‘ಪೋಷಣ’ ಅಭಿಯಾನಕ್ಕಿಲ್ಲ ಅನುದಾನದ ಬೆಂಬಲ, ಕೊಟ್ಟ ಅನುದಾನವೂ ಖರ್ಚಾಗಿಲ್ಲ

photo credit;deccanhearld

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಯಾದ ಪೋಷಣ ಅಭಿಯಾನ (ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನ)ದಡಿಯಲ್ಲಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳಿಗೆ ರಾಜ್ಯ ಬಿಜೆಪಿ ಸರ್ಕಾರವು ಹಂಚಿಕೆ ಮಾಡುತ್ತಿರುವ ಅನುದಾನವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆಯಲ್ಲದೆ ಬಿಡುಗಡೆ ಮಾಡಿದ್ದ ಅನುದಾನದಲ್ಲಿಯೂ ಕಡಿಮೆ ಖರ್ಚು ಮಾಡಿದೆ ಎಂಬುದನ್ನು 2022-23ನೇ ಸಾಲಿನ ಮಕ್ಕಳ ಉದ್ದೇಶಿತ ಆಯವ್ಯಯವು ಬಹಿರಂಗಗೊಳಿಸಿದೆ.

 

ಪೋಷಣ ಅಭಿಯಾನಕ್ಕೆ ಅನುದಾನವನ್ನು ಅಸಮರ್ಪಕವಾಗಿ ಮೀಸಲಿಡುತ್ತಿದೆಯಲ್ಲದೆ ವರ್ಷದಿಂದ ವರ್ಷಕ್ಕೆ ಅನುದಾನ ಹಂಚಿಕೆಯನ್ನು ಕಡಿಮೆಗೊಳಿಸುತ್ತಿದೆ ಎಂಬ ವಿವರಗಳು 2022-23ನೇ ಸಾಲಿನ ಮಕ್ಕಳ ಉದ್ದೇಶಿತ ಆಯವ್ಯಯದಲ್ಲಿವೆ.

 

ಅಷ್ಟೇ ಅಲ್ಲ, ಮೂಲಭೂತ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶದ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಐಸಿಡಿಎಸ್‌ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುತ್ತಿರುವ ವಿಧಾನವೂ ಅಸಮರ್ಪಕವಾಗಿದೆ.

 

ಪೌಷ್ಠಿಕಾಂಶ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಬಜೆಟ್‌ಗಳು ಕ್ರಮೇಣ ಸ್ಥಗಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್‌ ಕೂಡ ಹೊರತಾಗಿಲ್ಲ. 2019-20 ಮತ್ತು 2020-21ರಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಐಸಿಡಿಎಸ್ ಬಜೆಟ್‌ ಕುಸಿದಿದೆ. ಅಲ್ಲದೆ ಐಸಿಡಿಎಸ್‌ಗೆ ಸಂಬಂಧಿಸಿದಂತೆ 2021-22 ರಲ್ಲಿಯೂ ಬಜೆಟ್‌ ಗಾತ್ರವೇ ಕಡಿಮೆಯಾಗಿದೆ.

 

ಮಕ್ಕಳ ಉದ್ದೇಶಿತ ಆಯವ್ಯಯದ ಪ್ರತಿ

 

ಹಾಗೆಯೇ ಪೌಷ್ಟಿಕಾಂಶ ಉದ್ದೇಶಿತ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯದ ಬಜೆಟ್‌ನಲ್ಲಿ ಒದಗಿಸುತ್ತಿರುವ ಅನುದಾನ ಪ್ರಮಾಣವು ಶೇ. 48ರಷ್ಟಿದೆ. 2020-21ನೇ ಸಾಲಿನಲ್ಲಿ ಪೋಷಣ್‌ ಅಭಿಯಾನಕ್ಕೆ 125 ಕೋಟಿ ರು. ಹಂಚಿಕೆಯಾಗಿದ್ದರ ಪೈಕಿ 58.21` ಕೋಟಿಯಷ್ಟೇ ಖರ್ಚಾಗಿತ್ತು. 2021-22ನೇ ಆರ್ಥಿಕ ವರ್ಷದಲ್ಲಿ 85 ಕೋಟಿ ರು. ಹಂಚಿಕೆಯಾಗಿರುವುದರ ಪೈಕಿ ಡಿಸೆಂಬರ್‌ 2021ರವರೆಗೆ ಬಿಡಿಗಾಸನ್ನೂ ಖರ್ಚು ಮಾಡಿಲ್ಲ. ಒಂದೇ ವರ್ಷದಲ್ಲಿ (2020-21 ಮತ್ತು 2021-22) ಪೋಷಣ್‌ ಅಭಿಯಾನಕ್ಕೆ 40 ಕೋಟಿ ರು ನಷ್ಟು ಕಡಿಮೆ ಮಾಡಿದೆ ಎಂಬುದು 2022-23ನೇ ಸಾಲಿನ ಮಕ್ಕಳ ಉದ್ದೇಶಿತ ಆಯವ್ಯಯದಿಂದ ತಿಳಿದು ಬಂದಿದೆ.

 

 

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯನ್ನು 2017-18ರಿಂದ ಜಾರಿಗೆ ತರಲಾಗಿತ್ತು. 2020-21ನೇ ಸಾಲಿನಲ್ಲಿ 122.15 ಕೋಟಿ ರು (ಕೇಂದ್ರ ಮತ್ತು ರಾಜ್ಯ ಸೇರಿ) ಹಂಚಿಕೆಯಾಗಿತ್ತು. 119.83 ಕೋಟಿ ರು. ಖರ್ಚು ಮಾಡಲಾಗಿದೆ. 2021-22ನೇ ಸಾಲಿನಲ್ಲಿ 51.55 ಕೋಟಿ ರು. ಹಂಚಿಕೆಯಾಗಿತ್ತು. ಈ ಪೈಕಿ ಜನವರಿ 2021ರವರೆಗೆ 24.72 ಕೋಟಿ ರು. ಖರ್ಚಾಗಿದೆ.

 

ಐಸಿಡಿಎಸ್‌ ಯೋಜನೆಯಡಿಯಲ್ಲಿ 2020-21ನೇ ಸಾಲಿನಲ್ಲಿ 1,971.74 ಕೋಟಿ ರು. ಹಂಚಿಕೆಯಾಗಿತ್ತು. ಈ ಪೈಕಿ 1,946.97 ಕೋಟಿ ರು. ಖರ್ಚಾಗಿದೆ. 2021-22ನೇ ಸಾಲಿನಲ್ಲಿ 1,973.19 ಕೋಟಿ ರು. ಹಂಚಿಕೆಯಾಗಿತ್ತು. ಈ ಪೈಕಿ 1,475.28 ಕೋಟಿ ರು., 2021ರ ಡಿಸೆಂಬರ್‌ ಅಂತ್ಯದವರೆಗೆ ಖರ್ಚು ಮಾಡಲಾಗಿತ್ತಲ್ಲದೇ 497.91 ಕೋಟಿ ರು. ವೆಚ್ಚವಾಗದೇ ಬಾಕಿ ಉಳಿದಿತ್ತು.

 

ಅದೇ ರೀತಿ 114 ಹಿಂದುಳಿದ ತಾಲೂಕುಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಟ್ಟಡಗಳಿಗೆ 2021-22ನೇ ಸಾಲಿನಲ್ಲಿ 20 ಕೋಟಿ ರು. ಹಂಚಿಕೆಯಾಗಿತ್ತು. 2021ರ ಡಿಸೆಂಬರ್‌ ಅಂತ್ಯದವರೆಗೆ ಬಿಡಿಗಾಸನ್ನೂ ಖರ್ಚು ಮಾಡಿಲ್ಲ. ನೂತನ ಬಾಲಮಂದಿರಗಳಿಗಾಗಿ 2021-22ನೇ ಸಾಲಿನಲ್ಲಿ 1 ಕೋಟಿ ರು. ಹಂಚಿಕೆಯಾಗಿತ್ತು. 2021ರ ಡಿಸೆಂಬರ್‌ ಅಂತ್ಯದವರೆಗೂ ಈ ಪೈಕಿ ನಯಾಪೈಸೆಯೂ ವೆಚ್ಚವಾಗಿಲ್ಲ ಎಂಬುದು 2022-23ನೇ ಸಾಲಿನ ಮಕ್ಕಳ ಉದ್ದೇಶಿತ ಆಯವ್ಯಯದಿಂದ ಗೊತ್ತಾಗಿದೆ.

 

6-18 ವರ್ಷ ವಯೋಮಾನದ ಮಕ್ಕಳಿಗೆ ವಿಚಾರಣೆ ಸಮಯದಲ್ಲಿ ರಕ್ಷಣೆ, ಪೋಷಣೆ, ದೀರ್ಘಾವಧಿ ಪುನರ್ವಸತಿ ಅಗತ್ಯವಿರುವ ಅನಾಥ ಮತ್ತು ತ್ಯಜಿಸಲ್ಪಟ್ಟ ಮಕ್ಕಳಿಗಾಗಿ ನೂತನ ಬಾಲಮಂದಿರ ನಿರ್ಮಾಣಕ್ಕೆಂದು 2021-22ರಲ್ಲಿ 100.00 ಲಕ್ಷ ಹಂಚಿಕೆಯಾಗಿದ್ದರೂ 2021ರ ಡಿಸೆಂಬರ್‌ ಅಂತ್ಯದವರೆಗೆ ಯಾವುದೇ ವೆಚ್ಚವಾಗಿಲ್ಲ.

