ಬೆಂಗಳೂರು; ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಆರಂಭವಾಗದಿರುವುದು ಮತ್ತು ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಬ್ಯಾಟರಾಯನಪುರದಲ್ಲಿರುವ ಹಣ್ಣು ಮತ್ತು ತರಕಾರಿಗಳ ವಿಶೇಷ ಮಾರುಕಟ್ಟೆ ಸಮಿತಿಗೆ ಅಂದಾಜು 130-140 ಕೋಟಿಯಷ್ಟು ಆದಾಯ ನಷ್ಟವಾಗಿರುವುದು ಇದೀಗ ಬಹಿರಂಗವಾಗಿದೆ.
ಬ್ಯಾಟರಾಯನಪುರದಲ್ಲಿರುವ ಹಣ್ಣು ಮತ್ತು ತರಕಾರಿಗಳ ವಿಶೇಷ ಮಾರುಕಟ್ಟೆಯ ಪ್ರಾಂಗಣದಲ್ಲಿರುವ ಜಮೀನಿನಲ್ಲಿ ಅಧುನಿಕ ತರಕಾರಿ ಮಾರುಕಟ್ಟೆ ನಿರ್ಮಿಸುವ ಸಂಬಂಧ ಶೋಭಾ ಅಸೆಟ್ಸ್ ಪ್ರೈವೈಟ್ ಲಿಮಿಟೆಡ್ ಕಳೆದ 9 ವರ್ಷದಿಂದಲೂ ಯೋಜನೆಯನ್ನು ಕೈಗೆತ್ತಿಕೊಳ್ಳದಿರುವುದೇ 130-140 ಕೋಟಿಯಷ್ಟು ಆದಾಯ ನಷ್ಟಕ್ಕೆ ಮೂಲ ಕಾರಣವಾಗಿದೆ.
ಒಪ್ಪಂದಂತೆ ಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಕೈಗೆತ್ತಿಕೊಳ್ಳದ ಕಂಪನಿಯು ನ್ಯಾಯಾಲಯದಲ್ಲಿ ಕಾನೂನು ಪರಿಹಾರ ಪಡೆಯುವ ಬಗ್ಗೆ ಮುಂದಾಗಿದೆ. ಈ ಸಂಬಂಧ 2022ರ ಜನವರಿ 20ರಂದು ಸರ್ಕಾರಕ್ಕೆ ಪತ್ರ ಬರೆದಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೃಷಿ ಮಾರಾಟ ಇಲಾಖೆಯು ‘ ಈ ಸಂಸ್ಥೆಯ ಉದ್ದೇಶಕ್ಕೆ ಪೂರಕವಾಗಿ ಪರಿಶೀಲಿಸಿದಲ್ಲಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ಬದಲಾದ ಪರಿಸ್ಥಿತಿಗೆ ಅನುಗುಣವಾಗದೇ ಇರುವುದರಿಂದ ಪಿಡಿಐಎ (ಪ್ರಾಜೆಕ್ಟ್ ಡೆವಲೆಪ್‌ಮೆಂಟ್ ಇಂಪ್ಲಿಮೇಟೇಷನ್ ಅಗ್ರಿಮೆಂಟ್) ಒಪ್ಪಂದದ ಅನುಸಾರ ಅನುಷ್ಠಾನದ ಒಪ್ಪಂದವನ್ನು ರದ್ದುಗೊಳಿಸುವುದು ಸಮಂಜಸ ಮತ್ತು ಸಮಯೋಚಿತ ನಿರ್ಧಾರವಾಗುತ್ತದೆ,’ ಎಂಬ ಅಭಿಪ್ರಾಯವನ್ನು ನೀಡಿದೆ.
ಉದ್ದೇಶಿತ ಯೋಜನೆಯನ್ನು ಕೈಗೊಳ್ಳದ ಶೋಭಾ ಅಸೆಟ್ಜ್ ಕಂಪನಿಯು ಕರಾರು ಉಲ್ಲಂಘಿಸಿದ್ದರೂ ಸಹಕಾರ ಇಲಾಖೆ, ಕೃಷಿ ಮಾರಾಟ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. 9 ವರ್ಷಗಳ ನಂತರ ಕ್ರಮಕ್ಕೆ ಮುಂದಾಗಿದ್ದಾರಾದರೂ ಕಡೆಯಲ್ಲಿ ಕೃಷಿ ಮಾರಾಟ ಇಲಾಖೆಯು ಶೋಭಾ ಅಸೆಟ್ಸ್ ಜತೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದ್ಯ ಈ ಪ್ರಸ್ತಾವನೆಯನ್ನು ಸಚಿವ ಸೋಮಶೇಖರ್ ಅವರ ಸೂಚನೆಯಂತೆ ಸಚಿವ ಸಂಪುಟದ ಮುಂದಿರಿಸಲಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಯ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಕೈಗೆತ್ತಿಕೊಳ್ಳದೇ ಶೋಭಾ ಅಸೆಟ್ಸ್ ನಿರಾಸಕ್ತಿ ಮತ್ತು ಯೋಜನೆಯ ಮೇಲುಸ್ತುವಾರಿ ಹೊತ್ತಿರುವ ಕೃಷಿ ಮಾರಾಟ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ 140 ಕೋಟಿ ರು. ಆದಾಯ ನಷ್ಟವಾಗಿದೆಯಲ್ಲದೆ, ಇದೀಗ ಒಪ್ಪಂದವನ್ನೇ ರದ್ದುಗೊಳಿಸುವ ಮೂಲಕ ಆಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ ಕಾರ್ಯವನ್ನು ಮತ್ತಷ್ಟು ವಿಳಂಬವಾಗಿಸಿದಂತಾಗಿದೆ.
