ಬೆಂಗಳೂರು; ಸಿಲ್ಕ್ ಬೋರ್ಡ್‌ನಲ್ಲಿ ಅಧ್ಯಕ್ಷ ಹುದ್ದೆಯನ್ನು ಪಡೆಯಲು ಸಂಘ ಪರಿವಾರದ ಹಿನ್ನೆಲೆಯ ಯುವರಾಜಸ್ವಾಮಿ ಎಂಬಾತನಿಗೆ 30 ಲಕ್ಷ ರು. ಲಂಚ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಎನಿತ್‌ಕುಮಾರ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸದೆಯೇ ಪಲಾಯನಗೈದಿದ್ದ ಭ್ರಷ್ಟಾಚಾರ ನಿಗ್ರಹ ದಳವು ಬೇರೆ ದಾರಿಯಿಲ್ಲದೆಯೇ ಎಫ್‌ಐಆರ್ ದಾಖಲಿಸಿದೆ.
ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ 2021ರ ನವೆಂಬರ್‌ನಲ್ಲಿ ನೀಡಿದ್ದ ದೂರು ಭ್ರಷ್ಟಾಚಾರ ನಿಗ್ರಹ ದಳದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣವೊಡ್ಡಿ ಸಿಬಿಐಗೆ ವರ್ಗಾವಣೆ ಮಾಡಿತ್ತು. ಆದರೀಗ ಇದೇ ದೂರನ್ನು ಸಿಬಿಐ ಕೂಡ ಎಸಿಬಿಗೆ ವರ್ಗಾವಣೆ ಮಾಡಿದೆ. ಈ ಸಂಬಂಧ ಎಸಿಬಿಯು ಜನಾಧಿಕಾರ ಸಂಘರ್ಷ ಪರಿಷತ್‌ಗೆ 2022ರ ಮಾರ್ಚ್ 4ರಂದು ಹಿಂಬರಹ ನೀಡಿದೆ.
ಹೀಗಾಗಿ ಎಸಿಬಿಯು ಅನಿವಾರ್ಯವಾಗಿ ಎನಿತ್‌ಕುಮಾರ್ ವಿರುದ್ಧ 2022ರ ಮಾರ್ಚ್ 4ರಂದು ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಎಫ್‌ಐಆರ್ ದಾಖಲಿಸಿದೆ. ಎಸಿಬಿಯು ದಾಖಲಿಸಿರುವ ಎಫ್‌ಐಆರ್ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಯುವರಾಜಸ್ವಾಮಿ ಎಂಬಾತನಿಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರು 8.27 ಕೋಟಿ ರು.ಗಳನ್ನು ನೀಡಿದ್ದರು. ಈ ಕುರಿತೂ ಲಂಚ ನೀಡಿದ ಆರೋಪ ಹೊರಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್ ದೂರು ಸಲ್ಲಿಸಿತ್ತು. ಆದರೆ ಎಸಿಬಿಯು ಇದುವರೆಗೂ ಇಂದ್ರಕಲಾ ಅವರ ವಿರುದ್ಧ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಸಿಬಿಯ ಈ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಸಿಲ್ಕ್ ಬೋರ್ಡ್ ಅಧ್ಯಕ್ಷ ಹುದ್ದೆ ಪಡೆಯಲು ಯುವರಾಜಸ್ವಾಮಿ ಎಂಬಾತನಿಗೆ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ 30 ಲಕ್ಷ ರು. ನೀಡಲಾಗಿತ್ತು ಎಂದು ಎನಿತ್‌ಕುಮಾರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಎಂದು ತಿಳಿದು ಬಂದಿದೆ. ಈ ಕುರಿತಾದ ದೋಷಾರೋಪಣೆ ಪಟ್ಟಿಯಲ್ಲಿಯೂ ಉಲ್ಲೇಖವಾಗಿದೆ.
