೆ.

 

 

ಈ ಎಲ್ಲ ಕಾರಣಗಳಿಂದ ಮುಸ್ಲಿಮರು ಭರತಭೂಮಿಯ ಮಲತಾಯಿ ಮಕ್ಕಳಂತೆ ನರಳುತ್ತಿದ್ದಾರೆ. ಎಷ್ಟೆಂದರೂ ಕೋಮು ವಿಷ ತುಂಬಿಕೊಂಡ ಕಣ್ಣುಗಳಿಗೆ ಮುಸ್ಲಿಮರೆಂದರೆ ಪಾಕಿಸ್ತಾನೀಯರು. ಬೋಲೋ ಭಾರತ್ ಮಾತಾಕೀ ಜೈ!

the fil favicon

SUPPORT THE FILE

Latest News

Related Posts