‘ಶೋಭಾ ಅಸೆಟ್ಸ್ ಪ್ರೈವೈಟ್ ಲಿಮಿಟೆಡ್ ಸಂಸ್ಥೆಯವರು ಕಳೆದ 09 ವರ್ಷಗಳಿಂದ ಯೋಜನೆಯನ್ನು ಕೈಗೊಳ್ಳದಿರುವುದರಿಂದ ಸಮಿತಿಯ ಉದ್ದೇಶಿತ ಯೋಜನೆಯು ಫಲಪ್ರದವಾಗದೇ ಸಮಿತಿಗೆ ಸುಮಾರು 130-140 ಕೋಟಿಯಷ್ಟು ಆದಾಯದಲ್ಲಿ ನಷ್ಟ ಉಂಟಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಯಾವುದೇ ಆಸಕ್ತಿ ತೋರದದಿರುವುದರಿಂದ ಈ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಸರ್ಕಾರದ ಹಂತದಲ್ಲಿ ರದ್ದುಪಡಿಸಲು ಕ್ರಮಕೈಗೊಳ್ಳಲು ನಿರ್ದೇಶಕರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು,’ ಎಂದು 2021ರ ಡಿಸೆಂಬರ್ 7ರಂದು ನಡೆದ ಸಭೆಯಲ್ಲಿ ತೀರ್ಮಾನವಾಗಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ಹಣ್ಣು ಮತ್ತು ತರಕಾರಿಗಳ ಬೆಳೆಗಾರರಿಗೆ ಅನುಕೂಲವಾಗಲೆಂದು ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಒಟ್ಟು 30 ಎಕರೆ ಜಮೀನಿನ ಪೈಕಿ 29.19 ಎಕರೆಗೆ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಇದರಲ್ಲಿ 19.19 ಎಕರೆ ಜಮೀನಿನಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿಕೊಡುವುದು ಮತ್ತು 10 ಎಕರೆ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಶೋಭಾ ಅಸೆಟ್ಜ್ ಪ್ರೈವೈಟ್ ಲಿಮಿಟೆಡ್‌ನೊಂದಿಗೆ 2012ರ ಏಪ್ರಿಲ್ 14ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಈ ಒಪ್ಪಂದದ ನಂತರ ಸಮಿತಿಯು ಹೆಚ್ಚುವರಿ ಸೌಲಭ್ಯ ಕಲ್ಪಿಸಿಕೊಡುವ ಹಾಗೂ ಎಫ್‌ಎಆರ್ ( ಫ್ಲೋರ್ ಏರಿಯಾ ರೇಷ್ಯೂ) ಬಳಸಿಕೊಳ್ಳುವ ವಿಚಾರ, ಖರಾಬು ಜಮೀನನ್ನು ವಶಕ್ಕೆ ಪಡೆಯುವುದು, ಜಮೀನಿನ ಮಧ್ಯೆ ಹಾದು ಹೋಗುವ ನಾಲೆಗಳ ವಿಚಾರವಾಗಿ ಎನ್‌ಜಿಟಿಯಿಂದ ಅನುಮತಿ ಪತ್ರ ಪಡೆಯುವ ವಿಚಾರವೂ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಶೋಭಾ ಅಸೆಟ್ಜ್ ಕಂಪನಿಯು ಯೋಜನೆಯನ್ನು ಕೈಗೆತ್ತಿಕೊಂಡಿರಲಿಲ್ಲ ಎಂಬ ಮಾಹಿತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಮಧ್ಯೆ ಇದೇ ಜಮೀನಿನಲ್ಲಿ 1/2 ಎಕರೆಗೂ ಮೀರಿದ ಜಮೀನು ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಹಸ್ತಾಂತರಿಸಲಾಗಿತ್ತು. ಅಲ್ಲದೆ ಇದೇ ಜಮೀನನ್ನು ಭೂ ಮಾಲೀಕರ ಪೈಕಿ ಎಲ್ ಆರ್ ಸುಧಾ ಗೋಪಾಲ್ ಎಂಬುವರ 1.00 ಎಕರೆ ಜಮೀನಿಗೆ ಹೆಚ್ಚುವರಿ ಭೂ ಪರಿಹಾರ ಬೇಡಿರುವ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇತ್ತು. ಹಾಗೆಯೇ ನಂಜಮ್ಮ ಎಂಬುವರು ಸುಮಾರು ಎರಡೂವರೆ ಜಮೀನನ್ನು ಡಿನೋಟಿಫೈ ಮಾಡಿ ವಾಪಸ್ ನೀಡಬೇಕು ಎಂದು ಸಮಿತಿಗೆ ಕೋರಿಕೆ ಸಲ್ಲಿಸಿದ್ದರು.