 

ಹಾಗೆಯೇ ಅಂಗನವಾಡಿಗಳಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿಯೇ ಅಂಗನವಾಡಿ ಕಟ್ಟಡಗಳ ಉನ್ನತೀಕರಣ, ಮಕ್ಕಳ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿತ್ತಾರೂ 2020-21ರಲ್ಲಿ ಅನುದಾನವೇ ಹಂಚಿಕೆಯಾಗಿರಲಿಲ್ಲ. ಮತ್ತು 2021-22ರಲ್ಲಿ 1.00 ಲಕ್ಷ ಹಂಚಿಕೆಯಾಗಿದ್ದರೂ ಡಿಸೆಂಬರ್‌ 2021ರವರೆಗೆ ಯಾವುದೇ ವೆಚ್ಚವಾಗಿಲ್ಲ ಎಂಬುದು ಮಕ್ಕಳ ಉದ್ದೇಶಿತ ಆಯವ್ಯಯದಿಂದ ತಿಳಿದು ಬಂದಿದೆ.

 

ಇನ್ನು 10ರಿಂದ 18 ವರ್ಷದೊಳಗಿನ ಬಾಲಕಿಯರ ಋತು ಶುಚಿತ್ವದ ಅರಿವು ಹೆಚ್ಚಿಸಲು ಮತ್ತು ಉತ್ತಮಗೊಳಿಸಲು 2013ರಿಂದ ಆರಂಭವಾಗಿದ್ದ ಶುಚಿ ಯೋಜನೆಗೆ 2020-21ನೇ ಸಾಲಿನಲ್ಲಿ ಅನುದಾನವನ್ನು ಹಂಚಿಕೆ ಮಾಡಿರಲಿಲ್ಲ. 2021-22ನೇ ಸಾಲಿನಲ್ಲಿ 47 ಕೋಟಿ ರು. ಹಂಚಿಕೆಯಾಗಿದ್ದರೂ 2021ರ ಡಿಸೆಂಬರ್‌ ಅಂತ್ಯದವರೆಗೆ ಯಾವುದೇ ವೆಚ್ಚ ಮಾಡಿರಲಿಲ್ಲ.

 

ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಸಾಲಿನಲ್ಲಿ 1,973.19 ಕೋಟಿ ರು.ಗಳನ್ನು ಒದಗಿಸಿದೆ. 48 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಕಳೆದ ಸಾಲಿನ ಬಿಲ್‌ಗಳು ಹಾಗೂ ಕೆಎಂಎಫ್‌ ಸಂಸ್ಥೆಗೆ ಪಾವತಿಸಲು ಬಾಕಿ ಇರುವ 89.78 ಕೋಟಿ ರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸ್ವೀಕೃತವಾಗಿದೆ ಎಂದು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಅವರು ವಿಧಾನಸಭೆಗೆ ಉತ್ತರ ನೀಡಿದ್ದನ್ನು ಸ್ಮರಿಸಬಹುದು.

 

ಅದೇ ರೀತಿ ಪೋಷಣಾ ಅಭಿಯಾನ ಯೋಜನೆಯು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ 2020ರ ಜನವರಿಯಿಂದಲೇ ಅನುಷ್ಠಾನಗೊಂಡಿದೆಯಾದರೂ ಕೇಂದ್ರ ಸರ್ಕಾರವು ಪೋಷಣಾ ಅಭಿಯಾನ-2ಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿಲ್ಲ ಮತ್ತು ಈ ಯೋಜನೆ ಅನುಷ್ಠಾನಕ್ಕೆ ಅನುದಾನವನ್ನೂ ನೀಡಿಲ್ಲ ಎಂದು ಸಚಿವ ಹಾಲಪ್ಪ ಆಚಾರ್‌ ಅವರು 2022ರ ಮಾರ್ಚ್‌ 22ರಂದು ಸದನಕ್ಕೆ ಉತ್ತರ ಒದಗಿಸಿದ್ದಾರೆ.