ಸಿಲ್ಕ್ ಬೋರ್ಡ್‌ನಲ್ಲಿ ಅಧ್ಯಕ್ಷ ಹುದ್ದೆಯನ್ನು ತನಗೆ ಕೊಡಿಸುವುದಾಗಿ ನಂಬಿಸಿ ತನ್ನಿಂದ 30 ಲಕ್ಷ ರು.ಗಳನ್ನು ಪಡೆದುಕೊಂಡು ಹುದ್ದೆಯನ್ನು ಕೊಡಿಸದೇ ವಂಚಿಸಿರುತ್ತಾರೆ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನಿತ್‌ಕುಮಾರ್ ಎಂಬುವರು ಪ್ರಕರಣ (ಮೊ.ಸಂ; 4/2021) ದಾಖಲಿಸಿದ್ದರು. ಈ ಕುರಿತು ತನಿಖಾಧಿಕಾರಿಗಳು 2021ರ ಮಾರ್ಚ್ 30ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ರು. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನಾಧರಿಸಿ ಲಂಚ ನೀಡಿದ್ದ ಎನಿತ್‌ಕುಮಾರ್ ವಿರುದ್ಧವೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಎಸಿಬಿಗೆ ದೂರು ದಾಖಲಿಸಿತ್ತು. ಆರಂಭದಲ್ಲಿ ಎಫ್‌ಐಆರ್ ದಾಖಲಿಸದೇ ಸಿಬಿಐಗೆ ವರ್ಗಾಯಿಸಿ ನುಣುಚಿಕೊಳ್ಳಲು ಯತ್ನಿಸಿದ್ದ ಎಸಿಬಿಯು ವಿಫಲವಾಗಿತ್ತು. ಆದರೆ ಸಿಬಿಐ ಅದೇ ಅರ್ಜಿಯನ್ನು ಎಸಿಬಿಗೆ ವಾಪಸ್ ಕಳಿಸಿರುವುದರಿಂದ ಬೇರೆ ದಾರಿಯಿಲ್ಲದೆಯೇ ಎನಿತ್‌ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ.
ಈ ಎರಡೂ ಪ್ರಕರಣಗಳು ಭ್ರಷ್ಟಾಚಾರ ನಿಗ್ರಹ ದಳದ ವ್ಯಾಪ್ತಿಯಲ್ಲಿ ಇದ್ದರೂ ಸಿಬಿಐಗೆ ವರ್ಗಾಯಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ಪಲಾಯನಗೈದಿತ್ತು. ಇವರಿಬ್ಬರ ಮೇಲೆ ಎಫ್‌ಐಆರ್ ದಾಖಲಿಸಿ ಮತ್ತು ವಿಚಾರಣೆ ನಡೆಸಲು ಸ್ಪಷ್ಟ ಕಾರಣಗಳು ಇದ್ದರೂ ತೆರೆಮರೆಯಲ್ಲಿ ಯಾವ ಪ್ರಬಲ ಶಕ್ತಿಯು ಎಸಿಬಿ ಅಧಿಕಾರಿಗಳನ್ನು ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲು ತಡೆಯುತ್ತಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
ಪಟ್ಟು ಬಿಡದ ಜನಾಧಿಕಾರ ಸಂಘರ್ಷ ಪರಿಷತ್
ದೂರುಗಳನ್ನು ಎಸಿಬಿಯಿಂದ ಸಿಬಿಐಗೆ ವರ್ಗಾಯಿಸಿರುವುದು ಕಾನೂನಿನ ಅನ್ವಯ ಸಮರ್ಥನೀಯವಲ್ಲ. ಎಸಿಬಿಯ ಪೋಲಿಸ್ ಅಧೀಕ್ಷಕರು ಹಾಗೂ ಕಾನೂನು ಸಲಹೆಗಾರರ ಜೊತೆ ನಮ್ಮ ಭೇಟಿಯ ಸಂದರ್ಭದಲ್ಲಿ ಎ.ಸಿ.ಬಿ.ಯ ಕಾರ್ಯವ್ಯಾಪ್ತಿಯ ಬಗ್ಗೆ ಗಹನವಾದ ಚರ್ಚೆ ನಡೆಸಲಾಗಿತ್ತು. ಕೇಂದ್ರದ ಹುದ್ದೆ ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರ ಹುದ್ದೆಗಾಗಿ ಲಂಚ ನೀಡಲಾಗಿದೆ ಎಂಬ ಆರೋಪವಿರುವುದರಿಂದ ಈ ದೂರುಗಳು ಸಿ.ಬಿ.ಐ. ವ್ಯಾಪ್ತಿಗೆ ಬರುತ್ತವೆ ಎಂದು ಎ.ಸಿ.ಬಿ. ಅಧಿಕಾರಿಗಳು ನಿಲುವು ತಳೆದಿದ್ದರು, ‘ ಎಂದು ಪರಿಷತ್ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿತ್ತು.