2012ರಿಂದ 2016ರವರೆಗೂ ಈ ಯಾವ ವಿಚಾರಗಳು ಬಗೆಹರಿದಿರಲಿಲ್ಲ. ‘2016ರ ನಂತರದಲ್ಲಿ ಯೋಜನೆ ಅನುಷ್ಠಾನಗೊಳಿಸದೇ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಶೋಭಾ ಅಸೆಟ್ಸ್ ಕಂಪನಿಯು ಯೋಜನೆ ಅನುಷ್ಠಾನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ ಎಂಬುದು ನಿಚ್ಚಳವಾಗುತ್ತದೆ. ಜಮೀನಿನ ಮಾರುಕಟ್ಟೆ ಬೆಲೆ ಕಳೆದ 9 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದ್ದು ಈಗಿನ ದರದಲ್ಲಿ ಕೊಳ್ಳಲು ಇಚ್ಛಿಸಿದರೂ ಇಂತಹ ಒಂದೇ ಒಂದು ಕಾಂಪ್ಯಾಕ್ಟ್ ಜಾಗ ಸಿಗುವುದು ದುರ್ಲಬವಾಗಿರುತ್ತದೆ. ಈ ಅಂಶವನ್ನು ಸ್ಪಷ್ಟವಾಗಿ ಮನಗಂಡಿರುವ ಕಂಪನಿಯು ಯೋಜನೆ ವಿಳಂಬದ ದಾರಿ ತುಳಿದಿದೆ,’ ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾಪಿಸಲಾಗಿದೆ.
1,200 ಕೋಟಿ ಮೌಲ್ಯದ ಜಮೀನು
ಬ್ಯಾಟರಾಯನಪುರದ ಉದ್ದೇಶಿತ ಯೋಜನೆಯ ಈ ಜಮೀನು ಬೆಂಗಳೂರು ನಗರದ ಆಯಕಟ್ಟಿನ ಪ್ರದೇಶದಲ್ಲಿದೆ. ಈ ಜಮೀನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗೆ ಅಭಿಮುಖವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಅಲ್ಲದೆ ಸುತ್ತಲಿನ ಪ್ರದೇಶದಲ್ಲಿ 30 ಎಕರೆ ವಿಸ್ತೀರ್ಣದ ಒಂದೇ ಕಾಂಪ್ಯಾಕ್ಟ್ ಜಮೀನು ಎಲ್ಲೂ ಕಂಡು ಬರುವುದಿಲ್ಲ. ಈ ಜಮೀನಿನ ಮೌಲ್ಯ ಸಾಮಾನ್ಯ ದರ ಪ್ರತಿ ಚದರ ಅಡಿಗೆ 10,000 ರು. ಎಂದು ಅಂದಾಜಿಸಿದರೂ 29.0 ಎಕರೆಗೆ 1,200 ಕೋಟಿಗೂ ಹೆಚ್ಚು ಮೌಲ್ಯವಿದೆ. ಹೀಗಾಗಿ ಜಮೀನನ್ನು ವಾಣಿಜ್ಯ ಉದ್ದೇಶದಲ್ಲಿ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವುದು ಅತ್ಯಂತ ಸೂಕ್ತವಿದೆ ಎಂಬ ಅಂಶವನ್ನು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಹಿಂದಿನ ವಿನ್ಯಾಸ ಬದಲು
ಉದ್ದೇಶಿತ ಯೋಜನೆಯ ಜಮೀನು ಹಸ್ತಾಂತರವಾದ ನಂತರದ 10 ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ಅಭಿವೃದ್ಧಿ ಕೈಗೊಳ್ಳುವುದು ಸೂಕ್ತವಿದೆ ಎಂದು ಅಭಿಪ್ರಾಯಿಸಿರುವ ಅಧಿಕಾರಿಗಳು ಹಿಂದಿನ ವಿನ್ಯಾಸವನ್ನು ಯಥಾರೀತಿಯಲ್ಲಿ ಅನುಷ್ಠಾನಗೊಳಿಸುವುದು ಪ್ರಸ್ತುತದಿಂದ 10 ವರ್ಷದ ಹಿಂದಕ್ಕೆ ಜಾರಿದಂತೆ ಎಂದೂ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.