 

ರಾಜ್ಯದ ಹಾವೇರಿ ಸೇರಿದಂತೆ 20 ಜಿಲ್ಲೆಗಳಲ್ಲಿ 6,036 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. 2.45 ಲಕ್ಷ ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ಕ್ರಮಗಳು ಮತ್ತು ಇದಕ್ಕಾಗಿ ಹೆಚ್ಚಿನ ಅನುದಾನ ಖರ್ಚಾಗಿದ್ದರೂ ತೀವ್ರ ಅಪೌಷ್ಠಿಕತೆ ಮತ್ತು ಸಾಧಾರಣ ಅಪೌಷ್ಠಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯವು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ ಎಂಬುದು ಅಂಕಿ ಅಂಶಗಳಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2021ರ ಡಿಸೆಂಬರ್‌ 31ರಂದು ನಡೆಸಿದ್ದ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ತೀವ್ರ ಅಪೌಷ್ಠಿಕತೆ ಮತ್ತು ಸಾಧಾರಣ ಅಪೌಷ್ಠಿಕತೆ ಕುರಿತು ಅಂಕಿ ಅಂಶಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಮಂಡಿಸಿತ್ತು.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ 608 ಮಕ್ಕಳು ತೀವ್ರ ಅಪೌಷ್ಠಿಕತೆ ಹೊಂದಿದ್ದರೆ 13,169 ಮಕ್ಕಳು ಸಾಧಾರಣ ಅಪೌಷ್ಠಿಕತೆಯಲ್ಲಿರುವುದು ಇಲಾಖೆಯು ಮಂಡಿಸಿರುವ ಅಂಕಿ ಅಂಶಗಳಿಂದ ಗೊತ್ತಾಗಿದೆ.

 

ರಾಯಚೂರು ಜಿಲ್ಲೆಯಲ್ಲಿ 2,17,146 ಮಕ್ಕಳನ್ನು ತೂಕ ಮಾಡಲಾಗಿದೆ. ಈ ಪೈಕಿ 1,81,748 ಮಕ್ಕಳು ಸಾಮಾನ್ಯ ವರ್ಗದಲ್ಲಿದ್ದರೆ 527 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಮತ್ತು 34,871 ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯ ಮಕ್ಕಳಿಗೆ ಹೋಲಿಸಿದರೆ ಸಾಧಾರಣ ಅಪೌಷ್ಠಿಕತೆಯಲ್ಲಿ ಶೇ. 16.06ರಷ್ಟು ಮತ್ತು ತೀವ್ರ ಅಪೌಷ್ಠಿಕತೆಯಲ್ಲಿ ಶೇ. 11.7ರಷ್ಟಿದೆ ಎಂಬುದು ಇಲಾಖೆಯು ಮಂಡಿಸಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ಕೊಪ್ಪಳ ಜಿಲ್ಲೆಯಲ್ಲಿ 24,524 ಮಕ್ಕಳು ಸಾಧಾರಣ ಅಪೌಷ್ಠಿಕತೆ ಹೊಂದಿದ್ದರೆ 559 ಮಕ್ಕಳು ತೀವ್ರ ಅಪೌಷ್ಠಿಕತೆಯಲ್ಲಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 678 ಮಕ್ಕಳು ತೀವ್ರ ಅಪೌಷ್ಠಿಕತೆ (23,653-ಸಾಧಾರಣ ಅಪೌಷ್ಠಿಕತೆ), ಬಳ್ಳಾರಿ ಜಿಲ್ಲೆಯಲ್ಲಿ 502 ಮಕ್ಕಳು ತೀವ್ರ ಅಪೌಷ್ಠಿಕತೆ (26,054-ಸಾಧಾರಣ ಅಪೌಷ್ಠಿಕತೆ), ಬೆಳಗಾವಿಯಲ್ಲಿ 570 ತೀವ್ರ ಅಪೌಷ್ಠಿಕತೆ (43,117-ಸಾಧಾರಣ ಅಪೌಷ್ಠಿಕತೆ), ವಿಜಯಪುರದಲ್ಲಿ 326 ಮಕ್ಕಳು ತೀವ್ರ ಅಪೌಷ್ಠಿಕತೆ (12,751-ಸಾಧಾರಣ ಅಪೌಷ್ಠಿಕತೆ)ಯಲ್ಲಿವೆ.