ಎ.ಸಿ.ಶರ್ಮ v/s ದೆಹಲಿ ಆಡಳಿತ (ಎಐಆರ್ 1973 ಎಸ್‍ಸಿ 913, ಪುಟ 915-20, 1973 ಸಿಆರ್‍ಎಲ್‍ಜೆ 902) ಸಂಪೂರ್ಣ ಪ್ರತಿಯನ್ನು ಎ.ಸಿ.ಬಿ.ಯ ಪೋಲಿಸ್ ಅಧೀಕ್ಷಕರು ಹಾಗೂ ಕಾನೂನು ಸಲಹೆಗಾರರಿಗೆ ಜನಾಧಿಕಾರ ಸಂಘರ್ಷ ಪರಿಷತ್ ನೀಡಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ತೀರ್ಪಿನ ಸಂಬಂಧಿಸಿದಂತೆ ಈ ಉಪವಿಭಾಗವು ಉಲ್ಲೇಖಿತ ಅಪರಾಧಗಳನ್ನೊಳಗೊಂಡ ವಿಚಾರಣೆಗಳನ್ನು ಮಾಡಲು ನಿಯತ ಪೋಲಿಸ್ ಬಲವನ್ನು ಹೊರತುಪಡಿಸಿ ಡಿ.ಎಸ್.ಪಿ.ಎ.ಗೆ ಏಕೈಕ ಅಧಿಕಾರ ಕೊಟ್ಟಿಲ್ಲ ಎಂಬ ಅಂಶವಿದೆ. (11ನೇ ಪುಟ): (“This sub-section, therefore, does not confer sole power on D.S.P.E. to investigate into the offences mentioned therein to the complete exclusion of the regular police force.”)
ಈ ಕುರಿತು ಪೋಲಿಸ್ ಅಧೀಕ್ಷಕರು ಮತ್ತು ಕಾನೂನು ಸಲಹೆಗಾರರು ಜೊತೆಯ ಚರ್ಚೆಯ ನಂತರ ಈ ಎರಡು ದೂರುಗಳು ಸಹ ಅಂದರೆ ಇಂದ್ರಕಲಾ ಮತ್ತು ಎನಿತ್ ಕುಮಾರ್ ಎಂ.ಸಿ.ಯ ವಿರುದ್ಧ ದೂರುಗಳ ವ್ಯಾಪ್ತಿ ಎ.ಸಿ.ಬಿ.ಗೆ ಬರುವುದೆಂಬ ವಿಷಯದಲ್ಲಿ ಅವರಿಬ್ಬರೂ ತಕ್ಕ ಮಟ್ಟಿಗೆ ಸಹಮತವನ್ನು ಹೊಂದಿದ್ದರು. ಆದರೆ ನಂತರದಲ್ಲಿ ಈ ಪ್ರಕರಣಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಸಿ.ಬಿ.ಐ.ಗೆ ವರ್ಗಾಯಿಸಲಾಗಿದೆ ಎಂಬ ಹಿಂಬರಹವನ್ನು ಎ.ಸಿ.ಬಿ. ಅಧಿಕಾರಿಗಳು ಕಳುಹಿಸಿರುವುದು ಈ ಇಬ್ಬರು ಅಧಿಕಾರಿಗಳ ಉದ್ದೇಶ ಹಾಗೂ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ ಎಂದು ಪರಿಷತ್ ತನ್ನ ಹೇಳಿಕೆಯಲ್ಲಿ ವಿವರಿಸಿತ್ತು.
ಅಲ್ಲದೆ ಎ.ಸಿ.ಶರ್ಮಾ ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಹಲವು ರಾಜ್ಯಗಳ ಉಚ್ಚ ನ್ಯಾಯಾಲಯದ ತೀರ್ಪುಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಅಳವಡಿಸಿಕೊಳ್ಳಲಾಗಿದೆ. ಅನೇಕ ರಾಜ್ಯ ಭ್ರಷ್ಟಾಚಾರ ನಿಗ್ರಹದ ಸಂಸ್ಥೆಗಳು ಈ ತೀರ್ಪನ್ನು ಅನುಸರಿಸುತ್ತಿವೆ. ಆಶ್ಚರ್ಯವೆಂದರೆ, ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು ಮಾತ್ರ ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿದ ತೀರ್ಪಿನ ಬಗ್ಗೆ ಅರಿವಿಲ್ಲ. ಹಾಗೂ ಇಂತಹ ಪ್ರಕರಣಗಳಲ್ಲಿ ತನ್ನ ಕಾರ್ಯಾಚರಣೆಯಲ್ಲಿ ಅಳವಡಿಸಿಕೊಳ್ಳಲು ಒಲವು ತೋರುತ್ತಿಲ್ಲ ಎಂಬುದು ಇಂದ್ರಕಲಾ ಮತ್ತು ಎನಿತ್‌ಕುಮಾರ್ ಪ್ರಕರಣದಿಂದ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪರಿಷತ್ ಆರೋಪಿಸಿತ್ತು.
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಹಲವಾರು ರಾಜ್ಯಗಳ ಉಚ್ಚ ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ಉಲ್ಲೇಖಿಸಿ ಅಳವಡಿಸಿಕೊಳ್ಳಲಾಗಿರುವ ಕೆಲ ತೀರ್ಪುಗಳನ್ನು ಪರಿಷತ್ ಹೇಳಿಕೆಯಲ್ಲಿ ಉದ್ಧರಿಸಿತ್ತು.
ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ಸುಧಾ ಗುಪ್ತ ವಿರುದ್ಧ ಹಿಮಾಚಲ ಪ್ರದೇಶ ರಾಜ್ಯ, 4 ಜನವರಿ 2020, ಸಿ.ಎಮ್‍ಎಮ್‍ಒ ಸಂ. 307/2016ರಲ್ಲಿ ನೀಡಿರುವ ತೀರ್ಪು, ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯವು ರಾಮಕುಮಾರ್ ವಿಶ್ವಕರ್ಮ ವಿರುದ್ಧ ಮಧ್ಯಪ್ರದೇಶ ರಾಜ್ಯ, 1 ಆಗಸ್ಟು 2019. ಎಮ್‍ಸಿಆರ್‍ಸಿ ಸಂ: 36179/2018ರಲ್ಲಿ ನೀಡಿರುವ ತೀರ್ಫು, ಅಶೋಕ ಕುಮಾರ್ ಕಿರ್ತಿವಾರ್ ಮತ್ತು ಇನ್ನೊಬ್ಬ ವಿರುದ್ಧ ಮಧ್ಯಪ್ರದೇಶ ರಾಜ್ಯ, 7 ಮಾರ್ಚಿ, 2001 ರಲ್ಲಿ ತೀರ್ಪುನೀಡಿದೆ. (2001 ಕ್ರಿಎಲ್‍ಜೆ 2785, 2001 (3) ಎಂಪಿಎಚ್‍ಟಿ 286.)
ಅದೇ ರೀತಿ ಮದ್ರಾಸ್‌ನ ಉಚ್ಚ ನ್ಯಾಯಾಲಯವು ಎಂ.ಅಸೋಕನ್ ವಿರುದ್ಧ ಆರಕ್ಷಕ ನಿರೀಕ್ಷಕರಿಂದ ಪ್ರತಿನಿಧಿಸಲಾದ ರಾಜ್ಯ, (21 ಆಗಸ್ಟ್, 2015, ಸಿಆರ್‍ಎಲ್.ಒ.ಪಿ.ಸಂ. 21037/2015.) ಎ. ಅಶೋಕ ಆನಂದ ವಿರುದ್ಧ ಸಿಬಿಐ ನಿಂದ ಪ್ರತಿನಿಧಿಸಲಾದ ರಾಜ್ಯ (29 ಅಕ್ಟೋಬರ್, 2014, ಸಿಆರ್‍ಎಲ್.ಒ.ಪಿ.ಸಂ. 22500/2014.) ದೆಹಲಿ ಉಚ್ಚ ನ್ಯಾಯಾಲಯವು ಅನಿಲ್ ಕುಮಾರ್ ವಿರುದ್ಧ ಜಿಎನ್‍ಸಿಟಿ, ದೆಹಲಿ (20 ಮೇ, 2015, ಜಾಮೀನು ಅರ್ಜಿ 878/2015) ನೀಡಿರುವ ತೀರ್ಪುಗಳನ್ನು ಪರಿಷತ್ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.