ಬೆಂಗಳೂರು; ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬಿದಿರು, ಮೆದುಮರಗಳ ಕಡಿತಲೆ, ಸಾಗಾಣಿಕೆ ಸೇರಿದಂತೆ ಇನ್ನಿತರೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಂದಲೂ ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಗುತ್ತಿಗೆದಾರರಿಂದಲೂ ಕಮಿಷನ್‌ಗೆ ಬೇಡಿಕೆ ಇರಿಸುತ್ತಿರುವ ಆರೋಪವು ಪರ್ಸೆಂಟೇಜ್ ಪ್ರಕರಣಗಳನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಧಾರವಾಡ ವಿಭಾಗದ ವ್ಯಾಪ್ತಿಯಲ್ಲಿ ಇಂತಹದ್ದೊಂದು ಆರೋಪ ಕೇಳಿ ಬಂದಿದೆ. ನಿಗಮದ ಆಡಳಿತಮಂಡಳಿಯೂ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಚಿಕ್ಕಮಗಳೂರು ವಿಭಾಗಕ್ಕೆ 2021ರ ಜೂನ್ 1ರಿಂದ 2022ರ ಫೆಬ್ರುವರಿವರೆಗೆ ಭೇಟಿ ನೀಡಿದಾಗ ಕಮಿಷನ್ ಹಣವನ್ನು ತಲುಪಿಸಲಾಗಿದೆ ಎಂದು ಗೊತ್ತಾಗಿದೆ.
ಇದೊಂದೇ ವಿಭಾಗದಲ್ಲಿ ಸಾಗಾಣಿಕೆ, ಕಡಿತಲೆ, ವಿವಿಧ ಕಾಮಗಾರಿಗಳಿಗೆಂದು ಕಳೆದ ಒಂದು ವರ್ಷದಲ್ಲಿ ಒಟ್ಟು 9,34, 2,389.00 ರು ಬಿಡುಗಡೆಯಾಗಿದೆ. ಈ ಹಣವನ್ನು ಪಡೆಯಲು ಗುತ್ತಿಗೆದಾರರು ಶೇ. 3ರಿಂದ ಶೇ. 40ರವರೆಗೆ ಕಮಿಷನ್ ನೀಡಬೇಕಿದೆ ಎಂದು ತಿಳಿದು ಬಂದಿದೆ. ಕಮಿಷನ್ ಮೊತ್ತವನ್ನು ಆಯಾ ಕಾಮಗಾರಿವಾರು, ಬಿಡುಗಡೆ ಆಗುವ ಮೊತ್ತವಾರು ಆಧರಿಸಿ ನಿರ್ಧರಿಸಲಾಗುತ್ತದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಗುತ್ತಿಗೆದಾರರೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ಧಾರವಾಡ ವಿಭಾಗದ 2019-20ನೇ ಸಾಲಿನಲ್ಲಿ ಅಕೇಶಿಯಾ ನೆಡುತೋಪಿನಲ್ಲಿ 2ನೇ ವರ್ಷದ ನಿರ್ವಹಣೆ ಕಾಮಗಾರಿ, ಧಾರವಾಡ ವಿಭಾಗದ 2019-20ನೇ ಸಾಲಿನಲ್ಲಿ ಕೈಗೊಂಡಿರುವ ಫೈರ್ ಟ್ರೇಸಿಂಗ್ ಕಾಮಗಾರಿ, 2019ರಲ್ಲಿ ಬೆಳೆಸಲಾಗಿದ್ದ ನೆಡುತೋಪುಗಳಲ್ಲಿ 2ನೇ ವರ್ಷದ ನಿರ್ವಹಣೆ ಕಾಮಗಾರಿಗೆ ಸಂಬಂಧಿಸಿದಂತೆ, ಮಾರಿಹಾಳದಲ್ಲಿನ ಬಿದಿರು ಕಡಿತಲೆ ಮತ್ತು ಸಾಗಾಣಿಕೆ, 2020ನೇ ಸಾಲಿನಲ್ಲಿ ಹೊಸದಾಗಿ ನೆಡುತೋಪು ಬೆಳೆಸುವ ಸಂಬಂಧ ಫ್ಲಾಂಟಿಂಗ್ ಕಾಮಗಾರಿ, 2019ನೇ ಸಾಲಿನಲ್ಲಿ 2ನೇ ವರ್ಷದ ನಿರ್ವಹಣೆ ಮುಕ್ತಾಯವಾಗಿರುವ ಕಾಮಗಾರಿ, 2020-21ನೇ ಸಾಲಿನಲ್ಲಿ ಮೆದುಮರಗಳ ಕಡಿತಲೆ ಹಾಗೂ ಸಾಗಾಣಿಕೆ ಕೆಲಸಕ್ಕೆ ಗುರುತಿಸಿರುವ ನೆಡುತೋಪುಗಳಲ್ಲಿ ದೊರೆಯುವ ಅಂದಾಜು ಇಳುವರಿ, ಧಾರವಾಡ ವಿಭಾಗದ ಚಿಕ್ಕೇರಿ-ಹೊಸಹಳ್ಳಿ ಅಂದಾಜು ಇಳುವರಿ ಕಂಡುಹಿಡಿಯುವ ಕುರಿತು ಬಿಡುಗಡೆಯಾಗಿರುವ ಹಣದಲ್ಲಿ ಕಮಿಷನ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಅರಣ್ಯ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಚಿಕ್ಕಮಗಳೂರು ವಿಭಾಗಕ್ಕೆ ಭೇಟಿ ನೀಡಿದಾಗ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಕಮಿಷನ್ ಹಣವನ್ನು ತಲುಪಿಸಲಾಗಿದೆ ಎಂದು ಗುತ್ತಿಗೆದಾರರೊಬ್ಬರು ದಿನಾಂಕ ಸಮೇತ ವಿವರ ಒದಗಿಸಿದ್ದಾರೆ. ಚಿಕ್ಕಮಗಳೂರು ಮಾತ್ರವಲ್ಲದೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ನೆಡುತೋಪು ಅಧೀಕ್ಷರ ಮೂಲಕವೂ ಕಮಿಷನ್ ಹಣವನ್ನು ತಲುಪಿಸಲಾಗಿದೆ ಎಂದೂ ಗುತ್ತಿಗೆದಾರರು ಆರೋಪಿಸಿದ್ದಾರೆ.
ಮತ್ತೊಂದು ಸಂಗತಿ ಎಂದರೆ ನೆಡುತೋಪುಗಳಲ್ಲಿ ನಿರ್ವಹಣೆ ಕಾಮಗಾರಿಗೆ ಡೋಜರ್‌ನಿಂದ ಅಂತರ್ ಉಳುಮೆಗೆ ಸಂಬಂಧಿಸಿದಂತೆ ಡೀಸೆಲ್ ಹಾಕಿಸಿದ ಮೊತ್ತವನ್ನು ನೇರವಾಗಿ ಚೆಕ್ ಮುಖಾಂತರ ಪೆಟ್ರೋಲ್ ಬಂಕ್‌ನವರಿಗೆ ನೀಡಲಾಗುತ್ತಿದ್ದರೂ ಈ ತರಹದ ಕಾಮಗಾರಿಗೆ ಕಮಿಷನ್ ನೀಡಿರುವುದಿಲ್ಲ. ಆದರೆ ಈ ಬಾರಿ ಇಂತಹ ಕಾಮಗಾರಿಗೂ ಕಮಿಷನ್ ಹಣಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಕಮಿಷನ್‌ಗೆ ಬೇಡಿಕೆ ಇರಿಸುತ್ತಿರುವುದನ್ನು ಸಚಿವ ಉಮೇಶ್ ಕತ್ತಿ ಅವರ ಗಮನಕ್ಕೂ ತಂದಿದ್ದರೂ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಲಸಂಪನ್ಮೂಲ, ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ನೀರಾವರಿ ನಿಗಮಗಳು, ನಗರಾಭಿವೃದ್ಧಿ ಇಲಾಖೆಯಲ್ಲಿ ಇಂಜನಿಯರ್‌ಗಳ ಮುಂಬಡ್ತಿಗೆ ಲಂಚಕ್ಕೆ ಬೇಡಿಕೆ ಇರಿಸಿದ್ದನ್ನು ಸ್ಮರಿಸಬಹುದು.