 

4ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ನಂತರದಲ್ಲಿ ಕರ್ನಾಟಕದಲ್ಲಿ ಮಕ್ಕಳ ಪೌಷ್ಠಿಕಾಂಶದ ಸ್ಥಿತಿಯು ಕೆಲವು ಕ್ರಮಗಳಿಂದ ಸುಧಾರಿಸಿದೆ ಎಂದು ತೋರಿಸಿದರೂ ಎಲ್ಲಾ ಕ್ರಮಗಳಿಂದ ಹೀಗಾಗಿರುವುದಿಲ್ಲ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಕುಂಠಿತ ಬೆಳವಣಿಗೆ (ಸ್ನಾಯು ಮತ್ತು ಕೊಬ್ಬನ್ನು ಹೊಂದದಿರುವುದು) ಮತ್ತು ಕಡಿಮೆ ತೂಕ ಹೊಂದಿರುವ ಸಾಧ್ಯತೆ ಕಡಿಮೆ ಎಂದೆನಿಸಿದರೂ ಅವರು ತಮ್ಮ ವಯಸ್ಸಿಗೆ ತೀರಾ ಕಡಿಮೆ ಎತ್ತರ ಅಥವಾ ತೀವ್ರವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ವರದಿಯಲ್ಲಿ ವಿವರಿಸಲಾಗಿತ್ತು.

 

ಕೇಂದ್ರ ಸರ್ಕಾರವು ಸಹ ಕಳೆದ ಮೂರು ವರ್ಷಗಳಲ್ಲಿ 2021 ರವರೆಗೆ ಪೋಶನ್ ಅಭಿಯಾನದ ಅಡಿಯಲ್ಲಿ ಕಡಿಮೆ ಮೊತ್ತವನ್ನು ಬಿಡುಗಡೆ ಮಾಡಿದೆ. ಮತ್ತು ಕಡಿಮೆ ಖರ್ಚು ಮಾಡಿದೆ. 2017 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಕೇಂದ್ರ ಸರ್ಕಾರವು 5,313 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದು ಒಟ್ಟು ಹಂಚಿಕೆಯ ಶೇ. 53 ರಷ್ಟಿದೆ (2020-21 ರವರೆಗೆ ರೂ 10,111 ಕೋಟಿ). ಮಾರ್ಚ್ 31, 2021 ರವರೆಗೆ 2,986 ಕೋಟಿ ರು. ಅಥವಾ ಬಿಡುಗಡೆಯಾದ ಒಟ್ಟು ಕೇಂದ್ರ ನಿಧಿಯ ಶೇ. 56 ರಷ್ಟು ಖರ್ಚು ಮಾಡಿದೆ.

 

ಐಸಿಡಿಎಸ್‌ ನಿರ್ವಹಣಾ ಮಾಹಿತಿ ವ್ಯವಸ್ಥೆಯಿಂದ ಲಭ್ಯವಿರುವ ದೇಶದ ಒಟ್ಟಾರೆ ದತ್ತಾಂಶಗಳ ಪ್ರಕಾರ ಐಸಿಡಿಎಸ್‌ ಸೇವೆಗಳನ್ನು ಪಡೆಯುವ ಅರ್ಹರ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ್ 2016 ಮತ್ತು ಮಾರ್ಚ್ 2021 ರ ನಡುವೆ ಐಸಿಡಿಎಸ್‌ ಸೇವೆ (SNP) ಪಡೆಯುವ ಫಲಾನುಭವಿಗಳು 102 ಮಿಲಿಯನ್‌ನಿಂದ 83.2 ಮಿಲಿಯನ್‌ಗೆ ಅಂದರೆ ಶೇ. 19 ರಷ್ಟು ಕುಸಿದಿದ್ದಾರೆ. ಮಕ್ಕಳ ಸಂಖ್ಯೆಗೆ ಸಂಬಂಧಿಸಿದಂತೆ 82.9 ಮಿಲಿಯನ್‌ನಿಂದ 67.5 ಮಿಲಿಯನ್‌ಗೆ ಇಳಿದಿದೆ.

 

ಇದಕ್ಕೆ ವ್ಯತಿರಿಕ್ತವಾಗಿ 2016 ರಿಂದ 2021 ರವರೆಗೆ, ಆರು ತಿಂಗಳಿಂದ ಆರು ವರ್ಷ ವಯಸ್ಸಿನ ಮಕ್ಕಳ ಸಂಖ್ಯೆಯು 7.6% ರಷ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ ಅಂಗನವಾಡಿ (ಪಿಎಸ್‌ಇ) ಶಿಕ್ಷಣ ಪಡೆಯುವ ಮೂರರಿಂದ ಆರು ವರ್ಷಗಳ ಮಕ್ಕಳ ಸಂಖ್ಯೆಯು 35 ಮಿಲಿಯನ್‌ನಿಂದ 23 ಮಿಲಿಯನ್‌ಗೆ ಅಂದರೆ ಶೇ. 34 ರಷ್ಟು ಕಡಿಮೆಯಾಗಿದೆ ಎಂಬುದು ದತ್ತಾಂಶಗಳಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts